ನವದೆಹಲಿ: ಐಚಿ-ನಗೋಯಾ ಏಷ್ಯನ್ ಗೇಮ್ಸ್-2026ರಲ್ಲಿ ಭಾರತದ ಶೂಟಿಂಗ್ ತಂಡವು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸೂರೂಚಿ ಸಿಂಗ್ ಮತ್ತು ಕಮಲ್‌ಜೀತ್ ಚಿನ್ನದ ಪದಕ ಗೆದ್ದು ಭಾರತಕ್ಕೆ ಕ್ರೀಡಾಕೂಟದ ಎರಡನೇ ಚಿನ್ನ ತಂದುಕೊಟ್ಟಿದ್ದಾರೆ. ಫೈನಲ್‌ನಲ್ಲಿ 484.6 ಅಂಕಗಳನ್ನು ಕಲೆಹಾಕಿದ ಭಾರತೀಯ ಜೋಡಿ ದಕ್ಷಿಣ ಕೊರಿಯಾದ ತಂಡವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿತು.
ದಕ್ಷಿಣ ಕೊರಿಯಾ 478.0 ಅಂಕಗಳೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರೆ, ಇರಾನ್ 415.8 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿತು. ಇಂಡೋನೇಷ್ಯಾ 349.4 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟು ಸ್ಪರ್ಧೆಯಿಂದ ಹೊರಬಿತ್ತು.
ಸೂರೂಚಿ ಮತ್ತು ಕಮಲ್‌ಜೀತ್ ಕೇವಲ ಚಿನ್ನ ಗೆಲ್ಲುವುದಷ್ಟೇ ಅಲ್ಲ, ಹೊಸ ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ. ಈ ವರ್ಷ ನವದೆಹಲಿಯಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಉಜ್ಬೇಕಿಸ್ತಾನ ತಂಡ ನಿರ್ಮಿಸಿದ್ದ 481.3 ಅಂಕಗಳ ಏಷ್ಯನ್ ದಾಖಲೆಯನ್ನು ಭಾರತೀಯ ಜೋಡಿ 484.6 ಅಂಕಗಳೊಂದಿಗೆ ಮುರಿದು ಹೊಸ ದಾಖಲೆ ಬರೆದಿದೆ.
ಫೈನಲ್ ಸ್ಪರ್ಧೆಯಲ್ಲಿ ಭಾರತೀಯ ಜೋಡಿ ಆರಂಭದಿಂದಲೇ ಪ್ರಾಬಲ್ಯ ಮೆರೆಯಿತು. ಮೊದಲ ಸರಣಿಯಲ್ಲಿ 103 ಅಂಕಗಳನ್ನು ಗಳಿಸಿ ಮುನ್ನಡೆ ಸಾಧಿಸಿತು. ಈ ಹಂತದಲ್ಲಿ ದಕ್ಷಿಣ ಕೊರಿಯಾ 98.1 ಹಾಗೂ ಇರಾನ್ 98.0 ಅಂಕಗಳೊಂದಿಗೆ ಹಿಂಬಾಲಿಸುತ್ತಿದ್ದರೆ, ಇಂಡೋನೇಷ್ಯಾ 95.2 ಅಂಕಗಳನ್ನು ದಾಖಲಿಸಿತು.
ಎರಡನೇ ಸರಣಿಯಲ್ಲಿ ಭಾರತ 99.4 ಅಂಕಗಳನ್ನು ಸೇರಿಸಿ ಒಟ್ಟು 202.4 ಅಂಕಗಳಿಗೆ ತಲುಪಿತು. ದಕ್ಷಿಣ ಕೊರಿಯಾ 103.1 ಅಂಕಗಳ ಉತ್ತಮ ಪ್ರದರ್ಶನ ನೀಡಿ ಒಟ್ಟು 201.2 ಅಂಕಗಳನ್ನು ಪಡೆಯಿತು.
ಮೂರನೇ ಸರಣಿಯಲ್ಲಿ ಭಾರತೀಯ ಜೋಡಿ ಮತ್ತೆ ತನ್ನ ಮೇಲುಗೈ ಪ್ರದರ್ಶಿಸಿ 101.1 ಅಂಕಗಳನ್ನು ಗಳಿಸಿ ಒಟ್ಟು 303.5 ಅಂಕಗಳಿಗೆ ತಲುಪಿತು. ದಕ್ಷಿಣ ಕೊರಿಯಾ 99 ಅಂಕಗಳನ್ನು ಗಳಿಸಿ 300.2 ಅಂಕಗಳಿಗೆ ಸೀಮಿತವಾಯಿತು. ಇರಾನ್ 295.0 ಹಾಗೂ ಇಂಡೋನೇಷ್ಯಾ 291.0 ಅಂಕಗಳನ್ನು ದಾಖಲಿಸಿತು.
ಎರಡನೇ ಹಂತದ ಮೊದಲ ಸರಣಿಯಲ್ಲಿ ಸೂರೂಚಿ-ಕಮಲ್‌ಜೀತ್ 61.2 ಅಂಕಗಳನ್ನು ಗಳಿಸಿ ಒಟ್ಟು 364.7 ಅಂಕಗಳಿಗೆ ತಲುಪಿದರು. ಇದರೊಂದಿಗೆ ದಕ್ಷಿಣ ಕೊರಿಯಾದ ಮೇಲಿನ ಮುನ್ನಡೆ 5.8 ಅಂಕಗಳಿಗೆ ಏರಿತು. ಇದೇ ವೇಳೆ 349.4 ಅಂಕಗಳೊಂದಿಗೆ ಇಂಡೋನೇಷ್ಯಾ ಸ್ಪರ್ಧೆಯಿಂದ ಹೊರಬಿತ್ತು.
ಮುಂದಿನ ಸರಣಿಯಲ್ಲಿ ಭಾರತೀಯ ಜೋಡಿ ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಿತು. 424.9 ಅಂಕಗಳಿಗೆ ತಲುಪಿದ ಭಾರತ, ದಕ್ಷಿಣ ಕೊರಿಯಾದಿಗಿಂತ 8.4 ಅಂಕಗಳ ಮುನ್ನಡೆ ಸಾಧಿಸಿತು. ದಕ್ಷಿಣ ಕೊರಿಯಾ 416.5 ಅಂಕಗಳನ್ನು ಗಳಿಸಿದರೆ, ಇರಾನ್ 415.8 ಅಂಕಗಳೊಂದಿಗೆ ಕಂಚಿನ ಪದಕವನ್ನು ಖಚಿತಪಡಿಸಿಕೊಂಡಿತು.
ಕೊನೆಯ ಸರಣಿಯಲ್ಲಿ ದಕ್ಷಿಣ ಕೊರಿಯಾ ತೀವ್ರ ಪೈಪೋಟಿ ನೀಡಿದರೂ, ಸೂರೂಚಿ ಮತ್ತು ಕಮಲ್‌ಜೀತ್ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿ 484.6 ಅಂಕಗಳೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಬೆಳ್ಳಿ ಪದಕ ವಿಜೇತ ದಕ್ಷಿಣ ಕೊರಿಯಾ ತಂಡಕ್ಕಿಂತ ಭಾರತ 6.6 ಅಂಕಗಳ ಅಂತರದಿಂದ ಗೆಲುವು ಸಾಧಿಸಿತು.
ಈ ಚಿನ್ನದೊಂದಿಗೆ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೆ ಎರಡು ಚಿನ್ನದ ಪದಕಗಳನ್ನು ಗೆದ್ದಂತಾಗಿದೆ. ಇದಕ್ಕೂ ಮೊದಲು ಭಾರತೀಯ ಮಹಿಳಾ ಕ್ರಿಕೆಟ್ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು 147 ರನ್‌ಗಳಿಂದ ಸೋಲಿಸಿ ಚಿನ್ನದ ಪದಕ ಜಯಿಸಿತ್ತು.
ಪ್ರಸ್ತುತ ಭಾರತ ಒಟ್ಟು 19 ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ. ಇದರಲ್ಲಿ 2 ಚಿನ್ನ, 8 ಬೆಳ್ಳಿ ಮತ್ತು 9 ಕಂಚಿನ ಪದಕಗಳು ಸೇರಿವೆ.
ಶೂಟಿಂಗ್‌ನಲ್ಲಿ ಎಪಿಎಸ್ ತೋಮರ್, ರುದ್ರಾಂಕ್ಷ್ ಪಾಟೀಲ್ ಹಾಗೂ ನೀರಜ ಕುಮಾರ ಪುರುಷರ 50 ಮೀಟರ್ ರೈಫಲ್ ತ್ರಿ ಪೊಸಿಷನ್ಸ್ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ತೋಮರ್ ಮತ್ತು ನೀರಜ್ ವೈಯಕ್ತಿಕ ಫೈನಲ್‌ನಲ್ಲೂ ಸ್ಪರ್ಧಿಸಲಿದ್ದಾರೆ.
ಟೇಬಲ್ ಟೆನಿಸ್‌ನಲ್ಲಿ ದಿಯಾ ಚಿತಾಲೆ ಮತ್ತು ಮಾನುಷ್ ಶಾ ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಹಾಂಗ್‌ಕಾಂಗ್‌ನ ವಾಂಗ್ ಚುನ್ ಟಿಂಗ್ ಹಾಗೂ ಡೂ ಹೋಯ್ ಕೆಮ್ ಜೋಡಿಯನ್ನು ಮಣಿಸಿ ಭಾರತಕ್ಕೆ ಪದಕವನ್ನು ಖಚಿತಪಡಿಸಿದರು.
ಸ್ಕ್ವಾಷ್‌ನಲ್ಲಿ ಜೋಶ್ನಾ ಚಿನಪ್ಪ ಮತ್ತು ವೇಲವನ್ ಸೆಂಥಿಲ್‌ಕುಮಾರ್ ಫಿಲಿಪ್ಪೀನ್ಸ್‌ನ ಡೇವಿಡ್ ಪೆಲಿನೊ ಹಾಗೂ ಜೆಮ್ಸ್ಯಾ ಅರಿಬಾಡೊ ಜೋಡಿಯನ್ನು ಕ್ವಾರ್ಟರ್ ಫೈನಲ್‌ನಲ್ಲಿ ಸೋಲಿಸಿ ಪದಕದ ಸನಿಹಕ್ಕೆ ತಲುಪಿದರು.
ಈಜು ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ ಪುರುಷರ 200 ಮೀಟರ್ ಬಟರ್‌ಫ್ಲೈ ವಿಭಾಗದ ಫೈನಲ್‌ಗೆ ಅರ್ಹತೆ ಪಡೆದರು. ರಿಷಭ್ ದಾಸ್ ಮತ್ತು ಉತ್ಕರ್ಷ್ ಪಾಟೀಲ್ ಪುರುಷರ 200 ಮೀಟರ್ ಬ್ಯಾಕ್‌ಸ್ಟ್ರೋಕ್ ಫೈನಲ್ ಪ್ರವೇಶಿಸಿದರು.
ಬ್ಯಾಡ್ಮಿಂಟನ್‌ನಲ್ಲಿ ಧ್ರುವ್ ಕಪಿಲಾ ಮತ್ತು ತನಿಷಾ ಕ್ರಾಸ್ಟೊ ಮಿಶ್ರ ಡಬಲ್ಸ್‌ನಲ್ಲಿ ಮಾಲ್ಡೀವ್ಸ್‌ನ ಅಮಿನಾಥ್ ಅಬ್ದುಲ್ ರಜಾಕ್ ಹಾಗೂ ನಿಬಾಲ್ ಅಹ್ಮದ್ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು.
ಕಯಾಕಿಂಗ್‌ನಲ್ಲಿ ಪ್ರೋಹಿತ್ ಬರೋಯಿ ಮತ್ತು ಪ್ರಸನ್ನ ಕುಮಾರ ಪುರುಷರ ಕಯಾಕ್ ಡಬಲ್ 500 ಮೀಟರ್ ಸ್ಪರ್ಧೆಯಲ್ಲಿ ಫೈನಲ್ ‘ಬಿ’ಗೆ ಪ್ರವೇಶಿಸಿದರು. ಮಹಿಳೆಯರ ಕಯಾಕ್ ಫೋರ್ ತಂಡ ಎಂಟನೇ ಸ್ಥಾನ ಪಡೆದಿತು.


ನಿಮ್ಮ ಕಾಮೆಂಟ್ ಬರೆಯಿರಿ