ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಶಾಲಾ ತರಗತಿಗೆ ನುಗ್ಗಿ ವಿದ್ಯಾರ್ಥಿನಿಯರ ಮೇಲೆ ದಾಳಿ: ಪರಾರಿಯಾಗಲು ಯತ್ನಿಸಿದ ಆರೋಪಿಗೆ ಪೊಲೀಸರ ಗುಂಡೇಟು

ಅನಂತಪುರ : ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ  ಶಾಲೆಯ ತರಗತಿಯೊಳಗೆ ಇಬ್ಬರು 10ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಯಾಂತ್ರಿಕ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ ಆರೋಪಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಹೆಮಂತಗೆ ಪೊಲೀಸರು ಆರು ಸುತ್ತು ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಅನಂತಪುರದ ಜಿಲ್ಲಾ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಎಂಬಲ್ಲಿನ ಸರ್ಕಾರಿ ಶಾಲೆಯಲ್ಲಿ ಅಕ್ಟೋಬರ್ 31ರಂದು ಈ ಘಟನೆ ನಡೆದಿತ್ತು. ರಾಪ್ತಾಡು ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯಲ್ಲಿ ಪಾಠ ನಡೆಯುತ್ತಿದ್ದಾಗಲೇ ತರಗತಿಯ ಒಳಗೆ ನುಗ್ಗಿ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಹೇಮಂತ ಯಾಂತ್ರಿಕ ಗರಗಸ(chainsaw)ದಿಂದ ದಾಳಿ ನಡೆಸಿದ್ದ. ಘಟನೆ ಬಳಿಕ ಆರೋಪಿಯ ಪತ್ತೆಗಾಗಿ ಪೊಲೀಸರು ಹಲವು ವಿಶೇಷ ತಂಡಗಳನ್ನು ರಚಿಸಿದ್ದರು. ಆತ್ಮಕೂರು ಅರಣ್ಯ ಪ್ರದೇಶದಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಿಗೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ್ದರು.

ಈ ವೇಳೆ ಹೆಮಂತ್ ಪೊಲೀಸರ ಮೇಲೆಯೇ ದಾಳಿ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಆತ ಪರಾರಿಯಾಗುವುದನ್ನು ತಡೆಯಲು ಆರು ಸುತ್ತು ಗುಂಡು ಹಾರಿಸಲಾಗಿದೆ. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಹೇಮಂತನನ್ನು ಬಳಿಕ ಅನಂತಪುರದ ಜಿಲ್ಲಾ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ರಾಪ್ತಾಡು ಶಾಲೆಯ ವಿದ್ಯಾರ್ಥಿನಿಯರ ಮೇಲಿನ ದಾಳಿ ಪ್ರಕರಣದ ಆರೋಪಿ ಹೆಮಂತನನ್ನು ಆತ್ಮಕೂರು ಅರಣ್ಯ ಪ್ರದೇಶದಲ್ಲಿ ಬಂಧಿಸಲು ಹೋದ ಪೊಲೀಸರ ಮೇಲೆಯೇ ಆತ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ತಿಂಗಳಿಗೆ 10 ಸಾವಿರ ರೂ. ಸಂಬಳ ಪಡೆಯುವ ಯುವಕನ ಬ್ಯಾಂಕ್‌ ಖಾತೆಗೆ ₹10 ಸಾವಿರ ಕೋಟಿ ಜಮೆ !

ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ದಾಳಿ
ಹೇಮಂತ ವಿದ್ಯಾರ್ಥಿನಿಯೊಬ್ಬಳಿಗೆ ಮದುವೆಯಾಗುವಂತೆ ಪ್ರಸ್ತಾಪ ಮಾಡಿದ್ದ. ಆದರೆ ಆಕೆ ಅದನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡಿದ್ದ ಆರೋಪಿ, ಅಕ್ಟೋಬರ್ 31ರಂದು ರಾಪ್ತಾಡು ಜಿಲ್ಲಾ ಪಂಚಾಯಿತಿ ಪ್ರೌಢಶಾಲೆಯ ತರಗತಿಯೊಳಗೆ ನುಗ್ಗಿ ಆಕೆಯ ಮೇಲೆ ಗರಗಸದಿಂದ ಭೀಕರವಾಗಿ ಹಲ್ಲೆ ನಡೆಸಿದ್ದ. ಈ ದಾಳಿಯಲ್ಲಿ ವಿದ್ಯಾರ್ಥಿನಿ ತೀವ್ರವಾಗಿ ಗಾಯಗೊಂಡಿದ್ದಳು. ಈ ವೇಳೆ ತನ್ನ ಸಹಪಾಠಿಯನ್ನು ರಕ್ಷಿಸಲು ಮಧ್ಯಪ್ರವೇಶಿಸಿದ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆಯೂ ಆರೋಪಿ ಹಲ್ಲೆ ನಡೆಸಿದ್ದು, ಆಕೆ ಕೂಡ ಗಾಯಗೊಂಡಿದ್ದಳು.
ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ಬೆಂಗಳೂರಿಗೆ ಸ್ಥಳಾಂತರ
ದಾಳಿಯಲ್ಲಿ ಅತ್ಯಂತ ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆಕೆಯ ಬಲಗೈ ತುಂಡಾಗಿದ್ದು, ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ತಲೆಬುರುಡೆ ಹಾಗೂ ಪಕ್ಕೆಲುಬುಗಳಿಗೆ ಹಲವು ಮುರಿತಗಳಾಗಿದ್ದು, ರಕ್ತನಾಳಗಳಿಗೂ ಹಾನಿಯಾಗಿದೆ.

ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ ಯಾದವ್ ಈ ಕುರಿತು ಮಾಹಿತಿ ನೀಡಿದ್ದು, ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದ ಕಾರಣ ವೈದ್ಯರ ತಂಡದೊಂದಿಗೆ ಗ್ರೀನ್ ಚಾನೆಲ್ ವ್ಯವಸ್ಥೆ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಹಾದೇವ ಬೆಟ್ಟಿಂಗ್‌ ಆ್ಯಪ್‌ ಪ್ರಕರಣ: ಪ್ರಮುಖ ಆರೋಪಿ ಸೌರಭ ಚಂದ್ರಕರನನ್ನು ಭಾರತಕ್ಕೆ ಹಸ್ತಾಂತರಿಸಿದ ಒಮಾನ್‌

ವೈದ್ಯಕೀಯ ವರದಿಯಲ್ಲಿ ಗಂಭೀರ ಗಾಯಗಳ ಉಲ್ಲೇಖ
ಅನಂತಪುರ ಸರ್ಕಾರಿ ಜನರಲ್ ಆಸ್ಪತ್ರೆಯ ಅಧೀಕ್ಷಕಿ ಡಿ. ಮಲ್ಲೇಶ್ವರಿ ಅವರು ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಿರುವ ವರದಿಯಲ್ಲಿ ವಿದ್ಯಾರ್ಥಿನಿಯ ಗಾಯಗಳ ಗಂಭೀರತೆಯನ್ನು ವಿವರಿಸಿದ್ದಾರೆ.
ವಿದ್ಯಾರ್ಥಿನಿಗೆ ಬಹು ಅಂಗಾಂಗಗಳ ಮೇಲೆ ತೀವ್ರ ಆಘಾತಕಾರಿ ಗಾಯಗಳಾಗಿದ್ದು (Polytrauma), ದೇಹದಲ್ಲಿ ರಕ್ತದ ಪ್ರಮಾಣ ಮತ್ತು ರಕ್ತ ಪರಿಚಲನೆ ತೀವ್ರವಾಗಿ ಕುಸಿಯುವ ಹೈಪೋವೊಲೆಮಿಕ್ ಶಾಕ್ (Hypovolaemic Shock) ಉಂಟಾಗಿದೆ. ಶ್ವಾಸಕೋಶದ ಹೊರಭಾಗದಲ್ಲಿ ಗಾಳಿ ಶೇಖರಣೆಯಾಗುವ ನ್ಯೂಮೋಥೊರಾಕ್ಸ್ (Pneumothorax) ಸಮಸ್ಯೆಯೂ ಕಾಣಿಸಿಕೊಂಡಿದೆ. ಮುಖದ ಹಲವು ಮೂಳೆಗಳು ಮುರಿದಿದ್ದು, ಮೇಲಿನ ತೋಳಿನ ಸಮೀಪದ ಹ್ಯೂಮರಸ್ ಮೂಳೆಗೂ ತೆರೆದ ಮುರಿತ (Compound Fracture) ಉಂಟಾಗಿದೆ.
ಎರಡೂ ಭುಜದ ಬ್ಲೇಡ್ ಮೂಳೆಗಳು (Scapulae) ಮುರಿದಿದ್ದು, ಎಡಗೈ ಮುಂಗೈ ಭಾಗದ ಸ್ನಾಯುರಜ್ಜುಗಳಿಗೂ (Tendons) ಹಾನಿಯಾಗಿದೆ. ಇದರ ಜತೆಗೆ ತಲೆಬುರುಡೆ, ಮುಖ, ಕುತ್ತಿಗೆ, ಭುಜದ ಹಿಂಭಾಗ, ಕಿವಿ ಹಾಗೂ ಕಣ್ಣುರೆಪ್ಪೆಗಳ ಭಾಗದಲ್ಲಿ ಹಲವು ಆಳವಾದ ಗಾಯಗಳಾಗಿವೆ. ಕುತ್ತಿಗೆಯ ಮೂರನೇ ಕಶೇರುಖಂಡದ (C3) ಹಿಂಭಾಗದ ಮೂಳೆಯಲ್ಲಿಯೂ ಮುರಿತ ಉಂಟಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement