ಬೆಂಗಳೂರು: ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿರುವ ಕ್ಯಾಬ್ ಚಾಲಕ ಇಂದೂಶೇಖರ, ಕೊಲೆಗಳನ್ನು ಪೂರ್ವಯೋಜಿತವಾಗಿ ಮತ್ತು ವ್ಯವಸ್ಥಿತವಾಗಿ ನಡೆಸಿದ್ದ ಎಂಬ ಆಘಾತಕಾರಿ ಸಂಗತಿಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಅವರನ್ನು ಮನೆಗೆ ಮಧ್ಯಾಹ್ನದ ಊಟಕ್ಕೆ ಆಹ್ವಾನಿಸಿ, ಮಟನ್ ಊಟ ನೀಡಿ ಅದರಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡುತ್ತಿದ್ದ ಆರೋಪಿ, ಅವರು ಗಾಢ ನಿದ್ರಾವಸ್ಥೆಗೆ ಜಾರಿದ ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡುತ್ತಿದ್ದ ಎನ್ನಲಾಗಿದೆ.
ಕೊಲೆ ಮಾಡಿದ ಬಳಿಕ ಶವಗಳಿಂದ ರಕ್ತ ಸೋರದಂತೆ ಮತ್ತು ಕೊಳೆತು ದುರ್ವಾಸನೆ ಹರಡುವುದನ್ನು ತಡೆಯಲು ಅವುಗಳಿಗೆ ಅಂಟುಪಟ್ಟಿಯನ್ನು (ಅಡ್ಹೆಸಿವ್ ಟೇಪ್) ಸುತ್ತುತ್ತಿದ್ದ. ಕೆಲವೊಮ್ಮೆ ಸುಮಾರು 10 ಟೇಪ್ಗಳನ್ನು ಸುತ್ತುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಶವಗಳಿಂದ ಬರುತ್ತಿದ್ದ ದುರ್ವಾಸನೆಯನ್ನು ತಡೆಯಲು ಗುಲಾಬಿ ನೀರನ್ನೂ (ರೋಸ್ ವಾಟರ್) ಬಳಸುತ್ತಿದ್ದ ಎಂಬ ಭಯಾನಕ ಸಂಗತಿಯನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಅಲ್ಲದೆ, ಪೊಲೀಸ್ ತನಿಖೆಯ ಪ್ರಕಾರ, ಹತ್ಯೆಗೀಡಾದವರ ಮೊಬೈಲ್ಗಳಿಂದಲೇ ಸಂದೇಶಗಳನ್ನು ಕಳುಹಿಸುವ ಮೂಲಕ ಅವರೆಲ್ಲರೂ ಪ್ರವಾಸಕ್ಕೆ ತೆರಳಿದ್ದಾರೆ ಎಂಬ ಭಾವನೆ ಮೂಡಿಸಲು ಆರೋಪಿ ಪ್ರಯತ್ನಿಸಿದ್ದ ಎನ್ನಲಾಗಿದೆ. ನಾಪತ್ತೆ ದೂರು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ನಂತರದ ತನಿಖೆಯ ಜಾಡು ಹಿಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆಹಚ್ಚಿ ನವೆಂಬರ್ 5ರಂದು ಬಂಧಿಸಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿರುವ ಈ ಸರಣಿ ಹತ್ಯೆಗಳ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇಂದೂಶೇಖರ ಅನುಸರಿಸಿದ್ದ ಕೊಲೆ ವಿಧಾನ (ಮಾಡಸ್ ಒಪೆರಾಂಡಿ) ಕುರಿತು ಹಲವು ವಿವರಗಳು ಲಭ್ಯವಾಗಿವೆ. ಆರೋಪಿಯು ಮಧ್ಯಾಹ್ನದ ಸಮಯದಲ್ಲಿ ಅವರನ್ನು ಮನೆಗೆ ಆಹ್ವಾನಿಸಿ, ಮಟನ್ ಅಡುಗೆ ತಯಾರಿಸಿ ಊಟಕ್ಕೆ ನೀಡುತ್ತಿದ್ದ. ಊಟ ಮತ್ತು ಮದ್ಯದಲ್ಲಿ ನಿದ್ರೆ ಮಾತ್ರೆ ಬೆರೆಸುತ್ತಿದ್ದ. ಅವರು ಪ್ರಜ್ಞೆ ತಪ್ಪುವಷ್ಟು ಗಾಢ ನಿದ್ರೆಗೆ ಜಾರಿದ ಬಳಿಕ ರುಬ್ಬುವ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರತಿ ಕೊಲೆಯ ಬಳಿಕ ಶವಗಳನ್ನು ಮನೆಯೊಳಗೆ ಅಡಗಿಸಿಡುತ್ತಿದ್ದ ಆರೋಪಿ, ನಂತರ ಕತ್ತಲಾದ ಮೇಲೆ ಬೇರೆ ಬೇರೆ ಸ್ಥಳಗಳಿಗೆ ಸಾಗಿಸಿ ಎಸೆಯುತ್ತಿದ್ದ. ಮುಂದಿನ ವ್ಯಕ್ತಿಯನ್ನು ಮನೆಗೆ ಊಟಕ್ಕೆ ಆಹ್ವಾನಿಸುವ ಮೊದಲು ಈ ಹಿಂದೆ ಹತ್ಯೆ ಮಾಡಿದವರ ಶವಗಳನ್ನು ಅಂಟುಪಟ್ಟಿಯಿಂದ ಬಿಗಿಯಾಗಿ ಸುತ್ತಿ, ದುರ್ವಾಸನೆ ಹೊರಬರದಂತೆ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.
ಶವಗಳನ್ನು ಸಾಗಿಸಲು ಆರೋಪಿ ತನ್ನ ಟೊಯೊಟಾ ಎಟಿಯೋಸ್ (Toyota Etios) ಕಾರನ್ನು ಬಳಸುತ್ತಿದ್ದ. ಪೊಲೀಸರ ತಪಾಸಣೆ ವೇಳೆ ಅನುಮಾನ ಬರಬಾರದು ಎಂಬ ಉದ್ದೇಶದಿಂದ ಕಾರಿನ ಹಿಂಬದಿಯ ಗಾಜಿಗೆ ‘ಪ್ರೆಸ್’ (PRESS) ಎಂಬ ಸ್ಟಿಕ್ಕರ್ ಅಂಟಿಸಿದ್ದ. ಇದೀಗ ಪೊಲೀಸರು ಆ ಕಾರನ್ನು ವಶಪಡಿಸಿಕೊಂಡಿದ್ದಾರೆ.
ನಂದಿ ಬೆಟ್ಟಕ್ಕೆ ಪತ್ನಿಯ ಶವ ಸಾಗಿಸಿದ್ದ !
ಇಂದೂಶೇಖರ ಸುಮಾರು ಎರಡು ದಶಕಗಳ ಹಿಂದೆ ಸುನಿತಾಳನ್ನು ವಿವಾಹವಾಗಿದ್ದ. ದಂಪತಿ ಬೆಂಗಳೂರಿನ ರಾಜಾಜಿನಗರದಲ್ಲಿ ವಾಸವಾಗಿದ್ದರು. ಆದರೆ, ಇಬ್ಬರ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹವಿತ್ತು. ಪತ್ನಿಯ ಕುಟುಂಬದವರು ಸುನಿತಾಳ ಪರವಾಗಿ ನಿಲ್ಲುತ್ತಿದ್ದುದರಿಂದ ಅವರ ಮೇಲೂ ಇಂದೂಶೇಖರ ತೀವ್ರ ಅಸಮಾಧಾನ ಹೊಂದಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಸುನಿತಾಳೇ ಆರೋಪಿಯ ಮೊದಲ ಬಲಿಪಶು. ಆಕೆಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಬಳಿಕ ಶವವನ್ನು ನಂದಿ ಬೆಟ್ಟಕ್ಕೆ ಕೊಂಡೊಯ್ದು ಎಸೆದಿದ್ದ. ಪತ್ನಿ ಕಾಣೆಯಾಗಿರುವ ಬಗ್ಗೆ ನೆರೆಹೊರೆಯವರು ವಿಚಾರಿಸಿದಾಗ, ಆಕೆ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ನಂಬಿಸಿದ್ದ.
ಪಾರ್ಟಿ ನೆಪದಲ್ಲಿ ಬಾಮೈದರನ್ನು ಆಹ್ವಾನಿಸಿ ಹತ್ಯೆ
ಸುನಿತಾಳ ಬಳಿಕ ಆಕೆಯ ಸಹೋದರರಾದ ಶಿವಕುಮಾರ ಮತ್ತು ಶಂಕರ ಅವರನ್ನು ಪಾರ್ಟಿ ನೆಪದಲ್ಲಿ ಮನೆಗೆ ಆಹ್ವಾನಿಸಿ ಕೊಲೆ ಮಾಡಿದ್ದ ಎನ್ನಲಾಗಿದೆ. ನಂತರ ಅವರ ಪತ್ನಿಯರಾದ ನಳಿನಿ ಮತ್ತು ದಿವ್ಯಾ, ಅತ್ತೆ ರೂಪವತಿ ಹಾಗೂ ಶಂಕರ ಅವರ ಏಳು ವರ್ಷದ ಪುತ್ರ ಪುನೀತನನ್ನೂ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಪತ್ನಿ ಸುನಿತಾ ಸೇರಿದಂತೆ ಆಕೆಯ ಕುಟುಂಬದ ಒಟ್ಟು ಏಳು ಮಂದಿಯನ್ನು ಆರೋಪಿ ಬರ್ಬರವಾಗಿ ಕೊಂದಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಕೊಲೆಗಳ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಅಳಿಸಲು ಇಂದೂಶೇಖರ ರಾಸಾಯನಿಕ ವಸ್ತುಗಳನ್ನು ಬಳಸಿ ಸ್ವಚ್ಛಗೊಳಿಸಿದ್ದ. ಯಾವುದೇ ಸಾಕ್ಷ್ಯಗಳು ಉಳಿಯದಂತೆ ಮನೆಯೊಳಗಿನ ರಕ್ತದ ಗುರುತುಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಪ್ರಯತ್ನಿಸಿದ್ದ ಎನ್ನಲಾಗಿದೆ.
ಯರ್ಕಾಡ್ ಘಾಟ್ನಲ್ಲಿ ಮಹಜರಿಗೆ ಸಿದ್ಧತೆ
ಇದೀಗ ಬೆಂಗಳೂರು ನಗರ ಪೊಲೀಸರು ಆರೋಪಿ ಇಂದೂಶೇಖರನನ್ನು ಕರೆದೊಯ್ದು ತಮಿಳುನಾಡಿನ ಕೃಷ್ಣಗಿರಿಗೆ ತಲುಪಿದ್ದಾರೆ. ಅಲ್ಲಿಂದ ಯರ್ಕಾಡ್ ಘಾಟ್ ಪ್ರದೇಶದತ್ತ ತೆರಳುತ್ತಿದ್ದಾರೆ. ಮತ್ತೊಂದೆಡೆ, ಸೇಲಂ ಪೊಲೀಸರು ಈಗಾಗಲೇ ಅಪರಾಧ ನಡೆದ ಸ್ಥಳದಲ್ಲಿ ಬೆಂಗಳೂರು ಪೊಲೀಸರ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ದು ಕೊಲೆಗಳ ಸರಣಿ ಹಾಗೂ ಶವಗಳನ್ನು ಸಾಗಿಸಿದ ರೀತಿಯನ್ನು ಮರುಸೃಷ್ಟಿಸುವ ಮೂಲಕ (ಕ್ರೈಂ ಸೀನ್ ರಿಕನ್ಸ್ಟ್ರಕ್ಷನ್) ತನಿಖೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.
ದೀರ್ಘಕಾಲದ ಕೌಟುಂಬಿಕ ಕಲಹಗಳಿಂದ ತಾನು ಮಾನಸಿಕವಾಗಿ ನೊಂದಿದ್ದೆ ಎಂದು ಇಂದೂಶೇಖರ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಇಷ್ಟು ಮಂದಿಯನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲು ಬೇರೆಯವರ ಸಹಾಯ ಪಡೆದಿದ್ದನೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಕೊಲೆಗಳಲ್ಲಿ ಬೇರೆ ಯಾರಾದರೂ ಸಹಕರಿಸಿದ್ದಾರೆಯೇ, ಅದರಲ್ಲೂ ಆರೋಪಿಯ ಮಗಳ ಪಾತ್ರ ಏನಾದರೂ ಇದೆಯೇ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ