ಮುಂಬೈ: ಆಗ್ರಾ ಘರಾಣೆಯ ಹಿರಿಯ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪಂಡಿತ ಇಂದೂಧರ ನಿರೋಡಿ (91) ಮಂಗಳವಾರ (ಸೆ.22) ನವಿ ಮುಂಬೈ ಸಮೀಪದ ಪನ್ವೇಲ್ನಲ್ಲಿ ನಿಧನರಾದರು.
ಜುಲೈ 11, 1935ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದ ಪಂ. ಇಂದೂಧರ ನಿರೋಡಿ ಅವರು ಮೈಸೂರಿನ ಸರಸ್ವತಿಪುರಂನಲ್ಲಿ ನೆಲೆಸಿದ್ದರು. ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ (LIC) ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ, 1995ರಲ್ಲಿ ನಿವೃತ್ತರಾಗಿದ್ದರು. ಆಲ್ ಇಂಡಿಯಾ ರೇಡಿಯೋದ ‘ಟಾಪ್ ಗ್ರೇಡ್’ ಕಲಾವಿದರಾಗಿದ್ದು, 1955ರಿಂದಲೇ ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಬಳಿಕ ದೂರದರ್ಶನದಲ್ಲೂ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದರು. ನಿವೃತ್ತಿಯ ಬಳಿಕ ತಮ್ಮ ಸಂಪೂರ್ಣ ಸಮಯವನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಅಭಿವೃದ್ಧಿಗೆ ಮೀಸಲಿಟ್ಟಿದ್ದರು
ಪಂ. ಇಂಧೂಧರ ನಿರೋಡಿ ತಮ್ಮ ದೀರ್ಘಕಾಲದ ಕಲಾ ಪಯಣದ ಮೂಲಕ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಸಂಪಾದಿಸಿದ್ದರು. ಆಗ್ರಾ ಘರಾಣೆಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರಿಸಿದ ಪ್ರಮುಖ ಗಾಯಕರಲ್ಲಿ ಒಬ್ಬರಾಗಿದ್ದರು.
ಹಿಂದೂಸ್ತಾನಿ ಸಂಗೀತದ ಹಲವು ಹಿರಿಯ ಗುರುಗಳಿಂದ ಅವರು ಸಂಗೀತಾಭ್ಯಾಸ ಮಾಡಿದ್ದರು. ಪಿತ್ರೆ ರಾಮರಾವ್, ಗುರುದತ್ತ ಹೆಬ್ಳೇಕರ, ಪಂ. ಎಸ್.ಸಿ.ಆರ್. ಭಟ್, ಪಂ. ಕೆ.ಜಿ. ಗಿಂಡೆ, ಪಂ. ದಿನಕರ ಕಾಯ್ಕಿಣಿ ಹಾಗೂ ಪಂ. ಚಿದಾನಂದ ನಗರಕರ್ ಅವರಲ್ಲಿ ತರಬೇತಿ ಪಡೆದ ಅವರು, ತಮ್ಮದೇ ಆದ ಗಾಯನ ಶೈಲಿಯನ್ನು ರೂಪಿಸಿಕೊಂಡಿದ್ದರು. ಹಲವು ಪ್ರತಿಷ್ಠಿತ ಸಂಗೀತೋತ್ಸವಗಳಲ್ಲಿ ಗಾಯನ ಕಛೇರಿ ನೀಡಿದ್ದರು. ಹಾ ಅನೇಕ ಶಿಷ್ಯರಿಗೆ ಸಂಗೀತ ಶಿಕ್ಷಣ ನೀಡಿದ್ದರು.
1,896 ಬಂದಿಶ್ಗಳ ಅಪೂರ್ವ ದಾಖಲೆ
ಆಲ್ ಇಂಡಿಯಾ ರೇಡಿಯೋದ ‘ಟಾಪ್ ಗ್ರೇಡ್’ ಕಲಾವಿದರಾಗಿದ್ದ ಪಂ. ನಿರೋಡಿ ಅವರ ಸಂಗೀತ ಸಾಧನೆಯಲ್ಲಿ ಪಂ. ವಿಷ್ಣು ನಾರಾಯಣ ಭಾತಖಂಡೆ ಅವರ ಕ್ರಮಿಕ್ ಪುಸ್ತಕ ಮಾಲಿಕಾದಲ್ಲಿನ 1,896 ಬಂದಿಶ್ಗಳ ಗಾಯನ ಮತ್ತು ಧ್ವನಿಮುದ್ರಣ ವಿಶೇಷವಾಗಿ ಗಮನಾರ್ಹವಾಗಿದೆ. ಈ ಬಂದಿಶ್ಗಳನ್ನು ಹಾಡಿ, ಧ್ವನಿಮುದ್ರಿಸಿ, ‘ಸಮರ್ಪಣ’ ಎಂಬ ಹೆಸರಿನಲ್ಲಿ ಆಡಿಯೋ-ವಿಡಿಯೋ ದಾಖಲೆಗಳ ರೂಪದಲ್ಲಿ ಅವರು ಹೊರತಂದಿದ್ದರು. ಭಾತಖಂಡೆ ಅವರ ಸಂಗೀತ ಕೃತಿಗಳ ದೊಡ್ಡ ಸಂಗ್ರಹವೊಂದನ್ನು ಹೀಗೆ ದಾಖಲಿಸಿರುವುದು ಅವರ ಸಂಗೀತ ಬದ್ಧತೆ ಹಾಗೂ ಸಾಧನೆಗೆ ಸಾಕ್ಷಿಯಾಗಿದೆ.
ಸಂಗೀತದ ವಿವಿಧ ಆಯಾಮಗಳ ಕುರಿತು ಅವರು ಅನೇಕ ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು (Lecture-Demonstrations) ನಡೆಸಿದ್ದರು. ಆಗ್ರಾ ಘರಾಣೆಯ ಕುರಿತು ಅವರು ನೀಡಿದ 13 ಕಂತುಗಳ ಉಪನ್ಯಾಸ-ಪ್ರಾತ್ಯಕ್ಷಿಕೆಗಳನ್ನು ಆಲ್ ಇಂಡಿಯಾ ರೇಡಿಯೋ, ಬೆಂಗಳೂರು ದಾಖಲಿಸಿಕೊಂಡು ಪ್ರಸಾರ ಮಾಡಿತ್ತು. ಸಂಗೀತ ಕ್ಷೇತ್ರದ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಗೌರವ-ಪುರಸ್ಕಾರಗಳು
1955ರಲ್ಲಿ, ತಮ್ಮ 20ನೇ ವಯಸ್ಸಿನಲ್ಲೇ ಆಲ್ ಇಂಡಿಯಾ ರೇಡಿಯೋ ಆಯೋಜಿಸಿದ್ದ ಅಖಿಲ ಭಾರತ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಅಂದಿನ ಭಾರತದ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರಿಂದ ಬಹುಮಾನ ಸ್ವೀಕರಿಸಿದ್ದರು.
2005-06ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ ‘ಗೌರವ ಪ್ರಶಸ್ತಿ’ ಪಡೆದರು.
2014ರಲ್ಲಿ ಕರ್ನಾಟಕ ಸರ್ಕಾರದಿಂದ ‘ರಾಜ್ಯ ಸಂಗೀತ ವಿದ್ವಾನ್ ಪುರಸ್ಕಾರ’ಕ್ಕೆ ಭಾಜನರಾದರು.
2015ರಲ್ಲಿ ಕುಂದಗೋಳದ ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯಿಂದ ‘ಗುರುವರ್ಯ ಸವಾಯಿ ಗಂಧರ್ವ ರಾಷ್ಟ್ರೀಯ ಸಂಗೀತ ಪುರಸ್ಕಾರ’
2014ನೇ ಸಾಲಿನ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
2015ರಲ್ಲಿ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ
ಮೈಸೂರಿನ ಶ್ರೀ ಪುರಂದರ ತ್ಯಾಗರಾಜ ಮತ್ತು ವಾಗ್ಗೇಯಕಾರರ ಆರಾಧನೋತ್ಸವ ಸಮಿತಿಯಿಂದ 2003ರಲ್ಲಿ ಅವರಿಗೆ ‘ಸಂಗೀತ ಕಲಾ ತಪಸ್ವಿ’ ಎಂಬ ಗೌರವ
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಲಹಾ ಸಮಿತಿ ಸದಸ್ಯರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ದಶಕಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಪಂ. ಇಂದೂಧರ ನಿರೋಡಿ ಅವರ ನಿಧನದಿಂದ ಸಂಗೀತ ಕ್ಷೇತ್ರ ಹಿರಿಯ ಹಾಗೂ ಅನುಭವಿ ಕಲಾವಿದರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ನಿಧನಕ್ಕೆ ಸಂಗೀತಾಭಿಮಾನಿಗಳು, ಶಿಷ್ಯರು ಹಾಗೂ ಕಲಾವಿದರು ದೇಶ-ವಿದೇಶಗಳಿಂದ ಸಂತಾಪ ಸೂಚಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ