ವಿಡಿಯೋ | ಅಂಕೋಲಾ : ಹಾರವಾಡ ಕಡಲ ತೀರಕ್ಕೆ ಬಂದು ಬಿದ್ದ ರಾಶಿರಾಶಿ ತಾರ್ಲೆ ಮೀನುಗಳು ; ಮುಗಿಬಿದ್ದ ಜನರು

ಕಾರವಾರ:  ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗಾಬಿತವಾಡ ಕಡಲತೀರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಕಡಲತೀರದ ಉದ್ದಕ್ಕೂ ಅಪಾರ ಪ್ರಮಾಣದ ತಾರ್ಲೆ (ಆಯಿಲ್ ಸಾರ್ಡಿನ್‌) ಮೀನುಗಳು ರಾಶಿರಾಶಿಯಾಗಿ ದಡಕ್ಕೆ ಬಂದು ಬಿದ್ದಿದ್ದು, ಸ್ಥಳೀಯ ಗ್ರಾಮಸ್ಥರಿಗೆ ಅನಿರೀಕ್ಷಿತ ಮೀನುಗಳು ಸುಗ್ಗಿಯೇ ಬಂದಂತಾಗಿದೆ. ಸಾಮಾನ್ಯ ದಿನದಂತೆ ಕಡಲತೀರಕ್ಕೆ ಬಂದವರಿಗೆ ಮರಳಿನ ಮೇಲೆ ಬೆಳ್ಳಿಯಂತೆ ಹೊಳೆಯುತ್ತಿದ್ದ ಮೀನುಗಳ ರಾಶಿ ಕಂಡು ಅಚ್ಚರಿ ಮೂಡಿದೆ.
ಮುಂಜಾನೆ ಬೇಗ ಕಡಲತೀರಕ್ಕೆ ಬಂದವರು ಹಾಗೂ ಪ್ರತಿನಿತ್ಯ ಸಮುದ್ರ ತೀರಕ್ಕೆ ಭೇಟಿ ನೀಡುವ ಸ್ಥಳೀಯರು ಮೊದಲು ಈ ದೃಶ್ಯವನ್ನು ಗಮನಿಸಿದ್ದಾರೆ. ಬಳಿಕ ವಿಷಯ ಗ್ರಾಮದಲ್ಲಿ ಕ್ಷಣಾರ್ಧದಲ್ಲಿ ಹರಡಿದ್ದು, ನೋಡನೋಡುತ್ತಿದ್ದಂತೆಯೇ ಪುರುಷರು, ಮಹಿಳೆಯರು, ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಜನರು ಕಡಲತೀರಕ್ಕೆ ಧಾವಿಸಿದ್ದಾರೆ. ಕೈಗೆ ಸಿಕ್ಕ ಚೀಲ, ಬುಟ್ಟಿ ಹಾಗೂ ವಿವಿಧ ಪಾತ್ರೆಗಳಲ್ಲಿ ಮೀನುಗಳನ್ನು ತುಂಬಿಕೊಂಡು ಮನೆಗೆ ಕೊಂಡೊಯ್ಯುವ ದೃಶ್ಯ ಕಂಡುಬಂದಿದೆ.
ಸಾಮಾನ್ಯವಾಗಿ ಈ ಭಾಗದ ಜನರಿಗೆ ತಾಜಾ ಮೀನು ದೊರೆಯಬೇಕಾದರೆ ಸ್ಥಳೀಯ ಮೀನುಗಾರರು ದೋಣಿಗಳಲ್ಲಿ ಸಮುದ್ರಕ್ಕೆ ತೆರಳಿ ಬಲೆ ಬೀಸಬೇಕು. ಮೀನುಗಾರರ ಪರಿಶ್ರಮದ ಬಳಿಕವೇ ಮೀನು ಮನೆ ಸೇರುತ್ತದೆ. ಆದರೆ, ಯಾವುದೇ ಇಲ್ಲಿ ಯಾವುದೇ ಶ್ರಮವಿಲ್ಲದೆ ಅಪಾರ ಪ್ರಮಾಣದ ತಾರ್ಲೆ ಮೀನುಗಳು ಕಡಲತೀರದಲ್ಲಿ ಕಾಲ್ಬುಡದಲ್ಲೇ ದೊರೆತಿರುವುದು ಅಪರೂಪದ ಸಂಗತಿಯಾಗಿದ್ದು, ಎಲ್ಲರ ಗಮನ ಸೆಳೆದಿದೆ.
ಕರಾವಳಿ ಭಾಗದ ಜನರ ಆಹಾರ ಪದ್ಧತಿಯಲ್ಲಿ ತಾರ್ಲೆ ಮೀನು ಪ್ರಮುಖ ಸ್ಥಾನ ಪಡೆದಿದೆ. ವಿವಿಧ ಬಗೆಯ ಅಡುಗೆಗಳಿಗೆ ಇದನ್ನು ಬಳಸಲಾಗುತ್ತದೆ. ಹೀಗಾಗಿ ಅಡುಗೆಗೆ ಬೇಕಾದಷ್ಟು ತಾಜಾ ಮೀನು ತಾನಾಗಿಯೇ ದೊರೆತಿರುವುದು ಸ್ಥಳೀಯ ಕುಟುಂಬಗಳಲ್ಲಿ ಸಂತಸ ಮೂಡಿಸಿದೆ.
ಮೀನುಗಳು ದಡಕ್ಕೆ ಬಿದ್ದಿರುವ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ. ಕೆಲವರು ತಮಗೆ ಬೇಕಾದಷ್ಟು ಮೀನುಗಳನ್ನು ಸಂಗ್ರಹಿಸಿಕೊಂಡರೆ, ಇನ್ನು ಕೆಲವರು ಹೆಚ್ಚಿನ ಪ್ರಮಾಣದಲ್ಲಿ ಮೀನುಗಳನ್ನು ಸಂಗ್ರಹಿಸಿ ಅಕ್ಕಪಕ್ಕದ ಮನೆಯವರು, ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದಾರೆ.
ಸಮುದ್ರದಲ್ಲಿ ಬಲವಾದ ಉಬ್ಬರವಿಳಿತ, ನೀರಿನ ಪ್ರವಾಹದ ದಿಕ್ಕಿನಲ್ಲಿನ ಬದಲಾವಣೆ ಅಥವಾ ಕಡಲತೀರದ ಸಮೀಪ ನೀರಿನಲ್ಲಿ ಆಮ್ಲಜನಕದ ಪ್ರಮಾಣ ತಾತ್ಕಾಲಿಕವಾಗಿ ಕಡಿಮೆಯಾಗುವಂತಹ ನೈಸರ್ಗಿಕ ಕಾರಣಗಳಿಂದ ಕೆಲವೊಮ್ಮೆ ಈ ರೀತಿ ದೊಡ್ಡ ಪ್ರಮಾಣದಲ್ಲಿ ಮೀನುಗಳು ದಡ ಸೇರುವ ಸಾಧ್ಯತೆಗಳಿರುತ್ತವೆ. ಆದರೆ, ಹರವಾಡ ಗಾಬಿತವಾಡದಲ್ಲಿ ಇಷ್ಟೊಂದು ಪ್ರಮಾಣದ ತಾರ್ಲೆ ಮೀನುಗಳು ದಡಕ್ಕೆ ಬಂದಿರುವುದಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ಮಾಹಿತಿ ಇಲ್ಲ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement