ಈತನ ಮೇಲಿದೆ 38 ಜನರನ್ನು ಕೊಂದು ತಿಂದ ಆರೋಪ ; ಕೊನೆಗೂ ಸಿಕ್ಕಿಬಿದ್ದ ಸರಣಿ ಹಂತಕ !

ಕಳೆದ 15 ವರ್ಷಗಳಲ್ಲಿ 38 ಮಂದಿಯನ್ನು ಕೊಂದು, ಅವರ ದೇಹವನ್ನು ತಿಂದಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಉಗಾಂಡದ ಭದ್ರತಾ ಪಡೆಗಳು ಬಂಧಿಸಿವೆ. ಮುಜುರಿಜಿ ಮೋಸೆಸ್ (Mujurizi Moses) ಎಂಬಾತ 2010ರಿಂದ 2025ರ ಅವಧಿಯಲ್ಲಿ ಮಸಾಕಾ, ಇಬಾಂಡಾ ಮತ್ತು ಕಾಜೊ ಜಿಲ್ಲೆಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಉಗಾಂಡದ ಸೇನಾ ಮುಖ್ಯಸ್ಥ ಜನರಲ್ ಮುಹೂಜಿ ಕೈನೆರುಗಾಬಾ ಸೋಮವಾರ ಸಂಜೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಂಧನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮೋಸೆಸ್‌ನನ್ನು ಉಗಾಂಡದ ಇತಿಹಾಸದಲ್ಲೇ ಅತ್ಯಂತ ಭೀಕರ ಸರಣಿ ಹಂತಕ ಹಾಗೂ ನರಭಕ್ಷಕ ಎಂದು ಬಣ್ಣಿಸಿರುವ ಜನರಲ್ ಕೈನೆರುಗಾಬಾ, ಆತನ ವಿರುದ್ಧ ಸಾರ್ವಜನಿಕವಾಗಿ ವಿಚಾರಣೆ ನಡೆಸಲಾಗುವುದು ಮತ್ತು ಮರಣದಂಡನೆ ವಿಧಿಸಲಾಗುವುದು ಎಂದು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ದುಷ್ಟ ಮುಜುರಿಜಿ ಮೋಸೆಸ್‌ನನ್ನು ಭದ್ರತಾ ಪಡೆಗಳು ಬಂಧಿಸಿರುವುದನ್ನು ನಮ್ಮ ನಾಗರಿಕರಿಗೆ ತಿಳಿಸಲು ನನಗೆ ಸಂತೋಷವಾಗುತ್ತಿದೆ. ಉಗಾಂಡದ ಇತಿಹಾಸದಲ್ಲೇ ಅತ್ಯಂತ ಭೀಕರ ಸರಣಿ ಹಂತಕ ಹಾಗೂ ನರಭಕ್ಷಕನಾಗಿರುವ ಈತ, 2010ರಿಂದ 2025ರ ನಡುವೆ ಮಸಾಕಾ, ಇಬಾಂಡಾ ಮತ್ತು ಕಾಜೊ ಜಿಲ್ಲೆಗಳಲ್ಲಿ 38 ಮಂದಿಯನ್ನು ಕೊಂದು ತಿಂದಿದ್ದಾನೆ. ಆತನನ್ನು ಸಾರ್ವಜನಿಕವಾಗಿ ವಿಚಾರಣೆಗೆ ಒಳಪಡಿಸಿ, ಖಂಡಿತವಾಗಿಯೂ ಮರಣದಂಡನೆ ವಿಧಿಸುತ್ತೇವೆ” ಎಂದು ಅವರು ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಬಟ್ಟೆಯಲ್ಲೇ ಟಚ್‌ಸ್ಕ್ರೀನ್‌ : ಬೆರಳಿನಿಂದ ಅಂಗಿಯ ತೋಳು ಮುಟ್ಟಿದ್ರೆ ಸಾಕು, ಅದು ಮೊಬೈಲ್‌ನಂತೆ ಕೆಲಸ ಮಾಡುತ್ತದೆ...!

ಮನೆಗಳಿಗೆ ನುಗ್ಗಿ ಕುಟುಂಬಗಳನ್ನೇ ಹತ್ಯೆ ಮಾಡಿದ ಆರೋಪ
ತನಿಖಾಧಿಕಾರಿಗಳ ಪ್ರಕಾರ, ಮೋಸೆಸ್ ಹಲವು ವರ್ಷಗಳಿಂದ ಸರಣಿ ಹತ್ಯೆಗಳನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಆತ ಇಡೀ ಕುಟುಂಬಗಳನ್ನೇ ಗುರಿಯಾಗಿಸಿಕೊಂಡು, ಮನೆಗಳಿಗೆ ನುಗ್ಗಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡುತ್ತಿದ್ದ ಎನ್ನಲಾಗಿದೆ.
ಈ ಪ್ರಕರಣಗಳ ಪೈಕಿ ಅತ್ಯಂತ ಭೀಕರ ಘಟನೆ ಪೆಂಟೆಕೋಸ್ತ್ ಪಂಗಡದ ಧರ್ಮಗುರು ಸ್ಟೀವನ್ ಮುಗಾಂಬೆ ಅವರ ಮನೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಮೋಸೆಸ್‌ ಜೊತೆ ಶಾಮೀಲಾಗಿದ್ದರೆನ್ನಲಾದ ಇತರ ಆರೋಪಿಗಳು ಮನೆಗೆ ನುಗ್ಗಿ, ಅಲ್ಲಿದ್ದ ಎಲ್ಲರನ್ನೂ ಮಾರಕ ಆಯುಧಗಳಿಂದ ಕಡಿದು ಕೊಂದಿದ್ದಾರೆ ಎಂದು ‘ಮೆಟ್ರೋ’ ವರದಿ ಮಾಡಿದೆ.
ಇನ್ನು ಕೆಲವು ಪ್ರಕರಣಗಳಲ್ಲಿ, ಆಮಿಷವೊಡ್ಡಿ ವ್ಯಕ್ತಿಗಳನ್ನು ತನ್ನ ಬಳಿಗೆ ಕರೆಸಿಕೊಂಡು ಬಳಿಕ ಹತ್ಯೆ ಮಾಡುತ್ತಿದ್ದ ಎಂಬ ಆರೋಪವೂ ಮೋಸೆಸ್ ಮೇಲಿದೆ.
ಮೋಸೆಸ್‌ನನ್ನು ಈ ಹಿಂದೆಯೂ ಹಲವು ಬಾರಿ ಬಂಧಿಸಲಾಗಿತ್ತು ಎನ್ನಲಾಗಿದೆ. ಆದರೆ, ಆತ ಬಂಧನದಿಂದ ತಪ್ಪಿಸಿಕೊಂಡಿದ್ದ ಅಥವಾ ವಿವಾದಾತ್ಮಕ ಸಂದರ್ಭಗಳಲ್ಲಿ ಬಿಡುಗಡೆಗೊಂಡಿದ್ದ ಎಂದು ವರದಿಗಳು ತಿಳಿಸಿವೆ.

ನಿವಾಸದಲ್ಲಿ ಸಾಕ್ಷ್ಯಗಳ ಪತ್ತೆ; ಹಳೆಯ ಪ್ರಕರಣಗಳ ಪರಿಶೀಲನೆ
ಮೋಸೆಸ್ ಬಂಧನದ ಬಳಿಕ ಅಧಿಕಾರಿಗಳು ಆತನ ನಿವಾಸದಲ್ಲಿ ಕೆಲವು ಭೌತಿಕ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಸಾಕ್ಷ್ಯಗಳು ಪ್ರಕರಣಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದರ ಜತೆಗೆ, ಆ ಪ್ರದೇಶದಲ್ಲಿ ಈ ಹಿಂದೆ ವರದಿಯಾಗಿದ್ದ ನಾಪತ್ತೆ ಪ್ರಕರಣಗಳು ಹಾಗೂ ಬಗೆಹರಿಯದ ಕೊಲೆ ಪ್ರಕರಣಗಳ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣಗಳಿಗೂ ಮೋಸೆಸ್‌ನ ಮೇಲೆ ಕೇಳಿಬಂದಿರುವ ಆರೋಪಗಳಿಗೂ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಉದ್ದೇಶವಾಗಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ ನಡೆದಿವೆ ಎನ್ನಲಾದ ಸರಣಿ ಹತ್ಯೆಗಳ ಆರೋಪ ಈ ಬಂಧನದ ಮೂಲಕ ಮತ್ತೆ ಗಮನ ಸೆಳೆದಿದೆ. ಪ್ರಕರಣದ ತನಿಖೆ, ಸಂಗ್ರಹಿಸಿರುವ ಸಾಕ್ಷ್ಯಗಳು ಹಾಗೂ ಇತರ ಸಂಭಾವ್ಯ ಪ್ರಕರಣಗಳ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಪ್ರಮುಖ ಸುದ್ದಿ :-   60 ಸಾವಿರ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಪ್ಯಾಕೇಜ್‌ ಘೋಷಿಸಿದ ಮೈಕ್ರೋಸಾಫ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement