ಮಂಗಳೂರು : ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಆವರಣದಲ್ಲಿ ಬುಧವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಎಂಆರ್‌ಪಿಎಲ್ ಅಧಿಕಾರಿಯೊಬ್ಬರ ಪ್ರಕಾರ, ಸ್ಫೋಟದಲ್ಲಿ ಗುತ್ತಿಗೆ ಕಾರ್ಮಿಕನೊಬ್ಬ ಶೇ.35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದಾನೆ. ಎಂಆರ್‌ಪಿಎಲ್ ಆವರಣದೊಳಗೆ ಸಂಭವಿಸಿದ ಈ ಸ್ಫೋಟದ ಪರಿಣಾಮ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಅನುಭವಕ್ಕೆ ಬಂದಿದೆ.
ಇಂದು ಬುಧವಾರ ಮಧ್ಯಾಹ್ನ 12:15ರ ಸುಮಾರಿಗೆ ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಭಾರಿ ಸ್ಫೋಟದ ನಂತರ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಸ್ಫೋಟದ ತೀವ್ರತೆ ಎಷ್ಟರ ಮಟ್ಟಿಗಿತ್ತೆಂದರೆ, ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಕಚೇರಿ ಕಟ್ಟಡವೂ ಕಂಪಿಸಿದ್ದು, ಜೋಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಮನೆಗಳು ಮತ್ತು ಕಟ್ಟಡಗಳ ಮೇಲೂ ಪರಿಣಾಮ ಬೀರಿದೆ. ವಿಮಾನ ನಿಲ್ದಾಣದ ಆಡಳಿತ ಕಚೇರಿಯ ಕಿಟಕಿಗಳು ನಡುಗಿದ್ದು, ಘಟನೆಯಿಂದ ಸಿಬ್ಬಂದಿ ಹಾಗೂ ಅಲ್ಲಿದ್ದವರಲ್ಲಿ ಕೆಲಕಾಲ ಆತಂಕ ಉಂಟಾಯಿತು ಎಂದು ವರದಿಯಾಗಿದೆ.
ಎಂಆರ್‌ಪಿಎಲ್ ಸಂಕೀರ್ಣದ ಪಕ್ಕದಲ್ಲಿರುವ ಜೋಕಟ್ಟೆ ಗ್ರಾಮದಲ್ಲಿಯೂ ಸ್ಫೋಟದ ಪರಿಣಾಮ ಸ್ಪಷ್ಟವಾಗಿ ಅನುಭವಕ್ಕೆ ಬಂದಿದೆ. ಜೋಕಟ್ಟೆ ಗ್ರಾಮ ಪಂಚಾಯತ ಕಚೇರಿ ಹಾಗೂ ಸಮೀಪದ ಮನೆಗಳ ಬಾಗಿಲು ಮತ್ತು ಕಿಟಕಿಗಳು ಹಾನಿಗೊಳಗಾಗಿವೆ. ಸ್ಫೋಟದ ಬಳಿಕ ಎಂಆರ್‌ಪಿಎಲ್ ಘಟಕದಿಂದ ಆಕಾಶದತ್ತ ದಟ್ಟ ಕಪ್ಪು ಹೊಗೆ ಏರತೊಡಗಿದ್ದು, ಹಲವು ಕಿಲೋಮೀಟರ್ ದೂರದಿಂದಲೂ ಹೊಗೆ ಗೋಚರಿಸುತ್ತಿತ್ತು.
ಈ ಕುರಿತು ಪ್ರಕಟಣೆ ನೀಡಿರುವ ಎಂಆರ್‌ಪಿಎಲ್, ಸಿಎಚ್‌ಟಿ (CHT) ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದೆ. ಘಟಕದೊಳಗೆ ಗಾಯಗೊಂಡವರಲ್ಲಿ ರಾಜೇಶ ಬ್ಯಾಪ್ಟಿಸ್ಟ್ ಎಂಬಾತ ಶೇ.35ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಅವರ ಪ್ರಾಣಾಪಾಯ ಇಲ್ಲ.
ಸ್ಫೋಟದ ಬಳಿಕ ಜಿಲ್ಲಾಡಳಿತದ ಸಲಹೆಯಂತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನ ನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಪ್ರಮುಖ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸುತ್ತಿದೆ. ಇದರಲ್ಲಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ಕ್ಯಾಟಗರಿ-1 (Precision Approach Lighting Category I) ವ್ಯವಸ್ಥೆಗಳು ಹಾಗೂ ಸುತ್ತಮುತ್ತಲಿನ ರಸ್ತೆಗಳನ್ನು ಪರಿಶೀಲಿಸಿ ಅವುಗಳ ಕಾರ್ಯನಿರ್ವಹಣಾ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.
ಭಾರೀ ಸ್ಫೋಟದ ಪರಿಣಾಮ ಎಂಆರ್‌ಪಿಎಲ್ ಆವರಣದಿಂದ ದಟ್ಟ ಕಪ್ಪು ಹೊಗೆ ಆವರಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಗ್ನಿಶಾಮಕ ಮತ್ತು ತುರ್ತು ಸೇವಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮಂಗಳೂರಿನಿಂದ ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ಕೂಡ ರಿಫೈನರಿಗೆ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಹಲವು ಆಂಬುಲೆನ್ಸ್‌ಗಳೂ ಎಂಆರ್‌ಪಿಎಲ್ ಆವರಣದಿಂದ ಹೊರಟಿರುವುದು ಕಂಡುಬಂದಿದೆ.


ನಿಮ್ಮ ಕಾಮೆಂಟ್ ಬರೆಯಿರಿ