ಮುಂಬೈ: ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಅಮೆರಿಕದ ಪ್ರಜೆಯಾಗಿರುವ ಹಾಗೂ ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಹೊಂದಿರುವ 43 ವರ್ಷದ ನಟ ಇಮ್ರಾನ್ ಖಾನ್ ಶನಿವಾರ (ಅಕ್ಟೋಬರ್ 17) ಈ ಅರ್ಜಿ ಸಲ್ಲಿಸಿದ್ದು, ಪೊಲೀಸ್ ನೋಟಿಸ್ ಕಾನೂನುಬಾಹಿರವಾಗಿದೆ ಎಂದು ಆಕ್ಷೇಪಿಸಿದ್ದಾರೆ.
ತಮ್ಮ ವಕೀಲ ಜುಲ್ಫಿಕರ್ ಮೆಮನ್ ಮತ್ತು ಎಂಝಡ್ಎಂ ಲೀಗಲ್ (MZM Legal) ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ, ನೋಟಿಸ್ ಅನ್ನು “ಕಾನೂನುಬಾಹಿರ, ವಿಕೃತ, ತೀವ್ರ ಸ್ವರೂಪದ ಹಾಗೂ ಕಾನೂನಿನ ದೃಷ್ಟಿಯಲ್ಲಿ ಅಮಾನ್ಯ” ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ನೋಟಿಸ್ ರದ್ದುಗೊಳಿಸುವಂತೆ ಹಾಗೂ ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಅದರ ಜಾರಿಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಕಾನೂನು ಅಥವಾ ಶಾಸನಬದ್ಧ ನಿಯಮಗಳಲ್ಲಿ ಭಾರತದ ಸಾಗರೋತ್ತರ ನಾಗರಿಕತ್ವ (OCI) ಕಾರ್ಡ್ ಹೊಂದಿರುವವರು ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಯಾವುದೇ ನಿಬಂಧನೆ ಇಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಯಾವುದೇ ಕಾರಣಗಳನ್ನು ಬಹಿರಂಗಪಡಿಸದೆ, ಆರೋಪಕ್ಕೆ ಪೂರಕವಾದ ದಾಖಲೆಗಳು ಅಥವಾ ನಿರ್ದಿಷ್ಟ ಕಾನೂನು ಉಲ್ಲಂಘನೆಯ ವಿವರಗಳನ್ನು ನೀಡದೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಅಲ್ಲದೆ, ಯಾವುದೇ ವಿಚಾರಣೆ ನಡೆಸದೆ, ಕಾರಣ ಕೇಳುವ ನೋಟಿಸ್ ನೀಡದೆ ಹಾಗೂ ತಮ್ಮ ವಾದ ಮಂಡಿಸಲು ಅವಕಾಶ ಕಲ್ಪಿಸದೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಕ್ಟೋಬರ್ 10ರಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ
ಇಮ್ರಾನ್ ಖಾನ್ ವಿರುದ್ಧ ಪೊಲೀಸರು ಕೈಗೊಂಡಿರುವ ಕ್ರಮಕ್ಕೆ ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯೇ ಹಿನ್ನೆಲೆಯಾಗಿದೆ. ಈ ಪ್ರತಿಭಟನೆಯ ಸಂದರ್ಭದಲ್ಲಿ ನಟ ಇಮ್ರಾನ್ ಖಾನ್ ಅವರನ್ನು ಪೊಲೀಸರು ಸ್ವಲ್ಪ ಸಮಯ ವಶಕ್ಕೆ ಪಡೆದಿದ್ದರು.
ದೆಹಲಿಯಲ್ಲಿ ನಡೆಯುತ್ತಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janta Party)ಯ ಪ್ರತಿಭಟನೆಗೆ ಬೆಂಬಲ ಸೂಚಿಸಿ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪ್ರತಿಭಟನಾಕಾರರು ಸೇರಿದ್ದರು. ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ದೆಹಲಿಯಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿನ್ನೆಲೆಯಲ್ಲಿ ನಟ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿಯರ ಕಾಯ್ದೆಯ ಎರಡು ಸೆಕ್ಷನ್ಗಳ ಅಡಿಯಲ್ಲಿ ಕ್ರಮ
ವಲಸೆ ಮತ್ತು ವಿದೇಶಿಯರ ಕಾಯ್ದೆಯ ಸೆಕ್ಷನ್ 7(2)(ಸಿ) ಹಾಗೂ ಸೆಕ್ಷನ್ 29ರ ಅಡಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ವಿದೇಶಿ ಪ್ರಜೆಗಳ ಚಲನವಲನವನ್ನು ನಿರ್ಬಂಧಿಸಲು ಹಾಗೂ ಅವರನ್ನು ದೇಶದಿಂದ ಕಡ್ಡಾಯವಾಗಿ ಹೊರಹಾಕಲು ಈ ಕಾನೂನು ನಿಬಂಧನೆಗಳು ಸರ್ಕಾರಕ್ಕೆ ಅಧಿಕಾರ ನೀಡುತ್ತವೆ.
ಸೆಕ್ಷನ್ 7(2)(ಸಿ) ಅಡಿಯಲ್ಲಿ, ಯಾವುದೇ ವಿದೇಶಿ ಪ್ರಜೆಯು ಭಾರತದಲ್ಲಿ ಅಥವಾ ನಿರ್ದಿಷ್ಟ ಪ್ರದೇಶದಲ್ಲಿ ಇರುವುದನ್ನು ನಿಷೇಧಿಸಲು, ನಿಯಂತ್ರಿಸಲು ಅಥವಾ ನಿರ್ಬಂಧಿಸಲು ಸರ್ಕಾರಕ್ಕೆ ಅಧಿಕಾರವಿದೆ. ನಿರ್ದಿಷ್ಟ ವ್ಯಕ್ತಿಯು “ಭಾರತದಲ್ಲಿ ಅಥವಾ ಅದರ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಉಳಿಯಬಾರದು” ಎಂದು ನಿರ್ದೇಶನ ನೀಡಲು ಈ ನಿಬಂಧನೆ ಅವಕಾಶ ಕಲ್ಪಿಸುತ್ತದೆ.
ಇನ್ನು, ಸೆಕ್ಷನ್ 29ರ ಪ್ರಕಾರ, ಕಾಯ್ದೆಯ ಯಾವುದೇ ನಿಬಂಧನೆ, ನಿಯಮ ಅಥವಾ ಆದೇಶವನ್ನು ಉಲ್ಲಂಘಿಸಿದ ವಿದೇಶಿ ಪ್ರಜೆಯನ್ನು ದೇಶದಿಂದ ಹೊರಹಾಕಲು ಸರ್ಕಾರ ನಿರ್ದೇಶನ ನೀಡಬಹುದು. ಭದ್ರತೆಗೆ ಸಂಬಂಧಿಸಿದ ಪ್ರತಿಕೂಲ ವರದಿಯ ಆಧಾರದಲ್ಲಿಯೂ ಇಂತಹ ಕ್ರಮ ಕೈಗೊಳ್ಳಲು ಅವಕಾಶವಿದೆ. ಸರ್ಕಾರದ ಆದೇಶವನ್ನು ಜಾರಿಗೊಳಿಸಲು ಅಗತ್ಯವಿರುವ ಸಮಂಜಸ ಅಧಿಕಾರಗಳನ್ನು ಕಾನೂನು ಜಾರಿ ಅಧಿಕಾರಿಗಳಿಗೆ ಈ ಸೆಕ್ಷನ್ ನೀಡುತ್ತದೆ.


ನಿಮ್ಮ ಕಾಮೆಂಟ್ ಬರೆಯಿರಿ