ಬೆಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕವು ಪ್ರತಿ ವರ್ಷ ಹಿರಿಯ ಸಾಹಿತ್ಯ ಸಾಧಕರಿಗೆ ನೀಡುವ ‘ಆದಿಕವಿ ಪುರಸ್ಕಾರ’ಕ್ಕೆ ಈ ವರ್ಷ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಸಾಹಿತಿ ಶಾ. ಮಂ. ಕೃಷ್ಣರಾಯ ಅವರನ್ನು ಆಯ್ಕೆ ಮಾಡಲಾಗಿದೆ. ಹಾಗೆಯೇ ‘ವಾಗ್ದೇವಿ ಪುರಸ್ಕಾರ’ಕ್ಕೆ ಯುವ ಪೀಳಿಗೆಯಲ್ಲಿ ಗಮನಾರ್ಹ ಸಾಹಿತ್ಯಿಕ ಅಭಿವ್ಯಕ್ತಿ ಮೂಡಿಸಿರುವ ಕಾದಂಬರಿಗಾರ್ತಿ ಸಹನಾ ವಿಜಯಕುಮಾರ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಎರಡೂ ಪುರಸ್ಕಾರಗಳು ತಲಾ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಸ್ಮರಣಿಕಾ ಫಲಕವನ್ನು ಒಳಗೊಂಡಿವೆ.
ಈ ಕುರಿತು ಮಾಹಿತಿ ನೀಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದ ರಾಜ್ಯಾಧ್ಯಕ್ಷ ಎಸ್.ಜಿ. ಕೋಟಿ, ನವೆಂಬರ್ 15ರಂದು ಭಾನುವಾರ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12:30ರವರೆಗೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ. ಹಿರಿಯ ಸಾಹಿತಿ ಹಾಗೂ ಈ ಹಿಂದೆ ‘ಆದಿಕವಿ ಪುರಸ್ಕಾರ’ಕ್ಕೆ ಭಾಜನರಾಗಿರುವ ಡಾ. ಬಾಬು ಕೃಷ್ಣಮೂರ್ತಿ ಅವರು ಪುರಸ್ಕಾರಗಳನ್ನು ಪ್ರದಾನ ಮಾಡಲಿದ್ದಾರೆ.‘ಆದಿಕವಿ ಪುರಸ್ಕಾರ’ದ ಪ್ರಾಯೋಜಕರಾಗಿರುವ ಉದ್ಯಮಿ ಜಯರಾಮ ಹಾಗೂ ‘ವಾಗ್ದೇವಿ ಪುರಸ್ಕಾರ’ದ ಪ್ರಾಯೋಜಕರಾಗಿರುವ ನಿವೃತ್ತ ಇಸ್ರೋ ವಿಜ್ಞಾನಿ ಹರೀಶ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕವು ಕನ್ನಡ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬಂದಿದೆ. ಸಾಹಿತ್ಯದ ಸೃಜನಶೀಲತೆ, ಅಧ್ಯಯನ, ಸಂಶೋಧನೆ, ಭಾಷಾ ಸೇವೆ ಮತ್ತು ಸಾಂಸ್ಕೃತಿಕ ಹೊಣೆಗಾರಿಕೆಯನ್ನು ಗುರುತಿಸಿ ಗೌರವಿಸುವುದು ಈ ಪುರಸ್ಕಾರಗಳ ಆಶಯವಾಗಿದೆ ಎಂದು ಎಸ್.ಜಿ. ಕೋಟಿ ತಿಳಿಸಿದ್ದಾರೆ.
ಶಾ. ಮಂ. ಕೃಷ್ಣರಾಯರ ಬಗ್ಗೆ….
ಬೆಳಗಾವಿಯಲ್ಲಿ ಜನಿಸಿದ ಶಾ. ಮಂ. ಕೃಷ್ಣರಾಯ ಅವರು ಬಹುಭಾಷಾ ಪಂಡಿತರಾಗಿದ್ದು, ಅಧ್ಯಾಪಕ, ಕೃತಿ ಸಂಪಾದಕ, ಪತ್ರಕರ್ತ ಹಾಗೂ ಸಾಹಿತಿಯಾಗಿ ದೀರ್ಘಕಾಲದಿಂದ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶೇಷವಾಗಿ ಗೋವಾ ನೆಲದಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಅಸ್ತಿತ್ವವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕೃಷ್ಣರಾಯರು ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದ ಸಾಂಸ್ಕೃತಿಕ ನೆಲೆಗಳನ್ನು ಗಟ್ಟಿಗೊಳಿಸುವುದದರ ಜೊತೆಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿದ್ದಾರೆ.
ನಾಟಕ, ಕಥೆ, ಸಂಶೋಧನಾ ಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ, ವ್ಯಕ್ತಿಚಿತ್ರ ಹಾಗೂ ಅನುವಾದ ಸೇರಿದಂತೆ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದಾರೆ. ಅವರ ಒಟ್ಟು 128 ಕೃತಿಗಳು ಪ್ರಕಟಗೊಂಡಿವೆ. ಅವರ ಸಾಹಿತ್ಯಿಕ ಹಾಗೂ ವೈಚಾರಿಕ ಕೊಡುಗೆಯನ್ನು ದಾಖಲಿಸುವ ಉದ್ದೇಶದಿಂದ ಅವರ ಕುರಿತು ಐದು ಕೃತಿಗಳೂ ಪ್ರಕಟವಾಗಿವೆ.
ಸಾಹಿತ್ಯವನ್ನು ಕೇವಲ ಸೃಜನಶೀಲ ಅಭಿವ್ಯಕ್ತಿಯ ಕ್ಷೇತ್ರವಾಗಿ ನೋಡದೆ, ಭಾಷೆ, ಸಮಾಜ ಮತ್ತು ಸಂಸ್ಕೃತಿಯೊಂದಿಗೆ ಅದರ ಸಂಬಂಧವನ್ನು ಜೀವಂತವಾಗಿಟ್ಟುಕೊಂಡು ಕಾರ್ಯನಿರ್ವಹಿಸಿರುವ ಕೃಷ್ಣರಾಯರ ಬಹುಮುಖ ಸಾಹಿತ್ಯ ಸೇವೆಯನ್ನು ಗುರುತಿಸಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕವು ಅವರಿಗೆ ‘ಆದಿಕವಿ ಪುರಸ್ಕಾರ’ವನ್ನು ನೀಡುತ್ತಿದೆ.
ಸಹನಾ ವಿಜಯಕುಮಾರ ಬಗ್ಗೆ….
‘ವಾಗ್ದೇವಿ ಪುರಸ್ಕಾರ’ಕ್ಕೆ ಆಯ್ಕೆಯಾಗಿರುವ ಸಹನಾ ವಿಜಯಕುಮಾರ ಅವರು ಮೂಲತಃ ಮೈಸೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಅವರು ಬಳಿಕ ಕಾದಂಬರಿ ಪ್ರಕಾರದಲ್ಲಿ ತಮ್ಮ ಸೃಜನಶೀಲತೆಯನ್ನು ವಿಸ್ತರಿಸಿಕೊಂಡರು. ಅವರ ಅಂಕಣ ಬರಹಗಳೂ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ.
ಇದುವರೆಗೆ ‘ಕ್ಷಮೆ’ (2016), ‘ಕಶೀರ’ (2018), ‘ಅವಸಾನ’ (2020), ‘ಮಾಗಧ’ (2024) ಹಾಗೂ ‘ಅಪರೋಕ್ಷ’ (2026) ಸೇರಿದಂತೆ ಐದು ಕಾದಂಬರಿಗಳನ್ನು ಅವರು ಪ್ರಕಟಿಸಿದ್ದಾರೆ. ವಿಭಿನ್ನ ವಿಷಯವಸ್ತುಗಳನ್ನು ಕಾದಂಬರಿಯ ರೂಪದಲ್ಲಿ ಕಟ್ಟಿಕೊಡುವ ಮೂಲಕ ಸಮಕಾಲೀನ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಬರಹದ ಹಾದಿಯನ್ನು ರೂಪಿಸಿಕೊಂಡಿರುವ ಸಹನಾ ವಿಜಯಕುಮಾರ ಅವರನ್ನು ಈ ವರ್ಷದ ‘ವಾಗ್ದೇವಿ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ