ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ : ರಾಜಸ್ಥಾನದಲ್ಲಿ ಮೂವರು ಆರೋಪಿಗಳ ಬಂಧನ

ಮುಂಬೈ/ಕೋಟಾ: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿದೆ. ರಾಜಸ್ಥಾನ ಪೊಲೀಸರು ಮತ್ತು ಆ್ಯಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (AGTF) ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸೇರಿದ್ದಾನೆ. ಉಳಿದ ಇಬ್ಬರನ್ನು ಬಿಹಾರದ ಬೇಗುಸರಾಯ್ ಮೂಲದ 22 ವರ್ಷದ ಹೃತಿಕ್ ಕುಮಾರ ಅಲಿಯಾಸ್ ರೋಷನ್ ಹಾಗೂ ಹರಿಯಾಣದ ಸೋನಿಪತ್ ಮೂಲದ 18 ವರ್ಷದ ರೆಹಾನ್ ಅಲಿಯಾಸ್ ಸುಕ್ಕಾ ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾ ತಲುಪಲಿದ್ದಾರೆ ಎಂಬ ಮಾಹಿತಿ ಸೋಮವಾರ ಬೆಳಗ್ಗೆ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕೋಟಾ ಪೊಲೀಸರು ಕೇವಲ 15 ನಿಮಿಷಗಳಲ್ಲಿ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಂಡು, ರೈಲಿನಾದ್ಯಂತ ತಪಾಸಣೆ ನಡೆಸಿ ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕೋಟಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ತೇಜಸ್ವಿನಿ ಗೌತಂ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಸೋಮವಾರ ಬೆಳಗ್ಗೆ ನಮಗೆ ಆರೋಪಿಗಳ ಚಲನವಲನದ ಬಗ್ಗೆ ಮಾಹಿತಿ ಲಭಿಸಿತು. ಟೈಗರ್ ಶ್ರಾಫ್ ಪ್ರಕರಣದಲ್ಲಿ ಗುಂಡಿನ ದಾಳಿ ನಡೆಸಿದ ಪ್ರಮುಖ ಆರೋಪಿಗಳು ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಕೋಟಾಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಯಿತು. ಕೂಡಲೇ ನಮ್ಮ ತಂಡ ಕಾರ್ಯಾಚರಣೆ ಆರಂಭಿಸಿತು. ಕೇವಲ 15 ನಿಮಿಷಗಳಲ್ಲಿ ಬಲೆ ಬೀಸಿ, ಇಡೀ ರೈಲಿನಲ್ಲಿ ಸಮಗ್ರ ತಪಾಸಣೆ ನಡೆಸಲಾಯಿತು. ಕೋಟಾ ನಗರ ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಗುಂಡಿನ ದಾಳಿ ಪ್ರಕರಣದ ಮೂವರು ಶಂಕಿತರನ್ನೂ ಬಂಧಿಸಲು ಸಾಧ್ಯವಾಯಿತು” ಎಂದು ಹೇಳಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುವುದು. ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ | ಬಾಲಿವುಡ್‌ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನೇಪಾಳಕ್ಕೆ ಪರಾರಿಯಾಗಲು ಯೋಜನೆ
ಆರಂಭಿಕ ವಿಚಾರಣೆ ವೇಳೆ ಆರೋಪಿಗಳು ಗುಂಡಿನ ದಾಳಿ ನಡೆಸಿದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದರು ಎಂಬ ಮಾಹಿತಿ ಲಭಿಸಿದೆ. ರೈಲು ತನ್ನ ಕೊನೆಯ ನಿಲ್ದಾಣವಾದ ಜೈಪುರ ತಲುಪಿದ ಬಳಿಕ ಅಲ್ಲಿಂದ ಬಸ್ ಮೂಲಕ ದೆಹಲಿಗೆ ತೆರಳಿ, ನಂತರ ನೇಪಾಳಕ್ಕೆ ಪರಾರಿಯಾಗುವುದು ಅವರ ಯೋಜನೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಆರೋಪಿಗಳ ಪ್ರಯಾಣದ ಬಗ್ಗೆ ಮಾಹಿತಿ ಪಡೆದ ಕೋಟಾ ಪೊಲೀಸರು ರೈಲಿನಲ್ಲೇ ಅವರನ್ನು ತಡೆದು ಬಂಧಿಸಿದ್ದರಿಂದ ಅವರ ಪರಾರಿಯ ಪ್ರಯತ್ನ ವಿಫಲವಾಗಿದೆ.
ಸದ್ಯದವರೆಗೆ ಆರೋಪಿಗಳಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ ಎಂದು ಎಸ್‌ಪಿ ತೇಜಸ್ವಿನಿ ಗೌತಂ ತಿಳಿಸಿದ್ದಾರೆ. ಗುಂಡಿನ ದಾಳಿಗೆ ಬಳಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದನ್ನು ಪತ್ತೆಹಚ್ಚಲು ಆರೋಪಿಗಳನ್ನು ವಿವರವಾಗಿ ವಿಚಾರಣೆಗೊಳಪಡಿಸಲಾಗುವುದು. ಮುಂದಿನ ಕಾನೂನು ಕ್ರಮಗಳನ್ನು ಮುಂಬೈ ಪೊಲೀಸರು ಕೈಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಮೆರಿಕಕ್ಕೆ ಬಿಷ್ಣೋಯ್ ಗ್ಯಾಂಗ್‌ನ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಅನಿಲ ಪಂಡಿತ್ ಸಂಪರ್ಕ?
ಪ್ರಕರಣದ ಆರಂಭಿಕ ವಿಚಾರಣೆ ವೇಳೆ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಗಳಲ್ಲಿ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿರುವ ರೆಹಾನ್‌ ಜೊತೆ ಅನಿಲ ಪಂಡಿತ್ ಸಂಪರ್ಕದಲ್ಲಿದ್ದ ಎಂಬ ಸುಳಿವು ಲಭಿಸಿದೆ.

ಅನಿಲ ಪಂಡಿತ್ ಬಿಷ್ಣೋಯ್ ಗ್ಯಾಂಗ್‌ ಜೊತೆ ಸಂಬಂಧ ಹೊಂದಿರುವ, ಸದ್ಯ ಅಮೆರಿಕದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎನ್ನಲಾದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಎಂದು ಪೊಲೀಸರು ಗುರುತಿಸಿದ್ದಾರೆ.
“ಆರಂಭಿಕ ವಿಚಾರಣೆ ವೇಳೆ ಬಂಧಿತ ಪ್ರಮುಖ ಆರೋಪಿ ರೆಹಾನ್‌ ಜೊತೆ ಅನಿಲ ಪಂಡಿತ್ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭಿಸಿದೆ” ಎಂದು ತೇಜಸ್ವಿನಿ ಗೌತಂ ತಿಳಿಸಿದ್ದಾರೆ. ಆರೋಪಿಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಾಥಮಿಕ ವಿಚಾರಣೆಯಲ್ಲಿ ಲಭಿಸಿದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಸೋನಿಪತ್‌ನ ಅಪ್ರಾಪ್ತನನ್ನು ಮುಂಬೈಗೆ ಕರೆತಂದಿದ್ದ ರೆಹಾನ್?
ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ರೆಹಾನ್ ಹರಿಯಾಣದ ಸೋನಿಪತ್‌ನ ಅಪ್ರಾಪ್ತ ಬಾಲಕನನ್ನು ತನ್ನೊಂದಿಗೆ ಕರೆದುಕೊಂಡು ಮುಂಬೈಗೆ ಪ್ರಯಾಣಿಸಿದ್ದ. ಬಳಿಕ ಮುಂಬೈನಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
ಆದರೆ, ಪ್ರಕರಣದಲ್ಲಿ ಪ್ರತಿಯೊಬ್ಬ ಆರೋಪಿಯ ಪಾತ್ರವೇನು, ಗುಂಡಿನ ದಾಳಿಗೆ ಸಂಬಂಧಿಸಿದ ಘಟನೆಗಳು ಯಾವ ಕ್ರಮದಲ್ಲಿ ನಡೆದವು ಮತ್ತು ದಾಳಿಗೆ ಬಳಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರಗಳು ಎಲ್ಲಿವೆ ಎಂಬುದರ ಕುರಿತು ಇನ್ನಷ್ಟು ತನಿಖೆ ನಡೆಯಬೇಕಿದೆ. ಈ ಎಲ್ಲ ಆಯಾಮಗಳ ಬಗ್ಗೆ ಮುಂಬೈ ಪೊಲೀಸರು ಸಮಗ್ರ ವಿಚಾರಣೆ ನಡೆಸಲಿದ್ದಾರೆ.

ಪ್ರಮುಖ ಸುದ್ದಿ :-   ಖ್ಯಾತ ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ಬೈಕ್‌ನಲ್ಲಿ ಬಂದಿದ್ದ ಮೂವರು ಆರೋಪಿಗಳು ಪರಾರಿ

ಬಿಹಾರದ ಬೇಗುಸರಾಯ್ ಮೂಲದ ಹೃತಿಕ್ ಕುಮಾರ ಅಲಿಯಾಸ್ ರೋಷನ್ ಕಳೆದ ಕೆಲವು ವರ್ಷಗಳಿಂದ ಮುಂಬೈನಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಹರಿಯಾಣದ ಸೋನಿಪತ್ ಮೂಲದ ರೆಹಾನ್ ಅಲಿಯಾಸ್ ಸುಕ್ಕಾ ಹಾಗೂ 17 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಸೇರಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ.
ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿರುವುದು ತನಿಖೆಗೆ ಮಹತ್ವದ ತಿರುವು ನೀಡಿದೆ. ಇದೀಗ ಆರೋಪಿಗಳ ವಿಚಾರಣೆ, ಶಸ್ತ್ರಾಸ್ತ್ರಗಳ ಪತ್ತೆ ಹಾಗೂ ಅನಿಲ ಪಂಡಿತ್ ಸೇರಿದಂತೆ ಇತರರ ಸಂಪರ್ಕದ ಕುರಿತು ಮುಂಬೈ ಪೊಲೀಸರ ತನಿಖೆಯ ಬಳಿಕ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement