ವಿಡಿಯೋ | ಮಾತನಾಡ್ಲಿಕ್ಕೇ ಆಗ್ತಿಲ್ಲ, ಇನ್ನು ಹಾಡೋದಾದ್ರೂ ಹೇಗೆ? ಗಾಯಕ ದಲೇರ್ ಮೆಹಂದಿಗೆ ವೇದಿಕೆಯಲ್ಲೇ ಸಚಿವರ ತರಾಟೆ

ಡೆಹ್ರಾಡೂನ್: “ನಿಮಗೆ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದಾದರೂ ಹೇಗೆ?” ಎಂದು ಬಾಲಿವುಡ್‌ನ ಖ್ಯಾತ ಪಂಜಾಬಿ ಗಾಯಕ ದಲೇರ್ ಮೆಹಂದಿ ಅವರನ್ನು ಉತ್ತರಾಖಂಡದ ಅರಣ್ಯ ಸಚಿವ ಸುಬೋಧ ಉನಿಯಾಲ್ ವೇದಿಕೆಯಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ತೇಹ್ರಿ ಜಿಲ್ಲೆಯ ನರೇಂದ್ರನಗರದಲ್ಲಿ ನಡೆದ ಕುಂಜಾಪುರಿ ಮೇಳದಲ್ಲಿ ನಡೆದಿದೆ.
ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಲೇರ್ ಮೆಹಂದಿ ಹಾಡುತ್ತಿದ್ದ ವೇಳೆ, ಅವರು ಮದ್ಯ ಸೇವಿಸಿ ವೇದಿಕೆಯಲ್ಲಿ ತಡವರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವರು ಮಧ್ಯಪ್ರವೇಶಿಸಿ ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನರೇಂದ್ರನಗರದ ಶಾಸಕರೂ ಆಗಿರುವ ಸಚಿವ ಸುಬೋಧ ಉನಿಯಾಲ್, ನವರಾತ್ರಿ ಕಾರ್ಯಕ್ರಮವು ದುರ್ಗಾದೇವಿಯ ಆರಾಧನೆಗೆ ಮೀಸಲಾಗಿದ್ದು, ಇಂತಹ ಧಾರ್ಮಿಕ ಸಂದರ್ಭದಲ್ಲಿ ಮದ್ಯದ ಅಮಲಿನಲ್ಲಿದ್ದುಕೊಂಡು ಪ್ರದರ್ಶನ ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದ ಘನತೆ ಮತ್ತು ಪಾವಿತ್ರ್ಯವನ್ನು ಕಲಾವಿದರು ಗೌರವಿಸಬೇಕು ಎಂದು ಅವರು ದಲೇರ್ ಮೆಹಂದಿಗೆ ಹೇಳಿದ್ದಾರೆ.

ವೈರಲ್ ಆಗಿರುವ ವಿಡಿಯೊದಲ್ಲಿ ಸಚಿವರು, “ನಿಮ್ಮನ್ನು ಕರೆಸಲು ನಾವು ಇಷ್ಟೊಂದು ಹಣ ಕೊಟ್ಟಿದ್ದೇವೆ. ನೀವು ನಮ್ಮನ್ನೇ ಮೂರ್ಖರನ್ನಾಗಿ ಮಾಡುತ್ತಿದ್ದೀರಿ. ಏನೇನೋ ಧ್ವನಿ ಹೊರಡಿಸುತ್ತಿದ್ದೀರಿ. ಇದು ಸರಿಯಲ್ಲ. ನಿಮ್ಮಿಂದ ಮಾತನಾಡಲೂ ಆಗುತ್ತಿಲ್ಲ, ಇನ್ನು ಹಾಡುವುದಾದರೂ ಹೇಗೆ?” ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಕೇಳಿಬರುತ್ತದೆ.
ದಲೇರ್ ಮೆಹಂದಿ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದಾಗ ಸಚಿವರು ವೇದಿಕೆಗೇ ಬಂದಿದ್ದಾರೆ. ಗಾಯಕರು ಮದ್ಯದ ಅಮಲಿನಲ್ಲಿರುವಂತೆ ಕಾಣುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮವು ದುರ್ಗಾದೇವಿಯ ಆರಾಧನೆಗೆ ಸಂಬಂಧಿಸಿದ್ದಾಗಿರುವುದರಿಂದ, ಇಂತಹ ಸಂದರ್ಭದಲ್ಲಿ ಅಮಲಿನಲ್ಲಿದ್ದುಕೊಂಡು ಪ್ರದರ್ಶನ ನೀಡುವುದು ಸಂಪೂರ್ಣ ಅನುಚಿತ ಎಂದು ಸಚಿವರು ಹೇಳಿದ್ದಾರೆ.
ಈ ಘಟನೆ ಸ್ಥಳೀಯವಾಗಿ ಪ್ರಮುಖ ಚರ್ಚೆಯ ವಿಷಯವಾಗಿದೆ. ಧಾರ್ಮಿಕ ಕಾರ್ಯಕ್ರಮದ ಶಿಸ್ತು ಮತ್ತು ಘನತೆಯನ್ನು ಕಾಪಾಡಲು ಸಚಿವರು ಮಧ್ಯಪ್ರವೇಶಿಸಿದ್ದು ಅಗತ್ಯವಾಗಿತ್ತು ಎಂದು ಹಲವರು ಅವರ ಕ್ರಮವನ್ನು ಬೆಂಬಲಿಸಿದ್ದಾರೆ. ಕುಂಜಾಪುರಿ ಮೇಳವು ಈ ಪ್ರದೇಶದ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರವಾಗಿದ್ದು, ಧಾರ್ಮಿಕ ನಂಬಿಕೆಗಳ ಜೊತೆಗೆ ಸಾಂಸ್ಕೃತಿಕ ಸಂಪ್ರದಾಯಗಳಿಗೂ ಮಹತ್ವ ಪಡೆದಿದೆ.

35 ಲಕ್ಷ ರೂ. ಸಂಭಾವನೆ, ಆದರೂ ಕಲೆಗೆ ನ್ಯಾಯ ಸಿಕ್ಕಿಲ್ಲ: ಸಚಿವರು
ಘಟನೆ ಕುರಿತು ಬಳಿಕ ಸ್ಪಷ್ಟನೆ ನೀಡಿರುವ ಸಚಿವ ಸುಬೋಧ ಉನಿಯಾಲ್ ಅವರು, ದಲೇರ್ ಮೆಹಂದಿ ಅವರಂತಹ ದೊಡ್ಡ ಕಲಾವಿದರು ತಮ್ಮ ಕಲೆಗೆ ನ್ಯಾಯ ಒದಗಿಸಬೇಕು ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಗಾಯಕರು ಗೊಂದಲಕ್ಕೊಳಗಾದವರಂತೆ ಕಾಣಿಸುತ್ತಿದ್ದರು ಮತ್ತು ಸರಿಯಾಗಿ ನಿಂತುಕೊಳ್ಳಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅವರು ದೊಡ್ಡ ಕಲಾವಿದರು. ಆದರೆ, ಒಬ್ಬ ದೊಡ್ಡ ಕಲಾವಿದ ತನ್ನ ಕಲೆಗೆ ನ್ಯಾಯ ಒದಗಿಸದಿದ್ದರೆ ಹೇಗೆ? ವೇದಿಕೆಯಲ್ಲಿ ಅವರು ಗೊಂದಲಕ್ಕೊಳಗಾದವರಂತೆ ಕಾಣಿಸುತ್ತಿದ್ದರು. ಸರಿಯಾಗಿ ನಿಂತುಕೊಳ್ಳಲೂ ಅವರಿಗೆ ಸಾಧ್ಯವಾಗುತ್ತಿರಲಿಲ್ಲ” ಎಂದು ಎಎನ್‌ಐ (ANI) ಸುದ್ದಿಸಂಸ್ಥೆ ಜೊತೆ ಮಾತನಾಡಿದಾಗ ಹೇಳಿದ್ದಾರೆ.
“ಇದರ ಜೊತೆಗೆ, ಅವರು ತಮ್ಮ ಹಾಡುಗಳಿಗೆ ಕೇವಲ ತುಟಿಗಳನ್ನು ಚಲಿಸುತ್ತಿದ್ದರು (ಲಿಪ್‌ಸಿಂಕ್‌ ಮಾಡುತ್ತಿದ್ದರು). ಅವರು ದೊಡ್ಡ ಕಲಾವಿದರಾಗಿರುವುದರಿಂದ ತಮ್ಮ ಕಲೆಗೆ ನ್ಯಾಯ ಒದಗಿಸಬೇಕು ಎಂದು ನಾನು ಹೇಳಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರಿಗೆ 35 ಲಕ್ಷ ರೂ. ಸಂಭಾವನೆ ನೀಡಲಾಗಿತ್ತು. ಆದರೆ, ಅವರು ಹಾಡುತ್ತಲೂ ಇರಲಿಲ್ಲ. ಹೀಗಾಗಿ ನನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ” ಎಂದು ಉನಿಯಾಲ್ ತಿಳಿಸಿದ್ದಾರೆ.
ದಲೇರ್ ಮೆಹಂದಿ ಭಾರತದ ಅತ್ಯಂತ ಜನಪ್ರಿಯ ಪಂಜಾಬಿ ಪಾಪ್ ಗಾಯಕರಲ್ಲಿ ಒಬ್ಬರು. ಭಾಂಗ್ರಾ ಮತ್ತು ಪಂಜಾಬಿ ಜಾನಪದ ಸಂಗೀತದ ಸೊಗಡನ್ನು ಮುಖ್ಯವಾಹಿನಿಯ ಭಾರತೀಯ ಸಂಗೀತಕ್ಕೆ ಪರಿಚಯಿಸಿದ ಕಲಾವಿದರಲ್ಲಿ ಅವರು ಪ್ರಮುಖರು. 1990ರ ದಶಕದಲ್ಲಿ ತಮ್ಮ ವಿಶಿಷ್ಟ ಧ್ವನಿ, ವಿಭಿನ್ನ ಗಾಯನ ಶೈಲಿ ಮತ್ತು ಉತ್ಸಾಹಭರಿತ ವೇದಿಕೆ ಪ್ರದರ್ಶನಗಳ ಮೂಲಕ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.
ಆದರೆ, ಕುಂಜಾಪುರಿ ಮೇಳದಲ್ಲಿ ನಡೆದಿರುವ ಈ ಘಟನೆಯು ಅವರ ಪ್ರದರ್ಶನದ ಗುಣಮಟ್ಟ, ಕಲಾವಿದರ ಜವಾಬ್ದಾರಿ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲಿಸಬೇಕಾದ ಶಿಸ್ತಿನ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಕಾಕ್ರೋಚ್ ಜನತಾ ಪಾರ್ಟಿಗೆ ಠಕ್ಕರ್ ಕೊಡಲು ʼಲಾಲ್ ಹಿಟ್ ಜನತಾ ಪಾರ್ಟಿʼಯ ಉದಯ ! ಯಾವುದು ಈ ಸಂಘಟನೆ?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement