ಹೊತ್ತಿ ಉರಿದ ಬಸ್‌-9 ಸಾವು ; “ನೀವ್‌ ಸತ್ರೂ ಕೇರ್‌ ಮಾಡಲ್ಲ, ಬಸ್‌ ನಿಲ್ಲಿಸಲ್ಲ”: ಸುಟ್ಟ ವಾಸನೆ ಬಗ್ಗೆ ಗಮನಕ್ಕೆ ತಂದ್ರೂ ಕೇಳದ ಚಾಲಕ

ನವದೆಹಲಿ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇ ಮೇಲೆ ಪ್ರವಾಸಿ ಬಸ್‌ ಬೆಂಕಿಗೆ ಆಹುತಿಯಾಗಿ ಒಂಬತ್ತು ಮಂದಿ ಮೃತಪಟ್ಟ ಪ್ರಕರಣದಲ್ಲಿ ಚಾಲಕ ಮತ್ತು ನಿರ್ವಾಹಕನ ನಿರ್ಲಕ್ಷ್ಯದ ಆರೋಪ ಕೇಳಿಬಂದಿದೆ. ಬಸ್‌ಗೆ ಬೆಂಕಿ ಹೊತ್ತಿಕೊಳ್ಳುವ ಕೆಲವೇ ನಿಮಿಷಗಳ ಮೊದಲು ಪ್ರಯಾಣಿಕರಿಗೆ ಸುಟ್ಟ ವಾಸನೆ ಬಂದಿತ್ತು. ಈ ಬಗ್ಗೆ ಅವರು ಚಾಲಕನಿಗೆ ತಿಳಿಸಿದ್ದರೂ, ಆತ ಅದನ್ನು ಗಂಭೀರವಾಗಿ ಪರಿಗಣಿಸದೆ ಸಿಗರೇಟ್ ಸೇದುವುದನ್ನು ಮುಂದುವರಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬಿಹಾರ ನೋಂದಣಿಯ ಈ ಸ್ಲೀಪರ್ ಬಸ್‌ ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿತ್ತು. ಬಸ್‌ನಲ್ಲಿ 35ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಪ್ರಯಾಣದ ವೇಳೆ ಚಾಲಕ ಮತ್ತು ನಿರ್ವಾಹಕರು ಬಸ್‌ನೊಳಗೆ ಸಿಗರೇಟ್ ಸೇದುತ್ತಿದ್ದುದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಇಬ್ಬರೂ ಪ್ರಯಾಣಿಕರ ಮಾತಿಗೆ ನಕ್ಕು, ಸುಮ್ಮನಿರುವಂತೆ ಬೆದರಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಸ್ವಲ್ಪ ಸಮಯದ ಬಳಿಕ ಬಸ್‌ನೊಳಗೆ ಸುಟ್ಟ ವಾಸನೆ ಹರಡತೊಡಗಿತು. ಇದನ್ನು ಗಮನಿಸಿದ ಪ್ರಯಾಣಿಕರು ಚಾಲಕನಿಗೆ ಮಾಹಿತಿ ನೀಡಿದರು. ಆದರೆ ಚಾಲಕ ಮತ್ತು ನಿರ್ವಾಹಕರು, ಬಸ್‌ನಲ್ಲಿ ಇಂತಹ ವಾಸನೆ ಆಗಾಗ ಬರುತ್ತದೆ ಎಂದು ಹೇಳಿ ಪ್ರಯಾಣಿಕರ ಮಾತನ್ನು ನಿರ್ಲಕ್ಷಿಸಿದರು. ವಾಸನೆಗೆ ಕಾರಣವೇನು ಎಂದು ಪರಿಶೀಲಿಸುವಂತೆ ಪ್ರಯಾಣಿಕರು ಪದೇಪದೇ ಮನವಿ ಮಾಡಿದರೂ ಚಾಲಕ ಬಸ್ ನಿಲ್ಲಿಸಿ ತಪಾಸಣೆ ನಡೆಸಲಿಲ್ಲ. ಬದಲಿಗೆ ಸಿಗರೇಟ್ ಸೇದುತ್ತಲೇ ಬಸ್ ಚಲಾಯಿಸುತ್ತಿದ್ದ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಕೆಲವೇ ನಿಮಿಷಗಳಲ್ಲಿ ಬಸ್‌ನ ಮುಂಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಪ್ರಯಾಣಿಕರು ಭಯದಿಂದ ಕಿರುಚುತ್ತಾ ಸಹಾಯಕ್ಕಾಗಿ ಕೂಗಿದರು. ಆಗ ಚಾಲಕ, “ನೀವು ಸತ್ತರೂ ನನಗೆ ಕಾಳಜಿಯಿಲ್ಲ, ನಾನು ಬಸ್ ನಿಲ್ಲಿಸುವುದಿಲ್ಲ” ಎಂದು ಹೇಳಿದ್ದಾಗಿ ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಬೆಂಕಿ ಕೆಲವೇ ಕ್ಷಣಗಳಲ್ಲಿ ಇಡೀ ಬಸ್‌ಗೆ ವ್ಯಾಪಿಸಿತು. ಬಸ್‌ನೊಳಗೆ ದಟ್ಟ ಹೊಗೆ ತುಂಬಿದ್ದರಿಂದ ಪ್ರಯಾಣಿಕರಿಗೆ ಹೊರಗೆ ಬರಲು ತೀವ್ರ ತೊಂದರೆಯಾಯಿತು. ಈ ದುರಂತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವುದರ ಜತೆಗೆ ಬಸ್‌ನೊಳಗೆ ಸಿಲುಕಿದ್ದವರನ್ನು ರಕ್ಷಿಸಿದರು. ಘಟನೆಯ ದೃಶ್ಯಗಳಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.

ಎಸಿ ಸಿಸ್ಟಂ ಸ್ಫೋಟದಿಂದ ಬೆಂಕಿ?
ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಹವಾನಿಯಂತ್ರಣ ವ್ಯವಸ್ಥೆ (AC)ಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ. ಈ ಸ್ಫೋಟದಿಂದ ಎಂಜಿನ್‌ನ ಲೂಬ್ರಿಕೇಟಿಂಗ್ ಆಯಿಲ್‌ಗೆ ಬೆಂಕಿ ತಗುಲಿ, ಅಲ್ಲಿಂದ ಬೆಂಕಿ ವೇಗವಾಗಿ ಇಡೀ ಬಸ್‌ಗೆ ಹರಡಿರುವ ಸಾಧ್ಯತೆ ಇದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಬಸ್‌ನ ಚಾಲಕ ಮತ್ತು ನಿರ್ವಾಹಕರು ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಸ್ ವಿರುದ್ಧ 60ಕ್ಕೂ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ದಂಡ
ದುರಂತಕ್ಕೀಡಾದ ಬಸ್ ವಿರುದ್ಧ ಈ ಹಿಂದೆ ಸಂಚಾರ ನಿಯಮ ಉಲ್ಲಂಘನೆಗಾಗಿ 60ಕ್ಕೂ ಹೆಚ್ಚು ದಂಡ (ಚಲನ್) ವಿಧಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಪೈಕಿ 20 ದಂಡಗಳು ಇನ್ನೂ ಪಾವತಿಯಾಗಿಲ್ಲ ಎಂದು ಹೇಳಲಾಗಿದೆ.
ವಾಹನಗಳ ಮಾಹಿತಿಯನ್ನು ಒದಗಿಸುವ ವೆಬ್‌ಸೈಟ್‌ನ ದಾಖಲೆಗಳ ಪ್ರಕಾರ, BR32PA8647 ನೋಂದಣಿ ಸಂಖ್ಯೆಯ ಈ ಬಸ್‌ಗೆ ವಿಧಿಸಲಾಗಿದ್ದ ದಂಡಗಳ ಪೈಕಿ ₹1.7 ಲಕ್ಷಕ್ಕೂ ಹೆಚ್ಚು ಮೊತ್ತ ಇನ್ನೂ ಬಾಕಿಯಿದೆ ಹಾಗೂ ಇತ್ತೀಚಿಗೆ ಆಗಸ್ಟ್ 19ರಂದು ದೆಹಲಿಯ ಮಯೂರ್ ವಿಹಾರ್‌ನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ₹18,500 ದಂಡ ವಿಧಿಸಲಾಗಿತ್ತು ಎಂದುತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಸೇರಿ 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಉಸ್ತುವಾರಿಗಳನ್ನು ನೇಮಿಸಿದ ಬಿಜೆಪಿ

ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ
ಗ್ರೇಟರ್ ನೋಯ್ಡಾದ ಬಸ್‌ ಬೆಂಕಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಲಾಗಿದೆ. ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ.
“ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಬಸ್‌ಗೆ ಬೆಂಕಿ ತಗುಲಿ ಜೀವಹಾನಿಯಾಗಿರುವ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಕಚೇರಿ (PMO) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಪರಿಹಾರ ಘೋಷಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement