ನವದೆಹಲಿ: ದೆಹಲಿಯ ಜಂತರ್ ಮಂತರ್ನಲ್ಲಿ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ ದಾಸ್ ಮತ್ತು ಆಶುತೋಷ ರಾಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರತಿಭಟನೆಗಳಿಗೆ ನಿಗದಿಪಡಿಸಲಾದ ಸ್ಥಳಗಳ ಪಟ್ಟಿಯಿಂದ ಜಂತರ್ ಮಂತರನ್ನು ಕೈಬಿಟ್ಟ ಮರುದಿನವೇ, ಈ ಇಬ್ಬರು ಕಾರ್ಯಕರ್ತರು ಜಂತರ್ ಮಂತರ್ಗೆ ಪ್ರವೇಶಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ್ದರು ಎಂದು ಆರೋಪಿಸಲಾಗಿದೆ.
ಇವರ ಜೊತೆ ಬಂಧನಕ್ಕೊಳಗಾಗಿದ್ದ ಅಜಿಂಕ್ಯ ಶಿಂಧೆ ಸೇರಿದಂತೆ ಮೂವರ ವಿರುದ್ಧ ಜಾಮೀನು ಬಾಂಡ್ ಉಲ್ಲಂಘನೆ, ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸೇರಿದಂತೆ ವಿವಿಧ ಆರೋಪಗಳನ್ನು ದಾಖಲಿಸಲಾಗಿದೆ.
ಬುಧವಾರ ಬೆಳಗ್ಗೆ ಸುಮಾರು 8 ಗಂಟೆಗೆ ಮೂವರನ್ನೂ ದೆಹಲಿಯ ಮಂದಿರ ಮಾರ್ಗದಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಆಶುತೋಷ ರಾಂಕಾ ಮತ್ತು ಸೌರವ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಸರ್ಕಾರದ ಕ್ರಮವನ್ನು ಟೀಕಿಸಿರುವ ಅವರು, ಭಿನ್ನಮತದ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ಸೌರವ ದಾಸ್ ಮತ್ತು ಆಶುತೋಷ ರಾಂಕಾ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್)ಯ ಸೆಕ್ಷನ್ 163ರ ಅಡಿಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಮತ್ತೊಮ್ಮೆ ಉಲ್ಲಂಘಿಸಿದ್ದಾರೆ. ಈ ಹಿಂದೆ ಇದೇ ರೀತಿಯ ಪ್ರಕರಣದಲ್ಲಿ ಕ್ರಮ ಎದುರಿಸಿದ್ದ ಇಬ್ಬರೂ, ಶಾಂತಿ ಕದಡುವ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಷರತ್ತು ವಿಧಿಸಿ ಸಲ್ಲಿಸಿದ್ದ ಬಾಂಡ್ನ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ. ಈ ಉಲ್ಲಂಘನೆಗಳನ್ನು ಪರಿಗಣಿಸಿದ ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಗಳವಾರ ಬೆಳಗ್ಗೆ ಅಜಿಂಕ್ಯ ಶಿಂಧೆ, ಸೌರವ್ ದಾಸ್ ಮತ್ತು ಆಶುತೋಷ ರಾಂಕಾ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಿ ಜಂತರ್ ಮಂತರ್ ಪ್ರವೇಶಿಸಿದ್ದರು. ಈ ವೇಳೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮೂವರನ್ನೂ ವಶಕ್ಕೆ ಪಡೆದಿದ್ದರು.
ಇದಕ್ಕೂ ಮೊದಲು, ಶನಿವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸೌರವ ದಾಸ್ ಮತ್ತು ಆಶುತೋಷ ರಾಂಕಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಆಗ ತಲಾ 50,000 ರೂ.ಗಳ ಬಾಂಡ್ ಸಲ್ಲಿಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿತ್ತು. ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿಭಂಗಕ್ಕೆ ಕಾರಣವಾಗುವ ಯಾವುದೇ ಪ್ರಕರಣದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಮುಚ್ಚಳಿಕೆ ನೀಡಿದ್ದರು. ಆದರೆ, ಈ ಬಾರಿ ಅತಿಕ್ರಮ ಪ್ರವೇಶ ಮತ್ತು ಬಾಂಡ್ನ ಷರತ್ತುಗಳ ಉಲ್ಲಂಘನೆಯ ಆರೋಪಗಳನ್ನು ಎದುರಿಸುತ್ತಿದ್ದು, ಪೊಲೀಸರು ಅವರನ್ನು ಪುನರಾವರ್ತಿತ ತಪ್ಪಿತಸ್ಥರೆಂದು ಪರಿಗಣಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿಜೆಪಿ ಸೇರಿದಂತೆ ವಿವಿಧ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿವೆ. ಈ ಬೆಳವಣಿಗೆಗಳ ನಡುವೆಯೇ ರಾಜಧಾನಿಯಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಅಕ್ಟೋಬರ್ 11ರಂದು ದೆಹಲಿ ಪೊಲೀಸ್ ಆಯುಕ್ತ ಅನುರಾಗಕುಮಾರ ಪ್ರತಿಭಟನೆ ಮತ್ತು ಧರಣಿಗಳಿಗೆ ಅನುಮತಿಸಲಾದ ಸ್ಥಳಗಳನ್ನು ಗುರುತಿಸಿ ಆದೇಶ ಹೊರಡಿಸಿದ್ದರು. ಅದರಂತೆ ರಾಮಲೀಲಾ ಮೈದಾನ, ಬುರುಾರಿ ಮೈದಾನ ಮತ್ತು ಸಿಬಿಡಿ ಮೈದಾನಗಳನ್ನು ಪ್ರತಿಭಟನೆಗಳಿಗೆ ನಿಗದಿತ ಸ್ಥಳಗಳೆಂದು ಘೋಷಿಸಲಾಗಿತ್ತು. ಇದೇ ವೇಳೆ, ಈ ಹಿಂದೆ ಪ್ರತಿಭಟನೆಗಳಿಗೆ ಅನುಮತಿ ನೀಡಲಾಗುತ್ತಿದ್ದ ಸ್ಥಳಗಳ ಪಟ್ಟಿಯಿಂದ ಜಂತರ್ ಮಂತರನ್ನು ಕೈಬಿಡಲಾಗಿತ್ತು.
ಪೊಲೀಸರ ಈ ನಿರ್ಧಾರವನ್ನು ಸಿಜೆಪಿ ವಿರೋಧಿಸಿದೆ. ಪ್ರತಿಭಟನೆಗಳನ್ನು ರಾಜಧಾನಿಯ ಕೇಂದ್ರ ಭಾಗದಿಂದ ದೂರದ ಸ್ಥಳಗಳಿಗೆ ಸ್ಥಳಾಂತರಿಸುವುದರಿಂದ ಸಾರ್ವಜನಿಕ ಪ್ರತಿಭಟನೆಗಳ ಗೋಚರತೆ ಮತ್ತು ಪರಿಣಾಮ ಕಡಿಮೆಯಾಗಲಿದೆ ಎಂದು ಪಕ್ಷ ಆಕ್ಷೇಪ ವ್ಯಕ್ತಪಡಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ