ವಿಜಯಪುರ: ಮಹಾಭಾರತ ಮತ್ತು ರಾಮಾಯಣ ಭಾರತೀಯ ಸಾಹಿತ್ಯದ ತಾಯಿಬೇರುಗಳು. ಅವು ಭಾರತೀಯ ಸಾಹಿತ್ಯ ಪರಂಪರೆಗೆ ರಾಜಮಾರ್ಗವನ್ನು ತೋರಿಸಿವೆ. ಈ ತಾಯಿಬೇರುಗಳ ನೆಲೆಯಲ್ಲಿ ನೆಲಮೂಲ ಸಾಹಿತ್ಯವನ್ನು ಅಧ್ಯಯನ ಮಾಡಿ ಯುವಕರು ವಿಚಾರ ಮಂಡಿಸಿರುವುದು ಸಂತೋಷ ತಂದಿದೆ ಎಂದು ಪ್ರೊ. ಸುಮಾ ಸಾವಂತ್ ಹೇಳಿದ್ದಾರೆ.
ವಿಜಯಪುರದ ಆನಂದನಗರದ ಭಾವಸಾರ ಕ್ಷತ್ರೀಯ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವಿಜಯಪುರ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ನೆಲಮೂಲ ಸಾಹಿತ್ಯ – ಚರಿತ್ರೆ, ತಾತ್ತ್ವಿಕತೆ, ಪ್ರಸ್ತುತತೆ’ ಎಂಬ ವಿಷಯದ ರಾಜ್ಯಮಟ್ಟದ ಯುವ ಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತೀಯ ಸಾಹಿತ್ಯದ ಮೂಲ ಪರಂಪರೆಯನ್ನು ಅರಿತುಕೊಳ್ಳದೆ ಭಾರತೀಯ ಸಾಹಿತ್ಯದ ಸಮಗ್ರತೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮಹಾಭಾರತ ಮತ್ತು ರಾಮಾಯಣಗಳು ಕೇವಲ ಪುರಾಣಕಥೆಗಳಲ್ಲ; ಭಾರತೀಯ ಸಮಾಜದ ಚಿಂತನೆ, ಜೀವನಮೌಲ್ಯ, ಧರ್ಮದೃಷ್ಟಿ ಹಾಗೂ ಮಾನವೀಯ ಅನುಭವಗಳಿಗೆ ದಾರಿದೀಪವಾಗಿರುವ ಮಹಾಗ್ರಂಥಗಳು. ಇವುಗಳ ಹಿನ್ನೆಲೆಯಲ್ಲಿ ಯುವಕರು ನೆಲಮೂಲ ಸಾಹಿತ್ಯವನ್ನು ನೋಡುವ ಪ್ರಯತ್ನ ಮಾಡಿರುವುದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಮಾತನಾಡಿ, ಸಾಹಿತ್ಯ ನೀಡುವ ಪ್ರೇರಣೆಯನ್ನು ವ್ಯಕ್ತಿತ್ವ ನಿರ್ಮಾಣಕ್ಕೆ ಬಳಸಿಕೊಳ್ಳಬೇಕು. ಜಗತ್ತು ಭಾರತದ ಮೇಲೆ ವಿಶ್ವಾಸವಿಟ್ಟಿರುವ ಸಂದರ್ಭದಲ್ಲಿ, ಭಾರತದ ನಿಜವಾದ ಮೂಲಸತ್ವವನ್ನು ಅರಿತು ಅದನ್ನು ಜಗತ್ತಿಗೆ ಪರಿಚಯಿಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಷದ್ನ ರಾಜ್ಯಾಧ್ಯಕ್ಷ ಎಸ್. ಜಿ. ಕೋಟಿ, ‘ಯುವಜನತೆಯ ಧ್ವನಿ ಸಮಾಜವನ್ನು ತಲುಪಬೇಕು. ಯುವಕರಲ್ಲಿ ನೈಜ ಸಾಹಿತ್ಯದ ಪ್ರೇರಣೆ ಹಾಗೂ ಅಧ್ಯಯನದ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಪರಿಷದ್ ಪ್ರಯತ್ನಿಸುತ್ತಿದೆ’ ಎಂದರು.
ದಿಕ್ಸೂಚಿ ಮಾತುಗಳನ್ನಾಡಿದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಯಾ ಬಾಲಚಂದ್ರ ಅವರು, ಭಾರತೀಯ ನೆಲಮೂಲದ ಮನುಷ್ಯನ ಭಾವನೆಗಳಿಗೆ ಸಾಹಿತ್ಯದ ಮೂಲಕ ಮೂರ್ತರೂಪ ನೀಡುವ ಪ್ರಯತ್ನವನ್ನು ಪರಿಷದ್ ನಡೆಸುತ್ತಿದೆ. ಭಾರತೀಯ ಭಾಷೆಗಳಲ್ಲಿ ಅಂತರ್ಗತವಾಗಿರುವ ಮೂಲ ಸಂಸ್ಕೃತಿ ಮತ್ತು ಸತ್ತ್ವವನ್ನು ಗುರುತಿಸಿ, ಅದರ ಆಧಾರದ ಮೇಲೆ ಸಾಹಿತ್ಯವನ್ನು ವ್ಯಾಖ್ಯಾನಿಸುವ ಅಗತ್ಯವಿದೆ ಎಂದು ಹೇಳಿದರು.
ಗೋಷ್ಠಿಯ ಮೂರು ಅವಧಿಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 15 ಯುವ ಸಾಹಿತ್ಯಾಭ್ಯಾಸಿಗಳು ನೆಲಮೂಲ ಸಾಹಿತ್ಯದ ಚರಿತ್ರೆ, ತಾತ್ತ್ವಿಕತೆ ಮತ್ತು ಪ್ರಸ್ತುತತೆಯ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದರು.
ಯುವ ಸಾಹಿತ್ಯಾಭ್ಯಾಸಿಗಳಲ್ಲಿ ಭಾರತೀಯ ಸಾಹಿತ್ಯದ ಮೂಲ ಪರಂಪರೆಯ ಕುರಿತು ಅಧ್ಯಯನ ಮತ್ತು ಚಿಂತನೆಯ ಆಸಕ್ತಿ ಬೆಳೆಸುವ ಮೂಲಕ ಗೋಷ್ಠಿ ಗಮನ ಸೆಳೆಯಿತು


ನಿಮ್ಮ ಕಾಮೆಂಟ್ ಬರೆಯಿರಿ