ಕೇರಳದಲ್ಲಿ ಭಾರೀ ಮಳೆ : ಭೂಕುಸಿತ, ಪ್ರವಾಹಕ್ಕೆ 5 ಸಾವು; ಇಬ್ಬರು ನಾಪತ್ತೆ

ತಿರುವನಂತಪುರಂ: ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಸಂಭವಿಸಿ ಕನಿಷ್ಠ ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಧಿಕಾರಿಗಳಿಗೆ ಪ್ರತಿ ಗಂಟೆಗೆ ಪರಿಸ್ಥಿತಿಯ ಪರಿಶೀಲನೆ ನಡೆಸುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿಯವರ ನಿರ್ದೇಶನದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತೆ ವಿಗ್ನೇಶ್ವರಿ ಅವರು ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ ಎಂದು ಭಾನುವಾರ (ಸೆಪ್ಟೆಂಬರ್ 20) ಮುಖ್ಯಮಂತ್ರಿ ಕಚೇರಿ (CMO) ಪ್ರಕಟಣೆಯಲ್ಲಿ ತಿಳಿಸಿದೆ.
ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಹವಾಮಾನ ಪರಿಸ್ಥಿತಿಗೆ ಸಂಬಂಧಿಸಿದಂತೆ ಎಸ್‌ಎಂಎಸ್ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ಅಲ್ಲದೆ, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ ಅಗತ್ಯವಿದ್ದರೆ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇದರ ಜೊತೆಗೆ, ಮಲಪ್ಪುರಂ ಜಿಲ್ಲೆಯ ನಿಲಂಬೂರು–ಅಮರಂಬಲಂ ಪ್ರದೇಶದ ಕೊಟ್ಟಪುಝಾ ನದಿಯಲ್ಲಿ ಐವರು ಕೊಚ್ಚಿಹೋಗಿರುವ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ವಿಶೇಷ ವಿಪತ್ತು ನಿರ್ವಹಣಾ ಪಡೆಯ ತಂಡವನ್ನು ತಕ್ಷಣವೇ ನಿಯೋಜಿಸುವಂತೆ ಮುಖ್ಯಮಂತ್ರಿ ಆದೇಶಿಸಿದ್ದಾರೆ.

ಕೊಟ್ಟಪುಝಾ ನದಿಯಲ್ಲಿ ಇಬ್ಬರ ಸಾವು
ಮಲಪ್ಪುರಂ ಜಿಲ್ಲೆಯ ನಿಲಂಬೂರು–ಅಮರಂಬಲಂ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಐವರು ಕೊಚ್ಚಿಹೋಗಿದ್ದು, ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರು ನಾಪತ್ತೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.
ಪೊಲೀಸರ ಪ್ರಕಾರ, ವಂಡೂರು ಪ್ರದೇಶದ ಐವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ಪ್ರವಾಹ ಉಂಟಾಗಿದೆ. ಪರಿಣಾಮ ಎಲ್ಲರೂ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ಒಬ್ಬರನ್ನು ರಕ್ಷಿಸಿದ್ದು, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಉಳಿದ ಇಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಕೊಟ್ಟಾಯಂನಲ್ಲಿ ಭೂಕುಸಿತ: ತಮಿಳುನಾಡಿನ ಮಹಿಳೆ ಸಾವು
ಕೊಟ್ಟಾಯಂ ಜಿಲ್ಲೆಯ ತೀಕೋಯ್ ಸಮೀಪದ ವೇಲತ್ತುಸ್ಸೇರಿ ಪ್ರದೇಶದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೂಕುಸಿತದಲ್ಲಿ ತಮಿಳುನಾಡಿನ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಸ್ನೇಹಿತೆ ಗಾಯಗೊಂಡಿದ್ದಾರೆ.ಮೃತರನ್ನು ಚೆನ್ನೈನ ಜವಾಹರ ನಗರ ನಿವಾಸಿ, 35 ವರ್ಷದ ಸಂಗೀತಾ ಅರುಲ್ ಲಾಲ್ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ವಾಗಮನ್ ಪ್ರವಾಸ ಮುಗಿಸಿ ಇಬ್ಬರು ಮಹಿಳೆಯರು ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಸಂಗೀತಾ ಅವರ ಮೇಲೆ ರಸ್ತೆಗಿಳಿದ ಮಣ್ಣು ಕುಸಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟರು. ಅವರ ಸ್ನೇಹಿತೆ ಅಪಾಯದಿಂದ ಪಾರಾಗಿದ್ದರೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   1000 ಕಿಮೀ ದೂರದ ಟಾರ್ಗೆಟ್‌ಗಳ ಮೇಲೂ ನಿಖರ ದಾಳಿ ; ಭಾರತದ ಸ್ವದೇಶಿ ನಿರ್ಮಿತ ‘ಕೆಎಎಲ್‌’ ಡ್ರೋನ್‌ ಪರೀಕ್ಷೆ ಯಶಸ್ವಿ

ಇಡುಕ್ಕಿಯಲ್ಲಿ ಗುಡಿಸಲು ಮೇಲೆ ಗುಡ್ಡ ಕುಸಿತ
ಇಡುಕ್ಕಿ ಜಿಲ್ಲೆಯ ಕೊಟ್ಟಕಂಬೂರು ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಮಳೆಯಿಂದ ರಕ್ಷಣೆ ಪಡೆಯಲು ಗುಡಿಸಲೊಂದರಲ್ಲಿ ಆಶ್ರಯ ಪಡೆದಿದ್ದ ಮೂವರು ಭೂಕುಸಿತಕ್ಕೆ ಸಿಲುಕಿದ್ದಾರೆ.
ಮಧ್ಯಾಹ್ನ ಸುಮಾರು 3:30ರ ವೇಳೆಗೆ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ ಮಣ್ಣು ಕುಸಿದು ಗುಡಿಸಲಿನ ಮೇಲೆ ಬಿದ್ದಿದೆ. ಪರಿಣಾಮ ಮೂವರೂ ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಮಹಿಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂದಿನ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ
ಭಾರತೀಯ ಹವಾಮಾನ ಇಲಾಖೆ (IMD) ಕೇರಳದ ಹಲವೆಡೆ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಭಾನುವಾರ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಿಗೆ ನೀಡಲಾಗಿದ್ದ ಮಳೆ ಎಚ್ಚರಿಕೆಯನ್ನು ‘ಆರೆಂಜ್ ಅಲರ್ಟ್’ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಆರೆಂಜ್ ಅಲರ್ಟ್ ಎಂದರೆ 11ರಿಂದ 20 ಸೆಂ.ಮೀ.ವರೆಗೆ ಅತ್ಯಧಿಕ ಮಳೆಯಾಗುವ ಸಾಧ್ಯತೆ ಇದೆ.
ಇದೇ ವೇಳೆ, ಈ ವರ್ಷ ಕೇರಳದಲ್ಲಿ ಮುಂಗಾರು ದುರ್ಬಲವಾಗಿದ್ದು, ಜೂನ್ 1ರಿಂದ ಸೆಪ್ಟೆಂಬರ್ 17ರವರೆಗೆ ಸಾಮಾನ್ಯ ಪ್ರಮಾಣಕ್ಕಿಂತ ಶೇ.28ರಷ್ಟು ಕಡಿಮೆ ಮಳೆ ದಾಖಲಾಗಿದೆ ಎಂದು ಐಎಂಡಿ ಅಂಕಿ-ಅಂಶಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಎಸ್‌ಐಆರ್‌ : ಎಲ್‌.ಕೆ. ಅಡ್ವಾಣಿ, ಸಚಿವ ಜೈಶಂಕರ, ಚುನಾವಣಾ ಆಯುಕ್ತ ಸಂಧು ಸೇರಿ ಹಲವು ಗಣ್ಯರಿಗೆ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement