ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ಆಕಾಶವಾಣಿ ಭವನದ ಎದುರು ಮಂಗಳವಾರ ಇಂಡಿಯಾ ಮೈತ್ರಿಕೂಟವು ಸುಮಾರು ಎಂಟು ತಾಸುಗಳ ಕಾಲ ನಡೆಸಿದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರು ಹಾಗೂ ಸಂಸದರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.
ಕಾಂಗ್ರೆಸ್ ಸಂಸದರಾದ ಕೆ.ಸಿ. ವೇಣುಗೋಪಾಲ, ಅಮರಿಂದರ ಸಿಂಗ್ ರಾಜಾ ವಾರಿಂಗ್, ಇಮ್ರಾನ್ ಪ್ರತಾಪ್‌ಗಢಿ, ಕೊಡಿಕುನ್ನಿಲ್ ಸುರೇಶ ಸೇರಿದಂತೆ ಹಲವು ಸಂಸದರೂ ಬಂಧಿತರಲ್ಲಿ ಸೇರಿದ್ದಾರೆ.
ಸುಮಾರು 250 ಮಂದಿಯನ್ನು, ಅವರಲ್ಲಿ 50 ಮಂದಿ ಸಂಸದರನ್ನು, ವಶಕ್ಕೆ ಪಡೆದು ದೆಹಲಿಯ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿರುವ ನ್ಯೂ ಪೊಲೀಸ್ ಲೈನ್ಸ್‌ಗೆ ಕರೆದೊಯ್ಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಂಧನಕ್ಕೂ ಮುನ್ನ ರಾಹುಲ್ ಗಾಂಧಿ ಬಸ್‌ನ ಬಾಗಿಲಿನಿಂದ ಅರ್ಧದಷ್ಟು ಹೊರಗೆ ಬಂದು ಕೆಳಗೆ ನಿಂತಿದ್ದ ಸಹೋದರಿ ಪ್ರಿಯಾಂಕಾ ಗಾಂಧಿ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ಮಂಗಳವಾರ ನಡೆದ ಪ್ರತಿಪಕ್ಷಗಳ ಪ್ರತಿಭಟನೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯಿತು. ನೂರಾರು ಬೆಂಬಲಿಗರು ಹಾಗೂ ಪ್ರತಿಪಕ್ಷ ಸಂಸದದ ಜೊತೆ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಲು ಅವರು ಯತ್ನಿಸಿದ ಪರಿಣಾಮ ಪಾರ್ಲಿಮೆಂಟ್ ಸ್ಟ್ರೀಟ್ ಸಂಪೂರ್ಣ ಬಂದ್‌ನಂತಾಯಿತು.
ಪ್ರತಿಭಟನೆ ವೇಳೆ ಒಂದು ಹಂತದಲ್ಲಿ ಬ್ಯಾರಿಕೇಡ್‌ಗಳ ಮೇಲಕ್ಕೆ ಏರಿ ರಾಷ್ಟ್ರಧ್ವಜವನ್ನು ಬೀಸಿದ ರಾಹುಲ್ ಗಾಂಧಿ ಬಳಿಕ ಪೊಲೀಸ್ ಭದ್ರತಾ ವಲಯವನ್ನು ದಾಟಿ ಅಖಿಲ ಭಾರತ ರೇಡಿಯೋ (ಎಐಆರ್) ಆವರಣದೊಳಗೆ ಪ್ರವೇಶಿಸಿದರು. ಸೂರ್ಯಾಸ್ತದ ನಂತರವೂ ಅವರು ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಆಕಾಶವಾಣಿ ಭವನದ ಆವರಣದಲ್ಲೇ ಉಳಿದುಕೊಂಡುಹೋರಾಟ ಮುಂದುವರಿಸಿದರು. ಪ್ರತಿಭಟನಾಕಾರರು ಚುನಾವಣಾ ಆಯೋಗದ ಕಚೇರಿಯತ್ತ ತೆರಳದಂತೆ ಪೊಲೀಸರು ತಡೆಹಿಡಿದರೂ, ರಾಹುಲ್ ಗಾಂಧಿ ಅಲ್ಲಿಂದ ತೆರಳಲು ನಿರಾಕರಿಸಿದರು.
ಸೆಪ್ಟೆಂಬರ್ 25ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ್ದ ವರದಿಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳಿರುವ ಬಗ್ಗೆ ಉಲ್ಲೇಖವಾಗಿತ್ತು. ಆ ವರದಿಯ ಬಳಿಕ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳು ಸರಣಿ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಈ ಪ್ರತಿಭಟನೆ ನಡೆದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಚುನಾವಣಾ ಆಯೋಗದ ಮೂಲಗಳು, ಯಾವುದೇ ರಾಜಕೀಯ ಪಕ್ಷದಿಂದ ಭೇಟಿಗೆ ಸಂಬಂಧಿಸಿದಂತೆ ಯಾವುದೇ ಮನವಿ ಬಂದಿಲ್ಲ ಎಂದು ಸ್ಪಷ್ಟಪಡಿಸಿವೆ. ಆಡಳಿತಾರೂಢ ಪಕ್ಷಕ್ಕೆ ಅನುಕೂಲವಾಗುವಂತೆ ಚುನಾವಣಾ ಪ್ರಕ್ರಿಯೆಯನ್ನು ನಡೆಸಲು ಜ್ಞಾನೇಶಕುಮಾರ ಸರ್ಕಾರದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಪ್ರತಿಪಕ್ಷಗಳ ಆರೋಪವಾಗಿದೆ.
ಮಂಗಳವಾರ ದಿನಪೂರ್ತಿ ನಡೆದ ರಾಜಕೀಯ ಡ್ರಾಮಾ ಬೆಳಿಗ್ಗೆ ಸುಮಾರು 10 ಗಂಟೆಗೆ ಸಂಸತ್ ಭವನದಿಂದ ಆರಂಭವಾದ ಮೆರವಣಿಗೆಯನ್ನು ಪೊಲೀಸರು ತಡೆದ ನಂತರ ಆರಂಭವಾಯಿತು. ಬಳಿಕ ಚುನಾವಣಾ ಆಯೋಗದ ಕಚೇರಿಯಿಂದ ಸುಮಾರು 200 ಮೀಟರ್ ದೂರದಲ್ಲಿರುವ ಆಕಾಶವಾಣಿ ಭವನದ ಎದುರು ಪ್ರತಿಪಕ್ಷಗಳ ಸಂಸದರು ರಸ್ತೆಯಲ್ಲೇ ಧರಣಿ ಕುಳಿತರು.
ಸಮಾಜವಾದಿ ಪಕ್ಷದ ಅಖಿಲೇಶ ಯಾದವ್, ತೃಣಮೂಲ ಕಾಂಗ್ರೆಸ್‌ನ ಅಭಿಷೇಕ್ ಬ್ಯಾನರ್ಜಿ ಮತ್ತು ಡೆರೆಕ್ ಓ’ಬ್ರಿಯಾನ್, ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಸೇರಿದಂತೆ ಹಲವರನ್ನು ಪೊಲೀಸರು ಬಸ್‌ಗಳಲ್ಲಿ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ದೇಶಾದ್ಯಂತ ಮತದಾರರ ಪಟ್ಟಿಯ ಎಸ್‌ಐಆರ್ ಪ್ರಕ್ರಿಯೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಲು ಚುನಾವಣಾ ಆಯುಕ್ತರು ಪ್ರತಿಪಕ್ಷ ನಾಯಕರನ್ನು ಭೇಟಿ ಮಾಡಬೇಕು ಎಂದು ಆಗ್ರಹಿಸಿದರು.
ಈ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜು ಜನತಾ ದಳ (ಬಿಜೆಡಿ) ಸಂಸದರು ಕೂಡ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ಸೂಚಿಸಿ ಭಾಗವಹಿಸಿದರು. “ಮತ ಕಳ್ಳತನ” ವಿಚಾರವಾಗಲಿ ಅಥವಾ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ವಿಚಾರವಾಗಲಿ, ಕೇಂದ್ರ ಸರ್ಕಾರದ ಕುತಂತ್ರಗಳನ್ನು ಸೋಲಿಸಲು ಪ್ರತಿಪಕ್ಷಗಳ ಐಕ್ಯತೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಹೇಳಿದೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬೆಂಬಲ ಸೂಚಿಸಿದ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ಬಿಜೆಪಿಯನ್ನು ಟೀಕಿಸಿದ ಕಾಂಗ್ರೆಸ್, “ಭಾರತೀಯ ಝೂಠ್ ಪಾರ್ಟಿ”ಯ ನಿರ್ಗಮನದ ಕ್ಷಣಗಣನೆ ಈಗಾಗಲೇ ಆರಂಭವಾಗಿದೆ ಎಂದು ವ್ಯಂಗ್ಯವಾಡಿತು.


ನಿಮ್ಮ ಕಾಮೆಂಟ್ ಬರೆಯಿರಿ