ಹುಕ್ಕೇರಿ | ದುರ್ಗಾಮಾತಾ ಮೂರ್ತಿ ಕೊಂಡೊಯ್ಯುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ; ಮೂವರು ಸಾವು, ಹಲವರಿಗೆ ಗಾಯ

ಬೆಳಗಾವಿ: ದುರ್ಗಾಮಾತಾ ದೌಡ್ ದೇವಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಹುಕ್ಕೇರಿ ತಾಲೂಕಿನ ಮಣಗುತ್ತಿ ಹಾಗೂ ಹತ್ತರಗಿ ಟೋಲ್‌ಗೇಟ್ ಸಮೀಪ ಸಂಭವಿಸಿದೆ ಎಂದು ವರದಿಯಾಗಿದೆ.
ಹುಕ್ಕೇರಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದಿಂದ ಬೆಳಗಾವಿಗೆ ಆಗಮಿಸಿದ್ದ ಭಕ್ತರು, ದುರ್ಗಾಮಾತಾ ದೌಡ್ ದೇವಿಯ ಮೂರ್ತಿಯನ್ನು ಮರಳಿ ಗ್ರಾಮಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಿದ್ದರು.

ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಟ್ರಕ್ ಮೆರವಣಿಗೆಯಲ್ಲಿದ್ದವರಿಗೆ ಡಿಕ್ಕಿ ಹೊಡೆದಿದೆ. ಟ್ರಕ್ ಡಿಕ್ಕಿಯ ರಭಸಕ್ಕೆ ಹಲವರು ಗಾಯಗೊಂಡಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಪ್ರಕಾಶ, ಮಹೇಶ ಹಾಗೂ ದಾನಪ್ಪ ಎಂಬವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಾಳುಗಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement