ನವದೆಹಲಿ: ಇ20 (E20) ಪೆಟ್ರೋಲ್ನಲ್ಲಿ ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ಕೇಂದ್ರ ಸರ್ಕಾರ ಶನಿವಾರ ತಳ್ಳಿಹಾಕಿದೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷೆ ನಡೆಸಲಾದ ಒಟ್ಟು 893 ಪೆಟ್ರೋಲ್ ಮಾದರಿಗಳೂ ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕರ್ನಾಟಕ ಸರ್ಕಾರ ನಡೆಸಿದ ಮಾದರಿ ಸಂಗ್ರಹಣೆ ಮತ್ತು ಪ್ರಯೋಗಾಲಯ ಪರೀಕ್ಷೆಯ ವಿಧಾನಗಳ ಬಗ್ಗೆಯೇ ಪ್ರಶ್ನೆ ಎತ್ತಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ದೇಶಾದ್ಯಂತ ಸರಬರಾಜು ಮಾಡಲಾಗುತ್ತಿರುವ ಇ20 ಪೆಟ್ರೋಲ್ ನಿಗದಿತ ಗುಣಮಟ್ಟಕ್ಕೆ ಅನುಗುಣವಾಗಿದೆ ಎಂದು ಸ್ಪಷ್ಟಪಡಿಸಿದೆ. ಪೆಟ್ರೋಲ್ನಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕರ್ನಾಟಕ ಸರ್ಕಾರದ ಆರೋಪವನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.
ಕರ್ನಾಟಕದ ಕೆಲವು ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟವಾಗುವ ಇಂಧನದಲ್ಲಿ ಶೇ.20ರ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ, ಅಂದರೆ ಶೇ.31ರವರೆಗೂ ಎಥೆನಾಲ್ ಮಿಶ್ರಣವಾಗಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ ಬೆನ್ನಲ್ಲೇ ಕೇಂದ್ರ ಈ ಸ್ಪಷ್ಟನೆ ನೀಡಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸಚಿವಾಲಯ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ಕಂಪನಿಗಳು ಕರ್ನಾಟಕ ಸೇರಿದಂತೆ ದೇಶಾದ್ಯಂತ ಸರಬರಾಜು ಮಾಡುತ್ತಿರುವ ಇ20 ಪೆಟ್ರೋಲ್, ಭಾರತೀಯ ಮಾನಕಗಳ ಬ್ಯೂರೋ (BIS) ನಿಗದಿಪಡಿಸಿರುವ IS 17021 ಮಾನದಂಡಗಳಿಗೆ ಅನುಗುಣವಾಗಿದೆ ಎಂದು ತಿಳಿಸಿದೆ.
ಮೂರು ತೈಲ ಮಾರುಕಟ್ಟೆ ಕಂಪನಿಗಳು (OMC) ಕಾನೂನುಬದ್ಧ ಹಾಗೂ ತಾಂತ್ರಿಕವಾಗಿ ನಿಗದಿಪಡಿಸಿರುವ ಪ್ರಕ್ರಿಯೆಗಳ ಅಡಿಯಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಕರ್ನಾಟಕ ಸರ್ಕಾರದ ಆರೋಪಗಳಿಗೆ ಪೂರಕವಾದ ಅಂಶಗಳು ಕಂಡುಬಂದಿಲ್ಲ ಎಂದು ಸಚಿವಾಲಯ ಹೇಳಿದೆ. ಅಲ್ಲದೆ, 2026ರ ಅಕ್ಟೋಬರ್ನಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಪರೀಕ್ಷೆಯ ಸಂದರ್ಭದಲ್ಲಿ ಅನುಸರಿಸಲಾದ ಮಾದರಿ ಸಂಗ್ರಹಣೆ ಮತ್ತು ಪರೀಕ್ಷಾ ವಿಧಾನಗಳ ಬಗ್ಗೆಯೂ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕರ್ನಾಟಕದ ಪರೀಕ್ಷಾ ವಿಧಾನದ ಬಗ್ಗೆ ಕೇಂದ್ರದ ಆಕ್ಷೇಪ
ಪೆಟ್ರೋಲ್ನ ಗುಣಮಟ್ಟ ಪರೀಕ್ಷೆಗಾಗಿ ಅನುಸರಿಸಬೇಕಾದ ನಿಯಮಗಳ ಪ್ರಕಾರ, ತಲಾ ಒಂದು ಲೀಟರ್ನ ಆರು ಮಾದರಿಗಳನ್ನು ಸಂಗ್ರಹಿಸಬೇಕು. ಈ ಪೈಕಿ ಎರಡು ಮಾದರಿಗಳನ್ನು ಸ್ವೀಕೃತಿ ದೃಢೀಕರಣದೊಂದಿಗೆ ಸಂಬಂಧಪಟ್ಟ ಪೆಟ್ರೋಲ್ ಬಂಕ್ ಮಾಲೀಕರಿಗೆ ನೀಡಬೇಕು. ಇನ್ನೆರಡು ಮಾದರಿಗಳನ್ನು ತೈಲ ಕಂಪನಿ ಅಥವಾ ಸಂಬಂಧಪಟ್ಟ ಇಲಾಖೆಯು ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಉಳಿದ ಎರಡು ಮಾದರಿಗಳನ್ನು ನಿಯಂತ್ರಣ ಆದೇಶದ (Control Order) ಶೆಡ್ಯೂಲ್-3ರಲ್ಲಿ ಸೂಚಿಸಿರುವ ಅಥವಾ ಅಧಿಕೃತ ಗೆಜೆಟ್ನಲ್ಲಿ ಅಧಿಸೂಚನೆ ಹೊರಡಿಸಿರುವ ಪ್ರಯೋಗಾಲಯಕ್ಕೆ ಕಳುಹಿಸಬೇಕು.
ಮಾದರಿಗಳ ಲೇಬಲ್ಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಜಂಟಿಯಾಗಿ ಸಹಿ ಹಾಕಿರಬೇಕು. ಅಲ್ಲದೆ, ನಿಗದಿತ ಕಾಲಮಿತಿಯೊಳಗೆ ಪರೀಕ್ಷೆಯ ಫಲಿತಾಂಶಗಳನ್ನು ಪೆಟ್ರೋಲ್ ಬಂಕ್ ಮಾಲೀಕರು ಮತ್ತು ತೈಲ ಕಂಪನಿ ಎರಡಕ್ಕೂ ತಿಳಿಸಬೇಕು ಎಂಬ ನಿಯಮವಿದೆ ಎಂದು ಸಚಿವಾಲಯ ವಿವರಿಸಿದೆ.
2026ರ ಸೆಪ್ಟೆಂಬರ್ನಲ್ಲಿ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳನ್ನು ರಾಜ್ಯಮಟ್ಟದ ಸಂಯೋಜಕರ (State Level Coordinator) ಮೂಲಕ ಸಂಬಂಧಪಟ್ಟ ತೈಲ ಕಂಪನಿಗಳ ಗೊತ್ತುಪಡಿಸಿದ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಅಲ್ಲಿ 2024ರ ಮಾರ್ಕೆಟಿಂಗ್ ಡಿಸಿಪ್ಲಿನ್ ಗೈಡ್ಲೈನ್ಸ್ (MDG 2024) ಪ್ರಕಾರ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳ ಪರೀಕ್ಷೆ ನಡೆಸಲಾಗಿತ್ತು ಎಂದು ಸಚಿವಾಲಯ ತಿಳಿಸಿದೆ.
ಆದರೆ, ನಂತರ ಅಕ್ಟೋಬರ್ನಲ್ಲಿ ನಡೆಸಿದ ಪರೀಕ್ಷೆಯ ಸಂದರ್ಭದಲ್ಲಿ ತೈಲ ಕಂಪನಿಗಳ ಪ್ರತಿನಿಧಿಗಳ ಭಾಗವಹಿಸುವಿಕೆ ಇಲ್ಲದೆಯೇ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಂಪನಿಗಳು ಆಕ್ಷೇಪಿಸಿವೆ. ಅಲ್ಲದೆ, ತಾವು ಕೇಳಿಕೊಂಡಿದ್ದರೂ ಸಂಗ್ರಹಿಸಲಾದ ಮಾದರಿಗಳ ಪೈಕಿ ತಮ್ಮ ವಶಕ್ಕೆ ಬರಬೇಕಾದ ಪ್ರತಿಗಳನ್ನು ನೀಡಿಲ್ಲ. ಯಾವ ಪೆಟ್ರೋಲ್ ಬಂಕ್ನಿಂದ ಮಾದರಿ ಸಂಗ್ರಹಿಸಲಾಗಿದೆ ಎಂಬ ಸಂಪೂರ್ಣ ವಿವರಗಳನ್ನೂ ಒದಗಿಸಿಲ್ಲ. ಪ್ರಯೋಗಾಲಯದ ವರದಿಗಳನ್ನೂ ನೀಡಿಲ್ಲ ಎಂದು ಕಂಪನಿಗಳು ರಾಜ್ಯಮಟ್ಟದ ಸಂಯೋಜಕರಿಗೆ ತಿಳಿಸಿವೆ ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.
ಇದೇ ವಿಚಾರವಾಗಿ ಲೋಕಸಭೆಯ ವಿಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಶನಿವಾರ ತೈಲ ಕಂಪನಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಕೆಲವು ಪೆಟ್ರೋಲ್ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಇಂಧನವನ್ನು ಮಾರಾಟ ಮಾಡುತ್ತಿವೆ ಎಂದು ಅವರು ದೂರಿದ್ದಾರೆ. ಕರ್ನಾಟಕದ ಏಳು ಜಿಲ್ಲೆಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳನ್ನು ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದ್ದು, ಪರೀಕ್ಷೆಗೊಳಪಡಿಸಿದ 14 ಮಾದರಿಗಳ ಪೈಕಿ 11 ಮಾದರಿಗಳಲ್ಲಿ ಎಥೆನಾಲ್ ಪ್ರಮಾಣ ಶೇ.20ಕ್ಕಿಂತ ಹೆಚ್ಚಿರುವುದು ಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಇಂಡಿಯನ್ ಆಯಿಲ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL) ಕಂಪನಿಗಳ ಪೆಟ್ರೋಲ್ ಮಾದರಿಗಳಲ್ಲಿ ಕ್ರಮವಾಗಿ ಶೇ.31.2 ಮತ್ತು ಶೇ.30.5ರಷ್ಟು ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.
ನಿಮ್ಮ ಕಾರು ಇಷ್ಟು ಪ್ರಮಾಣದ ಎಥೆನಾಲ್ ಮಿಶ್ರಣವನ್ನು ತಡೆದುಕೊಳ್ಳುವಂತೆ ನಿರ್ಮಾಣವಾಗಿಲ್ಲ. ಇದರಿಂದ ಮೈಲೇಜ್ ಕಡಿಮೆಯಾಗುತ್ತದೆ, ಪದೇಪದೆ ಮೆಕ್ಯಾನಿಕ್ ಬಳಿ ಹೋಗಬೇಕಾಗುತ್ತದೆ. ನೀವು ಅತ್ಯಂತ ಉತ್ಸಾಹದಿಂದ ಖರೀದಿಸಿದ ಕಾರು ಹಾಳಾಗುವ ಅಪಾಯವಿದೆ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್ನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರ ಹೇಳಿದ್ದೇನು ?
ಇದಕ್ಕೂ ಮುನ್ನ ಶುಕ್ರವಾರ ಕರ್ನಾಟಕ ಸರ್ಕಾರ ರಾಜ್ಯದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ನಿಗದಿತ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಿರುವ ಪೆಟ್ರೋಲ್ ಅನ್ನು ಪೂರೈಸುತ್ತಿವೆ ಎಂದು ಆರೋಪಿಸಿತ್ತು. ಪ್ರಯೋಗಾಲಯ ಪರೀಕ್ಷೆಯಲ್ಲಿ ಶೇ.31.2ರವರೆಗೂ ಎಥೆನಾಲ್ ಅಂಶ ಪತ್ತೆಯಾಗಿದೆ ಎಂದು ತಿಳಿಸಿದ್ದ ಸರ್ಕಾರ, ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿತ್ತು.
ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವ ರಿಜ್ವಾನ್ ಅರ್ಷದ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದರು. ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರು ಜಿಲ್ಲೆಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೆಲವು ಕಂಪನಿಗಳ ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ನಿಗದಿತ ಮಿತಿಯನ್ನು ಮೀರಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದರು.
ಮೋಟಾರ್ ಸ್ಪಿರಿಟ್ (MS) ವಿಭಾಗದ ಇತರ ಮಾದರಿಗಳ ಪರೀಕ್ಷೆಯಲ್ಲಿ ನಯಾರಾ ಪೆಟ್ರೋಲ್ನಲ್ಲಿ ಶೇ.20.6, ಬಿಪಿಸಿಎಲ್ (BPCL) ಮಾದರಿಯಲ್ಲಿ ಶೇ.19.9, ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಮಾದರಿಯಲ್ಲಿ ಶೇ.19.2 ಹಾಗೂ ಶೆಲ್ (Shell) ಪೆಟ್ರೋಲ್ನಲ್ಲಿ ಶೇ.13.5ರಷ್ಟು ಎಥೆನಾಲ್ ಅಂಶ ಪತ್ತೆಯಾಗಿತ್ತು ಎಂದು ಸಚಿವರು ವಿವರಿಸಿದ್ದರು. ಇಂಡಿಯನ್ ಆಯಿಲ್ ಕಂಪನಿಯ ಪೆಟ್ರೋಲ್ ಮಾದರಿಯಲ್ಲಿ ಶೇ.31.2 ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಯ ಮಾದರಿಯಲ್ಲಿ ಶೇ.30.5ರಷ್ಟು ಎಥೆನಾಲ್ ಅಂಶ ದಾಖಲಾಗಿದೆ ಎಂದು ಸಚಿವರು ಹೇಳಿದ್ದರು.
ಕರ್ನಾಟಕ ಸರ್ಕಾರದ ಪ್ರಯೋಗಾಲಯ ಪರೀಕ್ಷೆ ಮತ್ತು ಕೇಂದ್ರ ಸರ್ಕಾರ ಉಲ್ಲೇಖಿಸಿರುವ ತಾಂತ್ರಿಕ ಪರೀಕ್ಷಾ ಪ್ರಕ್ರಿಯೆಗಳ ನಡುವಿನ ವ್ಯತ್ಯಾಸದಿಂದಾಗಿ ಇ20 ಪೆಟ್ರೋಲ್ನಲ್ಲಿನ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ವಿವಾದ ತೀವ್ರಗೊಂಡಿದೆ. ಕರ್ನಾಟಕ ಸರ್ಕಾರದ ಪರೀಕ್ಷಾ ವರದಿಗಳನ್ನು ಪ್ರಶ್ನಿಸಿರುವ ಕೇಂದ್ರ, ತೈಲ ಕಂಪನಿಗಳ ಪೆಟ್ರೋಲ್ ನಿಗದಿತ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಹೇಳಿದೆ.


ನಿಮ್ಮ ಕಾಮೆಂಟ್ ಬರೆಯಿರಿ