ನ್ಯಾಯಾಧೀಶರ ಅಪ್ರಾಪ್ತ ಪುತ್ರ ಚಲಾಯಿಸುತ್ತಿದ್ದ ಕಾರು ಡಿಕ್ಕಿ : ಸ್ಕೂಟರ್‌ ಸವಾರ ಸಾವು

ಕೊಚ್ಚಿ: ಕೇರಳದ ನ್ಯಾಯಾಧೀಶರೊಬ್ಬರ 17 ವರ್ಷದ ಪುತ್ರ ಚಲಾಯಿಸುತ್ತಿದ್ದ ಮರ್ಸಿಡಿಸ್‌ ಬೆಂಜ್‌ ಕಾರು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಕೊಚ್ಚಿಯಲ್ಲಿ ಸಂಭವಿಸಿದೆ  ಎಂದು ವರದಿಯಾಗಿದೆ.

ಅಪಘಾತಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಠಾಣೆಯಲ್ಲೇ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ತನಿಖೆಯ ಭಾಗವಾಗಿ ಬಾಲಕನನ್ನು ಮತ್ತೊಮ್ಮೆ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ತಂದೆ ನ್ಯಾಯಾಲಯವೊಂದರಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಪ್ರಾಪ್ತನಿಗೆ ಚಾಲನಾ ಪರವಾನಗಿ ಇಲ್ಲದಿದ್ದರೂ ಕಾರು ಚಲಾಯಿಸಿದ್ದಾನೆ.
ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಪೋಷಕರಿಗೆ ತಿಳಿಸದೆ ಕಾರನ್ನು ತೆಗೆದುಕೊಂಡು ಹೋಗಿದ್ದಾಗಿ ಅಪ್ರಾಪ್ತ ತಿಳಿಸಿದ್ದಾನೆ. ಕಾರು ಚಾಲನೆ ಮಾಡುವ ಆಸೆಯಿಂದ ಅದನ್ನು ತೆಗೆದುಕೊಂಡು ಹೋಗಿದ್ದೆ ಎಂದು ಹೇಳಿದ್ದಾನೆ. ಅಪಘಾತದ ಸಮಯದಲ್ಲಿ ಭಾರಿ ಮಳೆಯಾಗುತ್ತಿತ್ತು ಮತ್ತು ಸ್ಕೂಟರ್‌ ಏಕಾಏಕಿ ದಿಕ್ಕು ಬದಲಿಸಿತು ಎಂದೂ ಆತ ಹೇಳಿಕೊಂಡಿದ್ದಾನೆ.
ಭಾನುವಾರ ನಸುಕಿನ ಸುಮಾರು 2:20ರ ವೇಳೆಗೆ ಕೊಚ್ಚಿಯ ಚೇರಾನಲ್ಲೂರು ಪ್ರದೇಶದ ಕಂಟೇನರ್‌ ರಸ್ತೆಯ ಮರಪರಂಬುವಿನಲ್ಲಿರುವ ಫೋರ್ಡ್‌ ಕಾರು ಶೋರೂಂ ಸಮೀಪ ಅಪಘಾತ ಸಂಭವಿಸಿದೆ.
ಮೃತರನ್ನು ಮಂಜಲಿ ಪ್ರದೇಶದ ನಿವಾಸಿ ಜಯಬಾಲಕೃಷ್ಣನ್‌ ಎಂದು ಗುರುತಿಸಲಾಗಿದೆ. ಅವರು ರಸ್ತೆಯ ಬದಿಯಲ್ಲಿ ಸಣ್ಣ ಆಹಾರ ಮಳಿಗೆ ನಡೆಸುತ್ತಿದ್ದರು. ಮಳಿಗೆಯನ್ನು ಮುಚ್ಚಿ ಮನೆಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಲ್ಲಾರ್ಪಾಡಂನಿಂದ ಕಲಮಶ್ಶೇರಿಯ ಕಡೆಗೆ ಎರಡೂ ವಾಹನಗಳು ಸಂಚರಿಸುತ್ತಿದ್ದವು. ಈ ವೇಳೆ ಮರ್ಸಿಡಿಸ್‌ ಬೆಂಜ್‌ ಕಾರು ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ತೀವ್ರತೆಗೆ ಸ್ಕೂಟರ್‌ ಸಂಪೂರ್ಣವಾಗಿ ಜಖಂಗೊಂಡಿದೆ. ಸ್ಥಳೀಯರು ತಕ್ಷಣ ಧಾವಿಸಿ ಜಯಬಾಲಕೃಷ್ಣನ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರಾದರೂ, ಅಷ್ಟರಲ್ಲೇ ಅವರು ಅಪಘಾತದ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತ ಜಯಬಾಲಕೃಷ್ಣನ್‌ ಅವರಿಗೆ ಮೂವರು ಮಕ್ಕಳಿದ್ದಾರೆ.
ಎರಡು ಬಿಎನ್‌ಎಸ್‌ ಸೆಕ್ಷನ್‌ಗಳಡಿ ಎಫ್‌ಐಆರ್‌
ಅಪಘಾತಕ್ಕೆ ಸಂಬಂಧಿಸಿದಂತೆ ಚೇರಾನಲ್ಲೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌)ಯ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಅಜಾಗರೂಕ ಹಾಗೂ ನಿರ್ಲಕ್ಷ್ಯದ ಚಾಲನೆಗೆ ಸಂಬಂಧಿಸಿದ ಸೆಕ್ಷನ್‌ 281 ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿರುವುದಕ್ಕೆ ಸಂಬಂಧಿಸಿದ ಸೆಕ್ಷನ್‌ 106(1)ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೋಟಾರು ವಾಹನ ಇಲಾಖೆ, ಪೊಲೀಸರು ಹಾಗೂ ವಿಧಿವಿಜ್ಞಾನ ತಜ್ಞರ ತಂಡಗಳು ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಅಪಘಾತದ ನಿಖರ ಸ್ವರೂಪವನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ಲಭ್ಯವಿರುವ ಇತರ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   'ಮೋದಿ ಕಾ ಬಾಪ್ ಭೀ ಜಾಯೇಗಾ': ಪಾಟ್ನಾ ಕಾರ್ಯಕ್ರಮದಲ್ಲಿ ಖರ್ಗೆ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement