

ನವದೆಹಲಿ: ದೇಶಾದ್ಯಂತ ಅಮೂಲ್ ಹಾಲು ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿ (GCMMF) ತನ್ನ ವಿವಿಧ ತಾಜಾ ಪ್ಯಾಕೆಟ್ ಹಾಲಿನ ದರವನ್ನು ಹೆಚ್ಚಿಸುವುದಾಗಿ ಪ್ರಕಟಿಸಿದೆ. ಪರಿಷ್ಕೃತ ದರಗಳು ಗುರುವಾರ(ನವೆಂಬರ್ 12)ದಿಂದ ದೇಶದ ಪ್ರಮುಖ ಮಾರುಕಟ್ಟೆಗಳಲ್ಲಿ ಜಾರಿಗೆ ಬರಲಿವೆ. ವಿವಿಧ ಮಾದರಿಯ ಹಾಲಿನ ದರಗಳು ಶೇ. 3.3ರಿಂದ ಶೇ. 5.5ರಷ್ಟು ದರ ಏರಿಕೆಯಾಗಲಿವೆ.
ಅಮೂಲ್‌ನ ಜನಪ್ರಿಯ ಟೋನ್ಡ್ ಹಾಲು (Toned Milk) ವಿಭಾಗದ ಅಮೂಲ್ ತಾಜಾ (Amul Taaza) ಹಾಲಿನ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಶೇ. 6ರಷ್ಟು ಕೊಬ್ಬಿನಂಶ ಹೊಂದಿರುವ ಅಮೂಲ್ ಗೋಲ್ಡ್ (Amul Gold) ಹಾಲಿನ ಪ್ರತಿ ಲೀಟರ್‌ಗೆ 4 ರೂ. ಏರಿಕೆ ಮಾಡಲಾಗಿದೆ.
ಯಾವ ಹಾಲಿನ ದರ ಎಷ್ಟು ಹೆಚ್ಚಳ?
ಶೇ. 3ರಷ್ಟು ಕೊಬ್ಬಿನಂಶ ಹೊಂದಿರುವ ಅಮೂಲ್ ತಾಜಾ ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳವಾಗಿದ್ದು, ಇದು ಸರಿಸುಮಾರು ಶೇ. 3.3ರಷ್ಟು ಏರಿಕೆಯಾಗಿದೆ. ಇನ್ನು ಶೇ. 6ರಷ್ಟು ಕೊಬ್ಬಿನಾಂಶ ಹೊಂದಿರುವ ಅಮೂಲ್ ಗೋಲ್ಡ್ ಹಾಲಿನ ದರ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳವಾಗಿದ್ದು, ಒಟ್ಟಾರೆ ಶೇ. 5.5ರಷ್ಟು ಏರಿಕೆಯಾಗಿದೆ.
ಹಾಲಿನ ಉತ್ಪಾದನೆ, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ವೆಚ್ಚಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ಪರಿಷ್ಕರಣೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿ ತಿಳಿಸಿದೆ.
ಕಳೆದ ಒಂದು ವರ್ಷದಿಂದ ಹಾಲು ಉತ್ಪಾದನೆಗೆ ಅಗತ್ಯವಿರುವ ಹಲವು ಮೂಲಸಾಮಗ್ರಿಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಹಸಿರು ಮೇವು ಮತ್ತು ಒಣ ಮೇವಿನ ದರ ಹೆಚ್ಚಳವಾಗಿದೆ. ಜಾನುವಾರುಗಳ ಆಹಾರ ತಯಾರಿಕೆಗೆ ಬಳಸುವ ಎಣ್ಣೆ ಹಿಂಡಿ, ಮೆಕ್ಕೆಜೋಳ ಮತ್ತು ಮೊಲಾಸಿಸ್‌ನಂತಹ (ಕಬ್ಬಿನ ಉಪ ಉತ್ಪನ್ನ) ಕಚ್ಚಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇದರೊಂದಿಗೆ ಹಾಲಿನ ಪ್ಯಾಕೆಟ್ ತಯಾರಿಸಲು ಬಳಸುವ ಪ್ಯಾಕೇಜಿಂಗ್ ಫಿಲ್ಮ್ ಹಾಗೂ ಇಂಧನದ ವೆಚ್ಚವೂ ಏರಿಕೆಯಾಗಿದ್ದು, ಹಾಲು ಪೂರೈಕೆಯ ಒಟ್ಟಾರೆ ವೆಚ್ಚ ಹೆಚ್ಚಲು ಕಾರಣವಾಗಿದೆ.
ಹೈನುಗಾರರಿಗೆ ಹೆಚ್ಚಿನ ಹಣ ಪಾವತಿಸುವ ಉದ್ದೇಶ
ಹಾಲಿನ ಚಿಲ್ಲರೆ ಮಾರಾಟ ದರ ಹೆಚ್ಚಳದ ಹಿಂದಿನ ಮತ್ತೊಂದು ಪ್ರಮುಖ ಉದ್ದೇಶ ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ಒದಗಿಸುವುದಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಮಹಾಮಂಡಳಿ (GCMMF) ತಿಳಿಸಿದೆ. ಕಳೆದ ಒಂದು ವರ್ಷದಲ್ಲಿ ಸದಸ್ಯ ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಈಗಾಗಲೇ ಶೇ. 4ರಿಂದ ಶೇ. 5ರಷ್ಟು ಹೆಚ್ಚಿಸಿವೆ. ಇದೀಗ ಚಿಲ್ಲರೆ ಮಾರಾಟ ದರ ಪರಿಷ್ಕರಣೆಯಿಂದ ಹೈನುಗಾರರಿಗೆ ನೀಡುವ ಹಣವನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿದೆ ಎಂದು ಮಂಡಳಿ ಹೇಳಿದೆ.


ಅಮೂಲ್ ತನ್ನ ಸಹಕಾರಿ ವ್ಯವಸ್ಥೆಯ ಮೂಲಕ ಗ್ರಾಹಕರಿಂದ ಸಂಗ್ರಹವಾಗುವ ಪ್ರತಿ 100 ರೂ. ಆದಾಯದಲ್ಲಿ ಸುಮಾರು 80 ರೂ.ಗಳನ್ನು ದೇಶಾದ್ಯಂತ ಇರುವ 36 ಲಕ್ಷ ಹಾಲು ಉತ್ಪಾದಕರಿಗೆ ನೀಡುತ್ತದೆ. ಇದೀಗ ದರ ಏರಿಕೆಯಿಂದ ಸಂಗ್ರಹವಾಗುವ ಹೆಚ್ಚುವರಿ ಆದಾಯದ ಗಣನೀಯ ಪಾಲು ಕೂಡ ಹಾಲು ಉತ್ಪಾದಕರಿಗೆ ತಲುಪಲಿದೆ ಎಂದು ಸಂಸ್ಥೆ ತಿಳಿಸಿದೆ.
ಈ ಕ್ರಮದಿಂದ ಹೈನುಗಾರರಿಗೆ ಆರ್ಥಿಕ ನೆರವು ದೊರೆಯುವುದರ ಜತೆಗೆ, ಹಾಲಿನ ಉತ್ಪಾದನೆಯನ್ನು ಮುಂದುವರಿಸಲು ಮತ್ತು ಹೆಚ್ಚಿಸಲು ಪ್ರೋತ್ಸಾಹ ಸಿಗಲಿದೆ ಎಂದು ಅಮೂಲ್ ವಿಶ್ವಾಸ ವ್ಯಕ್ತಪಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ