ಲಕ್ನೋ : ಉತ್ತರ ಪ್ರದೇಶ ಕಾಂಗ್ರೆಸ್ ಘಟಕದ ನೂತನ ಅಧ್ಯಕ್ಷರಾದ ಆರಾಧನಾ ಮಿಶ್ರಾ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್ ಅವರ ಪದಗ್ರಹಣ ಸಮಾರಂಭದ ವೇಳೆ ಪಕ್ಷದ ರಾಜ್ಯ ಕಚೇರಿಯಲ್ಲೇ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಶೂಗಳನ್ನು ಎಸೆದಾಡಿದ ಘಟನೆ ನಡೆದಿದೆ. ನಿರ್ಗಮಿತ ರಾಜ್ಯಾಧ್ಯಕ್ಷ ಅಜಯ ರೈ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್ ಮುಖಂಡೆ, ಪರಿಷತ್ ಸದಸ್ಯೆ ಮಮತಾ ಚೌಧರಿ ಅವರ ಬೆಂಬಲಿಗರ ನಡುವೆ ಈ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಕಾಂಗ್ರೆಸ್‌ನ ಅವಧ್ ವಲಯದ ಅಧ್ಯಕ್ಷೆ ಮಮತಾ ಚೌಧರಿ ಮತ್ತು ಅಜಯ ರೈ ಅವರ ಬೆಂಬಲಿಗರ ನಡುವೆ ವಾಗ್ವಾದ ಆರಂಭವಾಗಿ, ಅದು ಕ್ರಮೇಣ ಘರ್ಷಣೆಗೆ ತಿರುಗಿತು ಎನ್ನಲಾಗಿದೆ. ಈ ವೇಳೆ ಮಮತಾ ಚೌಧರಿ ಅವಾಚ್ಯ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಅಜಯ ರೈ ಅವರ ಬೆಂಬಲಿಗರು ರಾಜ್ಯ ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ ಸೃಷ್ಟಿಸಿದರು. ಈ ವೇಳೆ ಶೂ ಎಸೆಯಲಾಯಿತು ಎಂದು ವರದಿಯಾಗಿದೆ. ಎಂದು ವರದಿಗಳು ತಿಳಿಸಿವೆ.
ಘಟನೆಯ ಬಳಿಕ ಅಜಯ ರೈ ಅವರು ಕಾಂಗ್ರೆಸ್ ಹಿರಿಯ ನಾಯಕ ಪ್ರಮೋದ ತಿವಾರಿ ಹಾಗೂ ನೂತನ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್ ಅವರ ಬಳಿ ದೂರು ಸಲ್ಲಿಸಿದರು. ಮಮತಾ ಚೌಧರಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ಇಂತಹ ವ್ಯಕ್ತಿಗಳ ವರ್ತನೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಅಜಯ ರೈ ಹೇಳಿದ್ದಾರೆ ಎನ್ನಲಾಗಿದೆ.
ಈ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಉತ್ತರ ಪ್ರದೇಶ ಬಿಜೆಪಿ ಘಟಕವು ಕಾಂಗ್ರೆಸ್ ಕಚೇರಿಯಲ್ಲಿನ ಗದ್ದಲದ ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ. “ಕಾಂಗ್ರೆಸ್ ಕಚೇರಿಯಲ್ಲಿ ನೂತನ ರಾಜ್ಯಾಧ್ಯಕ್ಷರು ಮಾಜಿ ಅಧ್ಯಕ್ಷ ಅಜಯ ರೈ ಅವರನ್ನು ಅವಮಾನಿಸಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.
ಯಾರು ಈ ನೂತನ ಕಾಂಗ್ರೆಸ್ ಅಧ್ಯಕ್ಷೆ ಆರಾಧನಾ ಮಿಶ್ರಾ?
ಆರಾಧನಾ ಮಿಶ್ರಾ ಅವರು ‘ಆರಾಧನಾ ಮಿಶ್ರಾ ಮೋನಾ’ ಎಂದೇ ಜನಪ್ರಿಯರಾಗಿದ್ದಾರೆ. ಪ್ರತಾಪಗಢ ಜಿಲ್ಲೆಯ ರಾಮಪುರ ಖಾಸ್ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಪ್ರಮೋದ ತಿವಾರಿ ಅವರ ಪುತ್ರಿಯಾಗಿರುವ ಆರಾಧನಾ ಮಿಶ್ರಾ, ತಂದೆಯ ರಾಜಕೀಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಪ್ರಮೋದ ತಿವಾರಿ ಅವರು ಇದೇ ರಾಮಪುರ ಖಾಸ್ ಕ್ಷೇತ್ರವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಒಂಬತ್ತು ಬಾರಿ ಪ್ರತಿನಿಧಿಸಿದ್ದಾರೆ.
ಆರಾಧನಾ ಮಿಶ್ರಾ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ನೇಮಿಸಿರುವುದನ್ನು ಉತ್ತರ ಪ್ರದೇಶದಲ್ಲಿ ಪಕ್ಷದ ಸಾಮಾಜಿಕ ಮತ್ತು ರಾಜಕೀಯ ನೆಲೆಯನ್ನು ವಿಸ್ತರಿಸುವ ಪ್ರಯತ್ನದ ಭಾಗವಾಗಿ ವಿಶ್ಲೇಷಿಸಲಾಗುತ್ತಿದೆ. ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಬೆಂಬಲವನ್ನು ಹೆಚ್ಚಿಸಿಕೊಳ್ಳುವತ್ತ ಕಾಂಗ್ರೆಸ್ ಬಹುಕಾಲದಿಂದ ಗಮನ ಹರಿಸಿದೆ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯದ ನಾಯಕಿಗೆ ರಾಜ್ಯ ಸಂಘಟನೆಯ ಚುಕ್ಕಾಣಿ ವಹಿಸಿರುವುದು, 2027ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಬೆಂಬಲದ ನೆಲೆಯನ್ನು ವಿಸ್ತರಿಸುವ ಕಾರ್ಯತಂತ್ರದ ಭಾಗವೆಂದು ಪರಿಗಣಿಸಲಾಗಿದೆ.
2027ರ ಚುನಾವಣೆಗೆ ಕಾಂಗ್ರೆಸ್‌ನ ಹೊಸ ತಂಡ
2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ತನ್ನ ಸಂಘಟನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ರಾಜ್ಯಾಧ್ಯಕ್ಷೆಯಾಗಿ ಆರಾಧನಾ ಮಿಶ್ರಾ, ಕಾರ್ಯಾಧ್ಯಕ್ಷರಾಗಿ ಇಮ್ರಾನ್ ಮಸೂದ್ ಹಾಗೂ ಹಿರಿಯ ಉಪಾಧ್ಯಕ್ಷರ ನೇಮಕದ ಮೂಲಕ ಹೊಸ ತಂಡಕ್ಕೆ ಜವಾಬ್ದಾರಿ ವಹಿಸಲಾಗಿದೆ.
ಆದರೆ, ನೂತನ ನಾಯಕತ್ವದ ಪದಗ್ರಹಣ ಸಮಾರಂಭದಲ್ಲೇ ಪಕ್ಷದ ಮುಖಂಡರ ಬೆಂಬಲಿಗರ ನಡುವೆ ಘರ್ಷಣೆ ನಡೆದಿರುವುದು ಕಾಂಗ್ರೆಸ್ ರಾಜ್ಯ ಘಟಕದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಚರ್ಚೆಗೆ ಕಾರಣವಾಗಿದೆ. 2027ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯನ್ನು ಬಲಪಡಿಸಲು ಮುಂದಾಗಿರುವ ಪಕ್ಷಕ್ಕೆ, ಆಂತರಿಕ ಭಿನ್ನಮತಗಳನ್ನು ನಿಭಾಯಿಸುವುದೂ ಸವಾಲಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ