550 ವರ್ಷಗಳಷ್ಟು ಹಳೆಯ ಹವಾಯಿ ಸಮುದ್ರ ಕಮಾನು ಪತನ; ಸಾಗರ ಪಾಲಾದ ನೈಸರ್ಗಿಕ ಅದ್ಭುತ

ಸುಮಾರು 550 ವರ್ಷಗಳ ಕಾಲ ಹವಾಯಿಯ ಬಿಗ್ ಐಲ್ಯಾಂಡ್‌ನ ಕರಾವಳಿಯಲ್ಲಿ ನಿಂತಿದ್ದ ಪ್ರಸಿದ್ಧ ನೈಸರ್ಗಿಕ ಕಲ್ಲಿನ ಕಮಾನು ಈಗ ಇತಿಹಾಸವಾಗಿದೆ. ಹವಾಯಿ ವಾಲ್ಕೇನೋಸ್ ರಾಷ್ಟ್ರೀಯ ಉದ್ಯಾನದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದ 90 ಅಡಿ ಎತ್ತರದ ಹೋಲೇ ಸೀ ಆರ್ಚ್ (Holei Sea Arch) ಪೆಸಿಫಿಕ್ ಸಾಗರಕ್ಕೆ ಕುಸಿದು ಬಿದ್ದಿದೆ.
ರಾಷ್ಟ್ರೀಯ ಉದ್ಯಾನ ಸೇವೆ (National Park Service) ನೀಡಿರುವ ಮಾಹಿತಿಯ ಪ್ರಕಾರ, ಈ ಕಮಾನು 2026ರ ಸೆಪ್ಟೆಂಬರ್‌ 23ರಿಂದ 27ರ ನಡುವಿನ ಅವಧಿಯಲ್ಲಿ ಕುಸಿದಿದೆ. ಆದರೆ ಅದು ನಿಖರವಾಗಿ ಯಾವಾಗ ಕುಸಿಯಿತು ಎಂಬುದು ಇನ್ನೂ ತಿಳಿದುಬಂದಿಲ್ಲ.
ಹವಾಯಿಯ ದೊಡ್ಡ ಐಲ್ಯಾಂಡ್‌ನ ದಕ್ಷಿಣ ಕರಾವಳಿಯಲ್ಲಿರುವ ಹವಾಯಿ ವಾಲ್ಕೇನೋಸ್ ರಾಷ್ಟ್ರೀಯ ಉದ್ಯಾನದ ಒಳಭಾಗದಲ್ಲಿ, ಚೈನ್ ಆಫ್ ಕ್ರೇಟರ್ಸ್ ರಸ್ತೆಯ ಕೊನೆಯ ಭಾಗದ ಸಮೀಪ ಈ 90 ಅಡಿ (27 ಮೀಟರ್) ಎತ್ತರದ ಬಸಾಲ್ಟ್ ಕಲ್ಲಿನ ಕಮಾನು ಇತ್ತು. ಸುಮಾರು 550 ವರ್ಷಗಳ ಹಿಂದೆ ಸಂಭವಿಸಿದ್ದ ಜ್ವಾಲಾಮುಖಿಯ ಲಾವಾ ಹರಿವಿನಿಂದ ಈ ಕಲ್ಲಿನ ರಚನೆ ರೂಪುಗೊಂಡಿತ್ತು.

ಕಾಲಕ್ರಮೇಣ ಪೆಸಿಫಿಕ್ ಸಾಗರದ ಅಲೆಗಳು ಕಲ್ಲನ್ನು ಸವೆಸಿದ ಪರಿಣಾಮ ಅದರ ಮಧ್ಯಭಾಗದಲ್ಲಿ ದೊಡ್ಡ ಭಾಗ ಮಾಯವಾಗಿ ಹೋಲೇ ಸೀ ಆರ್ಚ್ ಕಮಾನು ರೂಪುಗೊಂಡಿತ್ತು. ಹವಾಯಿಯ ದಕ್ಷಿಣ ಕರಾವಳಿಯಲ್ಲಿ ಇಂತಹ ಸಮುದ್ರ ಕಮಾನುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಸಮುದ್ರದ ಅಲೆಗಳು ಬಂಡೆಗಳನ್ನು ನಿಧಾನವಾಗಿ ಸವೆಸುತ್ತಾ ಮೊದಲು ಗುಹೆಗಳನ್ನು, ನಂತರ ಕಮಾನುಗಳನ್ನು ರೂಪಿಸುತ್ತವೆ.

ಪ್ರಮುಖ ಸುದ್ದಿ :-   ಬೈಕ್‌ ಬೆನ್ನಟ್ಟುವ ಬೀದಿ ನಾಯಿಗಳು ಹತ್ತಿರ ಬಾರದಂತೆ ತಡೆಯಲು ‘ಹೊಡೆಯುವ ಕೋಲು’ ಅಳವಡಿಸಿದ ವ್ಯಕ್ತಿ ; ವಿಡಿಯೊ ವೈರಲ್

ಆದರೆ ಇಂತಹ ಕಮಾನುಗಳು ಶಾಶ್ವತವಾಗಿರುವುದಿಲ್ಲ. ಕಾಲ ಕಳೆದಂತೆ ಅವುಗಳ ಆಧಾರ ಭಾಗ ದುರ್ಬಲಗೊಂಡು ಒಂದು ಹಂತದಲ್ಲಿ ಕುಸಿದು ಬೀಳುತ್ತವೆ ಎಂದು ರಾಷ್ಟ್ರೀಯ ಉದ್ಯಾನ ಸೇವೆ ಹೇಳಿತ್ತು.
ಹೋಲೇ ಸೀ ಆರ್ಚ್ ಕೂಡ ಹಲವು ವರ್ಷಗಳಿಂದ ಅಸ್ಥಿರ ಸ್ಥಿತಿಯಲ್ಲಿತ್ತು. 2018ರಲ್ಲಿ ಕಿಲೌಯಾ (Kilauea) ಜ್ವಾಲಾಮುಖಿ ಸ್ಫೋಟ ಮತ್ತು ಅದರ ನಂತರ ಸಂಭವಿಸಿದ ಭೂಕಂಪಗಳಿಂದ ಈ ಪ್ರದೇಶದ ಕರಾವಳಿ ಬಂಡೆಗಳು ಹಾನಿಗೊಳಗಾಗಿದ್ದವು. ಬಳಿಕ ಕಲ್ಲುಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು.
ಇದರಿಂದ 2020ರ ಜನವರಿ 15ರಂದು ಮೂಲ ವೀಕ್ಷಣಾ ಪ್ರದೇಶವನ್ನು ಮುಚ್ಚಲಾಗಿತ್ತು. ನಂತರ ಅದೇ ವರ್ಷದ ಮಾರ್ಚ್‌ನಲ್ಲಿ ಕಮಾನು ಇರುವ ಸ್ಥಳದಿಂದ ಸುಮಾರು 1000 ಅಡಿ (300 ಮೀಟರ್) ದೂರದಲ್ಲಿ ಹೊಸ ವೀಕ್ಷಣಾ ಸ್ಥಳವನ್ನು ತೆರೆಯಲಾಗಿತ್ತು.

2022ರ ಜುಲೈ 17 ಮತ್ತು 18ರಂದು ಹವಾಯಿಯ ದಕ್ಷಿಣ ಕರಾವಳಿಗೆ ಅಪ್ಪಳಿಸಿದ ಪ್ರಬಲ ಅಲೆಗಳ ಪರಿಣಾಮ ಕಮಾನಿನ ಒಂದು ಕಾಲಿನ (leg) ಬುಡಭಾಗದ ದೊಡ್ಡ ಕಲ್ಲಿನ ತುಂಡು ಮುರಿದು ಬಿದ್ದಿತ್ತು. ಆ ಬಳಿಕ ಹೋಲೇ ಸೀ ಆರ್ಚ್ ಯಾವುದೇ ಸಮಯದಲ್ಲಿ ಕುಸಿಯಬಹುದು ಎಂದು ರಾಷ್ಟ್ರೀಯ ಉದ್ಯಾನ ಸೇವೆ ಎಚ್ಚರಿಕೆ ನೀಡಿತ್ತು. ಆದರೂ ಅದು ಇನ್ನೂ ನಾಲ್ಕು ವರ್ಷಗಳ ಕಾಲ ನಿಂತಿತ್ತು.
ರಾಷ್ಟ್ರೀಯ ಉದ್ಯಾನ ಸೇವೆಯ ಪ್ರಕಾರ, ಸೆಪ್ಟೆಂಬರ್‌ 23ರವರೆಗೂ ಕಮಾನು ಅಸ್ತಿತ್ವದಲ್ಲಿತ್ತು. ನಂತರ ಸುಂಟರಗಾಳಿ ನೋಲೊ (Hurricane Nolo) ಹವಾಯಿ ದ್ವೀಪದ ಸಮೀಪ ಹಾದುಹೋಗಿದ್ದು, ಸೆಪ್ಟೆಂಬರ್‌ 24ರಿಂದ 27ರವರೆಗೆ ರಾಷ್ಟ್ರೀಯ ಉದ್ಯಾನದ ಬಹುಭಾಗವನ್ನು ಮುಚ್ಚಲಾಗಿತ್ತು.

ಪ್ರಮುಖ ಸುದ್ದಿ :-   ‘ಶೀಘ್ರದಲ್ಲೇ ದುಷ್ಟ ಅಮೆರಿಕದ ಅಂತ್ಯವಾಗಲಿದೆ’: ಫ್ಲೈದುಬೈ ಘಟನೆ ಹೊಗಳಿ ಮತ್ತಷ್ಟು ದಾಳಿಗಳಿಗೆ ಕರೆ ನೀಡಿದ ಅಲ್ ಖೈದಾ

ಉದ್ಯಾನವನ್ನು ಪುನಃ ತೆರೆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಚಿತ್ರಗಳು ಮತ್ತು ವರದಿಗಳ ಮೂಲಕ ಕಮಾನು ಕುಸಿದಿರುವುದು ಗೊತ್ತಾಯಿತು. ಬಳಿಕ ಅಕ್ಟೋಬರ್‌ 1ರಂದು ರಾಷ್ಟ್ರೀಯ ಉದ್ಯಾನ ಸೇವೆ ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿತು.
ಅಧಿಕಾರಿಗಳ ಪ್ರಕಾರ, ಕಮಾನು ನಿಖರವಾಗಿ ಯಾವಾಗ ಕುಸಿಯಿತು ಎಂಬುದು ತಿಳಿದಿಲ್ಲ. ಆದರೆ ಸೆಪ್ಟೆಂಬರ್‌ 27ರ ರಾತ್ರಿ ವೇಳೆಗೆ ಅದು ಸಂಪೂರ್ಣವಾಗಿ ಕುಸಿದಿತ್ತು ಎಂಬುದು ಖಚಿತವಾಗಿದೆ. ಸುಮಾರು ಐದೂವರೆ ಶತಮಾನಗಳ ಕಾಲ ಹವಾಯಿಯ ಕರಾವಳಿಯ ಹೆಗ್ಗುರುತಾಗಿದ್ದ ಹೋಲೇ ಸೀ ಆರ್ಚ್‌ನ ಕುಸಿತದೊಂದಿಗೆ ಅಲ್ಲಿನ ಒಂದು ಪ್ರಸಿದ್ಧ ನೈಸರ್ಗಿಕ ಸ್ಮಾರಕ ಇತಿಹಾಸದ ಪುಟ ಸೇರಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement