ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೂರು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ಸಿಎನ್ಎನ್ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೊ(Politico)ಗೆ ಶ್ವೇತಭವನ ಪ್ರವೇಶವನ್ನು ನಿಷೇಧಿಸಿದ್ದು, ಈ ಕ್ರಮದ ವಿರುದ್ಧ ಅಮೆರಿಕದ ಪ್ರಮುಖ ಟಿವಿ ಜಾಲಗಳು ಸೋಮವಾರ ಪ್ರತಿಭಟನೆ ನಡೆಸಿವೆ. ಟ್ರಂಪ್ ಅವರ ಕಾರ್ಯಕ್ರಮದ ನೇರ ಪ್ರಸಾರವನ್ನು ಬಹಿಷ್ಕರಿಸುವ ಮೂಲಕ ಮಾಧ್ಯಮ ಸಂಸ್ಥೆಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿವೆ.
ಶುಕ್ರವಾರ ಟ್ರಂಪ್ ಈ ಮೂರು ಮಾಧ್ಯಮ ಸಂಸ್ಥೆಗಳನ್ನು ಶ್ವೇತಭವನ ಪ್ರವೇಶಿಸಿವುದನ್ನು ನಿರ್ಬಂಧಿಸುವಂತೆ ಆದೇಶಿಸಿದ್ದರು. ಇದಾದ ಬಳಿಕ ಸಿಎನ್ಎನ್ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೊ(Politico) ನ್ಯಾಯಾಲಯದ ಮೊರೆ ಹೋಗಿದ್ದು, ಈ ಕ್ರಮವನ್ನು ರದ್ದುಪಡಿಸುವಂತೆ ಹಾಗೂ ಇದು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವಾಗಿದೆ ಎಂದು ಘೋಷಿಸುವಂತೆ ಮನವಿ ಸಲ್ಲಿಸಿವೆ.
ಇದರ ನಡುವೆ ಅಮೆರಿಕದ ಐದು ಪ್ರಮುಖ ಪ್ರಸಾರ ಸಂಸ್ಥೆಗಳಾದ ಎಬಿಸಿ (ABC), ಸಿಬಿಎಸ್(CBS), ಸಿಎನ್ಎನ್(CNN), ಫೋಕ್ಸ್(Fox) ಮತ್ತು ಎನ್ಬಿಸಿ(NBC) ಸೋಮವಾರ ಜಂಟಿ ಹೇಳಿಕೆ ಬಿಡುಗಡೆ ಮಾಡಿ ಶ್ವೇತಭವನದ “ಪೂಲ್ ಕವರೇಜ್” ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಸಾಮಾನ್ಯವಾಗಿ ಒಂದು ಟಿವಿ ಸಂಸ್ಥೆ ಶ್ವೇತಭವನದ ಕಾರ್ಯಕ್ರಮಗಳನ್ನು ಚಿತ್ರೀಕರಿಸಿ ಇತರ ಮಾಧ್ಯಮಗಳಿಗೆ ದೃಶ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು “ಪೂಲ್ ಕವರೇಜ್” ಎಂದು ಕರೆಯಲಾಗುತ್ತದೆ.
ಸೋಮವಾರದ ಪೂಲ್ ಕವರೇಜ್ ಹೊಣೆಗಾರಿಕೆ ಸಿಎನ್ಎನ್ಗೆ ನಿಗದಿಯಾಗಿತ್ತು. ಆದರೆ ಅದಕ್ಕೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಎಲ್ಲ ಪ್ರಮುಖ ಟಿವಿ ಜಾಲಗಳು ಒಗ್ಗಟ್ಟಿನ ನಿರ್ಧಾರ ಕೈಗೊಂಡವು.
“ಜನರಿಗೆ ತಮ್ಮ ಸರ್ಕಾರದ ಬಗ್ಗೆ ನಿಖರ ಮತ್ತು ಸ್ವತಂತ್ರ ಮಾಹಿತಿಯನ್ನು ಪಡೆಯುವ ಹಕ್ಕು ಇದೆ. ಯಾವುದೇ ಆಡಳಿತವು ತನ್ನ ವರದಿಗಾರಿಕೆಯನ್ನು ಇಷ್ಟಪಡಲಿಲ್ಲ ಎಂಬ ಕಾರಣಕ್ಕೆ ಮಾಧ್ಯಮ ಸಂಸ್ಥೆಯನ್ನು ನಿರ್ಬಂಧಿಸಬಾರದು” ಎಂದು ಎಬಿಸಿ (ABC), ಸಿಬಿಎಸ್(CBS), ಸಿಎನ್ಎನ್(CNN), ಫೋಕ್ಸ್(Fox) ಮತ್ತು ಎನ್ಬಿಸಿ(NBC) ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಈ ನಿರ್ಧಾರದ ಪರಿಣಾಮವಾಗಿ ಟ್ರಂಪ್ ಅವರ ನ್ಯೂಯಾರ್ಕ್ ಪ್ರವಾಸ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UN General Assembly) ನಡೆಯಬೇಕಿದ್ದ ಕಾರ್ಯಕ್ರಮಗಳ ದೂರದರ್ಶನ ಪ್ರಸಾರ ಲಭ್ಯವಾಗಲಿಲ್ಲ. ಟ್ರಂಪ್ ಅಲ್ಲಿ ಹಲವು ವಿದೇಶಿ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೊ(Politico) ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, “ಈ ನಿಷೇಧವು ಮೊದಲ ತಿದ್ದುಪಡಿಯ ಮೇಲೆ ನೇರ ದಾಳಿ ನಡೆಸಿದಂತಾಗಿದೆ. ಇದು ಅಮೆರಿಕದ ಮೂಲಭೂತ ಸಂವಿಧಾನಾತ್ಮಕ ತತ್ವಗಳ ಸ್ಪಷ್ಟ ಉಲ್ಲಂಘನೆ” ಎಂದು ವಾದಿಸಿವೆ.
ಆದರೆ ಟ್ರಂಪ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಕೆಲವು ಮಾಧ್ಯಮಗಳನ್ನು “ರಾಷ್ಟ್ರೀಯ ಭದ್ರತೆಗೆ ಅಪಾಯ” ಹಾಗೂ “ಕ್ಯಾನ್ಸರ್ನಂತೆ ಬೆಳೆದಿರುವ ಸುಳ್ಳು ಸುದ್ದಿ ಸಂಸ್ಥೆಗಳು” ಎಂದು ಟೀಕಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಶಿಯಲ್(Truth Social)ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ನಾನು ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿಲ್ಲ. ನಾನು ಗೌರವಿಸುವುದು ಮುಕ್ತ ಪತ್ರಿಕೋದ್ಯಮವನ್ನು. ಆದರೆ ಅಮೆರಿಕದಲ್ಲಿ ಕ್ಯಾನ್ಸರ್ನಂತೆ ಬೆಳೆದಿರುವ ಸುಳ್ಳು ಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೇನೆ” ಎಂದು ಹೇಳಿದ್ದಾರೆ.
ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಟ್ರಂಪ್ ಅವರ ಕ್ರಮವನ್ನು ಬೆಂಬಲಿಸಿದ್ದು, ಸಿಎನ್ಎನ್ ಸೇರಿದಂತೆ ಕೆಲವು ಮಾಧ್ಯಮಗಳು “ಎಡಪಂಥೀಯ ನೀತಿಗಳನ್ನಷ್ಟೇ ಪ್ರಚಾರ” ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. “ಅವರಿಗೆ ಇನ್ನೂ ವರದಿ ಮಾಡುವ ಹಕ್ಕು ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ. ಆದರೆ ಅವರಿಗೆ ಇನ್ನು ಮುಂದೆ ಶ್ವೇತಭವನದಲ್ಲಿ ಕಚೇರಿ ಸೌಲಭ್ಯ ದೊರೆಯುವುದಿಲ್ಲ” ಎಂದು ವ್ಯಾನ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶುಕ್ರವಾರ ಟ್ರಂಪ್ ಘೋಷಿಸಿದ ಈ ನಿಷೇಧ ಮಾಧ್ಯಮ ವಲಯದಲ್ಲಿ ಮಾತ್ರವಲ್ಲ, ಅವರ ಆಡಳಿತದ ಕೆಲ ಅಧಿಕಾರಿಗಳಲ್ಲಿಯೂ ಅಚ್ಚರಿ ಮೂಡಿಸಿತ್ತು ಎಂದು ವರದಿಯಾಗಿದೆ.
ಶನಿವಾರ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೊ(Politico) ಸಂಸ್ಥೆಗಳ ಪತ್ರಕರ್ತರಿಗೆ ಶ್ವೇತಭವನ ಆವರಣ ಪ್ರವೇಶ ನಿರಾಕರಿಸಲಾಯಿತು. ಜೊತೆಗೆ ಅವರ ಮಾಧ್ಯಮ ಗುರುತಿನ ಚೀಟಿಗಳನ್ನು (ಪ್ರೆಸ್ ಪಾಸ್) ವಶಪಡಿಸಿಕೊಳ್ಳಲಾಯಿತು. ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಮೂರು ಸಂಸ್ಥೆಗಳು, “ಯಾವುದೇ ಮುನ್ಸೂಚನೆ ಅಥವಾ ನ್ಯಾಯಸಮ್ಮತ ಪ್ರಕ್ರಿಯೆ ಅನುಸರಿಸದೇ ನಮ್ಮ ಪತ್ರಕರ್ತರ ಮಾನ್ಯತೆಗಳನ್ನು ರದ್ದುಪಡಿಸಲಾಗಿದೆ. ನಮ್ಮ ವರದಿಗಾರಿಕೆಯನ್ನು ಆಡಳಿತ ಒಪ್ಪದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಆರೋಪಿಸಿವೆ. “ಇದನ್ನು ಪ್ರಶ್ನಿಸದೆ ಬಿಟ್ಟರೆ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ, ಸರ್ಕಾರದ ಹಸ್ತಕ್ಷೇಪವಿಲ್ಲದ ಸ್ವತಂತ್ರ ಪತ್ರಿಕೋದ್ಯಮ ಪಡೆಯುವ ಸಾರ್ವಜನಿಕರ ಹಕ್ಕೂ ಅಪಾಯಕ್ಕೆ ಸಿಲುಕುತ್ತದೆ” ಎಂದು ಅವು ಎಚ್ಚರಿಸಿವೆ.
ನಿಷೇಧಕ್ಕೆ ಕಾರಣವೇನು ಎಂಬುದನ್ನು ಟ್ರಂಪ್ ಸ್ಪಷ್ಟಪಡಿಸಿಲ್ಲ. ಆದರೆ ಶುಕ್ರವಾರ ಓವಲ್ ಕಚೇರಿಯಲ್ಲಿ ಎಎಫ್ಪಿ (AFP) ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ ಎರಡು ವರ್ಷಗಳಲ್ಲಿ ಪ್ರಕಟವಾದ ಹಲವು ವರದಿಗಳ ಒಟ್ಟು ಪರಿಣಾಮವೇ ಇದಕ್ಕೆ ಕಾರಣ” ಎಂದು ಹೇಳಿದ್ದಾರೆ. “ಅವರು ರಿಪಬ್ಲಿಕನ್ ಪಕ್ಷ ಮತ್ತು ರಿಪಬ್ಲಿಕನ್ ಆಡಳಿತವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
ಇದೇ ವೇಳೆ, ಇತರ ಮಾಧ್ಯಮ ಸಂಸ್ಥೆಗಳ ಮೇಲೆಯೂ ಇಂತಹ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದು, ಯಾವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬುದನ್ನು ಬಹಿರಂಗಪಡಿಸಿಲ್ಲ.
ಸಿಎನ್ಎನ್ ವರದಿ ಪ್ರಕಾರ, ಟ್ರಂಪ್ ಅವರ ಆಪ್ತ ಸಹಾಯಕಿ ನಟಾಲಿ ಹಾರ್ಪ್ ಕಳೆದ ವಾರ ವಿವಿಧ ಮಾಧ್ಯಮ ವರದಿಗಳ ವಿಡಿಯೊ ತುಣುಕುಗಳು ಹಾಗೂ ಪೊಲಿಟಿಕೊ ಪ್ರಕಟಿಸಿದ್ದ ಗ್ರಾಫಿಕ್ಗಳನ್ನು ಟ್ರಂಪ್ ಅವರಿಗೆ ತೋರಿಸಿದ್ದರು. ಅದರ ಕೆಲವೇ ಸಮಯದ ಬಳಿಕ ಟ್ರಂಪ್ ಈ ನಿಷೇಧ ಘೋಷಿಸಿದ್ದಾರೆ.
ಮಾಜಿ ರಿಯಾಲಿಟಿ ಶೋ ತಾರೆಯೂ ಆಗಿರುವ ಟ್ರಂಪ್, ತಮ್ಮ ರಾಜಕೀಯ ಪ್ರಚಾರ ಹಾಗೂ ಆಡಳಿತದ ವಿರುದ್ಧ ವಿಮರ್ಶಾತ್ಮಕ ವರದಿಗಳನ್ನು ಪ್ರಸಾರ ಮಾಡಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಹಲವು ವರ್ಷಗಳಿಂದ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಅವರು ಅನೇಕ ಬಾರಿ ಪತ್ರಿಕೋದ್ಯಮವನ್ನು “ಜನರ ಶತ್ರು” ಎಂದು ಕರೆದಿರುವುದು ಕೂಡ ಗಮನಾರ್ಹವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ