ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಭಾಷಾಶಾಸ್ತ್ರಜ್ಞ, ವಿಮರ್ಶಕ ಡಾ.ಕೆ.ವಿ. ನಾರಾಯಣ (K.V. Narayana) ಇಂದು, ಶುಕ್ರವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ (78) ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಎಚ್. ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಕಂಪಲಾಪುರ ವೀರಣ್ಣ ನಾರಾಯಣ (ಕೆ.ವಿ. ನಾರಾಯಣ) ಅವರು 1948ರ ಅಕ್ಟೋಬರ್ 20ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಜನಿಸಿದ್ದರು. ಕನ್ನಡ ಭಾಷೆ, ಸಾಹಿತ್ಯ, ಭಾಷಾವಿಜ್ಞಾನ ಮತ್ತು ಸಾಹಿತ್ಯ ಮೀಮಾಂಸೆ ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದ ಅವರು, ತಮ್ಮ ವೈಚಾರಿಕ ಬರಹಗಳು ಹಾಗೂ ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ, ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಯನ ಮುಂದುವರಿಸಿದರು. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ ಕೃತಿ ಅಧ್ಯಯನ ಪ್ರಬಂಧಕ್ಕೆ ಪಿಹೆಚ್ಡಿ ಪದವಿ ಪಡೆದಿದ್ದರು. 1993ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕನ್ನಡ ಪ್ರಾಧ್ಯಾಪಕರಾಗಿ, ನಂತರ ವಿಶ್ವವಿದ್ಯಾಲಯದ ಕುಲಸಚಿವರಾಗಿ, ಡೀನ್ ಆಗಿ ಹಾಗೂ ಪ್ರಭಾರ ಕುಲಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಕರ್ನಾಟಕ ಸರ್ಕಾರದ ‘ಕುವೆಂಪು ಭಾಷಾ ಭಾರತಿ ಪ್ರಾಧಿಕಾರ’ದ ಅಧ್ಯಕ್ಷರಾಗಿದ್ದರು. ಈ ವೇಳೆ ಕನ್ನಡವನ್ನು ಜ್ಞಾನ ಭಾಷೆಯನ್ನಾಗಿ ಬೆಳೆಸಲು ‘ಕರ್ನಾಟಕ ಓದು’ ಎಂಬ ವಿಶಿಷ್ಟ ಕಾರ್ಯಾಗಾರ ಸರಣಿಯನ್ನು ಆರಂಭಿಸಿದ್ದರು.
ಅವರ ಪ್ರಮುಖ ಕೃತಿಗಳಲ್ಲಿ ‘ಕನ್ನಡ ಜಗತ್ತು: ಅರ್ಧ ಶತಮಾನ’, ‘ನಮ್ಮೊಡನೆ ನಮ್ಮ ನುಡಿ’, ‘ಕನ್ನಡ ಶೈಲಿ ಕೈಪಿಡಿ’, ‘ನುಡಿಗಳ ಅಳಿವು’, ‘ದ್ವಿಭಾಷಿಕತೆ’, ಮತ್ತು ‘ಸ್ಥಳ ನಾಮಗಳು’ ‘ಭಾಷೆಯ ಸುತ್ತಮುತ್ತ’, ‘ಹುತ್ತವ ಬಡಿದರೆ’ (ನಾಟಕ) ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. 2007ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ಜಿ.ಎಸ್. ಶಿವರುದ್ರಪ್ಪ ಸಾಹಿತ್ಯ ವಿಮರ್ಶಾ ಪ್ರಶಸ್ತಿ, 2010ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳ ಗೌರವಗಳಿಗೆ ಅವರು ಭಾಜನರಾಗಿದ್ದರು. ‘ನುಡಿಗಳ ಅಳಿವು’ ಕೃತಿಗೆ 2024ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿತ್ತು


ನಿಮ್ಮ ಕಾಮೆಂಟ್ ಬರೆಯಿರಿ