ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿಯೊಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಸಹೋದ್ಯೋಗಿಯಾಗಿದ್ದ ಅಧಿಕಾರಿಯೂ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ವಾಗ್ವಾದದ ಬಳಿಕ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಠುವಾದ ಬಸೋಹ್ಲಿ ಪ್ರದೇಶದ ಮಶ್ಕಾ ಗ್ರಾಮದಲ್ಲಿರುವ ಸೇವಾ ವಿದ್ಯುತ್ ಯೋಜನೆಯಲ್ಲಿ ನಿಯೋಜಿಸಲಾಗಿರುವ ಸಿಐಎಸ್‌ಎಫ್ ಘಟಕದಲ್ಲಿ ಸಂಜೆ ಸುಮಾರು 6:40ಕ್ಕೆ ಘಟನೆ ನಡೆದಿದೆ. ಸೇವಾ ನದಿಗೆ ನಿರ್ಮಿಸಲಾಗಿರುವ ಜಲವಿದ್ಯುತ್ ಯೋಜನೆಯು ರಾವಿ ನದಿಯ ಉಪನದಿಯಾಗಿರುವ ಸೇವಾ ನದಿಯಲ್ಲಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟವರನ್ನು ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ್ ಕುಮಾರ ಪಾಂಡೆ, ಸಬ್‌ಇನ್‌ಸ್ಪೆಕ್ಟರ್ ಲಕ್ಷ್ಮಣ ಸಿಂಗ್, ಕಾನ್‌ಸ್ಟೆಬಲ್ ರಫೀಕ್ ಅಹ್ಮದ್ ಹಾಗೂ ಕಾನ್‌ಸ್ಟೆಬಲ್ ಸಂದೀಪಕುಮಾರ ಎಂದು ಗುರುತಿಸಲಾಗಿದೆ.
ಹೆಡ್ ಕಾನ್‌ಸ್ಟೆಬಲ್ ಅವಧೇಶಕುಮಾರ ಸಿಂಗ್ ಗುಂಡಿನ ದಾಳಿ ನಡೆಸಿದ ಶಂಕಿತ ಆರೋಪಿ ಎಂದು ಗುರುತಿಸಲಾಗಿದೆ.
ವಾಗ್ವಾದದ ಬಳಿಕ ಅವರು ಕಚೇರಿ ಆವರಣಕ್ಕೆ ಪ್ರವೇಶಿಸಿ, ತಮಗೆ ನೀಡಲಾಗಿದ್ದ ಎಕೆ-47 (AK-47) ರೈಫಲ್‌ನಿಂದ ಮನಬಂದಂತೆ ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಬಳಿ 150 ಸುತ್ತು ಗುಂಡುಗಳಿದ್ದವು ಎಂದು ಸಿಐಎಸ್‌ಎಫ್ ತಿಳಿಸಿದೆ.
ಗುಂಡಿನ ದಾಳಿಯಲ್ಲಿ ಗಾಯಗೊಂಡ ನಾಲ್ವರು ಸಿಬ್ಬಂದಿಯನ್ನು ಹಿಮಾಚಲ ಪ್ರದೇಶದಲ್ಲಿರುವ ಎನ್‌ಎಚ್‌ಪಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಮೃತಪಟ್ಟಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ವಶಕ್ಕೆ ಪಡೆದಿದ್ದಾರೆ. ಗುಂಡಿನ ದಾಳಿ ನಡೆಸಿದ ಆರೋಪಿಯಾಗಿರುವ ಅವಧೇಶ ಕುಮಾರ ಸಿಂಗ್‌ನನ್ನು ಬಂಧಿಸಲಾಗಿದ್ದು, ಬಳಿಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಗುಂಡಿನ ದಾಳಿಗೆ ಕಾರಣವಾದ ಪರಿಸ್ಥಿತಿಗಳು ಹಾಗೂ ಘಟನೆಯ ಹಿಂದಿನ ನಿಖರ ಕಾರಣಗಳ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ