ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ಎಇಇ 40 ದಿನಗಳ ನಂತರ ಮುಂಬೈನಲ್ಲಿ ಪತ್ತೆ

ಗದಗ: ಸರ್ಕಾರದಿಂದ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆಯಾಗದೇ ಎದುರಾದ ಆರ್ಥಿಕ ಒತ್ತಡ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ನೊಂದಿದ್ದಾಗಿ ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRIDL) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಪರ್ವೇಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 13ರಂದು ಗದಗದಿಂದ ಬೆಂಗಳೂರಿಗೆ ತೆರಳಿದ್ದ ಪರ್ವೇಜ್ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು. ಈ ಪ್ರಕರಣ ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಅಧಿಕಾರಿಯ ಪತ್ತೆಗಾಗಿ ಗದಗ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ನಿರಂತರ ಶೋಧ ಕಾರ್ಯ ಕೈಗೊಂಡಿದ್ದರು.

ಪರ್ವೇಜ್ ಅವರು ನಾಪತ್ತೆಯಾಗುವ ಮೊದಲು ಅನುದಾನ ಬಿಡುಗಡೆಯಾಗದ್ದರಿಂದ ತಮಗೆ ಎದುರಾಗಿದ್ದ ಒತ್ತಡದ ಕುರಿತು ಪತ್ರ ಬರೆದಿಟ್ಟಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ನಾಪತ್ತೆ ಪ್ರಕರಣ ಮಹತ್ವ ಪಡೆಯಿತು. ಪೊಲೀಸರು, ಹಲವಾರು ಸುಳಿವುಗಳನ್ನು ಆಧರಿಸಿ ತನಿಖೆ ಮುಂದುವರೆಸಿದ್ದರು.
ಪೊಲೀಸರು ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ಮೀರಜ್ ಸೇರಿದಂತೆ ಹಲವು ನಗರಗಳಲ್ಲಿ ಹುಡುಕಾಟ ನಡೆಸಿದ್ದರು. ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಗಳು, ಮೊಬೈಲ್‌ ಸಂಬಂಧಿತ ತಾಂತ್ರಿಕ ಮಾಹಿತಿ ಹಾಗೂ ಇತರ ಸುಳಿವುಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿತ್ತು.
ಆದರೂ ಪೊಲೀಸರಿಗೆ ಪರ್ವೇಜ್ ಅವರು ಪತ್ತೆಯಾಗದೇ ಈ ಪ್ರಕರಣ ಸವಾಲಾಗಿ ಪರಿಣಮಿಸಿತ್ತು. ಇದೀಗ ಮುಂಬೈನಲ್ಲಿ ಅವರು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಮುಂಬೈನಲ್ಲಿ ಪತ್ತೆಯಾಗಿರುವ ಪರ್ವೇಜ್ ಅವರನ್ನು ಗದಗಕ್ಕೆ ಕರೆತರಲು ಪೊಲೀಸರು ಮುಂದಾಗಿದ್ದು, ಅವರನ್ನು ಶುಕ್ರವಾರ ಗದಗಕ್ಕೆ ಕರೆತರುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement