ಭಾರತ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಪ್ರಗ್ಯಾನ್ ಓಜಾ ನೇಮಕ; ರಮೇಶ ಪೊವಾರಗೆ ಸ್ಥಾನ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತ ತಂಡದ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಜಾ ಅವರನ್ನು ಪುರುಷರ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದೇ ವೇಳೆ, ಮಾಜಿ ಕ್ರಿಕೆಟಿಗ ರಮೇಶ ಪೊವಾರ್ ಅವರನ್ನೂ ಆಯ್ಕೆ ಸಮಿತಿಗೆ ಸೇರ್ಪಡೆಗೊಳಿಸಲಾಗಿದೆ.
ಹಿರಿತನದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಅವರಿಗೆ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಪುರುಷರ ತಂಡದ ಆಯ್ಕೆ ಸಮಿತಿಗೆ ಸದಸ್ಯರ ನೇಮಕಾತಿ ಪ್ರಕ್ರಿಯೆಯನ್ನು ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ನಡೆಸಿತ್ತು. ಅಶೋಕ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಸದಸ್ಯರಾಗಿರುವ ಈ ಸಮಿತಿಯು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೈಗೊಂಡಿತ್ತು. ಎಡಗೈ ಸ್ಪಿನ್ನರ್ ಓಜಾ ಭಾರತ ತಂಡದ ಪರವಾಗಿ 24 ಟೆಸ್ಟ್, 18 ಏಕದಿನ (ODI) ಮತ್ತು ಆರು ಟಿ20 (T20I) ಪಂದ್ಯಗಳನ್ನು ಆಡಿದ್ದಾರೆ. ಮುಂಬೈನ ಪವಾರ್ ಭಾರತಕ್ಕಾಗಿ ಎರಡು ಟೆಸ್ಟ್ ಮತ್ತು 31 ಏಕದಿನ ಪಂದ್ಯಗಳನ್ನು ಆಡಿದ್ದು, ಆ ನಂತರ ಅವರು ವಿವಿಧ ಹಂತಗಳಲ್ಲಿ ತರಬೇತುದಾರರಾಗಿ (ಕೋಚ್) ಕಾರ್ಯನಿರ್ವಹಿಸಿದ್ದಾರೆ.

ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ಸಭೆ ನಡೆಸಿದ್ದ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ), ಅರ್ಜಿದಾರರ ಪರಿಶೀಲನೆ ಹಾಗೂ ಮೌಲ್ಯಮಾಪನ ನಡೆಸಿದ ಬಳಿಕ ರಮೇಶ ಪೊವಾರ್ ಅವರನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲು ಶಿಫಾರಸು ಮಾಡಿತು. ಈ ಶಿಫಾರಸಿನಂತೆ ಬಿಸಿಸಿಐ ನೇಮಕಾತಿಯನ್ನು ಅಧಿಕೃತಗೊಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ (X) ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, “ರಮೇಶ ಪೊವಾರ್ ಅವರನ್ನು ಪುರುಷರ ಆಯ್ಕೆ ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಆಡಿರುವ ಟೆಸ್ಟ್ ಪಂದ್ಯಗಳ ಸಂಖ್ಯೆಯ ಆಧಾರದ ಮೇಲೆ ಹಿರಿಯರಾಗಿರುವ ಪ್ರಗ್ಯಾನ್ ಓಜಾ ಸಮಿತಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಬದ್ಧತೆ, ದೃಢನಿಶ್ಚಯ ಮತ್ತು ಕೊಡುಗೆ ನೀಡಿದ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಅಭಿನಂದಿಸುತ್ತದೆ” ಎಂದು ತಿಳಿಸಿದೆ.

ಪ್ರಮುಖ ಸುದ್ದಿ :-   ಕೈಗೆ ಬ್ಯಾಂಡೇಜ್‌, ಭುಜ-ಎದೆಯ ಭಾಗಕ್ಕೆ ಡ್ರೆಸ್ಸಿಂಗ್ ; ಗುಂಡಿನ ದಾಳಿ ಬಳಿಕ ನಟ ಟೈಗರ್ ಶ್ರಾಫ್ ಮೊದಲ ಫೋಟೊ ಬಿಡುಗಡೆ

ರಮೇಶ ಪೊವಾರ್‌ಗೆ ಕೋಚಿಂಗ್‌ನಲ್ಲೂ ಅನುಭವ
ಮಾಜಿ ಕ್ರಿಕೆಟಿಗ ರಮೇಶ ಪೊವಾರ್ ಭಾರತ ತಂಡದ ಪರ ಎರಡು ಟೆಸ್ಟ್ ಪಂದ್ಯಗಳು ಹಾಗೂ 31 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಕೋಚಿಂಗ್ ಕ್ಷೇತ್ರದಲ್ಲಿಯೂ ಅವರು ಗಮನಾರ್ಹ ಅನುಭವ ಗಳಿಸಿದ್ದಾರೆ.
ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅವರು, ಮುಂಬೈ ಮತ್ತು ಗುಜರಾತ್ ತಂಡಗಳಿಗೂ ಮುಖ್ಯ ಕೋಚ್ ಆಗಿದ್ದರು. ಅಲ್ಲದೆ, ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ ತಂಡ ಏಷ್ಯಾ ಕಪ್ ಪ್ರಶಸ್ತಿ ಗೆಲ್ಲುವಲ್ಲಿ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪುರುಷರ ಆಯ್ಕೆ ಸಮಿತಿಯ ಸದಸ್ಯರು
ಪ್ರಗ್ಯಾನ್ ಓಜಾ (ಅಧ್ಯಕ್ಷರು), ಶಿವಸುಂದರ ದಾಸ್, ಆರ್.ಪಿ. ಸಿಂಗ್, ಅಜಯ ರಾತ್ರಾ ಮತ್ತು ರಮೇಶ ಪೊವಾರ್ ಅವರು ಪುರುಷರ ರಾಷ್ಟ್ರೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.

ಪ್ರಮುಖ ಸುದ್ದಿ :-   ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement