ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಸೇರಿದಂತೆ ಹಲವು ವಿಷಯಗಳಲ್ಲಿ ಚುನಾವಣಾ ಆಯುಕ್ತರ ಆಕ್ಷೇಪಣೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ವರದಿಗಳ ಬೆನ್ನಲ್ಲೇ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮತಗಳ ಕಳವು ನಡೆಯುತ್ತಿದ್ದು, ಅದರ ಪರಿಣಾಮವಾಗಿ ಸಂಸದರ ಮೂಲಕ ರೂಪುಗೊಳ್ಳುವ ಕಾನೂನುಗಳೇ ಅಕ್ರಮವಾಗುತ್ತವೆ ಎಂದು ಅವರು ಆರೋಪಿಸಿದ್ದಾರೆ.
ಗುರುವಾರ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, “ಮತ ಕಳ್ಳತನ”ದಲ್ಲಿ ಭಾಗಿಯಾಗಿರುವವರನ್ನು ದೇಶದ್ರೋಹಿಗಳು ಎಂದು ಕರೆದಿದ್ದು, ಮತದಾನ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಪಾವಿತ್ರ್ಯವೇ ಮೂಲಭೂತವಾಗಿ ಹಾಳಾಗಿದೆ ಎಂದು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸುವುದನ್ನು ಕಾಂಗ್ರೆಸ್ ಪಕ್ಷ ಮೌನವಾಗಿ ನೋಡುತ್ತ ಕುಳಿತುಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಮುಂದಿನ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಮತ್ತು 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ರಾಜಕೀಯ ನಾಯಕ ಇಷ್ಟೊಂದು ಆತ್ಮವಿಶ್ವಾಸದಿಂದ ಇಂತಹ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದರು.
“1971ರಲ್ಲಿ ಬಾಂಗ್ಲಾದೇಶ ಯುದ್ಧದ ಗೆಲುವಿನ ನಂತರ ಇಂದಿರಾ ಗಾಂಧಿ ಅವರು ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಆದರೂ ಒಂದು ಅಥವಾ ಎರಡು ವರ್ಷಗಳಲ್ಲೇ ಜನರ ಅಸಮಾಧಾನ ಮತ್ತು ಆಡಳಿತ ವಿರೋಧಿ ಅಲೆ (Anti-incumbency) ಎದುರಿಸಬೇಕಾಯಿತು. ಕಾಂಗ್ರೆಸ್ ನಾಯಕರಾಗಲಿ, ಪ್ರಾದೇಶಿಕ ಪಕ್ಷಗಳ ನಾಯಕರಾಗಲಿ ಎಲ್ಲರಿಗೂ ಇದೇ ಅನುಭವವಾಗಿದೆ. ಆದರೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ವಿಷಯದಲ್ಲಿ ಮಾತ್ರ ಇದು ಕಾಣಿಸುತ್ತಿಲ್ಲ” ಎಂದು ಅವರು ಹೇಳಿದರು.
ಹರಿಯಾಣದಲ್ಲಿ ಕಳೆದ 50 ವರ್ಷಗಳಿಂದ ಅಧಿಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಗುತ್ತ ಬಂದಿದೆ. ಮಹಾರಾಷ್ಟ್ರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷಗಳ ನಡುವೆ ಅಧಿಕಾರ ಬದಲಾವಣೆ ನಡೆದಿವೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಆಡಳಿತ ವಿರೋಧಿ ಅಲೆ ಏಕಾಏಕಿ ಮಾಯವಾಗಿರುವುದು ಪ್ರಶ್ನೆ ಹುಟ್ಟಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.
“ಒಬ್ಬ ನಾಯಕನ ಜನಪ್ರಿಯತೆಯನ್ನು ಅರ್ಥಮಾಡಿಕೊಳ್ಳಬಹುದು. ಒಂದು ಸರ್ಕಾರದ ಸಾಧನೆಯನ್ನು ಒಪ್ಪಿಕೊಳ್ಳಬಹುದು. ಆದರೆ ಆಡಳಿತ ವಿರೋಧಿ ಅಲೆ ಹೇಗೆ ಸಂಪೂರ್ಣವಾಗಿ ಮಾಯವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಪ್ರಶ್ನೆ ನಮ್ಮನ್ನು ಬಹಳ ದಿನಗಳಿಂದ ಕಾಡುತ್ತಿತ್ತು. ಕೊನೆಗೆ ಅದಕ್ಕೆ ಉತ್ತರ ಸಿಕ್ಕಿತು. ಅದು ‘ಮತ ಕಳವು’ (Vote Chori)” ಎಂದು ಅವರು ಆರೋಪಿಸಿದರು.
ಮತದಾನದ ಹಕ್ಕು ದೇಶದ ಸಂವಿಧಾನಕ್ಕೆ ಶಕ್ತಿ ನೀಡುತ್ತದೆ. ಸಂವಿಧಾನದಿಂದ ಕಾನೂನುಗಳು ಹುಟ್ಟುತ್ತವೆ ಮತ್ತು ಕಾನೂನುಗಳಿಂದ ಸಂಸ್ಥೆಗಳು ರೂಪುಗೊಳ್ಳುತ್ತವೆ. ಈ ಸರಪಳಿಯೇ ಆಧುನಿಕ ಭಾರತದ ಅಡಿಪಾಯವಾಗಿದೆ ಎಂದು ಹೇಳಿದ ರಾಹುಲ್ ಗಾಂಧಿ, “ಮತವೇ ನಾಶವಾಗಿದ್ದರೆ ಸಂವಿಧಾನವೂ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಸಂವಿಧಾನ ದುರ್ಬಲವಾದರೆ ಕಾನೂನುಗಳು ಅಕ್ರಮವಾಗುತ್ತವೆ. ಕಾನೂನುಗಳು ಅಕ್ರಮವಾದರೆ ಸಂಸ್ಥೆಗಳಿಗೂ ಅರ್ಥವೇ ಉಳಿಯುವುದಿಲ್ಲ. ಮತ ಕಳವಿನಿಂದ ಕಾನೂನು ಕಳವು ಉಂಟಾಗುತ್ತದೆ; ಕಾನೂನು ಕಳವಿನಿಂದ ಸಂಸ್ಥೆಗಳ ಕಳವು ಸಂಭವಿಸುತ್ತದೆ” ಎಂದು ವಾದಿಸಿದರು.
ಇದೇ ವೇಳೆ, 2024ರ ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂಬುದು “ನೂರಕ್ಕೆ ನೂರು ಖಚಿತ” ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ಇಬ್ಬರು ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾನೂ ಅದನ್ನೇ ಮಾಡಿದ್ದೇನೆ. ಆದರೆ ಆ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಗಿದೆ. ಸಂಸತ್ತಿನಲ್ಲಿ ಕುಳಿತಿರುವ ಸಂಸದರು ಕಳವಾದ ಮತಗಳ ಆಧಾರದ ಮೇಲೆ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರು ರೂಪಿಸುವ ಯಾವುದೇ ಕಾನೂನಿನ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ” ಎಂದು ಹೇಳಿದರು.
ಜ್ಞಾನೇಶಕುಮಾರ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಅವರು, “ನೀವು ಮಾಡಿರುವುದು ಭಾರತದ ವಿರುದ್ಧದ ಕೃತ್ಯವಾಗಿದೆ. ಇದು ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ನಾವು ಅವಕಾಶ ನೀಡುವುದಿಲ್ಲ. ಇದಕ್ಕೆ ಹೊಣೆಗಾರರಾಗಿರುವವರು ಇಂದು ಇಲ್ಲದಿದ್ದರೂ ನಾಳೆ, ನಾಳೆ ಇಲ್ಲದಿದ್ದರೂ ಮತ್ತೊಂದು ದಿನ ಶಿಕ್ಷೆಗೆ ಒಳಗಾಗುತ್ತಾರೆ. ಇಬ್ಬರು ಚುನಾವಣಾ ಆಯುಕ್ತರು ವಿವೇಕಯುತ ನಿರ್ಧಾರ ತೆಗೆದುಕೊಂಡಿದ್ದಾರೆ. ಜ್ಞಾನೇಶ್ ಕುಮಾರ್ ತಮ್ಮ ಸ್ಥಿತಿಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಮತ್ತು ಸತ್ಯ ಬಹಿರಂಗಪಡಿಸುವ ಸಾಕ್ಷಿದಾರರಾಗಬೇಕು. ಅದು ನಿಜವಾದ ರಾಷ್ಟ್ರಭಕ್ತಿಯ ಕೆಲಸವಾಗುತ್ತದೆ” ಎಂದು ಹೇಳಿದರು.
0 / 5. 0


ನಿಮ್ಮ ಕಾಮೆಂಟ್ ಬರೆಯಿರಿ