ಕಾರು ಅಪಘಾತದ ಬಳಿಕ ಉತ್ತರಾಧಿಮಠ ಶ್ರೀಗಳಿಗೆ ಚಿಕಿತ್ಸೆ-ಚೇತರಿಕೆ, ಆಸ್ಪತ್ರೆಯಿಂದ ಬಿಡುಗಡೆ-ಭಕ್ತರಿಗೆ ವಿಡಿಯೋ ಸಂದೇಶ

ಹುಬ್ಬಳ್ಳಿ : ಉತ್ತರಾದಿ ಮಠದ ಪೀಠಾಧಿಪತಿ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಪ್ರಯಾಣಿಸುತ್ತಿದ್ದ ಕಾರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಸಮೀಪದ ಪಿಬಿ ರಸ್ತೆಯಲ್ಲಿ ರಸ್ತೆ ವಿಭಜಕಕ್ಕೆ (ಮೀಡಿಯನ್) ಡಿಕ್ಕಿ ಹೊಡೆದಿದೆ. . ಕಾರು ಅಪಘಾತದ ಬಳಿಕ ಶ್ರೀಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಈಗ ಡಿಸ್ಚಾರ್ಜ್‌ ಚೇತರಿಸಿಕೊಂಡಿದ್ದಾರೆ. ಅವರ ಪರಿವಾರದವರೂ ಆರೋಗ್ಯವಾಗಿದ್ದು, ಸ್ವತಃ ಶ್ರೀಗಳು ವಿಡಿಯೋ ಸಂದೇಶ ರವಾನಿಸಿದ್ದಾರೆ.
ಪರಿಣಾಮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶನಿವಾರ ತಡರಾತ್ರಿ ಈ ಅಪಘಾತ ಸಂಭವಿಸಿದ್ದು, ಧಾರವಾಡದಲ್ಲಿ ನಡೆದ 31ನೇ ಚಾತುರ್ಮಾಸ್ಯ ವ್ರತವನ್ನು ಪೂರ್ಣಗೊಳಿಸಿದ ಬಳಿಕ ಶ್ರೀಗಳು ಸವಣೂರಿನತ್ತ ತೆರಳುತ್ತಿದ್ದರು. ಈ ವೇಳೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿಯ ವಾಟರ್ ಪಾರ್ಕ್ ಸಮೀಪ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಆಸನಕ್ಕೆ ಬಡಿದ ಪರಿಣಾಮ ಶ್ರೀಗಳಿಗೆ ಗಾಯಗಳಾಗಿವೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಭಾನುವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕಾರಿನಲ್ಲಿದ್ದ ಇತರ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಉತ್ತರಾದಿ ಮಠವು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಮನವಿ ಮಾಡಿದೆ. ಅಲ್ಲದೆ, ಪ್ರಸ್ತುತ ಶ್ರೀಗಳು ವಿಶ್ರಾಂತಿ ಪಡೆಯುತ್ತಿದ್ದು, ಹುಬ್ಬಳ್ಳಿಯ ಉತ್ತರಾದಿ ಮಠಕ್ಕೆ ಭಕ್ತರು ಗುಂಪುಗೂಡಿ ಧಾವಿಸಬಾರದು ಎಂದು ಕೂಡ ವಿನಂತಿಸಿದೆ.

ಶ್ರೀಪಾದಂಗಳವರ ವಿಡಿಯೋ ಸಂದೇಶ
ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಭಕ್ತರಿಗೆ ಶ್ರೀಪಾದಂಗಳವರು ವಿಡಿಯೋ ಸಂದೇಶ ನೀಡಿದ್ದಾರೆ. ಅದರಲ್ಲಿ “ನಿನ್ನೆ ದಿವಸ ಸೀಮೋಲ್ಲಂಘನ ಮಾಡಿ ಬರುವಾಗ ಒಂದು ಸಣ್ಣ ಅಪಘಾತವಾಯಿತು. ಆದರೆ, ನಮ್ಮ ಗುರುಗಳ ಅನುಗ್ರಹದಿಂದ, ಮೂಲರಾಮ, ದಿಗ್ವಿಜಯರಾಮ, ವೇದವ್ಯಾಸ ದೇವರ ಅನುಗ್ರಹದಿಂದ ಎಲ್ಲವೂ ವಾಸಿಯಾಗಿದೆ. ಯಾವುದೇ ತರಹದ ಚಿಂತಾಜನಕವಾದ ವಿಚಾರಗಳಿಲ್ಲ ಎಂದು ವೈದ್ಯರು ಸೂಚನೆ ಕೊಟ್ಟಿದ್ದಾರೆ. ಕೆಲವು ದಿನಗಳ ವಿಶ್ರಾಂತಿಯನ್ನು ಮಾತ್ರ ಪಡೆಯಬೇಕು, ಹೆಚ್ಚಿನ ಸಮಸ್ಯೆ ಏನೂ ಇಲ್ಲ. ಆದ್ದರಿಂದ ಭಕ್ತರು ಯಾವ ಆತಂಕವನ್ನೂ ಪಡುವುದು ಬೇಡ. ಎಲ್ಲರೂ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ. ಹರಿ, ವಾಯು, ಗುರುಗಳ ಅನುಗ್ರಹದಿಂದ ಎಲ್ಲವೂ ಸುಖವಾಗಿದೆ, ಬೇಗ ಆರಾಮವಾಗಲಿದೆ ” ಎಂದು ಸಂದೇಶದಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗ್ಯಾರಂಟಿ ಯೋಜನೆಗಳಿಂದ ಹಣಕಾಸು ನಿರ್ವಹಣೆ ಕಷ್ಟಕರವಾಗಿದೆ: ಎಚ್‌.ಸಿ. ಬಾಲಕೃಷ್ಣ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement