“ಸಿಜೆಪಿಯನ್ನು ಎಂದಿಗೂ ಬೆಂಬಲಿಸಲ್ಲ, ಅವರ ಕಾರ್ಯಸೂಚಿಯೇ ಬೇರೆ… ಆದರೆ…..” : ಅಣ್ಣಾಮಲೈ

ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನಾಕಾರರ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕ್ರಮವನ್ನು ಟೀಕಿಸುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ, ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಟೀಕೆಯನ್ನು ಅಭಿಜೀತ ದೀಪ್ಕೆ ನೇತೃತ್ವದ ಸಿಜೆಪಿ ಸಂಘಟನೆಯ ಪರವಾದ ಬೆಂಬಲ ಎಂದು ಅರ್ಥೈಸಬಾರದು ಎಂದು ಅವರು ಹೇಳಿದ್ದಾರೆ. ಆದರೆ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಹೋರಾಟ ನಡೆಸುವ ಹಕ್ಕಿದೆ ಎಂದು ಪ್ರತಿಪಾದಿಸಿದ್ದಾರೆ.
ಗುರುವಾರ ತಮ್ಮ ‘ವಿ ದ ಲೀಡರ್ಸ್‌’ (We the Leaders) ಚಳವಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಣ್ಣಾಮಲೈ,ನಮ್ಮ ಕಾರ್ಯಸೂಚಿ ಹಾಗೂ ಸಿಜೆಪಿಯ ಕಾರ್ಯಸೂಚಿ ಮತ್ತು ತಮ್ಮ ರಾಜಕೀಯ ಉದ್ದೇಶಗಳು ವಿಭಿನ್ನವಾಗಿವೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸುವುದರ ಜತೆಗೇ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ಹಾಗೂ ಸಿಜೆಪಿ ಪ್ರತಿಭಟನೆಯ ಹಿಂದಿರುವ ಪ್ರಜಾಸತ್ತಾತ್ಮಕ ಹಕ್ಕನ್ನೂ ಬೆಂಬಲಿಸಿದ್ದಾರೆ.
“ನಾವು ಎಂದಿಗೂ ಕಾಕ್ರೋಚ್ ಜನತಾ ಪಾರ್ಟಿಯನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿಯೇ ಬೇರೆ, ನಮ್ಮ ಕಾರ್ಯಸೂಚಿಯೇ ಬೇರೆ” ಎಂದು ಬಿಜೆಪಿ ತೊರೆದು ಸ್ವಂತ ರಾಜಕೀಯ ಚಳವಳಿಆರಂಭಿಸಿರುವ ಅಣ್ಣಾಮಲೈ ಹೇಳಿದರು. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವೂ ಹೋರಾಟ ನಡೆಸುವ ಹಕ್ಕನ್ನು ಹೊಂದಿದೆ ಎಂಬುದನ್ನು ಅವರು ಒತ್ತಿಹೇಳಿದರು.
ಪೊಲೀಸರ ಕ್ರಮಕ್ಕೆ ಅಣ್ಣಾಮಲೈ ಆಕ್ಷೇಪ
ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ತಮ್ಮ ನೇರ ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅಕ್ಟೋಬರ್ 10ರಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಡೆಸಿದ ಪ್ರತಿಭಟನೆಯ ವೇಳೆ ಪೊಲೀಸರು ಕೈಗೊಂಡ ಕ್ರಮವನ್ನು ಅವರು ಟೀಕಿಸಿದ್ದರು. ಈ ಹೇಳಿಕೆ ಬಿಜೆಪಿ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಸಿಜೆಪಿ ಪ್ರತಿಭಟನಾಕಾರರು ಯಾವುದೇ ತಪ್ಪು ಮಾಡಿದ್ದರೆ, ಅಧಿಕಾರಿಗಳು ಕಾನೂನು ಮತ್ತು ನಿಗದಿತ ಪ್ರಕ್ರಿಯೆಯಂತೆ ಕ್ರಮ ಕೈಗೊಳ್ಳಬೇಕು. ಅದರ ಬದಲು ಪ್ರತೀಕಾರದ ಮನೋಭಾವದಿಂದ ವರ್ತಿಸಬಾರದು ಎಂದು ಅಣ್ಣಾಮಲೈ ಅಭಿಪ್ರಾಯಪಟ್ಟರು. “ಬಂಧನಗಳನ್ನು ಕಾನೂನು ಮತ್ತು ಸೂಕ್ತ ಪ್ರಕ್ರಿಯೆಗೆ ಅನುಗುಣವಾಗಿಯೇ ನಡೆಸಬೇಕು ಎಂಬುದು ನಮ್ಮ ನಿಲುವು” ಎಂದು ಅವರು ಸ್ಪಷ್ಟಪಡಿಸಿದರು.
“ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆ ಇದ್ದರೆ, ನಿಮ್ಮ ಬಳಿ ಗುಪ್ತಚರ ಇಲಾಖೆ (ಐಬಿ), ರಾ ಸೇರಿದಂತೆ ಹಲವು ಸಂಸ್ಥೆಗಳಿವೆ. ಅವುಗಳನ್ನು ಬಳಸಿ, ತಪ್ಪಿತಸ್ಥರನ್ನು ಬಂಧಿಸಿ ಜೈಲಿಗೆ ಕಳುಹಿಸಿ. ಆದರೆ, ಎಕ್ಸ್‌ ನಲ್ಲಿ ಕೃತಕ ಭೀತಿಯನ್ನು ಸೃಷ್ಟಿಸಬೇಡಿ” ಎಂದು ಅಣ್ಣಾಮಲೈ ಹೇಳಿದರು.
ಆದರೆ, ಇದೇ ವೇಳೆ ಚುನಾವಣಾ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿಸುವುದನ್ನೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಉತ್ತಮ ಕೆಲಸ ಮಾಡುತ್ತಿದ್ದಾರೆ; ತಪ್ಪು ಕಂಡರೆ ಪ್ರಶ್ನಿಸುತ್ತೇವೆ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಅಣ್ಣಾಮಲೈ ಶ್ಲಾಘಿಸಿದರು. ಆದರೆ, ಪ್ರಧಾನಿಯನ್ನು ಬೆಂಬಲಿಸುವುದೆಂದರೆ ಅವರ ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುವುದು ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದರು.
“ಮೋದಿ ಒಳ್ಳೆಯ ಪ್ರಧಾನಿಯಾಗಿದ್ದು, ಉತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರಧಾನಿಯನ್ನು ಬೆಂಬಲಿಸುತ್ತಿದ್ದರೂ ನಮಗೆ ತಪ್ಪು ಎಂದು ಅನಿಸುವ ಯಾವುದೇ ವಿಷಯವನ್ನು ಪ್ರಶ್ನಿಸಲು ನಾವು ಹಿಂಜರಿಯುವುದಿಲ್ಲ” ಎಂದು ಹೇಳಿದರು.
ಈ ಹೇಳಿಕೆಯ ಮೂಲಕ ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದ ಅವರು, ಸರ್ಕಾರದ ಕ್ರಮಗಳ ಬಗ್ಗೆ ವಿಮರ್ಶಾತ್ಮಕ ನಿಲುವು ತಳೆಯುವ ತಮ್ಮ ಹಕ್ಕನ್ನೂ ಪ್ರತಿಪಾದಿಸಿದರು.
ಅಣ್ಣಾಮಲೈ-ಬಿಜೆಪಿ ನಡುವೆ ಮಾತಿನ ಸಮರ ತೀವ್ರ
ಅಣ್ಣಾಮಲೈ ಅವರ ಹೇಳಿಕೆಗಳು ಅವರು ಹಿಂದೆ ಪ್ರತಿನಿಧಿಸಿದ್ದ ಬಿಜೆಪಿಯೊಂದಿಗಿನ ಮಾತಿನ ಸಮರ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಹೊರಬಿದ್ದಿವೆ.
ಈ ವಾರದ ಆರಂಭದಲ್ಲಿ ಮಾತನಾಡಿದ್ದ ಅವರು, ಸಿಜೆಪಿ ಅನುಸರಿಸುತ್ತಿರುವ ಪ್ರತಿಭಟನಾ ವಿಧಾನವನ್ನು ಒಪ್ಪುವುದಿಲ್ಲ ಎಂದು ಹೇಳಿದ್ದರು. ಆ ಸಂಘಟನೆಯ ಕ್ರಮಗಳನ್ನು ‘ದಾರಿತಪ್ಪಿದ ವಿಧಾನ’ ಎಂದು ಬಣ್ಣಿಸಿದ್ದರು. ಸರ್ಕಾರವನ್ನು ವಿರೋಧಿಸುವ ಅದರ ಹಕ್ಕನ್ನು ಸಮರ್ಥಿಸಿಕೊಂಡಿದ್ದರು. ಸಿಜೆಪಿ ನಾಯಕರಾದ ಸೌರವ ದಾಸ್ ಮತ್ತು ಆಶುತೋಷ ರಾಂಕಾ ಅವರನ್ನು ವಶಕ್ಕೆ ಪಡೆದಿದ್ದನ್ನೂ ಖಂಡಿಸಿದ್ದ ಅವರು, ಪ್ರಕರಣವನ್ನು ದೆಹಲಿ ಪೊಲೀಸರು ನಿರ್ವಹಿಸಿದ ರೀತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.
ಈ ಸಂದರ್ಭದಲ್ಲಿ 2011ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನೂ ಅಣ್ಣಾಮಲೈ ಉಲ್ಲೇಖಿಸಿದ್ದರು.
ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕೈಗೊಂಡ ಕ್ರಮದ ಸಂದರ್ಭದಲ್ಲಿ, ತಾವು ದೆಹಲಿಗೆ ತೆರಳಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೆ ಎಂದು ಮೋದಿ ಹೇಳಿದ್ದಾಗಿ ಅಣ್ಣಾಮಲೈ ನೆನಪಿಸಿಕೊಂಡರು.
ಆ ಸಂದರ್ಭದಲ್ಲಿ ಮೋದಿ ಪ್ರತಿಭಟನಾಕಾರರ ಪರವಾಗಿ ಧ್ವನಿ ಎತ್ತಿದ್ದು ಸರಿಯಾಗಿತ್ತು ಎಂದ ಅವರು, ಈಗಿನ ಸರ್ಕಾರದ ಕ್ರಮಗಳ ಬಗ್ಗೆ ಇದೇ ರೀತಿಯ ಪ್ರಶ್ನೆಗಳನ್ನು ಎತ್ತಿದಾಗ ಪ್ರತಿಭಟನಾಕಾರರನ್ನು ಬಂಧಿಸುವುದು ಮತ್ತು ವಶಕ್ಕೆ ಪಡೆಯುವುದು ಏಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ಸಿಜೆಪಿಗೆ ಬಿಜೆಪಿ ಉಚಿತ ಪ್ರಚಾರ ನೀಡುತ್ತಿದೆಯೇ?
ಬಿಜೆಪಿಯ ವಿರುದ್ಧ ಮತ್ತಷ್ಟು ಟೀಕಾಪ್ರಹಾರ ನಡೆಸಿದ ಅಣ್ಣಾಮಲೈ, ಸಿಜೆಪಿಯ ರಾಷ್ಟ್ರೀಯ ಮಟ್ಟದ ಪ್ರಚಾರಕ್ಕೆ ಬಿಜೆಪಿ ಪರೋಕ್ಷವಾಗಿ ನೆರವಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ದೆಹಲಿಯ ರಾಮಲೀಲಾ ಕಾರ್ಯಕ್ರಮವೊಂದರಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ಕಾಕ್ರೋಚ್‌ನ ಪ್ರತಿಕೃತಿಯನ್ನು ಸುಡಲಾಗಿದ್ದ ಘಟನೆಯನ್ನು ಅವರು ಉಲ್ಲೇಖಿಸಿದರು. ಈ ಕಾರ್ಯಕ್ರಮವನ್ನು ಬಿಜೆಪಿ ಶಾಸಕ ಅಶೋಕ ಗೋಯಲ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
“ಬಿಜೆಪಿ ಸಿಜೆಪಿಯನ್ನು ವಿರೋಧಿಸುತ್ತಿದೆಯೇ ಅಥವಾ ಅದಕ್ಕೆ ಉಚಿತ ಪ್ರಚಾರ ನೀಡುತ್ತಿದೆಯೇ?” ಎಂದು ಅಣ್ಣಾಮಲೈ ಪ್ರಶ್ನಿಸಿದರು. ಅಧಿಕಾರದಲ್ಲಿದ್ದು 12 ವರ್ಷಗಳಾಗಿದ್ದರೂ ಬಿಜೆಪಿ ತನ್ನದೇ ಆದ ವಿರೋಧಿಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದೂ ಅವರು ಆರೋಪಿಸಿದರು.
ಅಣ್ಣಾಮಲೈ ಹೇಳಿಕೆಗೆ ಬಿಜೆಪಿ ವಕ್ತಾರ ತಿರುಗೇಟು
ಅಣ್ಣಾಮಲೈ ಅವರ ಹೇಳಿಕೆಗಳಿಗೆ ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಣ್ಣಾಮಲೈ ಅವರ ಪ್ರಶ್ನೆಗಳು ಶಾಂತಿಯುತ ಪ್ರತಿಭಟನೆ ಮತ್ತು ಉದ್ದೇಶಪೂರ್ವಕ ಕಾನೂನು ಉಲ್ಲಂಘನೆಯ ನಡುವಿನ ವ್ಯತ್ಯಾಸವನ್ನು ಮಸುಕಾಗಿಸುತ್ತವೆ ಎಂದು ಅವರು ಟೀಕಿಸಿದ್ದಾರೆ.
“ಅಣ್ಣಾಮಲೈ ಅವರು ಜೂನ್ 2026ರಲ್ಲಿ ಬಿಜೆಪಿಯನ್ನು ತೊರೆದಿದ್ದಾರೆ. ಈಗ ಪಕ್ಷವನ್ನು ಟೀಕಿಸುವ ಸ್ವಾತಂತ್ರ್ಯ ಅವರಿಗೆ ಇದೆ” ಎಂದು ನಾರಾಯಣನ್ ತಿರುಪತಿ ಹೇಳಿದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement