ಅಮೆರಿಕದಲ್ಲಿ ಹಿಂದೂ ದೇವಾಲಯದಲ್ಲಿ ಸಾಮೂಹಿಕ ಗುಂಡಿನ ದಾಳಿಗೆ ಸಂಚು : ಜಾಮ್ ಆದ ರೈಫಲ್‌, ತಪ್ಪಿದ ಭಾರೀ ಅನಾಹುತ !

ಅಮೆರಿಕದ ಇಲಿನಾಯ್ಸ್ ಪ್ರಾಂತ್ಯದ ಚಿಕಾಗೋ ಬಳಿಯ ಅರೋರಾ ಪ್ರದೇಶದಲ್ಲಿರುವ ಹಿಂದೂ ದೇವಲಯದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಪೆಲಾಟೈನ್ ಪ್ರದೇಶದ ನಿವಾಸಿ ಮತ್ತು ಟಾಕೋ ಬೆಲ್ ಮಳಿಗೆಯ ಕ್ಯಾಶಿಯರ್ ಆಗಿರುವ ಅಲೆಕ್ಸಾಂಡ್ರೋಸ್ ಪಪೊರಾಕಿಸ್ ಬಂಧಿತ ಆರೋಪಿ. ಅಮೆರಿಕದಲ್ಲಿ ಹಿಂದೂಗಳ ಹಬ್ಬವಾದ ನವರಾತ್ರಿ ಆರಂಭವಾಗಿರುವ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಅಲ್ಲದೆ, ಓಹಿಯೋ ರಾಜ್ಯದ ರಿಚ್‌ಮಂಡ್ ಹೈಟ್ಸ್‌ನಲ್ಲಿರುವ ಶ್ರೀ ಸ್ವಾಮಿನಾರಾಯಣ ವತ್ಸಲ ಧಾಮದ ಹಿಂದೂ ಮಂದಿರಕ್ಕೆ ಹಾನಿಗೊಳಿಸಿದ ಕೇವಲ ಎರಡು ವಾರಗಳ ನಂತರ ಈ ಸಂಚಿನ ಬಂಧನ ನಡೆದಿದೆ.
ಪಪೊರಾಕಿಸ್ ಸಾಮೂಹಿಕ ಹತ್ಯಾಕಾಂಡಕ್ಕೆ ಸಂಚು ರೂಪಿಸುತ್ತಿರುವ ಬಗ್ಗೆ ಮತ್ತೊಬ್ಬ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ತನಿಖೆ ಆರಂಭವಾಯಿತು. ಆರೋಪಿಯು ತನಗೆ ಮಾಹಿತಿ ನೀಡಿದ್ದ ವ್ಯಕ್ತಿಯೊಂದಿಗೆ ರೈಫಲ್, ರೈಫಲ್ ಮ್ಯಾಗಜೀನ್‌ಗಳು, ದೇಹದ ರಕ್ಷಾಕವಚ ಮತ್ತು ಇತರ ಯುದ್ಧೋಪಕರಣಗಳ ಚಿತ್ರಗಳೊಂದಿಗೆ ಸಾಮೂಹಿಕ ಹತ್ಯೆಯ ಯೋಜನೆ ವಿವರಿಸುವ ದಾಖಲೆಯನ್ನು ಶೇರ್‌ ಮಾಡಿದ್ದ. ತನಿಖೆಯ ವೇಳೆ ಲಭ್ಯವಾದ ಮಾಹಿತಿಯ ಪ್ರಕಾರ, ಅಕ್ಟೋಬರ್ 11ರ ಭಾನುವಾರ ಅರೋರಾ ಪ್ರದೇಶದಲ್ಲಿರುವ ಹಿಂದೂ ಮಂದಿರದ ಮೇಲೆ ದಾಳಿ ನಡೆಸಲು ಆರೋಪಿ ಯೋಜಿಸಿದ್ದನೆಂದು ಪೊಲೀಸರು ತಿಳಿಸಿದ್ದು, ಆತನ ನಿಖರ ಗುರಿಯ ಸ್ಥಳದ ಬಗ್ಗೆ ತನಿಖೆ ಮುಂದುವರಿದಿದೆ.
ಭಾನುವಾರ ವಿಶೇಷ ದಿನವಾಗಲಿದೆ ಎಂದು ಪಪೊರಾಕಿಸ್ ತನ್ನ ಸಹೋದ್ಯೋಗಿಗಳಿಗೆ ಹೇಳಿದ್ದ. ಅಂದು ಆತ ತನ್ನ ಸಹೋದ್ಯೋಗಿಯೊಬ್ಬನಿಗೆ ಫೋನ್ ಮಾಡಿ, ತನ್ನ ಬಂದೂಕು ಜಾಮ್ ಆಗಿಹೋಗಿದೆ ಎಂದು ಹೇಳಿ ಯಾರಿಗೂ ಕಾಣದಂತೆ ಅಲ್ಲಿಂದ ಪರಾರಿಯಾಗಿದ್ದೆ ಎಂದು ಹೇಳಿದ್ದ. ಪೆಲಾಟೈನ್ ಪೊಲೀಸರು ಆತನ ಎಲೆಕ್ಟ್ರಾನಿಕ್ ಸಂವಹನಗಳನ್ನು ಮತ್ತು ವೈ ಐ ಫೌಟ್: ಎ.ಕೆ.ಎ.: (ಅರೋರಾ ಶೂಟರ್ಸ್ ಮ್ಯಾನಿಫೆಸ್ಟೋ) ಎಂಬ ಶೀರ್ಷಿಕೆಯ ದಾಖಲೆಯನ್ನು ಪರಿಶೀಲಿಸಿದರು. ಇದರಲ್ಲಿ ಬಿಳಿ ಶ್ರೇಷ್ಠತಾವಾದ ಮತ್ತು ಉಗ್ರಗಾಮಿ ಸಿದ್ಧಾಂತಗಳಿದ್ದು, ದಕ್ಷಿಣ ಏಷ್ಯಾ ಮೂಲದವರು, ಅದರಲ್ಲೂ ವಿಶೇಷವಾಗಿ ಭಾರತೀಯ ಮೂಲದವರ ವಿರುದ್ಧದ ಹಿಂಸಾಚಾರದ ಉಲ್ಲೇಖವಿತ್ತು.
ಪೆಲಾಟೈನ್ ಮತ್ತು ಮೌಂಟ್ ಪ್ರೋಸ್ಪೆಕ್ಟ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಅಕ್ಟೋಬರ್ 11ರ ಸಂಜೆ ಆರೋಪಿ ತನ್ನ ಮನೆಯಿಂದ ಹೊರಡುತ್ತಿದ್ದಂತೆ ಆತನನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರು ಆತನ ಮನೆಯಲ್ಲಿ ಶೋಧ ನಡೆಸಿ ಒಂದು ರೈಫಲ್, ಹಲವು ಲೋಡೆಡ್ ರೈಫಲ್ ಮ್ಯಾಗಜೀನ್‌ಗಳು, ನೂರಾರು ಸುತ್ತಿನ ಹೆಚ್ಚುವರಿ ರೈಫಲ್ ಗುಂಡುಗಳು, ಯುದ್ಧೋಪಕರಣಗಳು ಮತ್ತು ಬಿಳಿ ಶ್ರೇಷ್ಠತಾ ಉಗ್ರಗಾಮಿ ಸಂಕೇತ ಹೊಂದಿರುವ ಬಾಡಿ ಆರ್ಮರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಪೆಲಾಟೈನ್ ಮತ್ತು ಮೌಂಟ್ ಪ್ರೋಸ್ಪೆಕ್ಟ್ ಪೊಲೀಸರು ಅರೋರಾ ಪೊಲೀಸ್ ಇಲಾಖೆಗೂ ಸಂಭಾವ್ಯ ಬೆದರಿಕೆಯ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಹಿಂದೂ ಪ್ರಾರ್ಥನಾ ಮಂದಿರಗಳಿಗೆ ಈ ಬಗ್ಗೆ ಅಲರ್ಟ್‌ ಮಾಡಿದ್ದಾರೆ. ಪಪೊರಾಕಿಸ್ ವಿರುದ್ಧ ಭಯೋತ್ಪಾದನಾ ಬೆದರಿಕೆ ಒಡ್ಡಿದ ಆರೋಪ ಮತ್ತು 16 ಇಂಚಿಗಿಂತ ಕಡಿಮೆ ಉದ್ದದ ಬ್ಯಾರೆಲ್ ಹೊಂದಿರುವ ರೈಫಲ್ ಸೇರಿದಂತೆ ಕಾನೂನುಬಾಹಿರ ಆಯುಧ ಹೊಂದಿರುವ ಆರೋಪದ ಮೇಲೆ ತಲಾ ಒಂದೊಂದು ಪ್ರಕರಣ ದಾಖಲಿಸಲಾಗಿದೆ.
ಆತನನ್ನು ಬುಧವಾರ ರೋಲಿಂಗ್ ಮೆಡೋಸ್‌ನಲ್ಲಿರುವ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆತನನ್ನು ಬಂಧನದಲ್ಲಿರಿಸಲು ಆದೇಶಿಸಿದ್ದಾರೆ ಹಾಗೂ ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ.
ಪೆಲಾಟೈನ್ ಪೊಲೀಸ್ ಮುಖ್ಯಸ್ಥ ವಿಲಿಯಮ್ ನಾರ್ಡ್ ಮಾತನಾಡಿ, ಪ್ರಾರ್ಥನಾ ಮಂದಿರಗಳ ರಕ್ಷಣೆ ಕಾನೂನು ಪಾಲನಾ ಸಂಸ್ಥೆಗಳ ಆದ್ಯತೆಯಾಗಿದೆ ಎಂದಿದ್ದು, ಅಧಿಕಾರಿಗಳ ತ್ವರಿತ ಸ್ಪಂದನೆಯಿಂದ ಆರೋಪಿಯನ್ನು ಬಂಧಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಈ ತನಿಖೆಯಲ್ಲಿ ಎಫ್‌ಬಿಐ ಜೊತೆಯೂ ಪೊಲೀಸರು ಕೈಜೋಡಿಸಿದ್ದು, ಹೆಚ್ಚಿನ ಆರೋಪಗಳ ಪರಿಶೀಲನೆ ನಡೆಯುತ್ತಿದೆ ಮತ್ತು ಸದ್ಯ ಸಾರ್ವಜನಿಕರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಹಿಂದೂ ಅಮೆರಿಕನ್ ಫೌಂಡೇಶನ್ ಎಕ್ಸ್ ಪೋಸ್ಟ್‌ನಲ್ಲಿ, ಕಾನೂನು ಪಾಲನಾ ಸಂಸ್ಥೆಗಳ ತ್ವರಿತ ಕ್ರಮವನ್ನು ಶ್ಲಾಘಿಸಿದೆ ಮತ್ತು ಸಮುದಾಯವು ಎಚ್ಚರದಿಂದಿರಬೇಕು, ಪ್ರತಿಯೊಬ್ಬರೂ ಭಯವಿಲ್ಲದೆ ಪೂಜಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದೆ. ಮತ್ತೊಂದು ಪೋಸ್ಟ್‌ನಲ್ಲಿ, ಭಾರೀ ಶಸ್ತ್ರಸಜ್ಜಿತನಾಗಿದ್ದ ಪಪೊರಾಕಿಸ್ ಹಿಂದೂ ದೇವಾಲಯಕ್ಕೆ ತಲುಪಿ ಗುಂಡು ಹಾರಿಸಲು ಪ್ರಯತ್ನಿಸಿದ್ದನೆಂದೂ, ಆದರೆ ಬಂದೂಕು ಜಾಮ್ ಆಗಿತ್ತು ಎಂದೂ ಫೌಂಡೇಶನ್ ತಿಳಿಸಿದೆ. ಅಲ್ಲದೆ, ಆ ವ್ಯಕ್ತಿ ತನ್ನನ್ನು ತಾನೇ ಬಿಳಿ ಶ್ರೇಷ್ಠತಾ ನವ-ನಾಜಿ ಎಂದು ಬಣ್ಣಿಸಿಕೊಂಡಿದ್ದ ಎಂದೂ ಫೌಂಡೇಶನ್ ಆರೋಪಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement