ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಫುಟ್ಬಾಲ್‌ ಪಂದ್ಯದಲ್ಲಿ ಆಡುತ್ತಿದ್ದಾಗ ಗೋಲ್‌ಕೀಪರ್‌ ಜೊತೆ ಡಿಕ್ಕಿ ; ಸ್ಪೇನ್‌ ಫುಟ್ಬಾಲ್‌ ಆಟಗಾರ ಸಾವು

ಮ್ಯಾಡ್ರಿಡ್‌ : ಸ್ಪೇನ್‌ನ ಎರಡನೇ ಡಿವಿಷನ್‌ ಫುಟ್ಬಾಲ್‌ ಪಂದ್ಯವೊಂದರಲ್ಲಿ ಗೋಲ್‌ಕೀಪರ್‌ ಜತೆಗೆ ಸಂಭವಿಸಿದ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಟೆನೆರಿಫ್‌ ತಂಡದ ಸ್ಟ್ರೈಕರ್‌ ಜೀಸಸ್‌ ಡಿ ಮಿಗುಯೆಲ್‌ (30) ಮಂಗಳವಾರ ಮೃತಪಟ್ಟಿದ್ದಾರೆ. ಪಂದ್ಯದ ವೇಳೆ ಸಂಭವಿಸಿದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಡಿ ಮಿಗುಯೆಲ್‌ ಅವರ ಸಾವಿನ ಸುದ್ದಿಯನ್ನು ಅವರ ಕ್ಲಬ್‌ ಸಿಡಿ ಟೆನೆರಿಫ್‌ ಅಧಿಕೃತ ಹೇಳಿಕೆಯ ಮೂಲಕ ಪ್ರಕಟಿಸಿದೆ. “ತೀವ್ರ ನೋವಿನಿಂದ, ಈ ಸುದ್ದಿ ನಿಜವೆಂದು ನಂಬಲಾಗದ ಸ್ಥಿತಿಯಲ್ಲಿ ನಾವು ಜೀಸಸ್‌ ಡಿ ಮಿಗುಯೆಲ್‌ ಅಲಮೇಡಾ ಅವರ ದುರಂತ ಸಾವಿನ ಸುದ್ದಿಯನ್ನು ಪ್ರಕಟಿಸುತ್ತಿದ್ದೇವೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ (ಜಿಎಂಟಿ ಪ್ರಕಾರ ಬೆಳಗ್ಗೆ 7 ಗಂಟೆ) ಅವರು ಕೊನೆಯುಸಿರೆಳೆದಿದ್ದಾರೆ. ಈ ನೋವನ್ನು ಕಡಿಮೆ ಮಾಡುವ ಯಾವುದೇ ಮಾತುಗಳಿಲ್ಲ. ಅವರ ಕುಟುಂಬದವರು, ಆಪ್ತರು ಹಾಗೂ ಟೆನೆರಿಫ್‌ ಅಭಿಮಾನಿಗಳ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ” ಎಂದು ಕ್ಲಬ್‌ ತಿಳಿಸಿದೆ.
ಟೆನೆರಿಫ್‌ ಮತ್ತು ಎಫ್‌ಸಿ ಅಂಡೋರಾ ತಂಡಗಳ ನಡುವೆ ಹೆಲಿಯೊಡೊರೊ ರೊಡ್ರಿಗಸ್‌ ಲೋಪೆಜ್‌ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿತ್ತು. ಪಂದ್ಯದ ಅಂತಿಮ ಹಂತದಲ್ಲಿ ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ದವು. ಈ ವೇಳೆ ಚೆಂಡನ್ನು ತಡೆಯುವ ಉದ್ದೇಶದಿಂದ ತನ್ನ ಗೋಲ್‌ಪೋಸ್ಟ್‌ನಿಂದ ವೇಗವಾಗಿ ಹೊರಬಂದ ಅಂಡೋರಾ ತಂಡದ ಗೋಲ್‌ಕೀಪರ್‌ ಹಾಗೂ ಈಕ್ವಟೋರಿಯಲ್‌ ಗಿನಿಯಾದ ಅಂತಾರಾಷ್ಟ್ರೀಯ ಆಟಗಾರ ಜೀಸಸ್‌ ಒವೊನೊ, ಮೈದಾನದ ಮಧ್ಯಭಾಗದಲ್ಲಿ ಡಿ ಮಿಗುಯೆಲ್‌ ಅವರಿಗೆ ಡಿಕ್ಕಿ ಹೊಡೆದಿದ್ದರು. ಈ ವೇಳೆ ಡಿ ಮಿಗುಯೆಲ್‌ ಅವರಿಗೆ ತೀವ್ರ ಗಾಯಗಳಾಗಿದ್ದವು. ಘಟನೆಗೆ ಸಂಬಂಧಿಸಿದಂತೆ ಗೋಲ್‌ಕೀಪರ್‌ ಒವೊನೊ ಅವರಿಗೆ ರೆಫರಿ ಕೆಂಪು ಕಾರ್ಡ್‌ ನೀಡಿ ಮೈದಾನದಿಂದ ಹೊರಹಾಕಿದ್ದರು. ಬಳಿಕ ಪಂದ್ಯವನ್ನು ರದ್ದುಗೊಳಿಸಲಾಗಿತ್ತು.

ಸ್ಪೇನ್‌ ಮಾಧ್ಯಮಗಳ ವರದಿಯ ಪ್ರಕಾರ, ಡಿಕ್ಕಿಯ ಪರಿಣಾಮ ಡಿ ಮಿಗುಯೆಲ್‌ ಅವರಿಗೆ ಹೃದಯ ಸ್ತಂಭನ (Cardiac Arrest) ಸಂಭವಿಸಿತ್ತು. ತಕ್ಷಣವೇ ಅವರಿಗೆ ಪುನಶ್ಚೇತನ ಚಿಕಿತ್ಸೆ ನೀಡಿ ಹೃದಯ ಬಡಿತವನ್ನು ಮರಳಿ ತರಲಾಗಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ವಿಶೇಷವಾಗಿ ನರಮಂಡಲದ ಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಟೆನೆರಿಫ್‌ ಕ್ಲಬ್‌ ಈ ಹಿಂದೆ ತಿಳಿಸಿತ್ತು. ಮಂಗಳವಾರ ಬೆಳಗ್ಗೆ ಅವರು ಮೃತಪಟ್ಟಿದ್ದಾರೆ.
ಡಿ ಮಿಗುಯೆಲ್‌ ಅವರ ನಿಧನಕ್ಕೆ ಫುಟ್ಬಾಲ್‌ ಜಗತ್ತಿನಿಂದ ತೀವ್ರ ಸಂತಾಪ ವ್ಯಕ್ತವಾಗಿದೆ. ಬಾರ್ಸಿಲೋನಾ ತಂಡದ ಮಾಜಿ ಡಿಫೆಂಡರ್‌ ಹಾಗೂ ಅಂಡೋರಾ ಕ್ಲಬ್‌ನ ಬಹುಪಾಲು ಷೇರುದಾರರಾಗಿರುವ ಜೆರಾರ್ಡ್‌ ಪಿಕೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಎಫ್‌ಸಿ ಅಂಡೋರಾ ಕ್ಲಬ್‌ ಕೂಡ ಡಿ ಮಿಗುಯೆಲ್‌ ಅವರ ಕುಟುಂಬ, ಸಹ ಆಟಗಾರರು ಮತ್ತು ಟೆನೆರಿಫ್‌ ತಂಡಕ್ಕೆ ಹೃತ್ಪೂರ್ವಕ ಸಂತಾಪ ಸೂಚಿಸಿದೆ. ರಿಯಲ್‌ ಮ್ಯಾಡ್ರಿಡ್‌, ಬಾರ್ಸಿಲೋನಾ, ಅಟ್ಲೆಟಿಕೊ ಮ್ಯಾಡ್ರಿಡ್‌ ಸೇರಿದಂತೆ ಸ್ಪೇನ್‌ನ ಹಲವು ಪ್ರಮುಖ ಫುಟ್ಬಾಲ್‌ ಕ್ಲಬ್‌ಗಳು ಸಂತಾಪ ಸಂದೇಶಗಳನ್ನು ಪ್ರಕಟಿಸಿವೆ.
“ಈ ದುಃಖದ ಸುದ್ದಿ ನಮ್ಮನ್ನು ಆಘಾತಕ್ಕೀಡು ಮಾಡಿದೆ. ಜೀಸಸ್‌ ಅವರ ನಿಧನಕ್ಕೆ ರಾಯಲ್‌ ಸ್ಪ್ಯಾನಿಷ್‌ ಫುಟ್ಬಾಲ್‌ ಫೆಡರೇಷನ್‌ (RFEF) ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ” ಎಂದು ಫೆಡರೇಷನ್‌ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಮುಖ ಸುದ್ದಿ :-   ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯಾದ ಸ್ಫೋಟಕ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್

ಡಿ ಮಿಗುಯೆಲ್‌ ನಿಧನದ ಹಿನ್ನೆಲೆಯಲ್ಲಿ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಮಂಗಳವಾರ ನಡೆಯಬೇಕಿದ್ದ ಕೋಪಾ ಡೆಲ್‌ ರೇ ಮತ್ತು ಕೋಪಾ ಡೆ ಲಾ ರೇನಾ ಪಂದ್ಯಗಳನ್ನು ಸ್ಪ್ಯಾನಿಷ್‌ ಫುಟ್ಬಾಲ್‌ ಫೆಡರೇಷನ್‌ ಮುಂದೂಡಿದೆ. ರಿಯಲ್‌ ಮ್ಯಾಡ್ರಿಡ್‌ ತಂಡವೂ ಮಂಗಳವಾರದ ತರಬೇತಿ ಅವಧಿಗೂ ಮುನ್ನ ಒಂದು ನಿಮಿಷ ಮೌನಾಚರಣೆ ನಡೆಸಿ ಅಗಲಿದ ಆಟಗಾರನಿಗೆ ಗೌರವ ಸಲ್ಲಿಸಿದೆ.
ರಿಯಲ್‌ ಮ್ಯಾಡ್ರಿಡ್‌ನ ಫ್ರೆಂಚ್‌ ಆಟಗಾರ ಕೈಲಿಯನ್‌ ಎಂಬಾಪೆ ಕೂಡ ಇನ್‌ಸ್ಟಾಗ್ರಾಂನಲ್ಲಿ ಸಂತಾಪ ಸೂಚಿಸಿದ್ದು, “ಅಪಾರ ದುಃಖವಾಗಿದೆ. ಹೇಳಲು ಮಾತುಗಳೇ ಇಲ್ಲ” ಎಂದು ಬರೆದುಕೊಂಡಿದ್ದಾರೆ.
ಟೆನೆರಿಫ್‌ ತಂಡಕ್ಕೆ ಬಡ್ತಿ ತಂದುಕೊಟ್ಟಿದ್ದ ಆಟಗಾರ
30 ವರ್ಷದ ಜೀಸಸ್‌ ಡಿ ಮಿಗುಯೆಲ್‌ ಅವರು 2025ರ ಬೇಸಿಗೆಯಲ್ಲಿ ಕ್ಯಾಸ್ಟೆಲೋನ್‌ ತಂಡದಿಂದ ಟೆನೆರಿಫ್‌ಗೆ ಸೇರ್ಪಡೆಯಾಗಿದ್ದರು. ಕೇವಲ ಒಂದು ಋತುವಿಗೂ ಹೆಚ್ಚು ಕಾಲ ತಂಡದಲ್ಲಿದ್ದ ಅವರು, ಟೆನೆರಿಫ್‌ ತಂಡ ಎರಡನೇ ಡಿವಿಷನ್‌ಗೆ ಬಡ್ತಿ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮ್ಯಾಡ್ರಿಡ್‌ನ ಉಪನಗರದಲ್ಲಿರುವ ಲೆಗಾನೆಸ್‌ ಕ್ಲಬ್‌ನ ಯುವ ತಂಡದ ಮೂಲಕ ಫುಟ್ಬಾಲ್‌ ವೃತ್ತಿಜೀವನ ಆರಂಭಿಸಿದ್ದ ಡಿ ಮಿಗುಯೆಲ್‌, ಬಳಿಕ ಯೂನಿಯೊನಿಸ್ಟಾಸ್‌ ಡೆ ಸಲಮಾಂಕಾ ಸೇರಿದಂತೆ ಹಲವು ತಂಡಗಳಲ್ಲಿ ಆಡಿದ್ದರು. 2023ರಲ್ಲಿ ಕ್ಯಾಸ್ಟೆಲೋನ್‌ ತಂಡಕ್ಕೆ ಸೇರ್ಪಡೆಯಾಗಿದ್ದರು. ಅಲ್ಲಿಂದ 2025ರಲ್ಲಿ ಟೆನೆರಿಫ್‌ ತಂಡಕ್ಕೆ ಬಂದಿದ್ದ ಅವರು, ಇದೀಗ ಅಕಾಲಿಕವಾಗಿ ಮೃತಪಟ್ಟಿರುವುದು ಸ್ಪೇನ್‌ ಫುಟ್ಬಾಲ್‌ ಲೋಕದಲ್ಲಿ ತೀವ್ರ ಶೋಕಕ್ಕೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ವಿಡಿಯೋ | ನೋಡನೋಡುತ್ತಿದ್ದಂತೆ ಲ್ಯಾಂಡಿಂಗ್‌ ವೇಳೆ ಎರಡು ಹೆಲಿಕಾಪ್ಟರ್‌ಗಳು ಡಿಕ್ಕಿ : ಓರ್ವ ಸಾವು | ಆ ಕ್ಷಣದ ದೃಶ್ಯ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement