ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಉತ್ತರ ಭಾಗದಲ್ಲಿರುವ ಚೋರ್ಬಾಗನ್ ಸಾರ್ವಜನಿಕ ದುರ್ಗಾಪೂಜೆ ಮಂಟಪದಲ್ಲಿ ಶನಿವಾರ ಸಂಜೆ ಸಂಭವಿಸಿದ ಕಾಲ್ತುಳಿತದಂತಹ ದುರಂತದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟಿದ್ದು, 35 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರ್ಗಾಪೂಜೆ ಮಂಟಪದ ಹೊರಗೆ ದರ್ಶನಕ್ಕಾಗಿ ಕಾಯುತ್ತಿದ್ದ ಭಕ್ತರು ಮಳೆ ಆರಂಭವಾಗುತ್ತಿದ್ದಂತೆ ಏಕಾಏಕಿ ಮುನ್ನುಗ್ಗಿದ್ದರಿಂದ ಈ ಅವಘಡ ಸಂಭವಿಸಿದೆ. ಜನಸಂದಣಿಯ ಒತ್ತಡಕ್ಕೆ ಸಿಲುಕಿ ಕೆಲವರು ರಸ್ತೆಗೆ ಬಿದ್ದಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪಿ ಕಾಲ್ತುಳಿತದಂಥ ಸ್ಥಿತಿ ನಿರ್ಮಾಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಕನಿಷ್ಠ 25 ಮಂದಿಯನ್ನು ಕೋಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಟ್ಟು ಸುಮಾರು 35 ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಮನೋಜ ಅಗರ್ವಾಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯ ಬೆನ್ನಲ್ಲೇ ಚೋರ್ಬಾಗನ್ ಪೂಜಾ ಸಮಿತಿಯ ಎಲ್ಲ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಧ್ವನಿವರ್ಧಕದ ಘೋಷಣೆಯಿಂದ ಮತ್ತಷ್ಟು ಗೊಂದಲ?
ಘಟನೆ ಸಂಭವಿಸಿದ ಸಂದರ್ಭದಲ್ಲಿ ಚೋರ್ಬಾಗನ್ ಪೂಜಾ ಸಮಿತಿಯ ವತಿಯಿಂದ ಧ್ವನಿವರ್ಧಕದ ಮೂಲಕ ಪ್ರಕಟಣೆ ಮಾಡಲಾಗಿತ್ತು. ಈ ಘೋಷಣೆಯಿಂದ ಜನರಲ್ಲಿ ಗೊಂದಲ ಹೆಚ್ಚಾಗಿ, ದಿಢೀರ್ ನೂಕುನುಗ್ಗಲು ಮತ್ತಷ್ಟು ತೀವ್ರಗೊಂಡಿತು ಎಂದು ಮೂಲಗಳು ತಿಳಿಸಿವೆ.
ಕೋಲ್ಕತ್ತಾ ಪೊಲೀಸರ ಪ್ರಕಾರ, ಶನಿವಾರ ರಾತ್ರಿ ಸುಮಾರು 7:40ಕ್ಕೆ ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಸರದಾ ಪಾರ್ಕ್ನಲ್ಲಿರುವ ಚೋರ್ಬಾಗನ್ ಪೂಜಾ ಮಂಟಪದ ನಿರ್ಗಮನ ದ್ವಾರದ ಬಳಿ ಭಾರಿ ಜನಸಂದಣಿಯಿಂದ ಕಾಲ್ತುಳಿತದಂಥ ಪರಿಸ್ಥಿತಿ ಉಂಟಾಯಿತು. ಮಳೆಯ ನಡುವೆಯೇ ಮಂಟಪಕ್ಕೆ ಭೇಟಿ ನೀಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಈ ಅವಘಡ ಸಂಭವಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೂಜಾ ಮಂಟಪಕ್ಕೆ ಸಾರ್ವಜನಿಕರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ. ಗಾಯಗೊಂಡ ಎಲ್ಲರನ್ನೂ ರಕ್ಷಿಸಿ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಟಪದ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಕಿರಿದಾಗಿದ್ದವು
ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಮಂಟಪದ ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರ ಎರಡೂ ಕಿರಿದಾಗಿದ್ದವು ಎಂದು ತಿಳಿಸಿದ್ದಾರೆ. ಅಲ್ಲದೆ, ಆ ಪ್ರದೇಶದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆಯೂ ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ಹಲವರು ಪ್ರಜ್ಞೆ ಕಳೆದುಕೊಂಡಿದ್ದರು. ಕೆಲವರನ್ನು ಮೋಟಾರ್ಸೈಕಲ್ಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ಜನರು ಕುಸಿದುಬಿದ್ದಾಗ ಅವರನ್ನು ಬೈಕ್ಗಳಲ್ಲಿ ಸಾಗಿಸುತ್ತಿರುವುದನ್ನು ಎಲ್ಲೆಡೆ ನೋಡಿದೆ. ಅಲ್ಲಿ ಭಾರಿ ಜನಸಂದಣಿಯಿತ್ತು” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ವಿವರಿಸಿದ್ದಾರೆ.
“ನನ್ನ ಮಗಳು ಮತ್ತು ಮೊಮ್ಮಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ” ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಮಂಟಪದ ರಚನೆ ಕುಸಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಎಂಬ ವರದಿಗಳೂ ಬಂದಿವೆ. ಇನ್ನು ಕೆಲವರು ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಘಟನೆಯ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸರು, ವಿಪತ್ತು ನಿರ್ವಹಣಾ ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಪಶ್ಚಿಮ ಬಂಗಾಳದ ಆರೋಗ್ಯ ಸಚಿವ ಶಾರದ್ವತ್ ಮುಖರ್ಜಿ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಧಾವಿಸಿದರು. ಗಾಯಾಳುಗಳೆಲ್ಲರನ್ನೂ ರಕ್ಷಿಸಿ ಕೋಲ್ಕತ್ತಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಪೂಜಾ ಆಯೋಜಕರಲ್ಲಿ ತೀವ್ರ ಗೊಂದಲ ಉಂಟಾಗಿದೆ. ಶನಿವಾರ ಸಂಜೆ ಕೋಲ್ಕತ್ತಾದ ಹಲವು ಭಾಗಗಳಲ್ಲಿ ತುಂತುರು ಮಳೆಯೂ ಸುರಿದಿತ್ತು.
ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಕೋಲ್ಕತ್ತಾದ ಚೋರ್ಬಾಗನ್ ಸಾರ್ವಜನಿಕ ದುರ್ಗಾಪೂಜೆ ಮಂಟಪದಲ್ಲಿ ಸಂಭವಿಸಿದ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (PMNRF)ಯಿಂದ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು. ಹಾಗೂ ಗಾಯಗೊಂಡವರಿಗೆ ತಲಾ ₹50,000 ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಾರ್ಯಕ್ರಮಗಳನ್ನು ಮುಂದೂಡಿದ ಅಮಿತ್ ಶಾ
ಕೋಲ್ಕತ್ತಾದ ದುರ್ಗಾಪೂಜೆ ಮಂಟಪದಲ್ಲಿ ಸಂಭವಿಸಿದ ಕಾಲ್ತುಳಿತದಂಥ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಿಗದಿಯಾಗಿದ್ದ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಲು ಆಸ್ಪತ್ರೆಗೆ ತೆರಳುವುದಾಗಿಯೂ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ತೀವ್ರ ಆಘಾತ
ಚೋರ್ಬಾಗನ್ ಪೂಜಾ ಮಂಟಪದಲ್ಲಿ ಸಂಭವಿಸಿದ ದುರಂತದ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
“ಚೋರ್ಬಾಗನ್ ಪೂಜಾ ಮಂಟಪದಲ್ಲಿ ಸಂಭವಿಸಿದ ಕಾಲ್ತುಳಿತದಂಥ ದುರಂತದ ಸುದ್ದಿ ತಿಳಿದು ತೀವ್ರ ಆಘಾತ ಮತ್ತು ದುಃಖವಾಗಿದೆ. ಗಾಯಗೊಂಡವರೆಲ್ಲರೂ ಶೀಘ್ರ ಗುಣಮುಖರಾಗಲಿ ಹಾಗೂ ಈ ಕಷ್ಟದ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಧೈರ್ಯ ಮತ್ತು ಶಕ್ತಿ ದೊರೆಯಲಿ ಎಂದು ತಾಯಿ ದುರ್ಗೆಯಲ್ಲಿ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದ್ದಾರೆ.
ಘಟನೆಯ ಬಳಿಕ ಮಂಟಪದ ಪ್ರವೇಶವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ. ಭಾರಿ ಜನಸಂದಣಿ, ಮಳೆ ಹಾಗೂ ಪ್ರವೇಶ–ನಿರ್ಗಮನ ವ್ಯವಸ್ಥೆಯ ಕುರಿತು ಪ್ರತ್ಯಕ್ಷದರ್ಶಿಗಳು ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ, ದುರಂತಕ್ಕೆ ಕಾರಣವಾದ ನಿಖರ ಪರಿಸ್ಥಿತಿಯ ಕುರಿತು ಹೆಚ್ಚಿನ ವಿವರಗಳು ನಿರೀಕ್ಷಿಸಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ