ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ನದಿ ಜೋಡಣೆ ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ಬೃಹತ್‌ ಪ್ರತಿಭಟನೆ : ಜನಪ್ರತಿನಿಧಿಗಳ ಕಾರ್ಯಕ್ರಮ, ಚುನಾವಣೆ ಬಹಿಷ್ಕಾರದ ಎಚ್ಚರಿಕೆ

 ಯಲ್ಲಾಪುರ: ಬೇಡ್ತಿ-ವರದಾ ಮತ್ತು ಅಘನಾಶಿನಿ-ವೇದಾವತಿ ನದಿ ಜೋಡಣೆ ಯೋಜನೆಗಳನ್ನು ಕೈಬಿಡದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರು, ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದರ ಜೊತೆಗೆ, ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲೂ ಮತದಾನ ಬಹಿಷ್ಕರಿಸುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಜನತೆ ಎಚ್ಚರಿಕೆ ನೀಡಿದ್ದಾರೆ.
ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಡೆದ ರಸ್ತೆ ತಡೆ ಮೂಲಕ ನಡೆಸಿದ ಹೋರಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 15 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು, ನದಿ ಜೋಡಣೆ ಯೋಜನೆಗಳ ವಿರುದ್ಧ ಒಕ್ಕೊರಲ ಧ್ವನಿ ಮೊಳಗಿಸಿದರು. ಯಲ್ಲಾಪುರದ ಸಬಗೇರಿ ವೃತ್ತದ ಬಳಿ ಐದು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು, ಯೋಜನೆಗಳನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಒಂದೆಡೆ ಸೇರಿ, ಯೋಜನೆಗಳಿಗೆ ತಡೆ ಹಾಕುವ ಕುರಿತು ಮುಂದಿನ 15 ದಿನಗಳೊಳಗೆ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂಬ ಸಂದೇಶವನ್ನು  ಯಲ್ಲಾಪುರದಲ್ಲಿ ಯೋಜನೆ ವಿರೋಧಿಸಿದ ನಡೆದ ಈ ಬೃಹತ್ ಪ್ರತಿಭಟನೆ ಮೂಲಕ ರವಾನಿಸಿದ್ದಾರೆ.
ಯಲ್ಲಾಪುರದ ಟಿಎಂಎಸ್ ಸೂಪರ್ ಮಾರ್ಕೆಟ್‌ನಿಂದ ಆರಂಭವಾದ ಬೃಹತ್ ಮೆರವಣಿಗೆ ಬಸ್ ನಿಲ್ದಾಣ ವೃತ್ತ, ಗಾಂಧಿ ಚೌಕದ ಮೂಲಕ ಸಾಗಿ ಶಿವಾಜಿ ಸರ್ಕಲ್ ತಲುಪಿತು. ಅಲ್ಲಿಂದ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿಗೆ ತೆರಳಿ ರಸ್ತೆ ತಡೆ ನಡೆಸಿದರು. ಸ್ವರ್ಣವಲ್ಲೀ ಮಠದ ಶ್ರೀಗಳ ಮಾರ್ಗದರ್ಶನದಂತೆ ಹೋರಾಟದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಮನವಿಯನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಪ್ ಶಶಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಜಿಲ್ಲೆಯ ಜನಪ್ರತಿನಿಧಿಗಳಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಹಾಗೂ ಕುಮಟಾ ಶಾಸಕ ದಿನಕರ ಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಭೇದ ಮರೆತು ಯೋಜನೆಗಳ ವಿರೋಧಕ್ಕೆ ಒಗ್ಗಟ್ಟು ಪ್ರದರ್ಶಿಸಿದ ಜನಪ್ರತಿನಿಧಿಗಳು, ಜಿಲ್ಲೆಯ ಹಿತಾಸಕ್ತಿ ಕಾಪಾಡಲು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಇನ್ನೇನು ತ್ಯಾಗ ಮಾಡಬೇಕು?
ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, “ಯೋಜನೆಗೆ ಸಂಬಂಧಿಸಿದಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ, ಸಮೀಕ್ಷೆ ನಡೆಸಬೇಕು ಎಂದು ಹೇಳುವವರಿಗೆ ಈ ಜಿಲ್ಲೆಯ ಪರಿಸ್ಥಿತಿ, ಜನರ ಬದುಕು ಹಾಗೂ ನದಿಗಳ ಸ್ಥಿತಿಗತಿ ಏನಿದೆ ಎಂಬುದರ ಅರಿವಿದೆಯೇ ? ಉತ್ತರ ಕನ್ನಡ ಜಿಲ್ಲೆ ಈಗಾಗಲೇ ರಾಜ್ಯ ಮತ್ತು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಇನ್ನೇನು ತ್ಯಾಗ ಮಾಡಬೇಕು? ಇಲ್ಲಿ ಉಳಿದಿರುವುದು ಜನರು ಮಾತ್ರ. ಎಲ್ಲವನ್ನೂ ತ್ಯಾಗ ಮಾಡಿ ನಾವೇನು ಸಮುದ್ರಕ್ಕೆ ಹಾರಬೇಕೆ?” ಎಂದು ಪ್ರಶ್ನಿಸಿದರು.
“ಈ ಹೋರಾಟದ ಜೊತೆ ನಾನಿದ್ದೇನೆ. ಇಂತಹ ಹೋರಾಟ ಸಾಮಾನ್ಯವಾದುದಲ್ಲ. ಜಿಲ್ಲೆಯ ಜನರು ಸಹನಾಶೀಲರು ಎಂಬ ಕಾರಣಕ್ಕೆ ಅವರ ತಾಳ್ಮೆಯನ್ನು ಪರೀಕ್ಷಿಸಬಾರದು. ಬೇಡ್ತಿ-ಅಘನಾಶಿನಿ ನದಿ ತಿರುವು ಮಾಡುವುದು ತರವಲ್ಲ ಎಂಬುದು ನಮಗೆಲ್ಲ ತಿಳಿದಿದೆ. ಈ ಹೋರಾಟಕ್ಕೆ ನನ್ನ ನೈತಿಕ ಬೆಂಬಲವಿದೆ. ಬಯಲುಸೀಮೆ ಭಾಗದ ನಾಯಕರು ಮೊದಲು ನಮ್ಮ ಜಿಲ್ಲೆಗೆ ಬಂದು ನದಿಗಳ ಸ್ಥಿತಿಗತಿ ಹಾಗೂ ಇಲ್ಲಿನ ಜನಜೀವನವನ್ನು ಅವಲೋಕಿಸಬೇಕು. ರಾಜ್ಯ ಮತ್ತು ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುವ ಜಿಲ್ಲೆಯ ಜನರುಪದೇಪದೇ ಎಲ್ಲವನ್ನೂ ಕಳೆದುಕೊಳ್ಳಲು ಸಿದ್ಧರಿಲ್ಲ. ನೀರೇ ಇಲ್ಲದ ನದಿಯಿಂದ ನೀರನ್ನು ಕೊಂಡೊಯ್ಯುವ ಮೊಂಡುತನದ ಮಾತುಗಳನ್ನಾಡಿದರೆ ಜಿಲ್ಲೆಯ ಜನರು ಸುಮ್ಮನಿರುವುದಿಲ್ಲ” ಎಂದು ಎಚ್ಚರಿಸಿದರು.
ಉತ್ತರ ಕನ್ನಡ ಜಿಲ್ಲೆ ತ್ಯಾಗ ಮಾಡುವುದಕ್ಕೇ ಇರುವುದು ಎಂಬಂತಾಗಿದೆ
ಕುಮಟಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಮಾತನಾಡಿ, “ನಮ್ಮ ಜಿಲ್ಲೆ ಕೇವಲ ತ್ಯಾಗ ಮಾಡುವುದಕ್ಕೇ ಇರುವುದು ಎಂಬಂತೆ ಆಗಿದೆ. ಸರ್ಕಾರಗಳು ದೊಡ್ಡ ದೊಡ್ಡ ಯೋಜನೆಗಳನ್ನು ಜಿಲ್ಲೆಯ ಮೇಲೆ ಹೇರುವ ಕೆಲಸ ಮಾಡುತ್ತಿವೆ. ಜನಪ್ರತಿನಿಧಿಗಳಾದ ನಾವು ಒಗ್ಗಟ್ಟಾಗಿ ನಿಂತರೆ ಇಂತಹ ಯೋಜನೆಗಳನ್ನು ತಡೆಯುವುದು ದೊಡ್ಡ ಕೆಲಸವೇನಲ್ಲ. ಜಿಲ್ಲೆಗೆ ಮಾರಕವಾಗುವ ಯೋಜನೆಗಳು ಜಾರಿಯಾಗದಂತೆ ತಡೆಯಲು ಜನರ ಪರವಾಗಿ ನಾನು ಮತ್ತು ನನ್ನ ಪಕ್ಷ ಸದಾ ಇರುತ್ತದೆ ಎಂದು ಭರವಸೆ ನೀಡಿದರು.
ಉತ್ತರ ಕನ್ನಡ  ಜಿಲ್ಲೆಯ ಧ್ವನಿ ಒಗ್ಗಟ್ಟಿನಿಂದ ಮೊಳಗಲಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, “ನಮ್ಮ ಜಿಲ್ಲೆಗೆ ಏನು ಬೇಕು, ಏನು ಬೇಡ ಎಂಬುದನ್ನು ನಾವೇ ನಿರ್ಧರಿಸಬೇಕು. ನಮ್ಮ ಜಿಲ್ಲೆ ನಮ್ಮ ನಿಯಂತ್ರಣದಲ್ಲಿರಬೇಕು. ಜಿಲ್ಲೆಯ ಜನಸಮುದಾಯದೊಂದಿಗೆ ನಾನು ಎಲ್ಲ ಹಂತಗಳಲ್ಲೂ ಇದ್ದೇನೆ. ಜನರು ಅನಗತ್ಯ ಮಾತುಗಳಿಗೆ ಕಿವಿಗೊಡಬಾರದು. ಪೂಜ್ಯ ಸ್ವಾಮೀಜಿಯವರ ಸಂದೇಶ ಮತ್ತು ಮಾರ್ಗದರ್ಶನವನ್ನು ಮಾತ್ರ ಪಾಲಿಸಬೇಕು. ಕೊಳ್ಳ ಸಂರಕ್ಷಣಾ ಸಮಿತಿಯ ಆಶಯದಂತೆ ನಾವೆಲ್ಲರೂ ಇದ್ದೇವೆ” ಎಂದರು.
“ಈಗಾಗಲೇ ದೆಹಲಿಗೆ ನಿಯೋಗ ಕೊಂಡೊಯ್ದು ಕೇಂದ್ರದ ಐವರು ಸಚಿವರನ್ನು ಭೇಟಿ ಮಾಡಿಸಿದ್ದೇನೆ. ಜಿಲ್ಲೆಯ ಜನಪ್ರತಿನಿಧಿಗಳೆಲ್ಲರೂ ಒಗ್ಗಟ್ಟಿನಿಂದ ಪ್ರಯತ್ನಿಸುತ್ತಿದ್ದೇವೆ. ಆದರೆ ಇಂತಹ ಪ್ರಯತ್ನಗಳು ಒಂದೇ ದಿನದಲ್ಲಿ ಫಲ ನೀಡುವುದಿಲ್ಲ ಎಂಬುದನ್ನು ಜನರೂ ಅರ್ಥಮಾಡಿಕೊಳ್ಳಬೇಕು. ಹೋರಾಟವನ್ನು ವಿವಿಧ ಆಯಾಮಗಳಲ್ಲಿ ಮುಂದುವರಿಸಲಾಗುತ್ತಿದೆ. ಜಿಲ್ಲೆಯ ಜನರ ಧ್ವನಿಯನ್ನು ಅಧಿಕಾರಿಗಳು ಕೂಡ ವ್ಯವಸ್ಥಿತವಾಗಿ ಸರ್ಕಾರದ ಮಟ್ಟಕ್ಕೆ ತಲುಪಿಸಬೇಕು ಎಂದರು.
“ಬೇರೆ ಜಿಲ್ಲೆಯವರು ಏನೇ ಮಾತನಾಡಲಿ, ಏನೇ ಪ್ರಯತ್ನ ಮಾಡಲಿ ಅದು ಅವರ ವಿಚಾರ. ನಮ್ಮ ಜಿಲ್ಲೆಯ ಉಳಿವಿಗಾಗಿ ಸ್ವಾಮೀಜಿಯವರು ನೀಡುವ ಮಾರ್ಗದರ್ಶನದಂತೆ ನಡೆದುಕೊಳ್ಳುವುದು ನಮ್ಮ ಕರ್ತವ್ಯ. ಮೊದಲು ಜಿಲ್ಲೆಯ ಜನರ ಧ್ವನಿಯನ್ನು ಒಮ್ಮತದಿಂದ ಗಟ್ಟಿಯಾಗಿ ಮೊಳಗಿಸಬೇಕು. ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನ ನಡೆಯಬೇಕು. ಅಲ್ಲಿಯವರೆಗೆ ಯಾವುದೇ ಯೋಜನೆಯನ್ನು ನಮ್ಮ ಮೇಲೆ ಹೇರಬಾರದು. ಜನಪ್ರತಿನಿಧಿಗಳೆಲ್ಲರೂ ಒಗ್ಗಟ್ಟಿನಿಂದ ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಮುಂದೆಯೂ ಜವಾಬ್ದಾರಿಯುತವಾಗಿ ಪ್ರಯತ್ನಿಸಿ ಯೋಜನೆ ನಿಲ್ಲಿಸಲು ಶ್ರಮಿಸುತ್ತೇವೆ” ಎಂದು ಭರವಸೆ ನೀಡಿದರು.
ಯೋಜನೆ ರದ್ದುಗೊಳಿಸಲು ಶಕ್ತಿ ಮೀರಿ ಪ್ರಯತ್ನ
ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, “ರಾಜಕಾರಣಿಗಳಷ್ಟೇ ಹೋರಾಟ ಮಾಡಿದರೆ ಗುರಿ ತಲುಪಲು ಸಾಧ್ಯವಿಲ್ಲ ಎಂಬುದನ್ನು ಅರಿತೇ ಜನರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಸ್ವಾಮೀಜಿಯವರ ಆಶಯವನ್ನು ಪಾಲಿಸಿದ್ದಾರೆ ಎಂದರು.
“ಹಾವೇರಿಯಲ್ಲಿರುವ ನನ್ನ ಕಾರ್ಖಾನೆಗೆ ನೀರು ಮತ್ತು ವಿದ್ಯುತ್ ಪೂರೈಸಿಕೊಳ್ಳುವ ಉದ್ದೇಶದಿಂದ ನದಿ ಜೋಡಣೆ ಯೋಜನೆಗೆ ನಾನು ಒತ್ತಾಯಿಸುತ್ತಿದ್ದೇನೆ ಎಂಬ ಅಪಪ್ರಚಾರ ನಡೆಯುತ್ತಿದೆ. ಯಾರೆಲ್ಲ ಏನೇನು ಆರೋಪ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಪರಮಪೂಜ್ಯ ಸ್ವಾಮೀಜಿಯವರ ಮಾತು ಮತ್ತು ಆದೇಶವನ್ನು ಮಾತ್ರ ಪಾಲಿಸುತ್ತೇನೆಯೇ ಹೊರತು, ಬೇರೆ ಯಾರ ಮಾತನ್ನೂ ಕೇಳುವ ಮನಸ್ಥಿತಿ ನನ್ನದಲ್ಲ. ಸಮಿತಿಯವರು ರಾಜಕೀಯದಿಂದ ಹೊರಬಂದು ಹೋರಾಟ ನಡೆಸಬೇಕು. ಯೋಜನೆ ರದ್ದುಗೊಳಿಸಲು ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತೇವೆ. ಈ ಹೋರಾಟದಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಸ್ವಾಮೀಜಿಯವರ ನೇತೃತ್ವದಲ್ಲಿ  ಪಕ್ಷ, ಜಾತಿ-ಮತಗಳನ್ನು ಮೀರಿ ಹೋರಾಟ ನಡೆಸಿ ಇದಕ್ಕೆ ತಾರ್ಕಿಕ ಅಂತ್ಯ ನೀಡುತ್ತೇವೆ. ಇದು ಕೇವಲ ಜನಶಕ್ತಿಯ ಹೋರಾಟವಾಗಿರದೆ ಕಾನೂನುಬದ್ಧ ಹೋರಾಟವೂ ಆಗಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ಯಲ್ಲಾಪುರ ರಸ್ತೆ ತಡೆ ಸಂಚಾಲನಾ ಸಮಿತಿ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಪ್ರಧಾನ ಸಂಚಾಲಕ ಹರಿಪ್ರಕಾಶ ಕೋಣೆಮನೆ ಹೋರಾಟದ ನಿರ್ಣಯಗಳನ್ನು ಮಂಡಿಸಿದರು. ಮಾಜಿ ಶಾಸಕ ವಿ.ಎಸ್. ಪಾಟೀಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿವಪ್ರಸಾದ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.
ಹೋರಾಟದ ಸಭೆಯಲ್ಲಿ ಆರು ಮಹತ್ವದ ನಿರ್ಣಯಗಳು
ಪ್ರತಿಭಟನೆಯ ಕೊನೆಯಲ್ಲಿ ಜಿಲ್ಲೆಯ ಭವಿಷ್ಯ ಹಾಗೂ ನದಿ ಜೋಡಣೆ ಯೋಜನೆಗಳ ವಿರುದ್ಧದ ಹೋರಾಟದ ಮುಂದಿನ ದಿಕ್ಕನ್ನು ನಿರ್ಧರಿಸುವ ಆರು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
1. ಇನ್ನು ತ್ಯಾಗಕ್ಕೆ ಉತ್ತರ ಜಿಲ್ಲೆಯ ಜನರು ಸಿದ್ಧರಿಲ್ಲ: ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ಸೂಪಾ ಅಣೆಕಟ್ಟು, ನಾಗಝರಿ ವಿದ್ಯುತ್ ಉತ್ಪಾದನಾ ಕೇಂದ್ರ, ಬೊಮ್ಮನಹಳ್ಳಿ, ತಟ್ಟಿಹಳ್ಳ, ಕೊಡಸಳ್ಳಿ, ಕದ್ರಾ ಅಣೆಕಟ್ಟುಗಳು, ಶರಾವತಿ ಟೇಲ್‌ರೇಸ್ ಯೋಜನೆ ಹಾಗೂ ಟಿಬೆಟಿಯನ್ ಕಾಲೊನಿ ಸೇರಿದಂತೆ ಹಲವು ಯೋಜನೆಗಳಿಗಾಗಿ ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯ ಜನರು ಸಾವಿರಾರು ಎಕರೆ ಭೂಮಿಯನ್ನು ತ್ಯಾಗ ಮಾಡಿದ್ದಾರೆ. ಲಕ್ಷಾಂತರ ಜನರು ಮನೆಮಠ ಕಳೆದುಕೊಂಡಿದ್ದಾರೆ. ಪರರ ಹಿತಕ್ಕಾಗಿ ಇಷ್ಟೊಂದು ತ್ಯಾಗ ಮಾಡಿದ ಜಿಲ್ಲೆ ಮತ್ತೊಂದಿಲ್ಲ. ಹೀಗಿರುವಾಗ ಮತ್ತೆ ಮತ್ತೆ ಬೃಹತ್ ಯೋಜನೆಗಳನ್ನು ಜಿಲ್ಲೆಯ ಮೇಲೆ ಹೇರುವ ಪ್ರಯತ್ನ ನಡೆದರೆ ಅದಕ್ಕೆ ಜನರು ಸಿದ್ಧರಿಲ್ಲ ಎಂದು ನಿರ್ಣಯಿಸಲಾಯಿತು.
2. ಜನಶಕ್ತಿಯೇ ಹೋರಾಟದ ಕೇಂದ್ರ: ಈ ಸಭೆ ಜನಶಕ್ತಿ ಕೇಂದ್ರಿತ ಸಭೆಯಾಗಿದ್ದು, ಜನಪ್ರತಿನಿಧಿ ಕೇಂದ್ರಿತ ಸಭೆಯಲ್ಲ. ಆದರೂ ಜಿಲ್ಲೆಯ ಜನರ ಸಭ್ಯತೆ ಮತ್ತು ಸಂಸ್ಕೃತಿಗೆ ಅನುಗುಣವಾಗಿ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರಮುಖರಿಗೆ ಯಥೋಚಿತ ಗೌರವ ಮತ್ತು ಆದರ ನೀಡಲಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಯಿತು.
3. ಜನಪ್ರತಿನಿಧಿಗಳಿಗೆ 15 ದಿನಗಳ ಗಡುವು: ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಾದ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ಒಂದೆಡೆ ಸೇರಿ, ನದಿ ಜೋಡಣೆ ಯೋಜನೆಗಳಿಗೆ ತಡೆ ಹಾಕುವ ಕುರಿತು ಮುಂದಿನ 15 ದಿನಗಳೊಳಗೆ ಗಟ್ಟಿಯಾದ ನಿರ್ಧಾರ ಕೈಗೊಳ್ಳಬೇಕು. ಹಾಗೆ ಮಾಡದಿದ್ದರೆ ರಾಜ್ಯ ಮತ್ತು ಕೇಂದ್ರದ ಜನಪ್ರತಿನಿಧಿಗಳ ಗಮನ ಸೆಳೆಯಲು ಮುಂದಿನ ಹಂತದಲ್ಲಿ ಬೇರೆ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
4. ಸಚಿವರ ಕಾರ್ಯಕ್ರಮಗಳ ಬಹಿಷ್ಕಾರದ ಎಚ್ಚರಿಕೆ: ಮಾರಕ ಯೋಜನೆಗಳಿಂದ ಆತಂಕಕ್ಕೆ ಒಳಗಾಗಿರುವ ಜಿಲ್ಲೆಯ ಜನರು, ಕೇಂದ್ರ ಮತ್ತು ರಾಜ್ಯದ ಸಚಿವರು ಹಾಗೂ ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮಗಳನ್ನು ಬಹಿಷ್ಕರಿಸುವಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿ ನಿರೈ ಕೈಗೊಳ್ಳಲಾಗಿದೆ.
5. ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ: ಪಶ್ಚಿಮ ಘಟ್ಟಗಳ ಸೂಕ್ಷ್ಮ ಹಾಗೂ ಅತ್ಯಂತ ಮಹತ್ವದ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಮುಂಬರುವ ಎಲ್ಲ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಮತದಾನ ಬಹಿಷ್ಕಾರದಂತಹ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಎಂದು ಎಚ್ಚರಿಸಲಾಯಿತು.
6. ಪಕ್ಷಭೇದ ಮರೆತು ಜಿಲ್ಲೆಯ ಹಿತಕ್ಕಾಗಿ ಒಗ್ಗಟ್ಟು: ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಿ, ಜಿಲ್ಲೆಯ ಹಿತಾಸಕ್ತಿ ಕಾಪಾಡಲು ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement