ಬೆಂಗಳೂರು: ಸೂರ್ಯನಿಂದ ಹೊರಹೊಮ್ಮುವ ಶಕ್ತಿಯುತ ಸ್ಫೋಟಗಳು ಆರಂಭಿಕ ಹಂತದಲ್ಲಿ ಹೇಗೆ ರೂಪುಗೊಳ್ಳುತ್ತವೆ ಮತ್ತು ಅವುಗಳ ಸ್ವರೂಪ ಕಾಲಕ್ರಮೇಣ ಹೇಗೆ ಬದಲಾಗುತ್ತದೆ ಎಂಬುದನ್ನು ತಿಳಿಯಲು ಭಾರತದ ಆದಿತ್ಯ ಎಲ್1 (Aditya-L1) ಸೌರ ಮಿಷನ್ ಮತ್ತು ಯುರೋಪಿನ ಪ್ರೋಬಾ-3 (Proba-3) ಬಾಹ್ಯಾಕಾಶ ಯೋಜನೆಗಳು ಕೈಜೋಡಿಸಿವೆ. ಎರಡೂ ಯೋಜನೆಗಳ ವೀಕ್ಷಣೆಗಳನ್ನು ಒಟ್ಟುಗೂಡಿಸಿ ನಡೆಸಿದ ಅಧ್ಯಯನವು ಸೂರ್ಯನಿಂದ ಹೊರಹೊಮ್ಮುವ ಬೃಹತ್ ಪ್ಲಾಸ್ಮಾ ಸ್ಫೋಟಗಳ ಸ್ವರೂಪದ ಕುರಿತು ಹೊಸ ಒಳನೋಟಗಳನ್ನು ನೀಡಿದೆ.
ಎರಡೂ ಬಾಹ್ಯಾಕಾಶ ಯೋಜನೆಗಳು ಒಂದೇ ಸೌರ ಸ್ಫೋಟಗಳನ್ನು ಏಕಕಾಲದಲ್ಲಿ ವೀಕ್ಷಿಸಿ, ಸಂಗ್ರಹಿಸಿದ ದತ್ತಾಂಶವನ್ನು ಜಂಟಿಯಾಗಿ ವಿಶ್ಲೇಷಿಸಿರುವುದು ಇದೇ ಮೊದಲು. ಭಾರತದ ದೃಶ್ಯಾತ್ಮಕ ಹೊರಸೂಸುವಿಕೆ ರೇಖೆ ಕರೋನಾಗ್ರಾಫ್ (Visible Emission Line Coronagraph — VELC) ಮತ್ತು ಯುರೋಪಿನ ಎಎಸ್ಪಿಐಐಸಿಎಸ್ (ASPIICS) ಉಪಕರಣಗಳಿಂದ ಪಡೆದ ದತ್ತಾಂಶವನ್ನು ಸಂಯೋಜಿಸಿ, ಸೂರ್ಯನಿಗೆ ಸಮೀಪದ ಪ್ರದೇಶದಲ್ಲಿ ಸಂಭವಿಸುವ ಕರೋನಲ್ ಮಾಸ್ ಇಜೆಕ್ಷನ್ಗಳ (Coronal Mass Ejections — CMEs) ದ್ರವ್ಯರಾಶಿ, ಸಾಂದ್ರತೆ ಮತ್ತು ಶಕ್ತಿಯನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (Indian Institute of Astrophysics — IIA) ನೇತೃತ್ವದಲ್ಲಿ ಯುರೋಪ್ ಮತ್ತು ಅಮೆರಿಕದ ಸೌರ ಭೌತಶಾಸ್ತ್ರಜ್ಞರು ಪಾಲ್ಗೊಂಡು ಈ ಅಧ್ಯಯನ ನಡೆಸಿದ್ದಾರೆ. ಸಂಶೋಧನಾ ಪ್ರಬಂಧವು ಆಸ್ಟ್ರೊನಾಮಿ ಆ್ಯಂಡ್ ಆಸ್ಟ್ರೊಫಿಸಿಕ್ಸ್ (Astronomy & Astrophysics) ಎಂಬ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಸೌರ ಸ್ಫೋಟಗಳ ಅಧ್ಯಯನ ಏಕೆ ಮುಖ್ಯ?
ಕರೋನಲ್ ಮಾಸ್ ಇಜೆಕ್ಷನ್ಗಳು (CMEs) ಎಂದರೆ ಸೂರ್ಯನಿಂದ ಬಾಹ್ಯಾಕಾಶಕ್ಕೆ ಹೊರಚಿಮ್ಮುವ, ಕಾಂತೀಯ ಕ್ಷೇತ್ರವನ್ನು ಹೊಂದಿರುವ ಬೃಹತ್ ಪ್ರಮಾಣದ ಪ್ಲಾಸ್ಮಾ ಮೋಡಗಳು. ಪ್ಲಾಸ್ಮಾ ಎಂದರೆ ವಿದ್ಯುದಾವೇಶ ಹೊಂದಿರುವ ಕಣಗಳಿಂದ ಕೂಡಿದ ವಸ್ತುವಿನ ಸ್ಥಿತಿ. ಇಂತಹ ಸ್ಫೋಟಗಳು ಭೂಮಿಯತ್ತ ಚಲಿಸಿದಾಗ ಭೂಮಿಯ ಸಮೀಪದ ಬಾಹ್ಯಾಕಾಶ ಪರಿಸರದಲ್ಲಿ ವ್ಯತ್ಯಯ ಉಂಟುಮಾಡಬಹುದು. ಭೂಮಿಯ ಕಾಂತೀಯ ಕ್ಷೇತ್ರದ ಮೇಲೆ ಪರಿಣಾಮ ಬೀರಿ ಭೂಕಾಂತೀಯ ಬಿರುಗಾಳಿಗಳಿಗೂ (Geomagnetic Storms) ಕಾರಣವಾಗಬಹುದು. ಇದರಿಂದ ಉಪಗ್ರಹಗಳ ಕಾರ್ಯಾಚರಣೆ ಅಸ್ತವ್ಯಸ್ತವಾಗುವ ಜೊತೆಗೆ ನಾವಿಗೇಷನ್ ಮತ್ತು ಸಂವಹನ ವ್ಯವಸ್ಥೆಗಳಿಗೂ ಅಡ್ಡಿಯಾಗಬಹುದು.
ಹೀಗಾಗಿ, ಸೂರ್ಯನಿಗೆ ಸಮೀಪದ ಪ್ರದೇಶದಲ್ಲಿಯೇ ಈ ಸ್ಫೋಟಗಳ ಗುಣಲಕ್ಷಣಗಳನ್ನು ಅಳೆಯುವುದು, ಅವುಗಳ ಸ್ವರೂಪವನ್ನು ನಿರ್ಧರಿಸುವ ಭೌತಿಕ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವು ಕಾಲಕ್ರಮೇಣ ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ತಿಳಿಯುವುದು ಅತ್ಯಂತ ಮಹತ್ವದ್ದಾಗಿದೆ. ಆದರೆ ಸೂರ್ಯನ ಗೋಳದ ಅಂಚಿಗೆ ಅತ್ಯಂತ ಸಮೀಪದಲ್ಲಿ ಸಂಭವಿಸುವ ಸ್ಫೋಟಗಳನ್ನು ವೀಕ್ಷಿಸುವುದು ಸವಾಲಿನ ಕೆಲಸವಾಗಿದೆ. ಈ ಹಿಂದೆ ಉಡಾವಣೆಗೊಂಡ ಬಾಹ್ಯಾಕಾಶ ಕರೋನಾಗ್ರಾಫ್ಗಳು ಸೂರ್ಯನ ಪ್ರಕಾಶಮಾನವಾದ ಭಾಗವನ್ನು ಮರೆಮಾಡಿ ಅದರ ಹೊರಗಿನ ವಾತಾವರಣವನ್ನು ವೀಕ್ಷಿಸಲು ನೆರವಾಗಿದ್ದರೂ, ಸೌರ ಸ್ಫೋಟಗಳನ್ನು ಪತ್ತೆಹಚ್ಚುವಲ್ಲಿ ಭಾಗಶಃ ಯಶಸ್ಸನ್ನಷ್ಟೇ ಸಾಧಿಸಿದ್ದವು. ವಿಶೇಷವಾಗಿ ಮಸುಕಾಗಿ ಕಾಣಿಸುವ ಸ್ಫೋಟಗಳ ಆರಂಭಿಕ ಬೆಳವಣಿಗೆಯನ್ನು ನಿರಂತರವಾಗಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಇದರ ಪರಿಣಾಮವಾಗಿ, ಸೂರ್ಯನ ಒಳಗಿನ ಕರೋನಾ ಪ್ರದೇಶದಲ್ಲಿ ಸೌರ ಸ್ಫೋಟದ ಶಕ್ತಿಯು ಚಲನೆ ಶಕ್ತಿ (Kinetic Energy), ಉಷ್ಣ ಶಕ್ತಿ (Thermal Energy) ಮತ್ತು ಕಾಂತೀಯ ಶಕ್ತಿ (Magnetic Energy)ಗಳ ನಡುವೆ ಹೇಗೆ ಹಂಚಿಕೆಯಾಗುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಅಂದಾಜುಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಆದಿತ್ಯ ಎಲ್1ನ ವಿಇಎಲ್ಸಿ ಮತ್ತು ಪ್ರೋಬಾ-3ನ ಎಎಸ್ಪಿಐಐಸಿಎಸ್ ಉಪಕರಣಗಳ ವೀಕ್ಷಣೆಗಳನ್ನು ಸಂಯೋಜಿಸುವುದರಿಂದ ಈ ಕೊರತೆಯನ್ನು ನೀಗಿಸಲು ಹಾಗೂ ಸೌರ ಸ್ಫೋಟಗಳ ಭೌತಿಕ ಸ್ವರೂಪವನ್ನು ಇನ್ನಷ್ಟು ಸಮಗ್ರವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ.
ಎರಡು ಬಾಹ್ಯಾಕಾಶ ಯೋಜನೆಗಳು, ಸೂರ್ಯನ ಒಂದೇ ನೋಟ
ಭಾರತದ ಮೊದಲ ಸೌರ ಅಧ್ಯಯನ ಯೋಜನೆಯಾದ ಆದಿತ್ಯ ಎಲ್1 ಅನ್ನು 2023ರ ಸೆಪ್ಟೆಂಬರ್ 2ರಂದು ಪಿಎಸ್ಎಲ್ವಿ-ಸಿ57 (PSLV-C57) ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಯಿತು. ಇದು 2024ರ ಜನವರಿ 6ರಂದು ಸೂರ್ಯ–ಭೂಮಿ ವ್ಯವಸ್ಥೆಯ ಎಲ್1 (L1) ಬಿಂದುವಿನ ಸುತ್ತಲಿನ ಹ್ಯಾಲೊ ಕಕ್ಷೆ (Halo Orbit) ಸೇರಿತು. ಈ ವಿಶಿಷ್ಟ ಸ್ಥಾನದಿಂದ ಸೂರ್ಯನ ವಿವಿಧ ಚಟುವಟಿಕೆಗಳನ್ನು ನಿರಂತರವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಆದಿತ್ಯ ಎಲ್1ನಲ್ಲಿರುವ ವಿಇಎಲ್ಸಿ (VELC) ಉಪಕರಣವನ್ನು ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ನಿಕಟ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಇದು ಸೂರ್ಯನ ತ್ರಿಜ್ಯದ 1.05ರಿಂದ 1.5 ಪಟ್ಟು ದೂರದವರೆಗಿನ ಕರೋನಾ ಪ್ರದೇಶವನ್ನು 5303 ಆಂಗ್ಸ್ಟ್ರಾಮ್ (Angstrom) ತರಂಗಾಂತರದ ಹಸಿರು ಕರೋನಲ್ ರೇಖೆಯಲ್ಲಿ ವರ್ಣಪಟೀಯ ವೀಕ್ಷಣೆಗಳ (Spectroscopic Observations) ಮೂಲಕ ಅಧ್ಯಯನ ಮಾಡುತ್ತದೆ.
ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (European Space Agency — ESA) ಪ್ರೋಬಾ-3 ಯೋಜನೆಯನ್ನು 2024ರ ಡಿಸೆಂಬರ್ 5ರಂದು ಶ್ರೀಹರಿಕೋಟಾದಿಂದ ಪಿಎಸ್ಎಲ್ವಿ-ಎಕ್ಸ್ಎಲ್ (PSLV-XL) ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಯಿತು. ಇದು ವಿಶ್ವದ ಮೊದಲ ನಿಖರ ರಚನಾ ಹಾರಾಟ (Precision Formation-Flying) ಬಾಹ್ಯಾಕಾಶ ಯೋಜನೆಯಾಗಿದೆ.
ಈ ಯೋಜನೆಯಲ್ಲಿ ಎರಡು ಬಾಹ್ಯಾಕಾಶ ನೌಕೆಗಳು ಸುಮಾರು 150 ಮೀಟರ್ ಅಂತರದಲ್ಲಿ ಹಾರಾಡುತ್ತವೆ. ಒಂದು ನೌಕೆಯು ಮತ್ತೊಂದು ನೌಕೆಯ ಮೇಲೆ ನೆರಳು ಬೀಳುವಂತೆ ಅವುಗಳ ಸ್ಥಾನವನ್ನು ನಿಖರವಾಗಿ ನಿಯಂತ್ರಿಸಲಾಗುತ್ತದೆ. ಇದರಿಂದ ಬಾಹ್ಯಾಕಾಶದಲ್ಲೇ ಕೃತಕ ಸೂರ್ಯಗ್ರಹಣ ಸೃಷ್ಟಿಯಾಗುತ್ತದೆ. ಈ ವ್ಯವಸ್ಥೆಯು ಪ್ರೋಬಾ-3ನಲ್ಲಿರುವ ಎಎಸ್ಪಿಐಐಸಿಎಸ್ (ASPIICS) ಕರೋನಾಗ್ರಾಫ್ಗೆ ಸೂರ್ಯನ ಅತ್ಯಂತ ಪ್ರಕಾಶಮಾನವಾದ ಭಾಗವನ್ನು ಮರೆಮಾಡಿ, ಹೊರಗಿನ ಕರೋನಾ ಪ್ರದೇಶವನ್ನು ಸ್ಪಷ್ಟವಾಗಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ.
ಎಎಸ್ಪಿಐಐಸಿಎಸ್ ಉಪಕರಣವು ಸೂರ್ಯನ ತ್ರಿಜ್ಯದ ಸುಮಾರು 1.1ರಿಂದ 3 ಪಟ್ಟು ದೂರದವರೆಗಿನ ಕರೋನಾ ಪ್ರದೇಶವನ್ನು ಬಿಳಿ ಬೆಳಕಿನಲ್ಲಿ (White Light) ಮತ್ತು 5303 ಆಂಗ್ಸ್ಟ್ರಾಮ್ ತರಂಗಾಂತರದ ಹಸಿರು ಕರೋನಲ್ ರೇಖೆಯಲ್ಲಿ ಚಿತ್ರಿಸುತ್ತದೆ.
ಈ ಎರಡು ಉಪಕರಣಗಳ ಕಾರ್ಯವಿಧಾನಗಳು ವಿಭಿನ್ನವಾಗಿದ್ದರೂ, ಅವುಗಳ ದತ್ತಾಂಶ ಪರಸ್ಪರ ಪೂರಕವಾಗಿದೆ. ಎಎಸ್ಪಿಐಐಸಿಎಸ್ ತೆಗೆದ ಚಿತ್ರಗಳು ಸೌರ ಸ್ಫೋಟದ ಆಕಾರ, ಚಲನೆ ಮತ್ತು ದ್ರವ್ಯರಾಶಿಯನ್ನು ಅಂದಾಜಿಸಲು ನೆರವಾಗುತ್ತವೆ. ವಿಇಎಲ್ಸಿ ನಡೆಸುವ ವರ್ಣಪಟೀಯ ಅಳತೆಗಳು ಸ್ಫೋಟದಲ್ಲಿ ಹೊರಹೊಮ್ಮುವ ಪ್ಲಾಸ್ಮಾದ ಉಷ್ಣತೆ ಮತ್ತು ಸಾಂದ್ರತೆಯ ಕುರಿತು ಮಾಹಿತಿ ನೀಡುತ್ತವೆ. ಹೀಗಾಗಿ, ಒಂದೇ ಸೌರ ಸ್ಫೋಟವನ್ನು ಎರಡು ವಿಭಿನ್ನ ವಿಧಾನಗಳಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿದೆ.
ಎರಡು ಸೌರ ಸ್ಫೋಟಗಳು ತೋರಿಸಿದ ವಿಭಿನ್ನ ಶಕ್ತಿಯ ಹಂಚಿಕೆ
2025ರ ಸೆಪ್ಟೆಂಬರ್ 14 ಮತ್ತು ಸೆಪ್ಟೆಂಬರ್ 16ರಂದು ಸಂಭವಿಸಿದ ಎರಡು ಕರೋನಲ್ ಮಾಸ್ ಇಜೆಕ್ಷನ್ಗಳನ್ನು ಎರಡೂ ಬಾಹ್ಯಾಕಾಶ ಯೋಜನೆಗಳು ಏಕಕಾಲದಲ್ಲಿ ವೀಕ್ಷಿಸಿರುವುದನ್ನು ಸಂಶೋಧನಾ ತಂಡ ಗುರುತಿಸಿದೆ. ಈ ಸ್ಫೋಟಗಳ ಚಲನೆಯ ವೇಗ, ಸಾಂದ್ರತೆಯ ಬದಲಾವಣೆ ಮತ್ತು ಶಕ್ತಿಯ ಹಂಚಿಕೆಯನ್ನು ವಿಶ್ಲೇಷಿಸಿದಾಗ ಗಮನಾರ್ಹ ವ್ಯತ್ಯಾಸಗಳು ಕಂಡುಬಂದಿವೆ.
ಸೆಪ್ಟೆಂಬರ್ 14ರಂದು ಸಂಭವಿಸಿದ ಮೊದಲ ಸೌರ ಸ್ಫೋಟವು ಪ್ರತಿ ಸೆಕೆಂಡಿಗೆ ಸುಮಾರು 645 ಕಿಲೋಮೀಟರ್ ವೇಗದಲ್ಲಿ ಚಲಿಸಿತು. ಆದರೆ ಸೆಪ್ಟೆಂಬರ್ 16ರಂದು ಸಂಭವಿಸಿದ ಎರಡನೇ ಸ್ಫೋಟದ ವೇಗ ಪ್ರತಿ ಸೆಕೆಂಡಿಗೆ ಸುಮಾರು 145 ಕಿಲೋಮೀಟರ್ ಮಾತ್ರವಾಗಿತ್ತು. ಅಂದರೆ, ಎರಡನೇ ಸ್ಫೋಟವು ಮೊದಲನೆಯದಕ್ಕಿಂತ ಗಣನೀಯವಾಗಿ ನಿಧಾನವಾಗಿ ಚಲಿಸಿತು.
ನಿಧಾನವಾಗಿ ಚಲಿಸಿದ ಎರಡನೇ ಸ್ಫೋಟದಲ್ಲಿ ಎತ್ತರ ಹೆಚ್ಚಾದಂತೆ ಪ್ಲಾಸ್ಮಾದ ಸಾಂದ್ರತೆ ಹೆಚ್ಚು ತೀವ್ರವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಇದು ಸ್ಫೋಟದ ಆರಂಭಿಕ ಹಂತದಲ್ಲಿಯೇ ಅದು ಹೆಚ್ಚು ವೇಗವಾಗಿ ವಿಸ್ತರಿಸಿರಬಹುದೆಂಬ ಸೂಚನೆಯನ್ನು ನೀಡುತ್ತದೆ.
ಎರಡೂ ಸ್ಫೋಟಗಳ ಶಕ್ತಿಯ ಹಂಚಿಕೆಯಲ್ಲಿಯೂ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಸೆಪ್ಟೆಂಬರ್ 14ರ ಸೌರ ಸ್ಫೋಟದಲ್ಲಿ ಒಟ್ಟು ಅಂದಾಜು ಶಕ್ತಿಯಲ್ಲಿ ಉಷ್ಣ ಶಕ್ತಿಯ ಪಾಲು ಕೇವಲ ಶೇ. 1ರಷ್ಟಿತ್ತು. ಆದರೆ ಸೆಪ್ಟೆಂಬರ್ 16ರ ಸ್ಫೋಟದಲ್ಲಿ ಉಷ್ಣ ಶಕ್ತಿ ಕ್ರಮೇಣ ಹೆಚ್ಚುತ್ತಾ ಹೋಗಿ, ಚಲನೆಯ ಶಕ್ತಿಗೆ ಸರಿಸಮಾನವಾದ ಮಟ್ಟವನ್ನು ತಲುಪಿತು.
ಎರಡೂ ಘಟನೆಗಳಲ್ಲಿ ಕಾಂತೀಯ ಶಕ್ತಿಯು ಚಲನೆಯ ಶಕ್ತಿಗೆ ಸರಿಸಮಾನವಾಗಿತ್ತು ಅಥವಾ ಅದಕ್ಕಿಂತ ಹೆಚ್ಚಾಗಿತ್ತು ಎಂದು ಅಂದಾಜಿಸಲಾಗಿದೆ. ಸೌರ ಸ್ಫೋಟಗಳ ಶಕ್ತಿಯ ಸ್ವರೂಪವನ್ನು ಅರ್ಥಮಾಡಿಕೊಳ್ಳುವಲ್ಲಿ ಕಾಂತೀಯ ಕ್ಷೇತ್ರದ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಈ ಅಂಶವು ಸೂಚಿಸುತ್ತದೆ.
ಎರಡು ಉಪಕರಣಗಳ ಅಂದಾಜುಗಳಲ್ಲಿ ಉತ್ತಮ ಹೊಂದಾಣಿಕೆ
ಈ ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ವಿಭಿನ್ನ ಅಳತೆ ವಿಧಾನಗಳನ್ನು ಬಳಸಿದರೂ ಎರಡೂ ಉಪಕರಣಗಳಿಂದ ಪಡೆದ ದ್ರವ್ಯರಾಶಿ ಮತ್ತು ಉಷ್ಣ ಶಕ್ತಿಯ ಅಂದಾಜುಗಳು ಪರಸ್ಪರ ಉತ್ತಮವಾಗಿ ಹೊಂದಿಕೆಯಾಗಿವೆ. ಇದು ವಿಭಿನ್ನ ಉಪಕರಣಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ಸಂಯೋಜಿಸಿ ವಿಶ್ಲೇಷಿಸುವ ವಿಧಾನದ ವಿಶ್ವಾಸಾರ್ಹತೆಯನ್ನು ಬೆಂಬಲಿಸುತ್ತದೆ.
ಸೂರ್ಯನ ಸ್ಫೋಟಗಳನ್ನು ಒಂದೇ ಉಪಕರಣದ ಮೂಲಕ ವೀಕ್ಷಿಸುವುದಕ್ಕಿಂತ, ವಿಭಿನ್ನ ತಂತ್ರಜ್ಞಾನಗಳನ್ನು ಬಳಸುವ ಉಪಕರಣಗಳ ದತ್ತಾಂಶವನ್ನು ಒಟ್ಟುಗೂಡಿಸಿದಾಗ ಅವುಗಳ ಭೌತಿಕ ಸ್ವರೂಪದ ಕುರಿತು ಹೆಚ್ಚು ಸಮಗ್ರ ಮಾಹಿತಿ ಪಡೆಯಬಹುದು ಎಂಬುದನ್ನು ಈ ಸಂಶೋಧನೆ ತೋರಿಸಿದೆ.
ಒಟ್ಟಾರೆ, ಆದಿತ್ಯ ಎಲ್1 ಮತ್ತು ಪ್ರೋಬಾ-3 ಯೋಜನೆಗಳ ಜಂಟಿ ವೀಕ್ಷಣೆಗಳು ಕರೋನಲ್ ಮಾಸ್ ಇಜೆಕ್ಷನ್ಗಳು ಹೇಗೆ ರೂಪುಗೊಳ್ಳುತ್ತವೆ, ಅವುಗಳ ಸಾಂದ್ರತೆ ಮತ್ತು ಶಕ್ತಿ ಹೇಗೆ ಬದಲಾಗುತ್ತದೆ ಹಾಗೂ ಚಲನೆಯ, ಉಷ್ಣ ಮತ್ತು ಕಾಂತೀಯ ಶಕ್ತಿಗಳ ನಡುವೆ ಯಾವ ರೀತಿಯ ಸಂಬಂಧವಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ತೆರೆದಿವೆ. ಈ ಅಧ್ಯಯನದಿಂದ ದೊರೆತ ಮಾಹಿತಿ ಸೌರ ಸ್ಫೋಟಗಳ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಅರ್ಥೈಸಲು ಮತ್ತು ಅವು ಭೂಮಿಯ ಸುತ್ತಲಿನ ಬಾಹ್ಯಾಕಾಶ ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳನ್ನು ಅಧ್ಯಯನ ಮಾಡಲು ವಿಜ್ಞಾನಿಗಳಿಗೆ ನೆರವಾಗುವ ನಿರೀಕ್ಷೆಯಿದೆ.


ನಿಮ್ಮ ಕಾಮೆಂಟ್ ಬರೆಯಿರಿ