

ಅಲ್ ಅಮೆರಾತ್: ಭಾರತದ ವಿರುದ್ಧದ ಪಂದ್ಯದಲ್ಲಿ ಅಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ ಪಾಕಿಸ್ತಾನದ ಅಂಡರ್-19 ತಂಡದ ಆಟಗಾರ ಹಮ್ಜಾ ಜಹೂರ್, ಅಜೇಯ ಶತಕ ಸಿಡಿಸುವ ಮೂಲಕ ಪಾಕಿಸ್ತಾನದ ತಂಡಕ್ಕೆ ಮೂರು ವಿಕೆಟ್ಗಳ ರೋಚಕ ಜಯ ತಂದುಕೊಟ್ಟಿದ್ದಾರೆ. ಈ ಪಂದ್ಯದ ಗೆಲುವಿನ ಬಳಿಕ ಹಮ್ಜಾ ಜಹೂರ್ ತೋರಿಸಿದ ಪುಟ್ಟ ಚೀಟಿಯೊಂದು ಇದೀಗ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಭಾನುವಾರ ನಡೆದ ಎಸಿಸಿ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ ಭಾರತದ ವಿರುದ್ಧ 209 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಒಂದು ಹಂತದಲ್ಲಿ 61 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಹಮ್ಜಾ ಜಹೂರ್ ಅವರ ಅಮೋಘ ಆಟದಿಂದಾಗಿ ಪಾಕಿಸ್ತಾನ 49ನೇ ಓವರ್ನಲ್ಲಿ ಏಳು ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಈ ಗೆಲುವಿನೊಂದಿಗೆ ಗ್ರೂಪ್ ಎ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಅಗ್ರಸ್ಥಾನಕ್ಕೇರಿದೆ.
ಪಂದ್ಯದ ಕೊನೆಯ ಎಸೆತದ ಬಳಿಕ ಹಮ್ಜಾ ಜಹೂರ್ ಸಂಭ್ರಮಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಭಾರತದ ಬೌಲರ್ ಕಾವ್ಯ ಪಟೇಲ್ ಎಸೆದ ಲೋ ಫುಲ್ಟಾಸ್ ಎಸೆತವನ್ನು ಜಹೂರ್ ಎಕ್ಸ್ಟ್ರಾ ಕವರ್ ಕಡೆಗೆ ಬಾರಿಸಿದರು. ಚೆಂಡು ಡೈವ್ ಮಾಡಿದ ಫೀಲ್ಡರ್ನ ಕೈಗೆ ಸಿಗದೆ ಬೌಂಡರಿ ಗೆರೆ ದಾಟುತ್ತಿದ್ದಂತೆ ಪಾಕಿಸ್ತಾನದ ಗೆಲುವು ದಾಖಲಿಸಿತು. ತಕ್ಷಣವೇ ಹೆಲ್ಮೆಟ್ ಕಳಚಿ ಎಸೆದ ಜಹೂರ್, ಪಾಕಿಸ್ತಾನದ ಅಭಿಮಾನಿಗಳತ್ತ ಓಡುತ್ತಾ ಜೋರಾಗಿ ಕೂಗಿದರು. ಮುಷ್ಟಿ ಬಿಗಿದು ಸಂಭ್ರಮಿಸಿದರು. ಸಹ ಆಟಗಾರ ನಿಕಾಬ್ ಶಫೀಕ್ ಓಡಿಬಂದು ಅವರನ್ನು ಅಪ್ಪಿಕೊಂಡರು. ಬಳಿಕ ತಂಡದ ಇತರ ಆಟಗಾರರೂ ಮೈದಾನಕ್ಕೆ ಧಾವಿಸಿ ಸಂಭ್ರಮದಲ್ಲಿ ಪಾಲ್ಗೊಂಡರು.
ಹಮ್ಜಾ ಜಹೂರ್ ಪಾಲಿಗೆ ಈ ಪ್ರದರ್ಶನ ಅನಿರೀಕ್ಷಿತವಾದುದೇನಲ್ಲ. ಭಾರತ ವಿರುದ್ಧದ ಪಂದ್ಯಗಳಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಅವರು, ಕಳೆದ ವರ್ಷ ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 191 ರನ್ಗಳ ಭರ್ಜರಿ ಜಯ ಸಾಧಿಸಿದಾಗ 18 ರನ್ ಗಳಿಸಿದ್ದರು. ಡಿಸೆಂಬರ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲೂ ಜವಾಬ್ದಾರಿಯುತ ಆಟವಾಡಿದ್ದರು. ಕೇವಲ 51 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದ್ದ ಅವರು, ಕೊನೆಯ ಕ್ರಮಾಂಕದ ಆಟಗಾರ ಶಫೀಕ್ ಜತೆಗೂಡಿ ಪಾಕಿಸ್ತಾನಕ್ಕೆ ಒಂದು ವಿಕೆಟ್ ರೋಚಕ ಜಯ ತಂದುಕೊಟ್ಟಿದ್ದರು. ಆ ಪಂದ್ಯದಲ್ಲಿ ಪ್ರತಿದಾಳಿ ನಡೆಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
2026ರ ವಿಶ್ವಕಪ್ನಲ್ಲೂ ಭಾರತದ ವಿರುದ್ಧ 42 ರನ್ ಗಳಿಸಿದ್ದ ಜಹೂರ್ ಅವರಿಂದ ಭಾನುವಾರದ ಪಂದ್ಯದಲ್ಲಿ ಅವರಿಂದ ಮತ್ತೊಂದು ಜವಾಬ್ದಾರಿಯುತ ಪ್ರದರ್ಶನ ನಿರೀಕ್ಷಿಸಲಾಗಿತ್ತು. ತಂಡದ ಐದು ವಿಕೆಟ್ಗಳು ಕೇವಲ 61 ರನ್ಗಳಿಗೆ ಉರುಳಿದಾಗ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಲಿಲ್ಲ. ಆರನೇ ವಿಕೆಟ್ಗೆ ಹಸ್ನೈನ್ ಅಬ್ಬಾಸ್ ದಾರ್ ಅವರೊಂದಿಗೆ 107 ರನ್ಗಳ ಮಹತ್ವದ ಜೊತೆಯಾಟವಾಡಿದ ಜಹೂರ್, ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ರನ್ ವೇಗವನ್ನು ಹೆಚ್ಚಿಸಿದರು. ಬಳಿಕ ಮತ್ತೆ ವಿಕೆಟ್ಗಳು ಉರುಳಿದಾಗ ತಮ್ಮ ಹೊಡೆತಗಳ ಆಯ್ಕೆಯಲ್ಲಿ ಎಚ್ಚರಿಕೆ ವಹಿಸಿದರು. ಹೆಚ್ಚು ಅಪಾಯಕಾರಿಯಾದ ಹೊಡೆತಗಳಿಗೆ ಮುಂದಾಗದೆ, ಸ್ಟ್ರೈಕ್ ತಮ್ಮ ಬಳಿಯೇ ಉಳಿಸಿಕೊಳ್ಳುವ ಮೂಲಕ ರನ್ ಗಳಿಕೆಯ ವೇಗವನ್ನು ನಿಯಂತ್ರಣದಲ್ಲಿಟ್ಟುಕೊಂಡರು. ಹೀಗೆ ಸಂಕಷ್ಟದಲ್ಲಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದರು.
ಒಟ್ಟು 108 ಎಸೆತಗಳನ್ನು ಎದುರಿಸಿದ ಹಮ್ಜಾ ಜಹೂರ್ 10 ಬೌಂಡರಿ ಹಾಗೂ ಮೂರು ಸಿಕ್ಸರ್ಗಳ ನೆರವಿನಿಂದ ಅಜೇಯ 100 ರನ್ ಗಳಿಸಿದರು. ಭಾರತದ ಪರ ಅರ್ಜುನ್ ರಜಪೂತ್ ಕೂಡ 107 ರನ್ಗಳ ಭರ್ಜರಿ ಶತಕ ಸಿಡಿಸಿದ್ದರು. ಆದರೆ ಅವರ ಶತಕಕ್ಕಿಂತ ಜಹೂರ್ ಅವರ ಅಜೇಯ ಶತಕವೇ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕವಾಯಿತು.


ಗೆಲುವಿನ ಬಳಿಕ ಜಹೂರ್ ತೋರಿಸಿದ ಚೀಟಿಯಲ್ಲೇನಿತ್ತು?
ಈ ಪಂದ್ಯದ ಗೆಲುವಿನ ಸಂಭ್ರಮಕ್ಕಿಂತಲೂ ಹಮ್ಜಾ ಜಹೂರ್ ತೋರಿಸಿದ ಪುಟ್ಟ ಚೀಟಿಯೊಂದು ಇದೀಗ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
ಪಂದ್ಯ ಗೆಲ್ಲುತ್ತಿದ್ದಂತೆ ಹೆಲ್ಮೆಟ್ ಕಳಚಿ, ಅಭಿಮಾನಿಗಳತ್ತ ಓಡುತ್ತಾ ಸಂಭ್ರಮಿಸಿದ ಜಹೂರ್, ಕೆಲವೇ ಕ್ಷಣಗಳಲ್ಲಿ ತಮ್ಮ ಜೇಬಿಗೆ ಕೈಹಾಕಿ ಮಡಚಿಟ್ಟಿದ್ದ ಪುಟ್ಟ ಕಾಗದದ ಚೀಟಿಯೊಂದನ್ನು ಹೊರತೆಗೆದದುಅದನ್ನು ಪ್ರೇಕ್ಷಕರತ್ತ ಎತ್ತಿ ಹಿಡಿದರು. ಆ ಚೀಟಿಯಲ್ಲಿ ಬರೆದಿದ್ದ ಸಾಲು ಎಲ್ಲರ ಗಮನ ಸೆಳೆಯಿತು. “Tomorrow match 50 Hamza Zahoor” (ನಾಳೆಯ ಪಂದ್ಯದಲ್ಲಿ 50 ರನ್ — ಹಮ್ಜಾ ಜಹೂರ್) ಎಂಬ ಬರಹ ಆ ಚೀಟಿಯಲ್ಲಿತ್ತು.
ಪಂದ್ಯ ಆರಂಭಕ್ಕೂ ಮುನ್ನ ತಮ್ಮಿಂದ ಎಷ್ಟು ರನ್ ಗಳಿಸಬೇಕೆಂದು ನಿರ್ಧರಿಸಿಕೊಂಡಿದ್ದರೋ, ಅದನ್ನು ಚೀಟಿಯಲ್ಲಿ ಬರೆದುಕೊಂಡಿದ್ದರು. ಭಾರತದ ವಿರುದ್ಧದ ಈ ಪಂದ್ಯದಲ್ಲಿ ಕನಿಷ್ಠ 50 ರನ್ ಗಳಿಸಬೇಕು ಎಂಬುದು ಅವರ ವೈಯಕ್ತಿಕ ಗುರಿಯಾಗಿತ್ತು. ಅದನ್ನು ನೆನಪಿಟ್ಟುಕೊಳ್ಳಲು ಕಾಗದದ ಚೀಟಿಯನ್ನು ಜೇಬಿನಲ್ಲಿಟ್ಟುಕೊಂಡಿದ್ದರು.
ಆದರೆ ಪಂದ್ಯ ಆರಂಭವಾದಾಗ ಪಾಕಿಸ್ತಾನದ ಸ್ಥಿತಿ ತೀರಾ ಹದಗೆಟ್ಟಿತ್ತು. ಕೇವಲ 61 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ತಂಡವನ್ನು ಸೋಲಿನಿಂದ ಪಾರು ಮಾಡುವ ದೊಡ್ಡ ಜವಾಬ್ದಾರಿ ಜಹೂರ್ ಹೆಗಲೇರಿತ್ತು. ಅವರು ತಮ್ಮ ವೈಯಕ್ತಿಕ ಗುರಿಯನ್ನು ಮೀರಿ ಬ್ಯಾಟ್ ಬೀಸಿದರು. 50 ರನ್ ಗಳಿಸುವ ಗುರಿಯೊಂದಿಗೆ ಕ್ರೀಸ್ಗೆ ಇಳಿದಿದ್ದ ಅವರು ಅಂತಿಮವಾಗಿ 100 ರನ್ ಗಳಿಸಿ ಅಜೇಯರಾಗಿ ಉಳಿದರು. ಅಷ್ಟೇ ಅಲ್ಲ, ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ತಂಡಕ್ಕೆ ಸ್ಮರಣೀಯ ಗೆಲುವನ್ನೂ ತಂದುಕೊಟ್ಟರು.
ತಮ್ಮ ಗುರಿ 50 ರನ್ ಆಗಿದ್ದರೂ ಸಾಧಿಸಿದ್ದು ಅಜೇಯ ಶತಕ. ಹೀಗಾಗಿ ಪಂದ್ಯದ ಬಳಿಕ ಆ ಚೀಟಿಯನ್ನು ಅಭಿಮಾನಿಗಳಿಗೆ ತೋರಿಸುವ ಮೂಲಕ ತಮಗೆ ತಾವೇ ಹಾಕಿಕೊಂಡಿದ್ದ ಗುರಿಯನ್ನು ದ್ವಿಗುಣವಾಗಿ ಸಾಧಿಸಿದ ಸಂತಸವನ್ನು ಹಂಚಿಕೊಂಡರು.



ನಿಮ್ಮ ಕಾಮೆಂಟ್ ಬರೆಯಿರಿ