ನವದೆಹಲಿ: ನವಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ರ್ಯಾಲಿಗೆ ಗೈರಾದ ಕಾರಣಕ್ಕೆ 200ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಈ ರ್ಯಾಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶಕುಮಾರ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಮತಗಳ್ಳತನದ ಆರೋಪ ಮುಂದಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಹಮ್ಮಿಕೊಂಡಿದ್ದ ರ್ಯಾಲಿಯಾಗಿತ್ತು. ಆದರೆ, ಈ ರ್ಯಾಲಿಗೆ ಗೈರಾದ ತಮ್ಮದೇ ಪಕ್ಷದ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಶಿಸ್ತುಕ್ರಮ ಕೈಗೊಂಡಿರುವುದು ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಪಕ್ಷದಿಂದಅಮಾನತುಗೊಂಡವರಲ್ಲಿ ಮಧ್ಯಪ್ರದೇಶ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೋಹಿತ್ ರಾಜೋರಿಯಾ ಕೂಡ ಒಬ್ಬರು. ತಮ್ಮ ಚಿಕ್ಕಪ್ಪನ ನಿಧನದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ 13ನೇ ದಿನದ ಉತ್ತರಕ್ರಿಯೆ (ತೇರಾವೀನ್) ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕಾರಣ ದೆಹಲಿಯ ರ್ಯಾಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಮೊದಲೇ ಸಂಘಟನೆಯ ಗಮನಕ್ಕೆ ತಂದಿದ್ದರೂ ಯಾವುದೇ ಕಾರಣ ಕೇಳುವ ನೋಟಿಸ್ (ಶೋಕಾಸ್ ನೋಟಿಸ್) ನೀಡದೆ ತಮ್ಮನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ, ಪಕ್ಷದ ವೇದಿಕೆಗಳಲ್ಲಿ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ, ವರ್ಷಗಳಿಂದ ಪಕ್ಷಕ್ಕಾಗಿ ಹೋರಾಟ ನಡೆಸುತ್ತಿರುವ ತಮ್ಮಂತಹ ಕಾರ್ಯಕರ್ತರಿಗೆ ಸೂಕ್ತ ಜವಾಬ್ದಾರಿ ನೀಡುತ್ತಿಲ್ಲ ಎಂದು ರೋಹಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕವೇ ಪದಾಧಿಕಾರಿಗಳ ಅಮಾನತು ಕ್ರಮವನ್ನು ಪ್ರಕಟಿಸಿದೆ. ವರದಿಗಳ ಪ್ರಕಾರ, ಒಟ್ಟು 215 ಪದಾಧಿಕಾರಿಗಳನ್ನು ಏಳು ರಾಜ್ಯಗಳ ಘಟಕಗಳು ಹಾಗೂ ಉತ್ತರ ಪ್ರದೇಶದ ಕೇಂದ್ರ ಘಟಕದಿಂದ ಅಮಾನತುಗೊಳಿಸಲಾಗಿದೆ. ಈ ಬೆಳವಣಿಗೆಯನ್ನು ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ರಾಹುಲ್ ಗಾಂಧಿ ಅವರ ರ್ಯಾಲಿಗೆ ಅವರದೇ ಪಕ್ಷದ ಯುವ ಮುಖಂಡರು ಹಾಜರಾಗಲು ಹಿಂದೇಟು ಹಾಕಿದ್ದಾರೆ ಎಂದು ಲೇವಡಿ ಮಾಡಿದೆ.
ಸುಮಾರು 215 ಪದಾಧಿಕಾರಿಗಳಿಗೆ ಅಮಾನತು ಶಿಕ್ಷೆ
ವರದಿಗಳ ಪ್ರಕಾರ, ವಿವಿಧ ರಾಜ್ಯಗಳ 200ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಪದಾಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಲಾಗಿದೆ. ಚಂಡೀಗಢ ಮೂಲದ ‘ದಿ ಟ್ರಿಬ್ಯೂನ್’ ಪತ್ರಿಕೆಯ ವರದಿ ಪ್ರಕಾರ, ನವೆಂಬರ್ 1ರಂದು ದೆಹಲಿಯಲ್ಲಿ ನಡೆದ ರ್ಯಾಲಿಗೆ ಗೈರಾದ ಹಿನ್ನೆಲೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ 215 ಪದಾಧಿಕಾರಿಗಳನ್ನು ಅಮಾನತುಗೊಳಿಸಿದೆ.
ಮಧ್ಯಪ್ರದೇಶದಲ್ಲಿ 60, ಗುಜರಾತ್ನಲ್ಲಿ 49, ಜಾರ್ಖಂಡ್ನಲ್ಲಿ 32, ಪಶ್ಚಿಮ ಬಂಗಾಳದಲ್ಲಿ 26, ತೆಲಂಗಾಣದಲ್ಲಿ 14, ಹಿಮಾಚಲ ಪ್ರದೇಶದಲ್ಲಿ 13, ಉತ್ತರ ಪ್ರದೇಶದ ಕೇಂದ್ರ ಘಟಕದಲ್ಲಿ 11 ಹಾಗೂ ಹರಿಯಾಣದಲ್ಲಿ 10 ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಮಧ್ಯಪ್ರದೇಶ ಯುವ ಕಾಂಗ್ರೆಸ್ನ ಅಧಿಕೃತ ಎಕ್ಸ್ (X) ಖಾತೆಯಲ್ಲೂ ಅಮಾನತು ಕ್ರಮವನ್ನು ದೃಢಪಡಿಸಲಾಗಿದೆ. ರಾಷ್ಟ್ರೀಯ ನಾಯಕತ್ವದ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ಆದೇಶದವರೆಗೆ ಅಮಾನತು ಜಾರಿಯಲ್ಲಿರಲಿದೆ ಎಂದು ಪ್ರಕಟಿಸಲಾಗಿದೆ.
ಮಧ್ಯಪ್ರದೇಶದಲ್ಲಿ ಅಮಾನತುಗೊಂಡ 60 ಪದಾಧಿಕಾರಿಗಳಲ್ಲಿ ಒಂಬತ್ತು ಜಿಲ್ಲಾ ಅಧ್ಯಕ್ಷರು, ಐವರು ಉಪಾಧ್ಯಕ್ಷರು, 14 ಪ್ರಧಾನ ಕಾರ್ಯದರ್ಶಿಗಳು ಹಾಗೂ 32 ಕಾರ್ಯದರ್ಶಿಗಳು ಸೇರಿದ್ದಾರೆ ಎಂದು ಹೇಳಲಾಗಿದೆ.
ನವೆಂಬರ್ 3ರಂದು ಮಧ್ಯಪ್ರದೇಶ ಯುವ ಕಾಂಗ್ರೆಸ್ ಎಕ್ಸ್ನಲ್ಲಿ ಪ್ರಕಟಿಸಿದ ಅಮಾನತು ಆದೇಶದಲ್ಲಿ, ರಾಷ್ಟ್ರೀಯ ನಾಯಕತ್ವದ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.
ಚಿಕ್ಕಪ್ಪನ 13ನೇ ದಿನದ ಉತ್ತರಕ್ರಿಯೆಗೆ ಹೋಗಿದ್ದಕ್ಕೆ ಅಮಾನತು: ರೋಹಿತ್ ರಾಜೋರಿಯಾ ಆಕ್ರೋಶ
ಮಧ್ಯಪ್ರದೇಶದಲ್ಲಿ ಅಮಾನತುಗೊಂಡವರಲ್ಲಿ ಒಂಬತ್ತು ಜಿಲ್ಲಾ ಅಧ್ಯಕ್ಷರಾದ ಮೈಹಾರ್ನ ಸೌರಭ್ ಶರ್ಮಾ, ಅಗರ್ನ ಪೃಥ್ವಿರಾಜ್ ಚೌಹಾಣ್, ನೀಮುಚ್ನ ಮನಮೋಹನ್ ಶಕ್ತಾವತ್, ಬುರ್ಹಾನ್ಪುರದ ಅರ್ಜುನ್ ಜಂಗ್ಲೆ, ಅನುಪ್ಪುರದ ಮನವೇಂದ್ರ ಮಿಶ್ರಾ, ಗುನಾದ ಪಂಚಮ್ ಭಿಲ್, ಬರ್ವಾನಿಯ ಆದಿತ್ಯ ಗೋಯಲ್, ಛತ್ತರ್ಪುರದ ಮನವೇಂದ್ರ ಸಿಂಗ್ ಪರ್ಮಾರ್ ಹಾಗೂ ಭಿಂಡ್ನ ಮನೀಶ ಪುರೋಹಿತ್ ಸೇರಿದ್ದಾರೆ.
ಅಮಾನತುಗೊಂಡ ಪ್ರಧಾನ ಕಾರ್ಯದರ್ಶಿ ರೋಹಿತ್ ರಾಜೋರಿಯಾ ಅವರು ʼನಮ್ಮ ಮನೆಯಲ್ಲಿ ಚಿಕ್ಕಪ್ಪನ ನಿಧನದ ಹಿನ್ನೆಲೆಯಲ್ಲಿ 13ನೇ ದಿನದ ಉತ್ತರಕ್ರಿಯೆ ನಡೆಯುತ್ತಿತ್ತು. ಅಂತಹ ಸಂದರ್ಭದಲ್ಲಿ ನಾನು ದೆಹಲಿಗೆ ಹೇಗೆ ಹೋಗಲು ಸಾಧ್ಯ? ಈ ವಿಷಯವನ್ನು ಸಂಘಟನೆಯಲ್ಲಿರುವ ಸಂಬಂಧಪಟ್ಟವರಿಗೆ ಮೊದಲೇ ತಿಳಿಸಿದ್ದೆ. ಆದರೂ ನನ್ನನ್ನು ಅಮಾನತುಗೊಳಿಸಲಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಮಾನತು ಮಾಡುವ ಮೊದಲು ಪಕ್ಷವು ಯಾವುದೇ ಕಾರಣ ಕೇಳುವ ನೋಟಿಸ್ ನೀಡಿರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ. 2010ರಿಂದಲೂ ಎನ್ಎಸ್ಯುಐ (NSUI) ಮತ್ತು ಯುವ ಕಾಂಗ್ರೆಸ್ನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಹಲವು ಬಾರಿ ಪೊಲೀಸರ ಕ್ರಮಕ್ಕೂ ಒಳಗಾಗಿದ್ದೇನೆ. 2010ರಿಂದ ಪಕ್ಷಕ್ಕಾಗಿ ಲೆಕ್ಕವಿಲ್ಲದಷ್ಟು ಬಾರಿ ಲಾಠಿ ಏಟು ತಿಂದಿದ್ದೇನೆ. ಮೂರು ಬಾರಿ ಜೈಲಿಗೆ ಹೋಗಿದ್ದೇನೆ. ನನ್ನ ವಿರುದ್ಧ 12 ಪ್ರಕರಣಗಳು ದಾಖಲಾಗಿವೆ. ಇಷ್ಟೆಲ್ಲ ಮಾಡಿದ ಬಳಿಕವೂ ನನಗೆ ಇಂತಹ ಅನ್ಯಾಯವಾಗಿರುವುದು ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.
ನೇಹಾ ಬೋರಾ ಯಾರು?
ರೋಹಿತ್ ರಾಜೋರಿಯಾ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಎಐಎಸ್ಎ (AISA) ಅಧ್ಯಕ್ಷೆ ನೇಹಾ ಬೋರಾ ಇತ್ತೀಚಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಜುಲೈ 25ರಂದು ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನೇಹಾ ಬೋರಾ ಅವರೂ ಉಪಸ್ಥಿತರಿದ್ದರು. ಅಕ್ಟೋಬರ್ 12ರಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಸುಪ್ರೀಂ ಕೋರ್ಟ್ ಕಡೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲೂ ಅವರು ಭಾಗವಹಿಸಿದ್ದರು.
ಅಕ್ಟೋಬರ್ 13ರಂದು ರಾಹುಲ್ ಗಾಂಧಿ ನಿವಾಸದಲ್ಲಿ ನಡೆದ ಪ್ರತಿಪಕ್ಷಗಳ ಸಭೆಯಲ್ಲೂ ಪಾಲ್ಗೊಂಡಿದ್ದರು. ಅಕ್ಟೋಬರ್ 31ರಂದು ಕಾಂಗ್ರೆಸ್ ಬೆಂಬಲದೊಂದಿಗೆ ಆಯೋಜಿಸಲಾಗಿದ್ದ ಅಣಕು ಸಂಸತ್ (ಮಾಕ್ ಪಾರ್ಲಿಮೆಂಟ್) ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಹಳೆಯ ಕಾರ್ಯಕರ್ತರಿಗೆ ಸೂಕ್ತ ಮನ್ನಣೆ ನೀಡದೆ ನೇಹಾ ಬೋರಾ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ರೋಹಿತ್ ರಾಜೋರಿಯಾ ಅವರ ಆರೋಪ ಚರ್ಚೆಗೆ ಗ್ರಾಸವಾಗಿದೆ.
ಮದುವೆ, ಅನಾರೋಗ್ಯ, ಕುಟುಂಬದ ಸಂಭ್ರಮಾಚರಣೆ ಕಾರಣಗಳೂ ಇವೆ!
ರೋಹಿತ್ ರಾಜೋರಿಯಾ ಮಾತ್ರವಲ್ಲದೆ, ಅಮಾನತುಗೊಂಡ ಇತರ ಯುವ ಕಾಂಗ್ರೆಸ್ ಪದಾಧಿಕಾರಿಗಳೂ ತಮ್ಮ ವೈಯಕ್ತಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ.
‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಪ್ರಕಾರ, ಮಧ್ಯಪ್ರದೇಶದ ಮೈಹಾರ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೌರಭ ಶರ್ಮಾ ಅವರು ತಮ್ಮ ಹಿರಿಯ ಸಹೋದರನಿಗೆ 12 ವರ್ಷಗಳ ಬಳಿಕ ಗಂಡು ಮಗು ಜನಿಸಿದ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದ ಕಾರಣ ರ್ಯಾಲಿಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವರಾಜ ಸಿಂಗ್ ಯಾದವ್ ಅವರು ತಮ್ಮ ತಂಗಿಯ ಮದುವೆಯ ಜವಾಬ್ದಾರಿ ತಮ್ಮ ಮೇಲಿದ್ದ ಕಾರಣ ದೆಹಲಿಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ತಂಗಿಗೆ ತಾನೊಬ್ಬನೇ ಸಹೋದರನಾಗಿರುವುದರಿಂದ ಮದುವೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಿತ್ತು ಎಂದು ಹೇಳಿದ್ದಾರೆ.
ಅನುಪ್ಪುರ ಜಿಲ್ಲಾ ಅಧ್ಯಕ್ಷ ಮನವೇಂದ್ರ ಮಿಶ್ರಾ ಅವರು ಅನಾರೋಗ್ಯದ ಕಾರಣ ರ್ಯಾಲಿಗೆ ಹಾಜರಾಗಿರಲಿಲ್ಲ. ಉಪಾಧ್ಯಕ್ಷ ರಾಜವೀರ್ ಸಿಂಗ್ ಕುಡಿಯಾ ಹಾಗೂ ಪ್ರಧಾನ ಕಾರ್ಯದರ್ಶಿ ಸುಮನ್ ಮೌರ್ಯ ಕೂಡ ಆರೋಗ್ಯ ಸಮಸ್ಯೆಗಳನ್ನು ಗೈರಿಗೆ ಕಾರಣವಾಗಿ ಉಲ್ಲೇಖಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಇನ್ನೊಂದೆಡೆ, ಮಧ್ಯಪ್ರದೇಶ ಯುವ ಕಾಂಗ್ರೆಸ್ ನಾಯಕತ್ವವು ಅಮಾನತು ಕ್ರಮವನ್ನು ಸಮರ್ಥಿಸಿಕೊಂಡಿದೆ. ಯಾವುದೇ ಮುನ್ಸೂಚನೆ ನೀಡದೆ ರ್ಯಾಲಿಗೆ ಗೈರಾದವರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವ್ಯಂಗ್ಯ
ಯುವ ಕಾಂಗ್ರೆಸ್ ಪದಾಧಿಕಾರಿಗಳ ಅಮಾನತು ವಿಚಾರವನ್ನು ಬಿಜೆಪಿ ನಾಯಕರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಬಳಸಿಕೊಂಡಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ತಮ್ಮ ಎಕ್ಸ್ ಖಾತೆಯಲ್ಲಿ ನಡೆಸಿದ್ದ ಸಮೀಕ್ಷೆಯೊಂದರಲ್ಲಿ, ಶೇ.73ರಷ್ಟು ಯುವಕರು ತಮ್ಮ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಚರ್ಚೆಯನ್ನು ಬಯಸಿದ್ದಾರೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸಿ.ಆರ್. ಕೇಶವನ್ ಅವರು, ರಾಹುಲ್ ಗಾಂಧಿ ಅವರನ್ನು ಲೇವಡಿ ಮಾಡಿದ್ದಾರೆ.
“ರಾಹುಲ್ ಗಾಂಧಿಯವರೇ, ನಿಮ್ಮ ಅಣಕು ಸಮೀಕ್ಷೆಯಲ್ಲಿ ಉಲ್ಲೇಖಿಸಿರುವ ಶೇ.73ರಷ್ಟು ಯುವಕರ ಮಾತು ಬಿಡಿ. ನಿಮ್ಮದೇ ಪಕ್ಷದ ಯುವ ಕಾಂಗ್ರೆಸ್ ಪದಾಧಿಕಾರಿಗಳೇ ನೀವು ಸಂಪೂರ್ಣವಾಗಿ ಅನರ್ಹರು ಮತ್ತು ಅಸಮರ್ಥರು ಎಂದು ಭಾವಿಸಿದ್ದಾರೆ. ಅದಕ್ಕಾಗಿಯೇ ನಿಮ್ಮ ವಿಫಲ ರ್ಯಾಲಿಯನ್ನು ಬಹಿಷ್ಕರಿಸುವ ಮೂಲಕ ನಿಮಗೆ ತಿರುಗೇಟು ನೀಡಿದ್ದಾರೆ” ಎಂದು ಕೇಶವನ್ ಹೇಳಿದ್ದಾರೆ.
ಒಗ್ಗಟ್ಟಿನ ಪ್ರದರ್ಶನಕ್ಕೆ ನಡೆದ ರ್ಯಾಲಿ ಈಗ ಕಾಂಗ್ರೆಸ್ನ ಆಂತರಿಕ ವಿವಾದಕ್ಕೆ ಕಾರವಾಯ್ತೆ ?!
ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ‘ವೋಟ್ ಬಚಾವೋ, ದೇಶ್ ಬಚಾವೋ’ ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ಮತದಾರರ ಪಟ್ಟಿಯಲ್ಲಿನ ಅಕ್ರಮಗಳು ಹಾಗೂ ಮತಗಳ್ಳತನದ ಆರೋಪಗಳನ್ನು ಮುಂದಿಟ್ಟುಕೊಂಡು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು. ಈ ರ್ಯಾಲಿಯನ್ನು ಪ್ರತಿಪಕ್ಷಗಳ ಒಗ್ಗಟ್ಟು ಮತ್ತು ಶಕ್ತಿ ಪ್ರದರ್ಶನದ ಪ್ರಮುಖ ವೇದಿಕೆಯನ್ನಾಗಿ ಬಿಂಬಿಸಲಾಗಿತ್ತು.
ರ್ಯಾಲಿಗೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕೆಂದು ಸೂಚಿಸಲಾಗಿತ್ತು. ಆದರೆ, ವಿವಿಧ ಕಾರಣಗಳಿಂದ ಹಲವರು ಗೈರಾಗಿದ್ದರು. ಇದನ್ನು ಸಂಘಟನಾ ಶಿಸ್ತು ಉಲ್ಲಂಘನೆ ಎಂದು ಪರಿಗಣಿಸಿದ ರಾಜ್ಯ ಘಟಕಗಳು ನವೆಂಬರ್ 2 ಮತ್ತು 3ರಂದು ಅಮಾನತು ಆದೇಶಗಳನ್ನು ಹೊರಡಿಸಲು ಆರಂಭಿಸಿದ್ದವು.
ಒಂದೆಡೆ ಸಂಘಟನೆಯ ಶಿಸ್ತು ಕಾಪಾಡಲು ಕ್ರಮ ಅನಿವಾರ್ಯ ಎಂದು ಯುವ ಕಾಂಗ್ರೆಸ್ ನಾಯಕತ್ವ ಸಮರ್ಥಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ತಮ್ಮ ವೈಯಕ್ತಿಕ ಹಾಗೂ ಕೌಟುಂಬಿಕ ಅನಿವಾರ್ಯತೆಗಳನ್ನೂ ಪರಿಗಣಿಸದೆ ಅಮಾನತುಗೊಳಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ