ನವದೆಹಲಿ: ಪ್ರತಿಭಟನೆಯ ವೇಳೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿದ್ದ ಮೂರು ತಿಂಗಳ ಗರ್ಭಿಣಿ ಪತ್ರಕರ್ತೆ ರೀಚಾ ಪರಾಶರ ಅವರು, ಈಗ ಅವರ ವಿರುದ್ಧ ಪೊಲೀಸ್ ದೂರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಇತರರ ವಿರುದ್ಧ ತಕ್ಷಣವೇ ಪ್ರಥಮ ಮಾಹಿತಿ ವರದಿ (FIR) ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸೋಮವಾರ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಇಂಡಿಯಾ ಮೈತ್ರಿಕೂಟದ ನಾಯಕರು ಸುಪ್ರೀಂ ಕೋರ್ಟ್ಗೆ ಮೆರವಣಿಗೆ ನಡೆಸಿದ್ದರು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಆವರಣದಲ್ಲಿ ಘಟನೆ ನಡೆದಿದೆ ಎಂದು ಒನ್ಇಂಡಿಯಾ ಸುದ್ದಿ ಜಾಲತಾಣದಲ್ಲಿ ಕೆಲಸ ಮಾಡುವ ಪತ್ರಕರ್ತೆ ರೀಚಾ ಪರಾಶರ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಪಡೆಯಲು, ಅವರು ಹೊರಬರುವುದನ್ನು ಕಾಯುತ್ತಾ ಸುಪ್ರೀಂ ಕೋರ್ಟ್ ಆವರಣದ ಗೇಟ್ವೊಂದರ ಬಳಿ ನಿಂತಿದ್ದೆ. ಈ ವೇಳೆ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ಮುಂದೆ ಬಂದರು. ಏನಾಗುತ್ತಿದೆ ಎಂಬುದನ್ನು ಅರಿತುಕೊಳ್ಳುವ ಮೊದಲೇ ನನ್ನ ಕೈ ಹಿಡಿದು ಬಲವಾಗಿ ಎಳೆದರು. ಅಷ್ಟೊಂದು ಬಲವಾಗಿ ಎಳೆದಿದ್ದರಿಂದ, ಅವರ ಅಂಗರಕ್ಷಕರು ನನ್ನನ್ನು ಪಕ್ಕಕ್ಕೆ ತಳ್ಳಿದರು. ಪರಿಣಾಮವಾಗಿ ನಾನು ಮುಖ ಕೆಳಗಾಗಿ ಸುಪ್ರೀಂ ಕೋರ್ಟ್ನ ಮೆಟ್ಟಿಲುಗಳ ಮೇಲೆ ಬಿದ್ದೆ. ಆಗ ನನ್ನ ಹೊಟ್ಟೆ ನೆಲಕ್ಕೆ ಬಡಿಯಿತು ಎಂದು ಪತ್ರಕರ್ತೆ ರೀಚಾ ಪರಾಶರ ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗ ತಿಳಿಸಿದ್ದರು.
ಈ ಘಟನೆಯಿಂದಾಗಿ ತಮಗೆ ತೊಂದರೆಯಾಗಿದೆ ಎಂದು ಆರೋಪಿಸಿರುವ ಅವರು, ಶುಕ್ರವಾರ ನವದೆಹಲಿ ಜಿಲ್ಲೆಯ ಪೊಲೀಸ್ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ತಕ್ಷಣ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು, ಘಟನೆಯ ವೇಳೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಲಾಗಿದೆ. ತಳ್ಳಾಟ ನಡೆಸುವ ಮೂಲಕ ಅಥವಾ ಬಲಪ್ರಯೋಗ ಮಾಡುವ ಮೂಲಕ ಹಿಂಸಿಸಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆಯ ಘನತೆಗೆ ಧಕ್ಕೆ ಉಂಟುಮಾಡುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧಾತ್ಮಕ ಬಲಪ್ರಯೋಗ ಮಾಡುವುದು, ಉದ್ದೇಶಪೂರ್ವಕವಾಗಿ ಗಾಯಗೊಳಿಸುವುದು ಹಾಗೂ ಅಜಾಗರೂಕತೆ ಅಥವಾ ನಿರ್ಲಕ್ಷ್ಯದಿಂದ ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದ ಕಾನೂನು ಸೆಕ್ಷನ್ಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸತ್ಯದ ಪರ ನಿಲ್ಲುವುದನ್ನು ಮುಂದುವರಿಸುತ್ತೇನೆ: ರೀಚಾ
ಪೊಲೀಸರಿಗೆ ದೂರು ಸಲ್ಲಿಸಿದ ಬಳಿಕ ರಿಚಾ ಪರಾಶರ ಅವರು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ತಮ್ಮ ಬೆಂಬಲಕ್ಕೆ ನಿಂತವರಿಗೆ ಧನ್ಯವಾದ ತಿಳಿಸಿದ್ದಾರೆ.
“ನಾನು ಯಾವಾಗಲೂ ಸತ್ಯದ ಪರವಾಗಿ ನಿಂತಿದ್ದೇನೆ. ಎಷ್ಟೇ ಬೆದರಿಕೆಗಳು ಬಂದರೂ, ಎಷ್ಟೇ ಟ್ರೋಲ್ ಮಾಡಿದರೂ, ನನ್ನ ವಿರುದ್ಧ ಎಷ್ಟೇ ಹಣ ಪಾವತಿಸಿ ಪ್ರಚಾರ ಅಭಿಯಾನಗಳನ್ನು ನಡೆಸಿದರೂ ಸತ್ಯದ ಪರ ನಿಲ್ಲುವುದನ್ನು ಮುಂದುವರಿಸುತ್ತೇನೆ. ನನ್ನ ಆತ್ಮಗೌರವ, ಘನತೆ ಮತ್ತು ಪತ್ರಕರ್ತೆಯಾಗಿ ವರದಿ ಮಾಡುವ ಹಾಗೂ ಪ್ರಶ್ನೆಗಳನ್ನು ಕೇಳುವ ಹಕ್ಕು ನನಗೆ ಅತ್ಯಂತ ಮುಖ್ಯ. ಇದು ಕೇವಲ ವೈಯಕ್ತಿಕ ಹಕ್ಕಿನ ಪ್ರಶ್ನೆಯಲ್ಲ. ಇವು ಭಾರತದ ಸಂವಿಧಾನ ನೀಡಿರುವ ಹಕ್ಕುಗಳು. ಯಾವುದೇ ಬೆಲೆ ತೆತ್ತಾದರೂ ಅವುಗಳನ್ನು ರಕ್ಷಿಸಬೇಕು” ಎಂದು ಅವರು ಹೇಳಿದ್ದಾರೆ.
“ನಾನು ಕ್ರಿಮಿನಲ್ ದೂರು ಸಲ್ಲಿಸಿದ್ದೇನೆ. ಕಾನೂನು ತನ್ನ ಕೆಲಸ ಮಾಡುತ್ತದೆ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಏಕೆಂದರೆ ಈ ಹೋರಾಟ ನನ್ನೊಬ್ಬಳದ್ದಲ್ಲ. ಇದು ಪ್ರತಿಯೊಬ್ಬ ಮಹಿಳೆಯ ಹೋರಾಟ. ಪ್ರತಿಯೊಬ್ಬ ಪತ್ರಕರ್ತನ ಹೋರಾಟ ಹಾಗೂ ಅವರ ಘನತೆಯನ್ನು ಕಾಪಾಡುವ ಹೋರಾಟವಾಗಿದೆ” ಎಂದು ರೀಚಾ ಪರಾಶರ ತಿಳಿಸಿದ್ದಾರೆ.
ಆರೋಪ ನಿರಾಕರಿಸಿದ್ದ ಕಾಂಗ್ರೆಸ್
ಇನ್ನೊಂದೆಡೆ, ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿ ಪತ್ರಕರ್ತೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ, ಅವರು ಆರೋಪಿಸಿದ ರೀತಿಯ ಘಟನೆ ನಡೆದಿರುವುದನ್ನು ತೋರಿಸುವ ದೃಶ್ಯಗಳಿಲ್ಲ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿತ್ತು.
ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಗರ್ಭಾವಸ್ಥೆಯಲ್ಲಿ ಪ್ರತಿಭಟನೆಗಳಲ್ಲಿ ಭಾಗವಹಿಸುವುದು ಅಪಾಯಕಾರಿಯಾಗಬಹುದು ಎಂದು ಹೇಳಿದ್ದಾರೆ.
“ಮಧ್ಯಾಹ್ನ 3ರಿಂದ 4 ಗಂಟೆಯ ನಡುವೆ ರಾಹುಲ್ ಗಾಂಧಿ ತಮ್ಮನ್ನು ತಳ್ಳಿದ್ದಾರೆ ಎಂದು ಅವರು ಹೇಳುತ್ತಾರೆ. ಆದರೆ ರಾತ್ರಿ 8:30ಕ್ಕೆ ಆಸ್ಪತ್ರೆಗೆ ಹೋದರು ಎಂದು ಹೇಳಲಾಗುತ್ತಿದೆ. ಅವರ ಸಹೋದರಿ ಬಿಜೆಪಿ ಶಾಸಕರ ಕಚೇರಿಗೆ ತೆರಳಿ ಪ್ರಚಾರಕ್ಕಾಗಿ ಈ ಘಟನೆಯನ್ನು ರೂಪಿಸಿದ್ದಾರೆ. ಅವರು ಎಕ್ಸ್ರೇ ಮಾಡಿಸಿಕೊಂಡಿದ್ದಾರೆ; ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಎಕ್ಸ್ರೇ ಮಾಡುವುದಿಲ್ಲ” ಎಂದು ಅಲ್ಕಾ ಲಾಂಬಾ ಆರೋಪಿಸಿದ್ದಾರೆ.
ಪತ್ರಕರ್ತೆ ಮಾಡಿರುವ ಆರೋಪಗಳನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಭಿನ್ನ ಹೇಳಿಕೆಗಳು ಹೊರಬಂದಿವೆ. ರೀಚಾ ಪರಾಶರ ಅವರು ನಿಷ್ಪಕ್ಷಪಾತ ತನಿಖೆಯ ವಿಶ್ವಾಸ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ