ನವದೆಹಲಿ: ದೇಶದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದಾದ ಮಹಾದೇವ ಆ್ಯಪ್ ಪ್ರಕರಣದ ಪ್ರಮುಖ ಆರೋಪಿ ಹಾಗೂ ಅದರ ಪ್ರವರ್ತಕ ಸೌರಭ ಚಂದ್ರಕರ್ನನ್ನು ಒಮಾನ್ನಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಭಾನುವಾರ ತಿಳಿಸಿದೆ. ಸೋಮವಾರ ಛತ್ತೀಸ್ಗಢದ ರಾಯಪುರದಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಚಂದ್ರಕರ್ನನ್ನು ಹಾಜರುಪಡಿಸಲಾಗುವುದು ಎಂದು ಅದು ತಿಳಿಸಿದೆ.
ಈ ಬೆಳವಣಿಗೆಗೆ ಒಂದು ತಿಂಗಳಿಗೂ ಹೆಚ್ಚು ಸಮಯದ ಹಿಂದೆ ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಅಭಿಷೇಕಕುಮಾರನನ್ನು ಸಿಬಿಐ ಬಂಧಿಸಿತ್ತು. ದುಬೈನಿಂದ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆತನನ್ನು ಸೆಪ್ಟೆಂಬರ್ 24ರಂದು ಸಿಬಿಐ ವಶಕ್ಕೆ ಪಡೆದಿತ್ತು.
ಚಂದ್ರಕರ್ ವಿರುದ್ಧ ಈಗಾಗಲೇ ಆರೋಪಪಟ್ಟಿ ಸಲ್ಲಿಕೆಯಾಗಿರುವ ಎರಡು ಪ್ರಕರಣಗಳಲ್ಲಿ ಆತ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದ. ಅಲ್ಲದೆ, ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಆತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿತ್ತು. ವಿದೇಶಗಳಲ್ಲಿ ನೆಲೆಸಿಕೊಂಡು ಭಾರತದಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುವ ಹಾಗೂ ತನಿಖೆಯಿಂದ ತಪ್ಪಿಸಿಕೊಳ್ಳುವ ಆರೋಪಿಗಳನ್ನು ಕಾನೂನಿನ ಕಕ್ಷೆಗೆ ತರುವ ನಿಟ್ಟಿನಲ್ಲಿ ಚಂದ್ರಕರ್ನ ಹಸ್ತಾಂತರ ಮಹತ್ವದ ಮೈಲಿಗಲ್ಲು ಎಂದು ಸಿಬಿಐ ಬಣ್ಣಿಸಿದೆ.
ದೇಶದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದು
ಛತ್ತೀಸ್ಗಢ ಸರ್ಕಾರದ ಮನವಿಯ ಮೇರೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಮಹಾದೇವ ಆನ್ಲೈನ್ ಬುಕ್ ದೇಶದ ಅತಿದೊಡ್ಡ ಅಕ್ರಮ ಆನ್ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದಾಗಿತ್ತು ಎಂದು ತಿಳಿಸಿದೆ.
ಭಾರತದ ಹೊರಗಿನಿಂದ ಕಾರ್ಯನಿರ್ವಹಿಸುತ್ತಿದ್ದ ಈ ಜಾಲವು ಕ್ರಿಕೆಟ್, ಫುಟ್ಬಾಲ್, ಇಸ್ಪೀಟ್ ಸೇರಿದಂತೆ ವಿವಿಧ ಕಾರ್ಡ್ ಆಟಗಳು ಹಾಗೂ ಇತರ ಕ್ರೀಡೆ ಮತ್ತು ಕಾರ್ಯಕ್ರಮಗಳ ಮೇಲೆ ಅಕ್ರಮವಾಗಿ ಬೆಟ್ಟಿಂಗ್ ನಡೆಸುತ್ತಿತ್ತು. ಇದಕ್ಕಾಗಿ ದೇಶದ ವಿವಿಧೆಡೆ ಫ್ರಾಂಚೈಸಿ ಮಾದರಿಯಲ್ಲಿ ‘ಪ್ಯಾನೆಲ್’ ಮತ್ತು ‘ಶಾಖೆ’ಗಳನ್ನು ಸ್ಥಾಪಿಸಿತ್ತು. ಈ ಜಾಲದ ಮೂಲಕ ಗ್ರಾಹಕರನ್ನು ನೋಂದಾಯಿಸಿಕೊಂಡು, ಅವರಿಂದ ಬೆಟ್ಟಿಂಗ್ ಹಣವನ್ನು ಸಂಗ್ರಹಿಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ವಿವರಿಸಿದೆ.
ಅಕ್ರಮ ಬೆಟ್ಟಿಂಗ್ನಿಂದ ಸಂಗ್ರಹವಾಗುತ್ತಿದ್ದ ಹಣವನ್ನು ದೊಡ್ಡ ಪ್ರಮಾಣದಲ್ಲಿ ನಕಲಿ ಅಥವಾ ಇತರರ ಹೆಸರಿನ ಬ್ಯಾಂಕ್ ಖಾತೆಗಳ (ಮ್ಯೂಲ್ ಅಕೌಂಟ್) ಮೂಲಕ ವರ್ಗಾಯಿಸಲಾಗುತ್ತಿತ್ತು. ಬಳಿಕ ಹಲವು ಹಂತಗಳ ವಹಿವಾಟುಗಳ ಮೂಲಕ ಹಣದ ಮೂಲವನ್ನು ಮರೆಮಾಚಿ, ಹವಾಲಾ ಮಾರ್ಗಗಳ ಮೂಲಕ ವಿದೇಶಗಳಿಗೆ ಸಾಗಿಸಲಾಗುತ್ತಿತ್ತು ಎಂದು ಸಿಬಿಐ ಹೇಳಿದೆ.
ಅಲ್ಲದೆ, ಯಾವುದೇ ಅಡೆತಡೆಯಿಲ್ಲದೆ ಅಕ್ರಮ ಜಾಲವನ್ನು ಮುಂದುವರಿಸಲು ಸರ್ಕಾರಿ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ಹಣ ಪಾವತಿಸಲಾಗುತ್ತಿತ್ತು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಬಿಐ ತಿಳಿಸಿದೆ.
ಸಿಬಿಐನಿಂದ ಆರೋಪಪಟ್ಟಿ; ಇ.ಡಿ.ಯಿಂದ ಆಸ್ತಿ ಜಪ್ತಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಭ್ರಷ್ಟಾಚಾರ ತಡೆ ಕಾಯ್ದೆ-1988 ಹಾಗೂ ಭಾರತೀಯ ದಂಡ ಸಂಹಿತೆಯಡಿ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿಸುವ ಆರೋಪಗಳೊಂದಿಗೆ ಆರೋಪಪಟ್ಟಿಗಳನ್ನು ಸಲ್ಲಿಸಿದೆ. ಛತ್ತೀಸ್ಗಢ ಜೂಜಾಟ (ನಿಷೇಧ) ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿಯೂ ಕ್ರಮ ಕೈಗೊಂಡಿದೆ. ಮತ್ತೊಂದೆಡೆ, ಜಾರಿ ನಿರ್ದೇಶನಾಲಯವು ಭಾರತ ಮತ್ತು ವಿದೇಶಗಳಲ್ಲಿರುವ ಆರೋಪಿಗಳಿಗೆ ಸಂಬಂಧಿಸಿದ ಹಲವು ಆಸ್ತಿಗಳನ್ನು ಜಪ್ತಿ ಮಾಡಿದೆ.
ಚಂದ್ರಕರ್ನನ್ನು ಭಾರತಕ್ಕೆ ಹಸ್ತಾಂತರಿಸಿಕೊಂಡ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಿರುವ ಸಿಬಿಐ, ಆತನನ್ನು ಒಮಾನ್ನ ರಾಯಲ್ ಒಮಾನ್ ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು ಎಂದು ತಿಳಿಸಿದೆ. ಬಳಿಕ ಚಂದ್ರಕರ್ನನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ಒಮಾನ್ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಕೇಂದ್ರ ಸರ್ಕಾರ ಹಾಗೂ ಇಂಟರ್ಪೋಲ್ನ ರಾಷ್ಟ್ರೀಯ ಕೇಂದ್ರ ಕಚೇರಿಯ ಸಮನ್ವಯದೊಂದಿಗೆ ಹಸ್ತಾಂತರ ಪ್ರಕ್ರಿಯೆಯನ್ನು ಮುಂದುವರಿಸಲಾಗಿತ್ತು.
ಈ ಕಾರ್ಯಾಚರಣೆಗೆ ಸಹಕರಿಸಿದ ಒಮಾನ್ ಸರ್ಕಾರ ಮತ್ತು ರಾಯಲ್ ಒಮಾನ್ ಪೊಲೀಸರಿಗೆ ಸಿಬಿಐ ಕೃತಜ್ಞತೆ ಸಲ್ಲಿಸಿದೆ. ಉಭಯ ದೇಶಗಳ ನಡುವಿನ ನಿಕಟ ಮತ್ತು ಸ್ನೇಹಪರ ಸಂಬಂಧ ಹಾಗೂ ಗಡಿಯಾಚೆಗಿನ ಸಂಘಟಿತ ಅಪರಾಧಗಳನ್ನು ಹತ್ತಿಕ್ಕುವ ಎರಡೂ ದೇಶಗಳ ಬದ್ಧತೆಯನ್ನು ಈ ಸಹಕಾರ ಪ್ರತಿಬಿಂಬಿಸುತ್ತದೆ ಎಂದು ಸಿಬಿಐ ಹೇಳಿದೆ.
ಒಮಾನ್ನಿಂದ ಭಾರತಕ್ಕೆ ಕರೆತಂದ ಬಳಿಕ ಚಂದ್ರಕರ್ನನ್ನು ರಾಯಪುರಕ್ಕೆ ಕರೆದೊಯ್ಯಲು ಟ್ರಾನ್ಸಿಟ್ ರಿಮಾಂಡ್ (ಪ್ರಯಾಣದ ಅವಧಿಗೆ ನ್ಯಾಯಾಲಯದಿಂದ ಪಡೆಯುವ ತಾತ್ಕಾಲಿಕ ಬಂಧನ ಆದೇಶ) ಪಡೆದುಕೊಳ್ಳಲಾಗಿತ್ತು. ಅದರಂತೆ ಆತನನ್ನು ರಾಯಪುರಕ್ಕೆ ಕರೆತರಲಾಗಿದ್ದು, ಸೋಮವಾರ ಅಲ್ಲಿನ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಬಿಐ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ