ರಷ್ಯಾದಲ್ಲಿ ಮಾರಣಾಂತಿಕ ಪ್ಲೇಗ್ ಭೀತಿ: ಸಂಶೋಧಕಿ ಸಾವು, 200ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್‌, 5 ಆಸ್ಪತ್ರೆಗಳು ಬಂದ್‌

ರಷ್ಯಾದ ಸೈಬೀರಿಯಾದ ದೂರದ ಇರ್ಕುಟ್ಸ್ಕ್ ಪ್ರದೇಶದಲ್ಲಿ 28 ವರ್ಷದ ಪ್ರಯೋಗಾಲಯ ತಂತ್ರಜ್ಞೆಯೊಬ್ಬರು ಪ್ಲೇಗ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕನಿಷ್ಠ ಐದು ಆಸ್ಪತ್ರೆಗಳನ್ನು ಮುಚ್ಚಲಾಗಿದ್ದು, 200ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಈ ಘಟನೆ ಶೆಲೆಖೋವ್‌ನಲ್ಲಿರುವ ಎಂಟಿ-ಪ್ಲೇಗ್ ಸಂಶೋಧನಾ ಸಂಸ್ಥೆಯಲ್ಲಿ ನಡೆದಿದೆ. ಮೃತ ತಂತ್ರಜ್ಞೆಯನ್ನು ದಾರ್ಯಾ ಶಿಪಿಲೋವಾ ಎಂದು ಗುರುತಿಸಲಾಗಿದೆ. ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸುವ ವೇಳೆ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಪರೀಕ್ಷಾ ಕೊಳವೆ (ಟೆಸ್ಟ್ ಟ್ಯೂಬ್) ಆಕಸ್ಮಿಕವಾಗಿ ಒಡೆದ ಪರಿಣಾಮ ಆಕೆಗೆ ನ್ಯುಮೋನಿಕ್ ಪ್ಲೇಗ್ ಸೋಂಕು ತಗುಲಿರಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತಾನು ಮಾದರಿಗಳನ್ನು ಸಂಗ್ರಹಿಸುತ್ತಿದ್ದಾಗ ಜೀವಂತ ಬ್ಯಾಕ್ಟೀರಿಯಾ ಹೊಂದಿದ್ದ ಟೆಸ್ಟ್ ಟ್ಯೂಬ್ ಒಡೆದುಹೋಯಿತು ಎಂದು ಶಿಪಿಲೋವಾ ವೈದ್ಯಕೀಯ ಸಿಬ್ಬಂದಿಗೆ ತಿಳಿಸಿದ್ದರೆಂದು ವರದಿಯಾಗಿದೆ. ನ್ಯುಮೋನಿಕ್ ಪ್ಲೇಗ್ ಅತ್ಯಂತ ಸಾಂಕ್ರಾಮಿಕವಾಗಿದ್ದು, ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡದಿದ್ದರೆ ಪ್ರಾಣಾಪಾಯ ಉಂಟುಮಾಡುವ ಸೋಂಕಾಗಿದೆ.

ಶಿಪಿಲೋವಾ ಅವರನ್ನು ಸೆಪ್ಟೆಂಬರ್ 29ರಂದು ಶೆಲೆಖೋವ್‌ನಲ್ಲಿ ತೀವ್ರ ನ್ಯುಮೋನಿಯಾ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ವೆಂಟಿಲೇಟರ್‌ನಲ್ಲಿರಿಸಲಾಗಿದ್ದು, ಅಕ್ಟೋಬರ್ 1ರಂದು ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅವರು ಸಂಪರ್ಕ ಹೊಂದಿರಬಹುದಾದ 200ಕ್ಕೂ ಹೆಚ್ಚು ಮಂದಿಯನ್ನು ಈಗ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇರ್ಕುಟ್ಸ್ಕ್ ಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನೂ ರದ್ದುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

“ಅಪಾಯಕಾರಿ ಸೋಂಕು” ಪ್ರಕರಣ
ಇರ್ಕುಟ್ಸ್ಕ್ ಪ್ರದೇಶದ ಗವರ್ನರ್ ಇಗೊರ್ ಕೊಬ್ಜೆವ್ ಅವರು ಆರಂಭದಲ್ಲಿ “ವಿಶೇಷವಾಗಿ ಅಪಾಯಕಾರಿ ಸೋಂಕು” ಎಂದು ಶಂಕಿಸಲಾದ ಪ್ರಕರಣವೊಂದು ಪತ್ತೆಯಾಗಿದೆ ಎಂದು ಹೇಳಿ ಸಾರ್ವಜನಿಕರು ಆತಂಕಪಡಬಾರದು ಎಂದು ಮನವಿ ಮಾಡಿದ್ದರು.
ಆದರೆ ಭಾನುವಾರ ಅವರು, ಇದು “ಕಾರಣ ಸ್ಪಷ್ಟವಾಗದ ನ್ಯುಮೋನಿಯಾ” ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ. “ರೋಗಿಯ ಮಾದರಿಗಳಲ್ಲಿ ಆಕೆಯ ವೃತ್ತಿಪರ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ” ಎಂದು ಅವರು ಟೆಲಿಗ್ರಾಂನಲ್ಲಿ ಬರೆದಿದ್ದಾರೆ.
ಕಳೆದ 10 ದಿನಗಳಲ್ಲಿ ಸಂಶೋಧನಾ ಸಂಸ್ಥೆಯ ಯಾವುದೇ ಸಿಬ್ಬಂದಿಯಲ್ಲಿ ಸೋಂಕು ಸಂಬಂಧಿತ ಪ್ರಕರಣಗಳು ವರದಿಯಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ. “ರೋಗಿಯ ಸಂಪರ್ಕಕ್ಕೆ ಬಂದ ಎಲ್ಲರನ್ನು ಗುರುತಿಸಿ, ಪರೀಕ್ಷೆ ನಡೆಸಲಾಗಿದೆ. ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಪ್ರತಿದಿನ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ” ಎಂದು ಕೊಬ್ಜೆವ್ ಹೇಳಿದ್ದಾರೆ.
ಅಕ್ಟೋಬರ್ 2ರಂದು ರೋಸ್ಪೊಟ್ರೆಬ್ನಾಡ್ಜೋರ್ (ಗ್ರಾಹಕ ಸುರಕ್ಷತಾ ಮೇಲ್ವಿಚಾರಣಾ ಸಂಸ್ಥೆ) ಮುಖ್ಯಸ್ಥರೊಂದಿಗೆ ತುರ್ತು ನಿಯಂತ್ರಣ ಕ್ರಮಗಳ ಕುರಿತು ಸಮನ್ವಯ ಸಭೆ ನಡೆಸಿದ್ದಾಗಿ ಅವರು ತಿಳಿಸಿದ್ದಾರು. “ರೋಸ್ಪೊಟ್ರೆಬ್ನಾಡ್ಜೋರ್ ಸಂಪೂರ್ಣ ಪ್ರಮಾಣದ ಸಾಂಕ್ರಾಮಿಕ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರುತ್ತಿದೆ” ಎಂದೂ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೈಕ್‌ ಬೆನ್ನಟ್ಟುವ ಬೀದಿ ನಾಯಿಗಳು ಹತ್ತಿರ ಬಾರದಂತೆ ತಡೆಯಲು ‘ಹೊಡೆಯುವ ಕೋಲು’ ಅಳವಡಿಸಿದ ವ್ಯಕ್ತಿ ; ವಿಡಿಯೊ ವೈರಲ್

ನ್ಯುಮೋನಿಕ್ ಪ್ಲೇಗ್ ಎಂದರೇನು?
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಪ್ಲೇಗ್ ರೋಗವು ಯರ್ಸಿನಿಯಾ ಪೆಸ್ಟಿಸ್ (Yersinia pestis) ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಈ ಝೂನೋಟಿಕ್ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು ಮತ್ತು ಅವುಗಳ ಮೇಲಿರುವ ಚಿಗಟೆಗಳಲ್ಲಿ ಕಂಡುಬರುತ್ತದೆ.
ನ್ಯುಮೋನಿಕ್ ಪ್ಲೇಗ್ ಅಥವಾ ಶ್ವಾಸಕೋಶ ಆಧಾರಿತ ಪ್ಲೇಗ್ ಈ ರೋಗದ ಅತ್ಯಂತ ಅಪಾಯಕಾರಿ ರೂಪವಾಗಿದೆ. ಸೋಂಕು ತಗುಲಿದ ಬಳಿಕ ಲಕ್ಷಣಗಳು ಅತ್ಯಂತ ವೇಗವಾಗಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಕೇವಲ 24 ಗಂಟೆಗಳೊಳಗೂ ಲಕ್ಷಣಗಳು ಆರಂಭವಾಗಬಹುದು.
ಉಸಿರಾಟದ ತೊಂದರೆ, ತೀವ್ರ ಕೆಮ್ಮು, ರಕ್ತಮಿಶ್ರಿತ ಕಫ ಸೇರಿದಂತೆ ಗಂಭೀರ ಉಸಿರಾಟ ಸಂಬಂಧಿತ ಲಕ್ಷಣಗಳು ಇದರ ಪ್ರಮುಖ ಗುರುತುಗಳಾಗಿವೆ.
ಈ ರೋಗದ ಇಂಕ್ಯುಬೇಷನ್ ಅವಧಿ ಕೇವಲ 24 ಗಂಟೆಗಳಷ್ಟು ಕಡಿಮೆಯಿರಬಹುದು. ನ್ಯುಮೋನಿಕ್ ಪ್ಲೇಗ್ ಸೋಂಕಿತ ವ್ಯಕ್ತಿಯು ಉಸಿರಾಟದ ಮೂಲಕ ಹೊರಬರುವ ಕಣಗಳ ಮೂಲಕ ಇತರರಿಗೆ ಸೋಂಕು ಹರಡಬಹುದು.
“ನ್ಯುಮೋನಿಕ್ ಪ್ಲೇಗ್‌ಗೆ ಆರಂಭಿಕ ಹಂತದಲ್ಲೇ ರೋಗನಿರ್ಣಯ ಮತ್ತು ಚಿಕಿತ್ಸೆ ದೊರೆಯದಿದ್ದರೆ ಅದು ಮಾರಣಾಂತಿಕವಾಗಬಹುದು” ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಆದಾಗ್ಯೂ, ಸೋಂಕನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ಗುಣಮುಖರಾಗುವ ಸಾಧ್ಯತೆಗಳು ಹೆಚ್ಚಿವೆ. ವಿಶೇಷವಾಗಿ ಲಕ್ಷಣಗಳು ಕಾಣಿಸಿಕೊಂಡ 24 ಗಂಟೆಗಳೊಳಗೆ ಚಿಕಿತ್ಸೆ ಆರಂಭಿಸಿದರೆ ಬದುಕುಳಿಯುವ ಸಾಧ್ಯತೆ ಗಮನಾರ್ಹವಾಗಿ ಹೆಚ್ಚುತ್ತದೆ.

ಪ್ರಮುಖ ಸುದ್ದಿ :-   550 ವರ್ಷಗಳಷ್ಟು ಹಳೆಯ ಹವಾಯಿ ಸಮುದ್ರ ಕಮಾನು ಪತನ; ಸಾಗರ ಪಾಲಾದ ನೈಸರ್ಗಿಕ ಅದ್ಭುತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement