ಹಾವೇರಿ: ನಾಡಿನ ಪ್ರಸಿದ್ಧ ಕಾರ್ಣಿಕೋತ್ಸವಗಳಲ್ಲಿ ಒಂದಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದ ಮಾಲತೇಶ ದೇವರ ಕಾರ್ಣಿಕೋತ್ಸವ ನವರಾತ್ರಿ ಪ್ರಯುಕ್ತ ಸೋಮವಾರ ನಡೆಯಿತು. ಲಕ್ಷಾಂತರ ಭಕ್ತರ ಹರ್ಷೋದ್ಗಾರದ ನಡುವೆ ದೇವರಗುಡ್ಡದ ಪವಿತ್ರ ‘ಕರಿಯಾಲ್ ಕಟ್ಟಿ’ಯ ಬಳಿ ಈ ವರ್ಷದ ಕಾರ್ಣಿಕ ದೈವವಾಣಿ ಮೊಳಗಿತು. ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು 15 ಅಡಿ ಎತ್ತರದ ಬಿಲ್ಲನ್ನೇರಿ, ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್…’ ಎಂದು ಭವಿಷ್ಯ ನುಡಿದರು.
ಪ್ರತಿವರ್ಷ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಐತಿಹಾಸಿಕ ಮಾಲತೇಶ ಕಾರ್ಣಿಕೋತ್ಸವ ನಡೆಯುತ್ತದೆ. ಗೊರವಯ್ಯ ಸ್ವಾಮಿ ಒಂಬತ್ತು ದಿನಗಳ ಕಾಲ ಕಠಿಣ ಉಪವಾಸ ವ್ರತ ಕೈಗೊಂಡು, 15 ಅಡಿ ಎತ್ತರದ ಬಿಲ್ಲನ್ನೇರಿ ವರ್ಷದ ಕಾರ್ಣಿಕ ನುಡಿಯುತ್ತಾರೆ.
ದೇವರಗುಡ್ಡದ ಕರಿಯಾಲ್ ಕಟ್ಟಿಯಲ್ಲಿ ಗೊರವಯ್ಯ ಅವರು ‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂದು ನುಡಿದ ದೈವವಾಣಿಯನ್ನು ಭಕ್ತರು ತಮ್ಮ ನಂಬಿಕೆಯಂತೆ ಅರ್ಥೈಸಿಕೊಳ್ಳುತ್ತಿದ್ದಾರೆ.
ಕಾರ್ಣಿಕ ನುಡಿಯ ಅರ್ಥವೇನು?
ಕಾರ್ಣಿಕೋತ್ಸವದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷಭಟ್ಟ ಗುರೂಜಿ ಹಾಗೂ ಭಕ್ತರು ದೈವವಾಣಿಯನ್ನು ಕೃಷಿ ಮತ್ತು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ್ದಾರೆ.
ದೈವವಾಣಿಯಲ್ಲಿ ಉಲ್ಲೇಖಿಸಿರುವ ‘ಮುತ್ತು ಚೆಲ್ಲಿತು’ ಎಂಬುದು ನಾಡಿನಲ್ಲಿ ಉತ್ತಮ ಮಳೆ ಮತ್ತು ಬೆಳೆಯನ್ನು ಸೂಚಿಸುತ್ತದೆ. ಮುಂಬರುವ ದಿನಗಳಲ್ಲಿ ಉತ್ತಮ ಮಳೆಯಾಗಿ, ನಾಡಿನಲ್ಲಿ ಉತ್ತಮ ಬೆಳೆಗಳು ಬೆಳೆದು ಸಮೃದ್ಧಿ ನೆಲೆಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಕೆಂಪುಕೋಟೆಯ ಮೇಲೆ ಮುತ್ತು ಚೆಲ್ಲಿತ್ತಲೇ ಪರಾಕ್’ ಎಂಬ ಗೊರವಯ್ಯನ ದೈವವಾಣಿಯನ್ನು ರಾಜಕೀಯ ದೃಷ್ಟಿಕೋನದಿಂದಲೂ ವಿಶ್ಲೇಷಿಸಲಾಗಿದೆ. ದೇಶದ ಆಡಳಿತದಲ್ಲಿ ಸಾಧು-ಸಂತರ ಪ್ರಭಾವ ಹೆಚ್ಚಾಗಿ, ಮುಂದೊಂದು ದಿನ ಸಾಧು-ಸಂತರು ದೇಶವನ್ನು ಆಳುವ ಕಾಲ ಬರಲಿದೆ ಎಂಬ ಸೂಚನೆಯನ್ನು ಈ ದೈವವಾಣಿ ನೀಡಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ