ಲ್ಯಾಪ್‌ಟಾಪ್‌ ಲಾಗ್‌ಔಟ್‌, ಐಡಿ ನಿಷ್ಕ್ರಿಯ : ಇನ್ನೊಡಾಟಾ ಕಂಪನಿಯಿಂದ ಭಾರತದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳು ವಜಾ

ನವದೆಹಲಿ: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ (AI) ಸೇವಾ ಕಂಪನಿ ಇನ್ನೊಡಾಟಾ (Innodata) ಭಾರತದಲ್ಲಿ 500ಕ್ಕೂ ಹೆಚ್ಚು ಉದ್ಯೋಗಿಗಳನ್ನು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ವಜಾಗೊಳಿಸಿದೆ ಎಂದು ವರದಿಯಾಗಿದೆ. ಈ ಉದ್ಯೋಗ ಕಡಿತದ ಪರಿಣಾಮ ಫಿಲಿಪ್ಪೀನ್ಸ್‌ನಲ್ಲಿರುವ ಉದ್ಯೋಗಿಗಳ ಮೇಲೂ ಬೀರಿದೆ ಎಂದು ಹೇಳಲಾಗಿದೆ. ಅಕ್ಟೋಬರ್ 26ರಂದು ಈ ಬೆಳವಣಿಗೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಾದ ಎಕ್ಸ್‌ (X) ಮತ್ತು ರೆಡ್ಡಿಟ್‌ (Reddit)ಗಳಲ್ಲಿ ಹರಿದಾಡುತ್ತಿರುವ ಹಲವು ಪೋಸ್ಟ್‌ಗಳು ಹಾಗೂ ವರದಿಗಳಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
ಎಕ್ಸ್‌ ಮತ್ತು ರೆಡ್ಡಿಟ್‌ (Reddit)ನಂತಹ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳಲ್ಲಿ ಪ್ರಸಾರವಾಗುವ ಹಲವಾರು ಖಾತೆಗಳು ಮತ್ತು ವರದಿಗಳ ಪ್ರಕಾರ, ಅಕ್ಟೋಬರ್ 26 ರಂದು ವಜಾಗೊಳಿಸಲಾಗಿದೆ. ಉದ್ಯೋಗಿಗಳು ಆರಂಭದಲ್ಲಿ ಎಂದಿನಂತೆ ಕಂಪನಿಯ ಸಿಸ್ಟಂಗೆ ಲಾಗಿನ್‌ ಆಗಿ ಹಾಜರಾತಿ ದಾಖಲಿಸಿ ಕೆಲಸ ಆರಂಭಿಸಿದ್ದರು. ಆದರೆ, ಕೆಲಸದ ಅವಧಿಯಲ್ಲೇ ಕೆಲವರು ತಮ್ಮ ಕಂಪನಿಯ ಲ್ಯಾಪ್‌ಟಾಪ್‌ಗಳು, ಅಧಿಕೃತ ಗುರುತಿನ ಚೀಟಿಗಳು ಹಾಗೂ ಆಂತರಿಕ ವ್ಯವಸ್ಥೆಗಳಿಗೆ ಪ್ರವೇಶಿಸುವ ಅನುಮತಿ(losing access)ಯನ್ನು ಕಳೆದುಕೊಳ್ಳಲಾರಂಭಿಸಿದರು. ಹಠಾತ್ತನೆ ಕಂಪನಿಯ ವ್ಯವಸ್ಥೆಗಳಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಉದ್ಯೋಗಿಗಳು ತಮ್ಮ ಉದ್ಯೋಗದ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಲು ಪರದಾಡಿದರು.

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಕೆಲವು ಉದ್ಯೋಗಿಗಳು ಕಂಪನಿಯ ಮಾನವ ಸಂಪನ್ಮೂಲ (ಎಚ್‌ಆರ್‌) ಪೋರ್ಟಲ್‌ ಪರಿಶೀಲಿಸಿದಾಗ, ಅಕ್ಟೋಬರ್ 26ರ ದಿನಾಂಕವನ್ನೇ ತಮ್ಮ ರಾಜೀನಾಮೆ ದಿನಾಂಕ ಹಾಗೂ ಕೊನೆಯ ಕೆಲಸದ ದಿನವೆಂದು ದಾಖಲಿಸಿರುವುದು ಕಂಡುಬಂದಿದೆ. ಬಳಿಕ ಉದ್ಯೋಗಿಗಳ ವೈಯಕ್ತಿಕ ಇ-ಮೇಲ್‌ ವಿಳಾಸಗಳಿಗೆ ಕೆಲಸದಿಂದ ವಜಾಗೊಳಿಸಿರುವ ಬಗ್ಗೆ ಅಧಿಕೃತ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವಜಾ ಪ್ರಕ್ರಿಯೆಗೆ ಸಂಬಂಧಿಸಿದ ಇ-ಮೇಲ್‌ಗಳ ಸ್ಕ್ರೀನ್‌ಶಾಟ್‌ಗಳು ಎಕ್ಸ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನೀಡಿರುವ ಕಾರಣವಾಗಿ ಕಂಪನಿಯ ವ್ಯವಹಾರಿಕ ಕೆಲಸಗಳ ಹಂಚಿಕೆಯಲ್ಲಿ ಇಳಿಕೆಯಾಗಿರುವುದನ್ನು ಉಲ್ಲೇಖಿಸಲಾಗಿದೆ. ಈ ನಿರ್ಧಾರವು ಉದ್ಯೋಗಿಗಳ ವೈಯಕ್ತಿಕ ಕಾರ್ಯಕ್ಷಮತೆಯನ್ನು ಆಧರಿಸಿಲ್ಲ; ಬದಲಾಗಿ ಕಂಪನಿಯ ಕಾರ್ಯಾಚರಣೆಯ ಅಗತ್ಯತೆಗಳಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗಿದೆ ಎಂದು ಇ-ಮೇಲ್‌ಗಳಲ್ಲಿ ತಿಳಿಸಲಾಗಿದೆ ಎನ್ನಲಾಗಿದೆ.
ಹಠಾತ್‌ ಉದ್ಯೋಗ ಕಳೆದುಕೊಂಡಿದ್ದರಿಂದ ತಮ್ಮ ವಜಾ ಪ್ರಕ್ರಿಯೆ ಹಾಗೂ ಮುಂದಿನ ಕ್ರಮಗಳ ಕುರಿತು ಸ್ಪಷ್ಟ ಮಾಹಿತಿ ಪಡೆಯಲು ಉದ್ಯೋಗಿಗಳು ಪರದಾಡುವಂತಾಗಿದೆ. ಅಲ್ಲದೆ, ಕಂಪನಿಯ ಸ್ವತ್ತುಗಳನ್ನು ಮರಳಿಸಿದ ಬಳಿಕವೇ ಉದ್ಯೋಗಿಗಳ ಅಂತಿಮ ಬಾಕಿ ಪಾವತಿ ಪ್ರಕ್ರಿಯೆ ನಡೆಸಲಾಗುವುದು ಎಂದು ವಜಾ ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   'ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿದೆ ಎಂದು ಊಹಿಸಿ?': ಬ್ಯಾಲೆಟ್‌ ಪೇಪರ್‌ನಲ್ಲಿ ನಡೆದ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸಾಧನೆ ಬಗ್ಗೆ ಮೋದಿ ಲೇವಡಿ

ಫಿಲಿಪ್ಪೀನ್ಸ್‌ನಲ್ಲೂ ಉದ್ಯೋಗ ಕಡಿತ
ಇನ್ನೊಡಾಟಾದ ಉದ್ಯೋಗ ಕಡಿತದ ಪರಿಣಾಮ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಫಿಲಿಪ್ಪೀನ್ಸ್‌ನಲ್ಲಿಯೂ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಅಲ್ಲಿ ರೇಟರ್‌ಗಳು (Raters), ಗುಣಮಟ್ಟ ಪರಿಶೀಲನಾ ತಜ್ಞರು (Quality Experts), ತಂಡದ ನಾಯಕರು (Team Leaders) ಹಾಗೂ ವ್ಯವಸ್ಥಾಪಕರು (Managers) ಸೇರಿದಂತೆ ವಿವಿಧ ಹುದ್ದೆಗಳಲ್ಲಿರುವ ಉದ್ಯೋಗಿಗಳಿಗೆ ವಜಾದ ಬಿಸಿ ತಟ್ಟಿದೆ ಎಂದು ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತ ಮತ್ತು ಫಿಲಿಪ್ಪೀನ್ಸ್‌ನಲ್ಲಿ ಒಟ್ಟಾರೆಯಾಗಿ ಎಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬುದನ್ನು ಇನ್ನೊಡಾಟಾ ಕಂಪನಿ ಈವರೆಗೆ ಸಾರ್ವಜನಿಕವಾಗಿ ಖಚಿತಪಡಿಸಿಲ್ಲ. ಹಾಗೆಯೇ, ವರದಿಯಾಗಿರುವ ಉದ್ಯೋಗ ಕಡಿತದ ಕುರಿತು ಯಾವುದೇ ಅಧಿಕೃತ ವಿವರಣೆಯನ್ನೂ ನೀಡಿಲ್ಲ.

ಇನ್ನೊಡಾಟಾ ಕಂಪನಿ ಏನು ಮಾಡುತ್ತದೆ?
ಅಮೆರಿಕದ ನ್ಯೂಜೆರ್ಸಿ ರಾಜ್ಯದ ರಿಡ್ಜ್‌ಫೀಲ್ಡ್‌ ಪಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇನ್ನೊಡಾಟಾ ಕಂಪನಿ ತಂತ್ರಜ್ಞಾನ ಕಂಪನಿಗಳಿಗೆ ದತ್ತಾಂಶ ಎಂಜಿನಿಯರಿಂಗ್‌ (Data Engineering) ಹಾಗೂ ಕೃತಕ ಬುದ್ಧಿಮತ್ತೆ ಸೇವೆಗಳನ್ನು ಒದಗಿಸುತ್ತದೆ. 1988ರಲ್ಲಿ ಸ್ಥಾಪನೆಯಾದ ಈ ಕಂಪನಿಯು ವಿವಿಧ ಸಂಸ್ಥೆಗಳು ಎಐ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಅವುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಅಗತ್ಯವಾದ ಸೇವೆಗಳನ್ನು ನೀಡುತ್ತದೆ.
ಡಾಟಾ ಲೇಬಲಿಂಗ್‌ (Data Labelling), ಎಐ ಮಾಡೆಲ್‌ ಟ್ರೇನಿಂಗ್‌ (Model Training), ಎಐ ವ್ಯವಸ್ಥೆಗಳ ಮೌಲ್ಯಮಾಪನ (AI Evaluation) ಮತ್ತು ಅವುಗಳ ಸುರಕ್ಷತೆಯನ್ನು ಪರೀಕ್ಷಿಸುವುದು (Safety Testing) ಕಂಪನಿಯ ಪ್ರಮುಖ ಕಾರ್ಯಗಳಲ್ಲಿ ಸೇರಿವೆ.
ಇನ್ನೊಡಾಟಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಗೂಗಲ್‌ (Google), ಮೈಕ್ರೋಸಾಫ್ಟ್‌ (Microsoft), ಅಮೆಜಾನ್‌ (Amazon), ಆ್ಯಪಲ್‌ (Apple), ಸೋನಿ (Sony), ಹೆವ್ಲೆಟ್‌ ಪ್ಯಾಕರ್ಡ್‌ (Hewlett-Packard), ಸ್ನೋಫ್ಲೇಕ್‌ (Snowflake), ಬೋಯಿಂಗ್‌ (Boeing) ಹಾಗೂ ಡೆಲಾಯ್ಟ್‌ (Deloitte) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ತನ್ನ ಗ್ರಾಹಕರ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಕಂಪನಿಯ 2025ರ ವಾರ್ಷಿಕ ವರದಿಯ ಪ್ರಕಾರ, 2025ರ ಡಿಸೆಂಬರ್‌ 31ರ ವೇಳೆಗೆ ವಿಶ್ವದಾದ್ಯಂತ ಇನ್ನೊಡಾಟಾದಲ್ಲಿ ಒಟ್ಟು 10,107 ಉದ್ಯೋಗಿಗಳಿದ್ದರು. ಇಂತಹ ಜಾಗತಿಕ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಯಲ್ಲಿ ಭಾರತ ಮತ್ತು ಫಿಲಿಪ್ಪೀನ್ಸ್‌ನಲ್ಲಿ ನೂರಾರು ಉದ್ಯೋಗಿಗಳು ಏಕಾಏಕಿ ಕೆಲಸ ಕಳೆದುಕೊಂಡಿರುವ ವರದಿಗಳು ಈಗ ಉದ್ಯೋಗ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

ಪ್ರಮುಖ ಸುದ್ದಿ :-   ಫ್ಲೈದುಬೈ ಕಾಕ್‌ಪಿಟ್‌ ದಾಳಿ : ಪೈಲಟ್‌ ಸ್ಮಿತ್ ಮಚ್ಚಾರ್‌ ಗಾಯದ ಚಿತ್ರಗಳು ಬಹಿರಂಗ ; ತಲೆ ಮೇಲಿನ ಹೊಲಿಗೆಗಳು ಗೋಚರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement