ಏಷ್ಯನ್‌ ಗೇಮ್ಸ್‌ 2026 : ಬಿಲ್ಲುಗಾರಿಕೆಯಲ್ಲಿ 2, ಮಹಿಳಾ ರಿಲೇ ಓಟದಲ್ಲಿ 1 ಚಿನ್ನದ ಪದಕ ಗೆದ್ದ ಭಾರತ

ಏಷ್ಯನ್ ಗೇಮ್ಸ್‌ನಲ್ಲಿ ಬುಧವಾರ ಭಾರತ ಕಾಂಪೌಂಡ್ ಬಿಲ್ಲುಗಾರಿಕೆಯಲ್ಲಿ ಸುವರ್ಣಮಯ ಬೆಳಗ್ಗನ್ನು ಅನುಭವಿಸಿತು. ಕೆಲವೇ ಗಂಟೆಗಳ ಅಂತರದಲ್ಲಿ ಮಹಿಳಾ ತಂಡ ಹಾಗೂ ಮಿಶ್ರ ತಂಡ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದು ಭಾರತ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಸಾಬೀತುಪಡಿಸಿತು.
ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಚಿಕಿತಾ ತಣಿಪಾರ್ಥಿ ಮತ್ತು ಸಾಹಿಲ್ ಜಾಧವ್ ಜೋಡಿ ದಕ್ಷಿಣ ಕೊರಿಯಾವನ್ನು ಶೂಟ್‌ಆಫ್‌ನಲ್ಲಿ ಮಣಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಇದರೊಂದಿಗೆ ಭಾರತಕ್ಕೆ 2028ರ ಲಾಸ್ ಏಂಜೆಲಿಸ್ ಒಲಿಂಪಿಕ್ಸ್‌ಗೆ ಕೋಟಾ ಸ್ಥಾನವೂ ಲಭಿಸಿತು.
ಅತ್ಯಂತ ರೋಚಕವಾಗಿ ನಡೆದ ಈ ಹಣಾಹಣಿಯಲ್ಲಿ ಶೂಟ್‌ಆಫ್ ವೇಳೆ ಉಭಯ ತಂಡಗಳೂ 20 ಅಂಕಗಳನ್ನು ಗಳಿಸಿದ್ದವು. ಅಂತಿಮ ಬಾಣದ ಫಲಿತಾಂಶದವರೆಗೆ ಹೋರಾಟ ಸಾಗಿದರೂ, ಒತ್ತಡದ ಕ್ಷಣದಲ್ಲಿ ಕೊರಿಯಾ ಬಿಲ್ಲುಗಾರರು ತಪ್ಪು ಮಾಡಿದ ಕಾರಣ ಭಾರತ ಜಯ ಸಾಧಿಸಿತು.

ಈ ಗೆಲುವಿನ ಮೂಲಕ ಚಿಕಿತಾ ತಣಿಪಾರ್ಥಿ ಒಂದೇ ದಿನದಲ್ಲಿ ಎರಡನೇ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು. ಇದಕ್ಕೂ ಮೊದಲು ಅವರು ಜ್ಯೋತಿ ಸುರೇಖಾ ವೆನ್ನಂ ಮತ್ತು ಪೃಥಿಕಾ ಪ್ರದೀಪ ಹಾಗೂ ಚಿಕಿತಾ ತಣಿಪಾರ್ಥಿ ಮಹಿಳಾ ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಚೀನಾವನ್ನು 238-234 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದಿದ್ದರು.
ಮಹಿಳಾ ಕಾಂಪೌಂಡ್ ತಂಡ ವಿಭಾಗದ ಫೈನಲ್‌ನಲ್ಲಿ ಭಾರತ ಅಸಾಧಾರಣ ಪ್ರದರ್ಶನ ನೀಡಿ ಚೀನಾವನ್ನು ಮಣಿಸುವುದರ ಜೊತೆಗೆ ವಿಶ್ವದಾಖಲೆಯನ್ನು ಸರಿಗಟ್ಟಿದ ಸಾಧನೆ ಮಾಡಿತು. ಜ್ಯೋತಿ ಸುರೇಖಾ ವೆನ್ನಂ, ಚಿಕಿತಾ ತಣಿಪಾರ್ಥಿ ಮತ್ತು ಪೃಥಿಕಾ ಪ್ರದೀಪ್ ಅವರನ್ನೊಳಗೊಂಡ ಭಾರತೀಯ ತಂಡ 238 ಅಂಕಗಳನ್ನು ಗಳಿಸಿ ದಾಖಲೆ ಸರಿಗಟ್ಟಿತು.ಈ ಅಂಕಗಳು 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ದಕ್ಷಿಣ ಕೊರಿಯಾ ಸ್ಥಾಪಿಸಿದ್ದ ವಿಶ್ವದಾಖಲೆಗೆ ಸಮನಾಗಿವೆ. ಆ ಮೂಲಕ ಭಾರತ ವಿಶ್ವದಾಖಲೆ ಸರಿಗಟ್ಟಿದ ಸಾಧನೆ ಮಾಡಿತು.
ಚೀನಾದ ವುನಿಯರ್, ಯುಯೆ ವಾಂಗ್ ಮತ್ತು ಫಾಂಗ್ಯಾವೊ ವೆಯಿ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ದಕ್ಷಿಣ ಕೊರಿಯಾದ ಪಾರ್ಕ್ ಜಂಗ್ಯೂನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯೋನ್ಸಿಯೋ ಅವರ ತಂಡ ಚೈನೀಸ್ ತೈಪೆಯನ್ನು ಮಣಿಸಿ ಕಂಚಿನ ಪದಕ ಗೆದ್ದಿತು.
ಫೈನಲ್‌ನಲ್ಲಿ ಭಾರತೀಯ ತ್ರಯರು ಆರಂಭದಿಂದಲೇ ಅದ್ಭುತ ಪ್ರದರ್ಶನ ನೀಡಿದರು. ಸತತ ಪರಿಪೂರ್ಣ 10 ಅಂಕಗಳ ಬಾಣಗಳನ್ನು ಹೊಡೆದು ಮೊದಲ ಎಂಡ್ ಅನ್ನು 60-58 ಅಂತರದಿಂದ ತಮ್ಮದಾಗಿಸಿಕೊಂಡರು. ಬಳಿಕ ಎರಡನೇ ಎಂಡ್‌ನಲ್ಲೂ 60-58 ಅಂಕಗಳ ಮುನ್ನಡೆ ಸಾಧಿಸಿ ಹಿಡಿತ ಬಿಗಿಗೊಳಿಸಿದರು.
ಮೂರನೇ ಎಂಡ್ ಅಂತ್ಯಕ್ಕೆ ಭಾರತ 178-176 ಅಂಕಗಳ ಮುನ್ನಡೆಯೊಂದಿಗೆ ಅಂತಿಮ ಎಂಡ್‌ಗೆ ಪ್ರವೇಶಿಸಿತು. ಕೊನೆಯ ಹಂತದಲ್ಲಿ ಚೀನಾ ಒತ್ತಡಕ್ಕೆ ಮಣಿದು ಎರಡು ಬಾರಿ 9 ಅಂಕಗಳನ್ನು ಗಳಿಸಿತು. ಆದರೆ ಭಾರತೀಯ ಬಿಲ್ಲುಗಾರ್ತಿಯರು ಮತ್ತೊಮ್ಮೆ ಆರು ಪರಿಪೂರ್ಣ 10 ಅಂಕಗಳ ಬಾಣಗಳನ್ನು ಹೊಡೆದು ನಿರ್ದೋಷ ಪ್ರದರ್ಶನ ನೀಡಿದರು. ಇದರ ಫಲವಾಗಿ ಚಿನ್ನದ ಪದಕವನ್ನು ಉಳಿಸಿಕೊಳ್ಳುವುದರ ಜೊತೆಗೆ ವಿಶ್ವದಾಖಲೆಯನ್ನೂ ಸರಿಗಟ್ಟಿದರು.

ಪ್ರಮುಖ ಸುದ್ದಿ :-   ಘೋರ ಕೃತ್ಯ ; ಅಧಿಕಾರಿ ಸೇರಿ ನಾಲ್ವರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಸಿಐಎಸ್‌ಎಫ್ ಯೋಧ

ಏಷ್ಯನ್ ಗೇಮ್ಸ್‌ 2026ರಲ್ಲಿ ಭಾರತದ ಮಹಿಳೆಯರು ಮಂಗಳವಾರ 4×400 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಮಿಜುಹೋ ಪಾರ್ಕ್ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಅಥ್ಲೆಟಿಕ್ಸ್ ಸ್ಪರ್ಧೆಯ ಮುಕ್ತಾಯದ ದಿನದಂದು ಕಿರಣ್ ಪಹಲ್, ಎಂ ಆರ್ ಪೂವಮ್ಮ, ಪ್ರಾಚಿ ಚೌಧರಿ ಮತ್ತು ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ತಂಡ, ಅಥ್ಲೆಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದೆ. ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೂವಮ್ಮ ಕರ್ನಾಟಕದವರಾಗಿದ್ದಾರೆ.
ಭಾರತದ ಮಹಿಳಾ ತಂಡ 3:29.69 ಸೆಕೆಂಡುಗಳಲ್ಲಿ ರೇಸ್ ಪೂರ್ಣಗೊಳಿಸಿ ಪ್ರಥಮ ಸ್ಥಾನ ಪಡೆಯಿತು. ಬಹ್ರೇನ್ ತಂಡವು (3:30.21) ಬೆಳ್ಳಿ ಪದಕ ಹಾಗೂ ಚೀನಾ ತಂಡವು (3:31.02) ಕಂಚಿನ ಪದಕವನ್ನು ಪಡೆದುಕೊಂಡವು.
ಇದರಿಂದ ಭಾರತವು ಒಟ್ಟಾರೆಯಾಗಿ 7 ಚಿನ್ನ, 21 ಬೆಳ್ಳಿ ಹಾಗೂ 25 ಕಂಚಿನ ಪದಕಗಳು ಸೇರಿ ಒಟ್ಟು54 ಪದಕಗಳೊಂದಿಗೆ ೯ನೇ ಸ್ಥಾನದಲ್ಲಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement