ಐದು ದಶಕಗಳಿಗೂ ಮೀರಿದ ಕಲಾ ಪಯಣ, ರಂಗಭೂಮಿಯಿಂದ ಆರಂಭವಾಗಿ ಭಾರತೀಯ ಚಿತ್ರರಂಗದ ಹಲವು ಭಾಷೆಗಳಲ್ಲಿ ಗುರುತಿಸಿಕೊಂಡ ನಟನಾ ಬದುಕು… ಇವೆಲ್ಲವನ್ನೂ ಕೆಲವೇ ಮಾತುಗಳಲ್ಲಿ ಕಟ್ಟಿಕೊಟ್ಟ ಹಿರಿಯ ನಟ ಅನಂತ್ ನಾಗ್, ಮಂಗಳವಾರ (ಸೆ.22) ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಜೀವನಯಾನದ ನೆನಪುಗಳನ್ನು ಹಂಚಿಕೊಂಡರು.
‘ಈ ಮಹಾನ್ ದೇಶ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ ಮತ್ತು ಭಾರತ ನನ್ನ ಧರ್ಮಭೂಮಿ’ ಎಂಬ ಅನಂತ ನಾಗ್ ಅವರ ಮಾತುಗಳು ಅವರ ಐದು ದಶಕಗಳ ಕಲಾ ಪಯಣದ ಸಾರವನ್ನು ಹಿಡಿದಿಟ್ಟಂತಿದ್ದವು. ಗುಜರಾತ್‌ನ ಏಕತಾ ನಗರದಲ್ಲಿ ನಡೆದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅವರು 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಲು ಅನಂತ ನಾಗ್ ವೇದಿಕೆಯತ್ತ ಸಾಗುತ್ತಿದ್ದಂತೆ ಸಭಾಂಗಣದಲ್ಲಿದ್ದವರು ಎದ್ದು ನಿಂತು ಗೌರವ ಸೂಚಿಸಿದರು. ಮಮ್ಮುಟ್ಟಿ, ಧನುಷ್, ಸಂಜಯ ಮಿಶ್ರಾ, ಯಾಮಿ ಗೌತಮ್, ಆದಿತ್ಯ ಧರ್, ಕಾರ್ತಿಕ್ ಆರ್ಯನ್ ಸೇರಿದಂತೆ ಪ್ರಶಸ್ತಿ ಪುರಸ್ಕೃತರು ಹಾಗೂ ಚಿತ್ರರಂಗದ ಗಣ್ಯರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಪತ್ನಿ ಹಾಗೂ ನಟಿ ಗಾಯತ್ರಿ ಅವರೊಂದಿಗೆ ಸಮಾರಂಭಕ್ಕೆ ಆಗಮಿಸಿದ್ದ ಅನಂತ ನಾಗ್ ಆ ಕ್ಷಣದಲ್ಲಿ ಭಾವುಕರಾಗಿ ಕಾಣಿಸಿಕೊಂಡರು.
ಸಮಾರಂಭದಲ್ಲಿ ಅನಂತ ನಾಗ್ ಅವರ ಕಲಾ ಬದುಕಿನ ಕುರಿತ ವಿಶೇಷ ವಿಡಿಯೊ ತುಣುಕನ್ನೂ ಪ್ರದರ್ಶಿಸಲಾಯಿತು. ರಂಗಭೂಮಿಯ ಆರಂಭಿಕ ದಿನಗಳಿಂದ ಅವರ ವೃತ್ತಿಜೀವನದ ಪ್ರಮುಖ ಪಾತ್ರಗಳು, ಇತ್ತೀಚಿನ ಅಭಿನಯದವರೆಗೆ ಅವರ ಪಯಣವನ್ನು ವಿಡಿಯೊದಲ್ಲಿ ದಾಖಲಿಸಲಾಗಿತ್ತು. ಕರ್ನಾಟಕದಲ್ಲಿ ಅವರು ರಾಜಕಾರಣಿಯಾಗಿ ಹಾಗೂ ಬರಹಗಾರರಾಗಿ ಸಲ್ಲಿಸಿದ ಕೊಡುಗೆಯನ್ನೂ ಇದರಲ್ಲಿ ಉಲ್ಲೇಖಿಸಲಾಗಿತ್ತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ ನಾಗ್, ಇಂತಹ ಅದ್ಧೂರಿ ಸಮಾರಂಭದ ಮಹತ್ವವನ್ನು ಇನ್ನೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಹೇಳಿದರು. “ನಿಮ್ಮೆಲ್ಲರೊಂದಿಗೆ ಇಲ್ಲಿರುವುದು ನನಗೆ ಅತ್ಯಂತ ದೊಡ್ಡ ಗೌರವ. ಇಂತಹ ಸಮಾರಂಭಗಳಲ್ಲಿ ನಾನು ಹೆಚ್ಚು ಭಾಗವಹಿಸಿಲ್ಲ, ಬಹುಶಃ ಯಾವುದರಲ್ಲೂ ಭಾಗವಹಿಸಿಲ್ಲ. ಆದರೆ ಇಂದು ನಿಮ್ಮೆಲ್ಲರೊಂದಿಗೆ ಇರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ” ಎಂದು ಹೇಳಿದರು.
ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಅವರು, ಆಶ್ರಮ ಮತ್ತು ಮಠದಲ್ಲಿ ಬೆಳೆದಿದ್ದಾಗಿ ಹೇಳಿದರು. 12ನೇ ವಯಸ್ಸಿನಲ್ಲಿ ಓದಿಗಾಗಿ ತಮ್ಮನ್ನು ಮುಂಬೈಗೆ ಕಳುಹಿಸಲಾಗಿತ್ತು. ಅಲ್ಲಿ ಬಂಗಾಳದ ಸಂತ-ಕವಿ ಚೈತನ್ಯ ಮಹಾಪ್ರಭು ಅವರ ಪಾತ್ರದಲ್ಲಿ ನಾಟಕವೊಂದರಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ಅದೇ ತಮ್ಮ ಕಲಾ ಬದುಕಿನ ಆರಂಭ ಎಂದು ಹೇಳಿದರು.
“ಅಲ್ಲಿಂದಲೇ ನನ್ನ ವೃತ್ತಿಜೀವನ ಆರಂಭವಾಯಿತು. ಆದರೆ ‘ವೃತ್ತಿಜೀವನ’ ಎಂದು ಹೇಳುವಾಗಲೂ ಮುಂದೆ ಏನಾಗಲಿದೆ ಎಂಬ ಯಾವುದೇ ಕಲ್ಪನೆ ನನಗಿರಲಿಲ್ಲ” ಎಂದು ಅನಂತ ನಾಗ್ ತಮ್ಮ ಆರಂಭದ ದಿನಗಳನ್ನು ಸ್ಮರಿಸಿದರು.
ಬಾಲ್ಯದಲ್ಲಿ ಕಲಿತ ಆದಿ ಶಂಕರಾಚಾರ್ಯರ ‘ಭಜ ಗೋವಿಂದಂ’ನ ಸಾಲೊಂದನ್ನೂ ಅವರು ಭಾಷಣದಲ್ಲಿ ಉಲ್ಲೇಖಿಸಿದರು. ‘ಉದರಾಧಿಮಿತಂ ಬಹುಕೃತವೇಷಂ’ ಎಂಬ ಸಾಲನ್ನು ಉಲ್ಲೇಖಿಸಿದ ಅವರು, ಜೀವನ ನಿರ್ವಹಣೆಗಾಗಿ ಮನುಷ್ಯರು ವಿವಿಧ ವೇಷಗಳನ್ನು ಧರಿಸುತ್ತಾರೆ ಎಂಬ ಅರ್ಥವನ್ನು ಈ ಸಾಲು ಹೊಂದಿದೆ ಎಂದರು.
ಇದೇ ಭಾವವನ್ನು ಕರ್ನಾಟಕದ ಸಂತ-ಕವಿ ಕನಕದಾಸರ “ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂಬ ಸಾಲು ಕೂಡ ವ್ಯಕ್ತಪಡಿಸುತ್ತದೆ ಎಂದು ಹೇಳಿದರು. ಈ ಸಾಲನ್ನು ಆಧರಿಸಿದ ಕನ್ನಡ ಚಿತ್ರವೊಂದರಲ್ಲಿ ತಾವು ಅಭಿನಯಿಸಿದ್ದನ್ನೂ ನೆನಪಿಸಿಕೊಂಡರು. ಹಿಂದಿಯಲ್ಲಿ ಇದೇ ಅರ್ಥವನ್ನು ಸಾರುವ ‘ಪಾಪಿ ಪೇಟ್ ಕೆ ಲಿಯೇ’ ಎಂಬ ಜನಪ್ರಿಯ ಮಾತು ಇರುವುದನ್ನೂ ಅವರು ಪ್ರಸ್ತಾಪಿಸಿದರು.
ಸುಮಾರು ಐದು ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದನ್ನು ನೆನಪಿಸಿಕೊಂಡ ಅನಂತ ನಾಗ್, ಈ ಅವಧಿಯೇ ತಮ್ಮ ನಟನಾ ಬದುಕಿನ ತರಬೇತಿ ನೆಲೆಯಾಗಿತ್ತು ಎಂದು ಅವರು ವಿವರಿಸಿದರು. ಬಳಿಕ ಅವರಿಗೆ ಚಿತ್ರಗಳ ಅವಕಾಶಗಳು ಬರತೊಡಗಿದವು. ಮೊದಲಿಗೆ ಕನ್ನಡದಲ್ಲಿ ಅಭಿನಯಿಸಿದ ತಾನು ನಂತರ ಹಿಂದಿ ಚಿತ್ರರಂಗಕ್ಕೂ ಕಾಲಿಟ್ಟೆ.. ಶ್ಯಾಮ್ ಬೆನಗಲ್ ಸೇರಿದಂತೆ ಹಲವು ಪ್ರಮುಖ ನಿರ್ದೇಶಕರೊಂದಿಗೆ ಕೆಲಸ ಮಾಡಿದೆ ಎಂದು ನೆನಪಿಸಿಕೊಂಡರು.
ಹಿಂದಿಯಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರೂ, ಕರ್ನಾಟಕದಲ್ಲಿ ಹೊಸ ಅಲೆಯ ಚಿತ್ರಗಳು, ವಾಣಿಜ್ಯ ಚಿತ್ರಗಳು ಹಾಗೂ ವಿವಿಧ ರೀತಿಯ ಅವಕಾಶಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ತಾವು ಮತ್ತೆ ಕರ್ನಾಟಕಕ್ಕೆ ಮರಳಲು ನಿರ್ಧರಿಸಿದ್ದಾಗಿ ಅನಂತ ನಾಗ್ ಹೇಳಿದರು.
“ನಾನು ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಆದರೆ ಕರ್ನಾಟಕದಲ್ಲಿ ಹೊಸ ಅಲೆಯ ಚಿತ್ರಗಳು, ವಾಣಿಜ್ಯ ಚಿತ್ರಗಳು ಮತ್ತು ಇತರ ಅವಕಾಶಗಳಿಗೆ ಉತ್ತಮ ವಾತಾವರಣವಿತ್ತು. ಹಾಗಾಗಿ ಬೆಂಗಳೂರಿಗೆ ಬಂದು ನೆಲೆಸೋಣ ಎಂದು ನಿರ್ಧರಿಸಿದೆ. ಹೀಗೆ ಕರ್ನಾಟಕವೇ ನನ್ನ ಕರ್ಮಭೂಮಿಯಾಯಿತು” ಎಂದು ಅವರು ಹೇಳಿದರು.“ಇತರ ಭಾಷೆಗಳಲ್ಲಿಯೂ ಹಲವು ಚಿತ್ರಗಳಲ್ಲಿ ಅಭಿನಯಿಸಲು ನನ್ನನ್ನು ಆಹ್ವಾನಿಸಲಾಯಿತು. ನಾನು ಅಲ್ಲಿಗೆ ಕರ್ನಾಟಕದ ರಾಯಭಾರಿಯಂತೆ ಹೋಗುತ್ತಿದ್ದೆ” ಎಂದು ಹೇಳಿದರು.
ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ದೊರೆತಿರುವುದು, ಕಳೆದ ವರ್ಷ ತಮಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸಂದರ್ಭದ ಜೊತೆ ಮತ್ತೊಂದು ವಿಶೇಷ ಸಾಮ್ಯತೆ ಹೊಂದಿದೆ ಎಂದ ಅವರು, ಈ ಎರಡೂ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದಲೇ ಸ್ವೀಕರಿಸುವ ಅವಕಾಶ ದೊರೆತಿರುವುದನ್ನು ಅವರು ಸ್ಮರಿಸಿದರು.
“ಕಳೆದ ವರ್ಷ ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮ ಪ್ರಶಸ್ತಿಯನ್ನು ಸ್ವೀಕರಿಸುವ ಅದೃಷ್ಟ ನನಗೆ ದೊರೆತಿತ್ತು. ಈ ಬಾರಿ ಕೂಡ ಅವರಿಂದಲೇ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸುವ ಅವಕಾಶ ಸಿಕ್ಕಿದೆ” ಎಂದು ಅವರು ಹೇಳಿದರು.
ಆದರೆ ಪ್ರಶಸ್ತಿಯ ಗೌರವವನ್ನು ತಮ್ಮೊಬ್ಬರ ಸಾಧನೆ ಎಂದು ಪರಿಗಣಿಸದ ಅನಂತ್ ನಾಗ್, ತಮ್ಮ ಐದು-ಐದೂವರೆ ದಶಕಗಳ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ಈ ಗೌರವ ಸಲ್ಲುತ್ತದೆ ಎಂದು ಹೇಳಿದರು.
“ಈ ಸಂದರ್ಭದಲ್ಲಿ ಕಳೆದ 50-55 ವರ್ಷಗಳ ನನ್ನ ವೃತ್ತಿಜೀವನದ ಉದ್ದಕ್ಕೂ ನನ್ನೊಂದಿಗೆ ಇದ್ದ ಎಲ್ಲರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಈ ಪ್ರಶಸ್ತಿ ನನಗೆ ಮಾತ್ರ ಸೇರಿದ್ದಲ್ಲ. ನನ್ನೊಂದಿಗೆ ನಿರಂತರವಾಗಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಇದು ಸೇರಿದೆ. ಕಳೆದ ಐದೂವರೆ ದಶಕಗಳಲ್ಲಿ ನನ್ನ ಪಾತ್ರಗಳನ್ನು ಹೃದಯಪೂರ್ವಕವಾಗಿ ಸ್ವೀಕರಿಸಿದ ಕೋಟ್ಯಂತರ ಜನರಿಗೂ ಈ ಪ್ರಶಸ್ತಿ ಸೇರಿದೆ” ಎಂದು ಅವರು ಹೇಳಿದರು.
“ಈ ಮಹಾನ್ ದೇಶ ನನ್ನ ಜನ್ಮಭೂಮಿ, ಕರ್ನಾಟಕ ನನ್ನ ಕರ್ಮಭೂಮಿ ಮತ್ತು ಭಾರತ ನನ್ನ ಧರ್ಮಭೂಮಿ. ಮತ್ತೊಮ್ಮೆ ನಿಮ್ಮೆಲ್ಲರಿಗೂ, ನನ್ನ ಮಹಾನ್ ಪೋಷಕರಾಗಿರುವ ಭಾರತದ ಎಲ್ಲ ಜನರಿಗೂ ಧನ್ಯವಾದಗಳು” ಎಂದು ಹೇಳಿದರು.
ಅನಂತ ನಾಗ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸುವ ಮೂಲಕ ಕನ್ನಡ ಚಿತ್ರರಂಗದಿಂದ ಈ ಗೌರವ ಪಡೆದ ಎರಡನೇ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1995ರಲ್ಲಿ ಡಾ. ರಾಜಕುಮಾರ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
ಸೆಪ್ಟೆಂಬರ್ 16ರಂದು ಭಾರತ ಸರ್ಕಾರ ಅನಂತ ನಾಗ್ ಅವರನ್ನು ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿರುವುದನ್ನು ಘೋಷಿಸಿತ್ತು. ಭಾರತೀಯ ಚಿತ್ರರಂಗಕ್ಕೆ ಐದು ದಶಕಗಳಿಗೂ ಹೆಚ್ಚು ಕಾಲ ಅವರು ನೀಡಿರುವ “ಅತ್ಯುತ್ತಮ ಮತ್ತು ಅಮೂಲ್ಯ ಕೊಡುಗೆ”ಗಾಗಿ ಈ ಗೌರವ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ 78ನೇ ವಯಸ್ಸಿಗೆ ಕಾಲಿಟ್ಟಿರುವ ಅನಂತ ನಾಗ್, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಮರಾಠಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದ ಜೊತೆಗೆ ಕಿರುತೆರೆಯಲ್ಲೂ ಅವರು ಗಮನಾರ್ಹ ಕೆಲಸ ಮಾಡಿದ್ದಾರೆ. ಅದರಲ್ಲೂ ‘ಮಾಲ್ಗುಡಿ ಡೇಸ್’ ಅವರ ಪ್ರಮುಖ ಕಿರುತೆರೆ ಕೃತಿಗಳಲ್ಲಿ ಒಂದಾಗಿದೆ.
1970ರ ದಶಕದ ಸಮಾನಾಂತರ ಚಿತ್ರರಂಗದ ಚಳವಳಿಯಿಂದ ಆರಂಭಿಸಿ ಮುಖ್ಯವಾಹಿನಿಯ ಕನ್ನಡ ಚಿತ್ರರಂಗದವರೆಗೆ, ಅಲ್ಲಿಂದ ವಿಭಿನ್ನ ಪಾತ್ರಗಳ ಮೂಲಕ ಹೊಸ ತಲೆಮಾರಿನ ಪ್ರೇಕ್ಷಕರನ್ನೂ ತಲುಪಿದ ಅನಂತ ನಾಗ್ ಅವರ ಚಿತ್ರಪಯಣ ಹಲವು ದಶಕಗಳು ಮತ್ತು ಹಲವು ತಲೆಮಾರುಗಳನ್ನು ದಾಟಿದೆ.


ನಿಮ್ಮ ಕಾಮೆಂಟ್ ಬರೆಯಿರಿ