ನವದೆಹಲಿ: ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿ, ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ತಮ್ಮ ಸಹಚರರ ಪರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ ದೀಪ್ಕೆ, ಬುಧವಾರ ದೆಹಲಿಗೆ ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ದಿಪ್ಕೆ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ ವ್ಯಕ್ತಿಯೊಬ್ಬರು ಅವರನ್ನು ಕೂಗಾಡಿ ಪ್ರಶ್ನಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.
“ನೀವು ದೇಶವನ್ನು ಏಕೆ ಹಾಳು ಮಾಡುತ್ತಿದ್ದೀರಿ?” ಎಂದು ವ್ಯಕ್ತಿಯೊಬ್ಬರು ದೀಪ್ಕೆಯನ್ನು ಪ್ರಶ್ನಿಸುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ದೀಪ್ಕೆ ನಗುತ್ತಾ, ಆ ವ್ಯಕ್ತಿಯತ್ತ ಹೆಬ್ಬೆರಳು ಎತ್ತಿ ತೋರಿಸಿ ಅಲ್ಲಿಂದ ಮುಂದೆ ಸಾಗಿದ್ದಾರೆ.
ಅಕ್ಟೋಬರ್ 10ರಂದು ತಮ್ಮ ಅಜ್ಜಿಯ ನಿಧನದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿರುವ ಸ್ವಗ್ರಾಮಕ್ಕೆ ತೆರಳಿದ್ದ ದೀಪ್ಕೆ, ಬುಧವಾರ ಮಧ್ಯಾಹ್ನ ದೆಹಲಿಗೆ ಮರಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಗದ್ದಲದ ನಡುವೆ ಸಾಗುತ್ತಿದ್ದ ದೀಪಕೆ ಅವರತ್ತ ಜನರು ಕೂಗಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಒಬ್ಬ ವ್ಯಕ್ತಿ ಅವರನ್ನು “ಬ್ರದರ್, ನೀವು ದೇಶವನ್ನು ಏಕೆ ಹಾಳು ಮಾಡುತ್ತಿದ್ದೀರಿ? ದೇಶವನ್ನು ಏಕೆ ಹಾಳು ಮಾಡುತ್ತಿದ್ದೀರಿ?” ಎಂದು ಪದೇ ಪದೇ ಪ್ರಶ್ನಿಸುವುದು ಕೇಳಿಸುತ್ತದೆ.
ವಿಡಿಯೋದ ಮತ್ತೊಂದು ಭಾಗದಲ್ಲಿ, ಕಾರೊಂದರ ಸುತ್ತ ಗದ್ದಲ ನಡೆಯುತ್ತಿರುವಾಗ ಜನರು “ಕಳ್ಳ, ಕಳ್ಳ” ಎಂದು ಕೂಗಾಡುತ್ತಿರುವುದು ಕೇಳಿಸುತ್ತದೆ. ದೀಪ್ಕೆ ಅವರನ್ನು ಪ್ರಶ್ನಿಸುತ್ತಿರುವ ವ್ಯಕ್ತಿಗಳು ಯಾರೆಂಬುದು ಸ್ಪಷ್ಟವಾಗಿಲ್ಲ.
ದೆಹಲಿಯಲ್ಲಿ ಸಿಜೆಪಿ (CJP) ಕಾರ್ಯಕರ್ತರಾದ ಸೌರವ್ ದಾಸ್, ಅಶುತೋಷ್ ರಾಂಕಾ ಮತ್ತು ಅಜಿಂಕ್ಯ ಶಿಂಧೆ ಅವರನ್ನು ವಶಕ್ಕೆ ಪಡೆದಿರುವ ವಿಷಯಕ್ಕೆ ಸಂಬಂಧಿಸಿದ ವಿವಾದದ ನಡುವೆಯೇ ಈ ಘಟನೆ ನಡೆದಿದೆ.
ರಾಷ್ಟ್ರಧ್ವಜವನ್ನು ಹಾರಿಸಿದ್ದಕ್ಕಾಗಿ ಮಾತ್ರ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ ಎಂದು ಆರೋಪಿಸಿರುವ ದೀಪ್ಕೆ, ಅಕ್ಟೋಬರ್ 16 ರಂದು ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಒಗ್ಗೂಡುವಂತೆ ಜನರಿಗೆ ಕರೆ ನೀಡಿದ್ದಾರೆ.
ಅಕ್ಟೋಬರ್ 10ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಬಂದಿದ್ದ ಅವರನ್ನು, ವಿಮಾನದಿಂದ ಇಳಿಯುತ್ತಿದ್ದಂತೆಯೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆ ಬಳಿಕ ಅವರು ಪೊಲೀಸ್ ಬಂಧನದಲ್ಲಿದ್ದರು.
ದೆಹಲಿಗೆ ಮರಳಿದ ಬಳಿಕ ಮಾತನಾಡಿದ ದೀಪ್ಕೆ, ತಮ್ಮ ಸಹಚರರಾದ ಆಶುತೋಷ ರಾಂಕಾ ಮತ್ತು ಸೌರವ ದಾಸ್ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸುವುದೇ ಅಪರಾಧವೇ ಎಂದು ಅವರು ಪ್ರಶ್ನಿಸಿದರು.
“ತ್ರಿವರ್ಣ ಧ್ವಜ ಹಾರಿಸುವುದು ಅಪರಾಧವೇ? ಆಶುತೋಷ ಮತ್ತು ಸೌರವ ಅವರನ್ನು ಐದು ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಅವರು ಜಂತರ್ ಮಂತರ್ಗೆ ತೆರಳಿ ತ್ರಿವರ್ಣ ಧ್ವಜ ಹಾರಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಗಿ ಎಂದು ದಿಪ್ಕೆ ದೆಹಲಿಗೆ ಬಂದಿಳಿದ ಬಳಿಕ ಆಕ್ರೋಶ ವ್ಯಕ್ತಪಡಿಸಿದರು.
ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಕೇಂದ್ರ ಸರ್ಕಾರ ಸೋಮವಾರ ಅನುಮತಿ ರದ್ದುಗೊಳಿಸಿದ ಬೆನ್ನಲ್ಲೇ, ಮಂಗಳವಾರ ಬೆಳಗ್ಗೆ ಸಿಜೆಪಿ ಕಾರ್ಯಕರ್ತರು ಅಲ್ಲಿಗೆ ತೆರಳಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಪ್ರವೇಶಿಸಲು ಗೇಟ್ ಹತ್ತಿ ಒಳನುಗ್ಗಿದ್ದ ಕಾರ್ಯಕರ್ತರು ರಾಷ್ಟ್ರಧ್ವಜ ಹಾರಿಸಿ ಘೋಷಣೆಗಳನ್ನು ಕೂಗಿದ್ದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಸಿಜೆಪಿ ಕಾರ್ಯಕರ್ತರು ಗೇಟ್ ಹತ್ತಿ ಜಂತರ್ ಮಂತರ್ ಪ್ರವೇಶಿಸುತ್ತಿರುವ ದೃಶ್ಯಗಳಿರುವ ವಿಡಿಯೊವನ್ನು ದೀಪ್ಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊದಲ್ಲಿ ಆಶುತೋಷ್ ರಾಂಕಾ ಮತ್ತು ಸೌರವ ದಾಸ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಗೇಟ್ ಹತ್ತಿ ಒಳಗೆ ಪ್ರವೇಶಿಸಿ, ರಾಷ್ಟ್ರಧ್ವಜ ಹಾರಿಸಿ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತ್ತು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು.
ಜಂತರ್ ಮಂತರ್ನಲ್ಲಿ ಅತಿಕ್ರಮಣ ಪ್ರವೇಶ ಮಾಡಿದ ಆರೋಪ ಹಾಗೂ ಹಿಂದಿನ ದಿನ ಜಾಮೀನು ಪಡೆಯುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಉಲ್ಲಂಘಿಸಿದ ಆರೋಪದಡಿ ಸಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೀಪ್ಕೆ, ರಾಂಕಾ ಮತ್ತು ದಾಸ್ ಅವರಿಗೆ ಸೋಮವಾರ ಜಾಮೀನು ನೀಡಲಾಗಿತ್ತು. ಆದರೆ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಶಾಂತಿಭಂಗ ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂಬ ಷರತ್ತನ್ನು ವಿಧಿಸಲಾಗಿತ್ತು.
ಈ ನಡುವೆ, ಸಿಜೆಪಿ ನಾಯಕರ ಬಂಧನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷಗಳ ನಾಯಕರು ಖಂಡಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ