ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ : ಬೆಳ್ಳಿತೆರೆಯಲ್ಲೂ ಅವರು ‘ಮುಖ್ಯಮಂತ್ರಿ’

ಬೆಂಗಳೂರು: ಕರ್ನಾಟಕದ ಹಿರಿಯ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕರಲ್ಲಿ ಒಬ್ಬರಾಗಿರುವ ಅವರು, ಈ ಚಿತ್ರದಲ್ಲಿಯೂ ಮುಖ್ಯಮಂತ್ರಿಯ ಪಾತ್ರದಲ್ಲೇ ಕಾಣಿಸಿಕೊಳ್ಳಲಿದ್ದಾರಂತೆ.
ಪೂರ್ಣ ಪ್ರಮಾಣದ ಕಮರ್ಷಿಯಲ್‌ ಸಿನಿಮಾವೊಂದರಲ್ಲಿ ಅವರು ನಟಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ನಟ ಹಾಗೂ ನಿರ್ಮಾಪಕ ರಾಜೇಶ ಗೌಡ ಅವರ ಆರ್.ಎ. ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ಚಿತ್ರದ ಕಥೆಯನ್ನು ಕೇಳಿ ಮೆಚ್ಚಿರುವ ಸಿದ್ದರಾಮಯ್ಯ ಅವರು, ಕಥೆಯಲ್ಲಿ ಪ್ರಮುಖವಾಗಿರುವ ಮುಖ್ಯಮಂತ್ರಿಯ ಪಾತ್ರವನ್ನು ನಿರ್ವಹಿಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ವಿಶೇಷವೆಂದರೆ, ಚಿತ್ರದ ಚಿತ್ರಕಥೆ ರಚನೆ, ಚಿತ್ರೀಕರಣ, ಪೋಸ್ಟ್‌-ಪ್ರೊಡಕ್ಷನ್, ಸೆನ್ಸಾರ್ ಪ್ರಕ್ರಿಯೆ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಸೇರಿದಂತೆ ಸಂಪೂರ್ಣ ನಿರ್ಮಾಣ ಪ್ರಕ್ರಿಯೆಯನ್ನು ಕೇವಲ 48 ಗಂಟೆಗಳಲ್ಲಿ ಪೂರ್ಣಗೊಳಿಸಿ ವಿಶ್ವದಾಖಲೆ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಚಿತ್ರತಂಡ ರೂಪಿಸಿದೆ. ಚಿತ್ರಕ್ಕೆ ಇನ್ನೂ ಅಧಿಕೃತವಾಗಿ ಶೀರ್ಷಿಕೆ ನಿಗದಿಯಾಗಿಲ್ಲವಾದರೂ, ‘ಮುಖ್ಯಮಂತ್ರಿ’ ಎಂಬ ಹೆಸರನ್ನು ಇಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಮುಖ ಸುದ್ದಿ :-   ಗವಿಸಿದ್ದೇಶ್ವರ ಶ್ರೀಗಳಿಂದ ಈ ಬಾರಿಯ ಮೈಸೂರು ದಸರಾ ಉದ್ಘಾಟನೆ ; ಸಿಎಂ

ಸಿದ್ದರಾಮಯ್ಯ ಅವರಿಗೆ  ನಟನೆ ಹೊಸದೇನಲ್ಲ. ವಿದ್ಯಾರ್ಥಿ ಜೀವನದಲ್ಲೇ ಅವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಅಲ್ಲದೆ, 2017ರಲ್ಲಿ ಕವಿತಾ ಲಂಕೇಶ್ ನಿರ್ದೇಶಿಸಿದ್ದ ಮಕ್ಕಳ ಚಿತ್ರ ಸಮ್ಮರ್ ಹಾಲಿಡೇಸ್‌ನಲ್ಲಿ ಅತಿಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು.
ಇದಕ್ಕೂ ಮೊದಲು ಸಿದ್ದರಾಮಯ್ಯ ಅವರ ಜೀವನಾಧಾರಿತ ಲೀಡರ್ ರಾಮಯ್ಯ ಬಯೋಪಿಕ್‌ ನಿರ್ಮಾಣದ ಬಗ್ಗೆ ಸುದ್ದಿಯಾಗಿತ್ತು. ಆ ಚಿತ್ರದಲ್ಲಿ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವರದಿಗಳೂ ಕೇಳಿಬಂದಿದ್ದವು.
ಗಮನಾರ್ಹ ಸಂಗತಿಯೆಂದರೆ, ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಒಂದು ಸಿನಿಮಾದಲ್ಲಿ ಮುಖ್ಯಮಂತ್ರಿಯ ಪಾತ್ರದಲ್ಲಿ ಅಭಿನಯಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement