ಶಿರಸಿ: ಮನೆಯ ಬಾತ್ರೂಂ ಮೇಲಿನ ಹಂಚು ತೆಗೆದು ಒಳನುಗ್ಗಿ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಶಿರಸಿ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಳ್ಳru ಮನೆಯ ಬಾತ್ರೂಂ ಮೇಲಿನ ಹಂಚು ತೆಗೆದು ಒಳನುಗ್ಗಿದ್ದರು. ಬಳಿಕ ಟ್ರೆಜರಿಯ ಬಾಗಿಲು ತೆರೆದು, ಒಳಗಿದ್ದ ಲಾಕರ್ನ್ನು ಗಟ್ಟಿಯಾದ ವಸ್ತುವಿನಿಂದ ಮೀಟಿ ತೆಗೆದು, ಅದರಲ್ಲಿದ್ದ ₹1.20 ಲಕ್ಷ ನಗದು ಹಾಗೂ 10 ಗ್ರಾಂ ತೂಕದ ₹60 ಸಾವಿರ ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಕುರಿತು ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 07/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) 2023ರ ಕಲಂ 331(3), 331(4) ಹಾಗೂ 305ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದರು ಈ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮೂಲದ, ಪ್ರಸ್ತುತ ಮುರುಡೇಶ್ವರದಲ್ಲಿ ವಾಸವಿದ್ದ ಹನುಮಂತ ತೋಲಪ್ಪ ಕೋಂಚಿಕೊರವರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಪೊಲೀಸರ ಮಾಹಿತಿಯ ಪ್ರಕಾರ, ಬಂಧಿತ ಆರೋಪಿ ರೂಢಿಗತ ಅಪರಾಧಿಯಾಗಿದ್ದು, ಉತ್ತರ ಕನ್ನಡ, ಗದಗ, ಧಾರವಾಡ, ಉಡುಪಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮನೆಕಳ್ಳತನ, ದರೋಡೆ, ಡಕಾಯಿತಿ, ಕುರಿ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್ಐಗಳಾದ ಬಸವರಾಜ ಕನಶೆಟ್ಟಿ ಮತ್ತು ಗೀತಾ ಕಲಘಟಗಿ ಅವರ ನೇತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಕೋಟೇಶ್ವರ ನಾಗರವಳ್ಳಿ, ಮಂಜುನಾಥ ರೆಡ್ಡಿ, ಸಂದೀಪ ನಿಂಬಾಯಿ, ರಾಕೇಶ ಎನ್.ಎಚ್., ಅಶೋಕ ಹರಿಕಂತ್ರ ಹಾಗೂ ಮುರುಡೇಶ್ವರ ಠಾಣೆಯ ಸಿಬ್ಬಂದಿ ಮಂಜುನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ