ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಜೀವ ನದಿಗಳಾದ ಬೇಡ್ತಿ-ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಜನಾಕ್ರೋಶದ ಸಭೆಯಲ್ಲಿ ಯೋಜನೆ ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯ ಸಾವಿರಾರು ಮಂದಿ ಭಾಗವಹಿಸಿದ್ದರು. ಸರ್ಕಾರದಿಂದ ನಡೆಯುತ್ತಿರುವ ಡಿಪಿಎಆರ್ ರದ್ದುಪಡಿಸಿ, ಉತ್ತರ ಕನ್ನಡದ ನದಿಗಳು ಹಾಗೂ ಜನರ ಜೀವ ಸಂರಕ್ಷಿಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ನ್ಯಾ. ಸಂತೋಷ್ ಹೆಗ್ಡೆ ಮಾತನಾಡಿ, ಬೇಡ್ತಿ-ಅಘನಾಶಿನಿ ನದಿಯ ನೀರಿನ ಬಗ್ಗೆ ಮೊದಲು ಅಧ್ಯಯನ ನಡೆಸಬೇಕು. ಯಾವುದೇ ಅಧ್ಯಯನ ಮಾಡದೇ ಯೋಜನೆ ಜಾರಿಗೆ ಮುಂದಾಗುವುದು ಆ ಪ್ರದೇಶದ ಜನರಿಗೆ ಹಾಗೂ ಪಶ್ಚಿಮ ಘಟ್ಟದ ಸೂಕ್ಷ್ಮ ಜೀವ ವೈವಿಧ್ಯಕ್ಕೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ. ಸರ್ಕಾರವು ಯಾವುದೇ ಅಧ್ಯಯನ ಮಾಡುವುದು ಜಾರಿಗೆ ಮುಂದಾಗುವುದು ಕೇವಲ ಕಾನೂನಿಗೆ ವಿರುದ್ಧವಲ್ಲ, ಬದಲಿಗೆ ಮಾನವೀಯತೆಗೆ ವಿರುದ್ಧವಾದ ಕೆಲಸವೂ ಆಗುತ್ತದೆ. ಈ ಹೋರಾಟದಲ್ಲಿ ಎಂದೆಂದಿಗೂ ನಾನು ಉತ್ತರ ಕನ್ನಡ ಜಿಲ್ಲೆಯ ಜನರೊಂದಿಗೆ ಇರುತ್ತೇನೆ ಎಂದು ಘೋಷಿಸಿದರು.
ನೈಸರ್ಗಿಕ ಸೃಷ್ಟಿಯನ್ನು ಕಾಪಾಡುವುದು ಕೇವಲ ಒಂದು ಜಿಲ್ಲೆಯ ಜನರ ಕೆಲಸವಲ್ಲ. ಬದಲಾಗಿ ಪಶ್ಚಿಮ ಘಟ್ಟ ಹಾಗೂ ಅಲ್ಲಿಯ ನದಿಗಳನ್ನು ಸಂರಕ್ಷಿಸುವುದು ಇಡೀ ದೇಶದ ನಾಗರಿಕರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಒಂದೇ ಮುಖದಲ್ಲಿ ಆಲೋಚಿಸದೇ, ಎಲ್ಲವನ್ನೂ ಪರಾರಂಭರಿಸಿ ನೋಡಬೇಕು ಎಂದು ಆಗ್ರಹಿಸಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಪರಿಸರ, ಕೃಷಿ ಹಾಗೂ ಜನಜೀವನಕ್ಕೆ ಧಕ್ಕೆ ತರುವ ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಯೋಜನೆಯ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕಾರ್ಯ ಕೈಬಿಡಬೇಕು ಹಾಗೂ ಜಿಲ್ಲೆಯ ನೈಜ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಶೇ. 18ರಷ್ಟು ಭೂಮಿ ಕಂದಾಯ ಭೂಮಿ ಇದ್ದು, ಶೇ. 82ರಷ್ಟು ಅರಣ್ಯ ಪ್ರದೇಶವಿದೆ. ಕೈಗಾ, ಸೀಬರ್ಡ್ ಹಾಗೂ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಹಲವು ಯೋಜನೆಗಳಿಗಾಗಿ ಜಿಲ್ಲೆ ಸಾವಿರಾರು ಎಕರೆ ಭೂಮಿಯನ್ನು ತ್ಯಾಗ ಮಾಡಿದೆ. ಅಣೆಕಟ್ಟುಗಳ ನಿರ್ಮಾಣದಿಂದ ಕೃಷಿಭೂಮಿಯನ್ನೂ ಕಳೆದುಕೊಂಡಿದ್ದೇವೆ. ಇಷ್ಟೆಲ್ಲ ತ್ಯಾಗ ಮಾಡಿದ ಜಿಲ್ಲೆಯ ಪರಿಸರವನ್ನು ಮತ್ತೆ ಬಲಿಕೊಡುವುದು ಸರಿಯಲ್ಲ. ಪ್ರಸಕ್ತ ಸಾಲಿನಲ್ಲಿ ವಾಡಿಕೆ ಮಳೆಯ ಅರ್ಧದಷ್ಟೂ ಮಳೆಯಾಗದೆ ಶಿರಸಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮಲೆನಾಡಿನಲ್ಲಿಯೇ ನೀರಿನ ಕೊರತೆ ಎದುರಾಗಿರುವಾಗ ಇಲ್ಲಿನ ನದಿಗಳ ನೀರನ್ನು ಹೊರ ಜಿಲ್ಲೆಗಳಿಗೆ ಕೊಂಡೊಯ್ಯುವ ಯೋಜನೆಗಳಿಂದ ಜಿಲ್ಲೆಯ ಜನರಿಗೆ ಏನು ಪ್ರಯೋಜನ? ಬೇಡ್ತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳಲ್ಲಿ ನೀರಿನ ಲಭ್ಯತೆ ಬಹಳ ಕಡಿಮೆಯಿದ್ದು, ಬೇಸಿಗೆಯಲ್ಲಿ ಹರಿವೇ ಇಲ್ಲದಂತಹ ಪರಿಸ್ಥಿತಿ ಇದೆ ಎಂಬುದನ್ನು ವಿಜ್ಞಾನಿಗಳು ತಿಳಿಸಿದ್ದಾರೆ. ಸಣ್ಣ ಸಣ್ಣ ನೀರಿನ ಒರತೆಗಳಿಂದ ರೂಪುಗೊಂಡ ಅಘನಾಶಿನಿ ನದಿಯನ್ನೂ ನಂಬಿ ರೈತರು ಕೃಷಿ ಮಾಡುತ್ತಿದ್ದಾರೆ. ಮಳೆಯ ಕೊರತೆಯಿಂದ ಭತ್ತದ ಗದ್ದೆಗಳು ಹಾಗೂ ಅಡಿಕೆ ತೋಟಗಳು ಒಣಗುತ್ತಿರುವಾಗ ನದಿಯ ನೀರನ್ನು ಬೇರೆಡೆಗೆ ತಿರುಗಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.
ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಮಾತನಾಡಿ, ಸಮುದ್ರಕ್ಕೆ ಸೇರುವ ನೀರು ವ್ಯರ್ಥ ಎನ್ನುವ ಆಲೋಚನೆಯೇ ಸರಿಯಾದುದಲ್ಲ. ಅಭಿವೃದ್ಧಿಯ ವ್ಯಾಖ್ಯಾನವೇ ಏಕಮುಖವಾಗಿ ಬದಲಾದಾಗ ಇಂತಹ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಪರಿಸರ ರಕ್ಷಣೆ ಎನ್ನುವುದು ದೇವರ ಕೆಲಸದಂತಾಗಬೇಕುಎಂದರು. ಪರಿಸ್ಥಿತಿ ಹೀಗೆ ಮುಂದುವರಿದರೆ ಸರ್ಕಾರಗಳು ರಹಸ್ಯವಾಗಿ ಯೋಜನೆಗಳನ್ನು ತಂದು, ನದಿ ನೀರುಗಳು ಸಮುದ್ರವನ್ನೇ ಸೇರದಂತೆ ಮಾಡುತ್ತವೆ. ಹೀಗಾದರೆ ಮುಂದೆ ಪ್ರಕೃತಿಯಲ್ಲಿ ಅಸಮತೋಲವಾಗಿ ದೊಡ್ಡ ಅನಾಹುತವಾಗಿ ಸಂಭವಿಸಬಹುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಐಐಎಸ್ಸಿಯ ಹಿರಿಯ ವಿಜ್ಞಾನಿ ಟಿ.ವಿ. ರಾಮಚಂದ್ರ ಮಾತನಾಡಿ, ಎತ್ತಿನಹೊಳೆ ಯೋಜನೆಯ ಪ್ರಸ್ತಾಪ ಮಾಡಿದಾಗ ನಾನು ವಿರೋಧಿಸಿದ್ದೆ. ಅಲ್ಲಿ ಸಿಗುವ 12.85 ಟಿಎಂಸಿ ನೀರಿನಲ್ಲಿ 12 ಟಿಎಂಸಿ ನೀರು ಸ್ಥಳೀಯ ಬಳಕೆಗೆ ಬೇಕಾಗಿದೆ. ಕೇವಲ 0.85 ಟಿಎಂಸಿ ನೀರಿಗಾಗಿ 24 ಸಾವಿರ ಕೋಟಿ ರೂ. ಬೃಹತ್ ಯೋಜನೆ ಮಾಡಲಾಗುತ್ತಿದೆ. ಈಗ ಮತ್ತೆ ಅದೇ ರೀತಿಯ ಕುತಂತ್ರದ ಯೋಜನೆಯನ್ನು ಉತ್ತರ ಕನ್ನಡದಲ್ಲಿ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದರು.
ಈ ದೇಶದ ಪಶ್ಚಿಮ ಘಟ್ಟಗಳು 24 ಕೋಟಿ ಜನರಿಗೆ ನೀರುಣಿಸುತ್ತಿದೆ. ಪಶ್ಚಿಮ ಘಟ್ಟದಲ್ಲಿ ಮಳೆ ಬಂದು, ಅಲ್ಲಿಯ ನದಿಗಳಲ್ಲಿ ನೀರು ಹರಿದರೆ ಮಾತ್ರ ಹಲವು ರಾಜ್ಯಗಳ ಜನರು ಬದುಕಲು ಸಾಧ್ಯದ. ಆದರೆ ಈಗ ಅದೇ ಪಶ್ಚಿಮ ಘಟ್ಟದ ಅರಣ್ಯ, ನದಿಗಳನ್ನು ನಾಶ ಪಡಿಸುವ ಯೋಜನೆಯನ್ನು ಇದನ್ನು ಪಡೆಯಬೇಕಾದ ಸರ್ಕಾರವೇ ತರಲು ಮುಂದಾಗಿದೆ. ಇದರಿಂದ ಮುಂದೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಸುರಿಯುವ 800 ಮಿ.ಮೀ ಮಳೆ ಹಾಗೂ ಬಯಲು ಸೀಮೆಯಲ್ಲಿ ಬರುವ ಮಳೆಯನ್ನು ರಕ್ಷಿಸಿಕೊಳ್ಳುವ ಕೆಲಸ ನಡೆಯುತ್ತಿಲ್ಲ. ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ಹಾಗೂ ಕೆರೆ ತುಂಬಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದರೆ ಶೇ. 60ಕ್ಕೂ ಅಧಿಕ ನೀರಿನ ಬೇಡಿಕೆಯನ್ನು ಪೂರೈಸಬಹುದು. ಹಾಗೆಯೇ ಪಕ್ಕದ ಜಿಲ್ಲೆಗಳಲ್ಲೂ ಮಳೆಯಿಂದ ನೀರು ಸಂಗ್ರಹಿಸಿದರೂ ಎತ್ತಿನಹೊಳೆ ರೀತಿಯ ಪರಿಸರಕ್ಕೆ ಮಾರಕವಾದ ಯೋಜನೆ ಅಗತ್ಯವಿಲ್ಲ ಎಂದು ಹೇಳಿದರು..
ಧರಣಿಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೂ ಸಂದೇಶ ನೀಡಿದ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಈ ನದಿಗಳಲ್ಲಿ ನೀರು ಇಲ್ಲ ಎನ್ನುವುದನ್ನು ವಿಜ್ಞಾನಿಗಳು ಅನೇಕ ಸಲ ಸಾಬೀತುಪಡಿಸಿದ್ದಾರೆ. ಇಲ್ಲಿ ಯೋಜನೆ ನಡೆದರೆ ಭವಿಷ್ಯದಲ್ಲಿ ಉತ್ತರ ಕನ್ನಡವು ಜಲಕ್ಷಾಮ ಎದುರಿಸಬೇಕಾಗುತ್ತದೆ. ಅಲ್ಲದೆ, ಯಾವುದೋ ಬೇರೆಡೆನೀರು ಕೊಂಡೊಯ್ಯುತ್ತೇವೆ ಎಂದು ಸರ್ಕಾರ ಹೇಳಿದರೂ, ಮುಂದೆ ಅಲ್ಲಿಗೂ ನೀರಿಲ್ಲದಂತಾಗುತ್ತದೆ ಯಾವುದೇ ಒಬ್ಬ ವಿಜ್ಞಾನಿಯ ಸಮ್ಮತಿಯೂ ಇಲ್ಲದ ಈ ಯೋಜನೆಯನ್ನು ಸರ್ಕಾರ ಏಕೆ ಮಾಡುತ್ತಿದೆ ಎನ್ನುವುದನ್ನು ನಾವು ಪ್ರಶ್ನಿಸಲೇಬೇಕಿದೆ. ಇದು ಅತ್ಯಂತ ನ್ಯಾಯಯುತ, ವೈಜ್ಞಾನಿಕ, ಸತ್ಯದ ಪರವಾದ ಹೋರಾಟ. ಇನ್ನಾದರೂ ಸರ್ಕಾರವು ಕಣ್ತೆರೆದು ಉತ್ತರ ಕನ್ನಡದ ಜನರ ಅಹವಾಲು ಸ್ವೀಕರಿಸಲಿ ಎಂದು ಆಗ್ರಹಿಸಿದ್ದಾರೆ.
ಅನಂತ ಹೆಗಡೆ ಅಶೀಸರ ಮಾತನಾಡಿ, ಇದು ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವದ ಪ್ರಶ್ನೆಯಾಗಿದೆ. ಈ ಜೀವ ನದಿಗಳ ಉಳಿವಿಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಮನವಿ ಮಾಡಿದರು.
ಬೇಡ್ತಿ-ಅಘನಾಶಿನಿ ನದಿ ಜೋಡಣೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ, ನಟ ನೀರ್ನಳ್ಳಿ ರಾಮಕೃಷ್ಣ, ಲಕ್ಷ್ಮೀ ಹೆಗ್ಡೆ, ಶಾಂತಾರಾಮ ಸಿದ್ಧಿ, ಪರಿಸರವಾದಿಗಳಾದ ನಾಗೇಶ ಹೆಗಡೆ, ವಿ.ಆರ್.ಹೆಗಡೆ, ಸಾಹಿತಿಗಳಾದ ಜಯಂತ ಕಾಯ್ಕಿಣಿ ಮತ್ತಿತರರು ಪಾಲ್ಗೊಂಡಿದ್ದರು.
ಪ್ರತಿಭಟನೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು….
ಪಶ್ಚಿಮ ಘಟ್ಟದಲ್ಲಿ ಬೇಡ್ತಿ -ಅಘನಾಶಿನಿ ಸೇರಿ, ಯಾವುದೇ ಬೃಹತ್ ನದಿ ತಿರುವು ಯೋಜನೆಗಳನ್ನ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಸೇರಿ ಯಾವುದೇ ಬೃಹತ್ ಜಲವಿದ್ಯುತ್ ಯೋಜನೆಗಳನ್ನ ಜಾರಿಗೊಳಿಸಬಾರದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಲಾಯಿತು.
ಉತ್ತರ ಕನ್ನಡ ಜಿಲ್ಲೆ ಸಂಸದರು, ಶಾಸಕರು, ಮಠಾಧೀಶರು, ಜಿಲ್ಲೆಯ 60 ಗ್ರಾಮ ಪಂಚಾಯಿತಿಗಳು, 120 ರೈತ ಸಹಕಾರಿ ಸಂಘಗಳು, 48 ಗ್ರಾಮ ಅರಣ್ಯ ಸಮಿತಿಗಳು, 55 ಗ್ರಾಮ ಜೀವವೈವಿಧ್ಯ ಸಮಿತಿಗಳು, 20 ರೈತ ಒಕ್ಕೂಟಗಳು, ಬೇಡ್ತಿ-ಅಘನಾಶಿನಿ ಯೋಜನೆ ವನವಾಸಿಗಳು, ರೈತರು ಈ ಯೋಜನೆಯನ್ನ ವಿರೋಧಿಸಿ ಏಕಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶಿರಸಿ ಮತ್ತು ಬೆಂಗಳೂರಿನಲ್ಲಿ ವಿಜ್ಞಾನಿಗಳು ಸಭೆ ನಡೆಸಿ, ನದಿ ತಿರುವು ಬೇಡ, ಉತ್ತರ ಕನ್ನಡ ಜಿಲ್ಲೆಯ ಪರಿಸರಧಾರಣ ಸಾಮರ್ಥ್ಯ ಮುಗಿದಿದೆ ಎಂದು ವರದಿ ನೀಡಿದ್ದಾರೆ. ಈ ವಿಚಾರ, ಅಭಿಪ್ರಾಯಗಳನ್ನ ಸರ್ಕಾರಗಳು ಪರಿಗಣಿಸಬೇಕು.
ಬೇಡ್ತಿ-ಅಘನಾಶಿನಿ, ಶರಾವತಿ ಕಣಿವೆಗಳು ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಪಟ್ಟಿಯಲ್ಲಿ ಹಾಗೂ ವನ್ಯಜೀವಿ ಸಂರಕ್ಷಿತ ಪ್ರದೇಶ-ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುತ್ತವೆ ಎಂಬ ಅರಣ್ಯ, ವನ್ಯಜೀವಿ ಮತ್ತು ಪರಿಸರ ಜೀವ ವೈವಿಧ್ಯ ಕಾಯಿದೆ ಅಂಶಗಳನ್ನ ಸಮಾವೇಶದಲ್ಲಿ ಎತ್ತಿ ಹೇಳಲಾಗಿದೆ.
ಬೇಡ್ತಿ-ಅಘನಾಶಿನಿ ಕಣಿವೆಗಳಲ್ಲಿ ನದಿ ತಿರುವು ಯೋಜನೆಗಳ ಸ್ಥಳ ಸಮೀಕ್ಷೆಗೆ ಅರಣ್ಯ ಇಲಾಖೆ ಅನುಮತಿ ನೀಡಬಾರದು ಎಂದು ರಾಜ್ಯ ಅರಣ್ಯ ಸಚಿವರನ್ನ ಈ ಸಮಾವೇಶದ ಮೂಲಕ ಒತ್ತಾಯಿಸಲಾಯಿತು.
ರಾಜ್ಯದ ಮುಖ್ಯಮಂತ್ರಿಗಳು ನೀರಾವರಿ ಇಲಾಖೆ ತಜ್ಞರು, ಉನ್ನತ ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳು, ಬೇಡ್ತಿ-ಅಘನಾಶಿನಿ ಸಮಿತಿ ಪ್ರಮುಖ ಸಭೆಯನ್ನ ನಡೆಸುವುದಾಗಿ ಭರವಸೆ ಕೊಟ್ಟಿದ್ದಾರೆ. ಅದನ್ನ ಆದಷ್ಟು ಬೇಗ ನಿಶ್ಚಯಿಸಬೇಕು.
ಉತ್ತರ ಕನ್ನಡ ಜಿಲ್ಲೆಯ ಸಂಸದರು, ಎಲ್ಲ ಶಾಸಕ ನೇತೃತ್ವದಲ್ಲಿ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗ ಕೇಂದ್ರ ಪರಿಸರ-ಾರಣ್ಯ ಹಾಗೂ ನೀರಾವರಿ ಸಚಿವರನ್ನ ಭೇಟಿ ಮಾಡುವ ದಿನಾಂಕವನ್ನ ಜನಪ್ರತಿನಿಧಿಗಳು ಶೀಘ್ರದಲ್ಲೇ ನಿಶ್ಚಯಿಸಬೇಕು.
ಕರಾವಳಿಯ ಬೇಡ್ತಿ-ಗಂಗಾವಳಿ, ಅಘನಾಶಿನಿ ನದಿ ತೀರದ ರೈತರು, ಮೀನುಗಾರರು ಮತ್ತು ಎಲ್ಲ ನಾಗರಿಕರು ನದಿ ಸಂರಕ್ಷಣಾ ಆಂದೋಲನದಲ್ಲಿ ತೊಡಗಿಸಿಕೊಳ್ಳಲು ಸಮಾವೇಶದಲ್ಲಿ ಕರೆ ನೀಡಲಾಯಿತು.
ಪಶ್ಚಿಮ ಘಟ್ಟದ ಸಂರಕ್ಷಣೆಗಾಗಿ ಸಹ್ಯಾದ್ರಿ ವ್ಯಾಪ್ತಿಯ 6 ಜಿಲ್ಲೆಗಳ ಶಾಸಕರು ಹಾಗೂ ಸಂಸದರ ಸಭೆಯನ್ನ ಏರ್ಪಡಿಸಬೇಕು.
ಇಂದಿನ ಸಮಾವೇಶಕ್ಕೆ ಸಮಾಜದ ಎಲ್ಲ ಸಮುದಾಯಗಳು, ಮಠಾಧೀಶರು, ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ. ಪಶ್ಚಿಮ ಘಟ್ಟ ಉಳಿವಿಗೆ ಇನ್ನಷ್ಟು ಬಲತುಂಬುವ ಜನಾಂದೋಲನಗಳು ನಡೆಯಬೇಕು. ಇದಕ್ಕಾಗಿ ಎಲ್ಲ ಧರ್ಮ, ಸಮುದಾಯಗಳೂ ಒಗ್ಗೂಡಬೇಕು.


ನಿಮ್ಮ ಕಾಮೆಂಟ್ ಬರೆಯಿರಿ