ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಆಯೋಜಿಸಿದ್ದ ಇಂಡಿಯಾ (INDIA) ಮೈತ್ರಿಕೂಟದ ನಾಯಕರ ಮಧ್ಯಾಹ್ನದ ಔತಣಕೂಟದಲ್ಲಿ ಸಮಾಜವಾದಿ ಪಕ್ಷ (ಎಸ್ಪಿ) ಪ್ರತಿನಿಧಿಗಳು ಭಾಗವಹಿಸದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ಈ ಗೈರುಹಾಜರಿಗೆ ಆಹ್ವಾನ ನೀಡಲು ವಿಳಂಬವಾಗಿದ್ದೇ ಕಾರಣ ಎಂದು ಸ್ಪಷ್ಟಪಡಿಸಿದೆ. ಆದರೆ ರಾಹುಲ್ ಗಾಂಧಿ ನಡೆಸುತ್ತಿರುವ ಅನಿರೀಕ್ಷಿತ ಪ್ರತಿಭಟನೆಗಳ ಕುರಿತು ಮೈತ್ರಿಕೂಟದ ಮಿತ್ರಪಕ್ಷಗಳ ಜೊತೆ ಸಮಾಲೋಚನೆ ನಡೆಸದಿರುವ ಬಗ್ಗೆ ಸಮಾಜವಾದಿ ಪಕ್ಷದ ಮೂಲಗಳು ಅಸಮಾಧಾನ ವ್ಯಕ್ತಪಡಿಸಿವೆ.
ಜನಪಥದಲ್ಲಿರುವ ದಕ್ಷಿಣ ಭಾರತೀಯ ಉಪಾಹಾರ ಗೃಹದಲ್ಲಿ ನಡೆದ ಈ ಔತಣಕೂಟವು, ಪ್ರತಿಪಕ್ಷ ಸಂಸದರು ಸತತ ಎರಡನೇ ದಿನವೂ ಚುನಾವಣಾ ಆಯೋಗದತ್ತ ನಡೆಸಲು ಯತ್ನಿಸಿದ ಪ್ರತಿಭಟನಾ ಮೆರವಣಿಗೆಯನ್ನು ಪೊಲೀಸರು ತಡೆದ ಕೆಲವೇ ಗಂಟೆಗಳ ಮುನ್ನ ನಡೆಯಿತು. ಬಳಿಕ ಅಶೋಕ ರಸ್ತೆಯಲ್ಲಿ ಪ್ರತಿಪಕ್ಷ ನಾಯಕರು ಮತ್ತು ಪೊಲೀಸರ ನಡುವೆ ವಾಗ್ವಾದ ಉಂಟಾಗಿ, ಹಲವು ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಎಸ್ಪಿ ಮೂಲಗಳ ಪ್ರಕಾರ, ಮಂಗಳವಾರ ಆಕಾಶವಾಣಿ ಭವನದ ಬಳಿ ರಾಹುಲ್ ಗಾಂಧಿ ನಡೆಸಿದ ಧರಣಿ ಕುರಿತು ಮುಂಚಿತವಾಗಿ ಮಾಹಿತಿ ನೀಡದಿರುವುದು ಪಕ್ಷದ ಅಧ್ಯಕ್ಷ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಇದೇ ಕಾರಣದಿಂದ ಪಕ್ಷವು ಖರ್ಗೆ ಆಯೋಜಿಸಿದ್ದ ಔತಣಕೂಟಕ್ಕೆ ಗೈರಾಗಿತ್ತೇ ಎಂಬುದನ್ನು ಮೂಲಗಳು ಸ್ಪಷ್ಟಪಡಿಸಿಲ್ಲ.
ಈ ಬೆಳವಣಿಗೆ, ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಿಗೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಮಹತ್ವ ಪಡೆದುಕೊಂಡಿದೆ. ಕ್ಷೇತ್ರ ಹಂಚಿಕೆ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳು ಈಗಾಗಲೇ ಉಭಯ ಪಕ್ಷಗಳ ನಾಯಕರ ಸಾರ್ವಜನಿಕ ಹೇಳಿಕೆಗಳಲ್ಲಿಯೂ ಪ್ರತಿಫಲಿಸಿವೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಮಂಗಳವಾರ ತಡರಾತ್ರಿ ಈ ಔತಣಕೂಟ ನಡೆಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಬಳಿಕ ಇಂಡಿಯಾ ಮೈತ್ರಿಕೂಟದ ಎಲ್ಲ ಮಿತ್ರಪಕ್ಷಗಳಿಗೂ ಆಹ್ವಾನ ಕಳುಹಿಸಲಾಗಿತ್ತು. ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣದಿಂದ ಶಿವಸೇನೆ (ಯುಬಿಟಿ) ಮತ್ತು ಎನ್ಸಿಪಿ-ಎಸ್ಪಿ ಪ್ರತಿನಿಧಿಗಳಿಗೂ ಭಾಗವಹಿಸಲು ಸಾಧ್ಯವಾಗಿರಲಿಲ್ಲ ಎಂದು ಕಾಂಗ್ರೆಸ್ ತಿಳಿಸಿದೆ.
“ಮಂಗಳವಾರ ತಡರಾತ್ರಿ ನಿರ್ಧಾರ ಕೈಗೊಂಡ ಬಳಿಕ ಖರ್ಗೆ ಅವರ ಕಚೇರಿಯಿಂದ ಎಸ್ಪಿ ಸೇರಿದಂತೆ ಎಲ್ಲ ಮಿತ್ರಪಕ್ಷಗಳಿಗೂ ಆಹ್ವಾನ ಕಳುಹಿಸಲಾಗಿತ್ತು,” ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ ರಮೇಶ, ಇಂಡಿಯಾ ಮೈತ್ರಿಕೂಟದ ಎಲ್ಲ ಪಕ್ಷಗಳಿಗೂ ಆಹ್ವಾನ ನೀಡಲಾಗಿತ್ತು. ಆದರೆ ತೀರ್ಮಾನ ಮತ್ತು ಮಾಹಿತಿ ಎರಡೂ ತಡರಾತ್ರಿಯಲ್ಲಿ ನೀಡಲ್ಪಟ್ಟಿದ್ದರಿಂದ ಕೆಲವು ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಲು ಸಾಧ್ಯವಾಗದಿರುವುದು ಸಹಜ ಎಂದಿದ್ದಾರೆ. “ಈ ವಿಷಯವನ್ನು ಕೆಲವು ಮಾಧ್ಯಮಗಳು ಅನಗತ್ಯವಾಗಿ ದೊಡ್ಡದಾಗಿ ಬಿಂಬಿಸುತ್ತಿವೆ,” ಎಂದು ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR), ಕ್ಷೇತ್ರ ಮರುವಿಂಗಡಣೆ ಹಾಗೂ “ಮತ ಕಳವು” ವಿರುದ್ಧ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮತ್ತು ಇತರೆ ಪ್ರತಿಪಕ್ಷಗಳು ಇನ್ನೂ ಒಗ್ಗಟ್ಟಿನಿಂದ ಹೋರಾಡುತ್ತಿವೆ ಎಂದು ಜೈರಾಮ ರಮೇಶ ಒತ್ತಿ ಹೇಳಿದ್ದಾರೆ.
ಇನ್ನೊಂದೆಡೆ, ಎಸ್ಪಿ ಮೂಲಗಳ ಪ್ರಕಾರ, ಆಕಾಶವಾಣಿ ಭವನದಲ್ಲಿ ರಾಹುಲ್ ಗಾಂಧಿ ನಡೆಸಿದ ಧರಣಿಯ ವಿಧಾನ ಕುರಿತು ಅಖಿಲೇಶ ಯಾದವ್ ಅವರಿಗೆ ಅಸಮಾಧಾನವಿದೆ. ಮಿತ್ರಪಕ್ಷಗಳಿಗೆ ಪೂರ್ವ ಮಾಹಿತಿ ನೀಡದೇ ಕಾರ್ಯಕ್ರಮ ನಡೆಸಿದ ಕ್ರಮದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹಿಸಿ ಮಂಗಳವಾರ ಚುನಾವಣಾ ಆಯೋಗದತ್ತ ನಡೆದ ಮೆರವಣಿಗೆಯಲ್ಲಿ ಅಖಿಲೇಶ ಯಾದವ್ ಕೂಡ ಭಾಗವಹಿಸಿದ್ದರು. ಪೊಲೀಸರು ಮೆರವಣಿಗೆಯನ್ನು ತಡೆದು ಸಂಸದರನ್ನು ವಶಕ್ಕೆ ಪಡೆಯಲು ಆರಂಭಿಸಿದ ಬಳಿಕ, ರಾಹುಲ್ ಗಾಂಧಿ ಆಕಾಶವಾಣಿ ಭವನದ ಆವರಣ ಪ್ರವೇಶಿಸಿ ಸಂಜೆವರೆಗೂ ಧರಣಿ ನಡೆಸಿದ್ದರು.
ಎಸ್ಪಿ ಮೂಲಗಳ ಪ್ರಕಾರ, ಸಮನ್ವಯದ ಕೊರತೆ ಕುರಿತು ಅಖಿಲೇಶ ಯಾದವ್ ಅವರ ಅಸಮಾಧಾನ ಕೇವಲ ಮಂಗಳವಾರದ ಘಟನೆಗೆ ಸೀಮಿತವಾಗಿರಲಿಲ್ಲ. ಈ ಹಿಂದೆ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರಧಾನಿ ನಿವಾಸದ ಹೊರಗೆ ರಾಹುಲ್ ಗಾಂಧಿ ಏಕಾಏಕಿ ನಡೆಸಿದ್ದ ಅನಿರೀಕ್ಷಿತ ಧರಣಿಯ ಮಾಹಿತಿಯನ್ನೂ ಕೊನೆಯ ಕ್ಷಣದಲ್ಲಿ ನೀಡಲಾಗಿತ್ತು. ಆ ಸಂದರ್ಭದಲ್ಲಿಯೂ ಅಖಿಲೇಶ ಯಾದವ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೂ, ಕೊನೆಯ ಕ್ಷಣದ ಮಾಹಿತಿ ನೀಡುವ ಪದ್ಧತಿ ಮೈತ್ರಿಕೂಟದ ಪಕ್ಷಗಳ ನಡುವಿನ ವ್ಯವಹಾರಗಳಲ್ಲಿ ಸಾಮಾನ್ಯವಾಗಬಾರದು ಎಂಬ ಅಭಿಪ್ರಾಯವನ್ನು ಎಸ್ಪಿ ವ್ಯಕ್ತಪಡಿಸಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿಯಾಗಿ ಸ್ಪರ್ಧಿಸಿತ್ತು. ಆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 37 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 6 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ