

ಶ್ರೀನಗರ : ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ದೂರದ ದುರ್ಗಮ ಪ್ರದೇಶವಾದ ದಚ್ಛನ್–ಮರ್ವಾಹ್ನಲ್ಲಿ ಗಸ್ತು ಕರ್ತವ್ಯಕ್ಕೆ ತೆರಳಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್ಪಿಒ) ಮೃತದೇಹಗಳು ಪತ್ತೆಯಾಗಿದ್ದು, ದೇಹಗಳು ಗುಂಡುಗಳಿಂದ ಜರ್ಝರಿತವಾಗಿವೆ. ಇಬ್ಬರೂ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಧೇರ್ನಾ ಪೋಸ್ಟ್ನ ಶೋಧ ತಂಡಕ್ಕೆ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು 40 ವರ್ಷದ ರಶಪಾಲಕುಮಾರ ಮತ್ತು 54 ವರ್ಷದ ಬಾಬಿ ಚಂದ್ ಎಂದು ಗುರುತಿಸಲಾಗಿದೆ. ಇಬ್ಬರ ಪೈಕಿ ಒಬ್ಬರ ತಲೆಗೆ ಹಾಗೂ ಮತ್ತೊಬ್ಬರ ಬೆನ್ನಿಗೆ ಗುಂಡು ತಗುಲಿದೆ. ಪ್ರದೇಶದಲ್ಲಿ ಹೊಂಚು ಹಾಕಿ ಕುಳಿತಿದ್ದ ಉಗ್ರರು ಈ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇಬ್ಬರೂ ಧೇರ್ನಾ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ಇಬ್ಬರು ಸಹೋದ್ಯೋಗಿಗಳ ಬದಲಿಗೆ ಡ್ಯೂಟಿ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇಬ್ಬರು ಎಸ್ಪಿಒಗಳು ಸೇನಾ ಸಿಬ್ಬಂದಿ ಜೊತೆ ಗಸ್ತು ಡ್ಯೂಟಿಯಲ್ಲಿದ್ದರು. ಬಳಿಕ ಧೇರ್ನಾ ಪೋಸ್ಟ್ನತ್ತ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದರು.
ಈ ಇಬ್ಬರು ಎಸ್ಪಿಒಗಳು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ಐಎನ್ಎಸ್ಎಎಸ್ (INSAS) ಮತ್ತು .303 ರೈಫಲ್ಗಳು ನಾಪತ್ತೆಯಾಗಿವೆ. ಉಗ್ರರು ಇಬ್ಬರನ್ನು ಹತ್ಯೆ ಮಾಡಿದ ಬಳಿಕ ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಮೂಲಗಳ ಪ್ರಕಾರ, ಘಟನೆ ನಡೆದ ಪ್ರದೇಶದಲ್ಲಿ ಹಗಲಿನ ವೇಳೆಯಲ್ಲಿಯೂ ಗುಂಡಿನ ಸದ್ದು ಕೇಳಿಬಂದಿತ್ತು. ಆರಂಭದಲ್ಲಿ ಇಬ್ಬರ ಮೊಬೈಲ್ ಫೋನ್ಗಳು ಸಂಪರ್ಕಕ್ಕೆ ಸಿಗುತ್ತಿದ್ದವು. ಆದರೆ, ಸ್ವಲ್ಪ ಸಮಯದ ಬಳಿಕ ಎರಡೂ ಮೊಬೈಲ್ಗಳು ಸ್ವಿಚ್ಆಫ್ ಆಗಿದ್ದವು. ಇದರಿಂದ ಆತಂಕಗೊಂಡ ಭದ್ರತಾ ಪಡೆಗಳು ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಇಬ್ಬರೂ ಕರ್ತವ್ಯದಿಂದ ಹಿಂದಿರುಗದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿತ್ತು. ಕೊನೆಗೂ ಗುರುವಾರ ಬೆಳಗ್ಗೆ ಧೇರ್ನಾ ಟಾಪ್ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಘಟನೆಯ ಬೆನ್ನಲ್ಲೇ ಹಂತಕರ ಪತ್ತೆಗಾಗಿ ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಶೋಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ದಾಳಿ ನಡೆಸಿದ ಉಗ್ರರನ್ನು ಪತ್ತೆಹಚ್ಚಿ ಬಂಧಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರಿದಿದೆ.


ಕಿಶ್ತ್ವಾರ್ ಜಿಲ್ಲೆಯ ದೂರದ ಹಾಗೂ ದಟ್ಟ ಅರಣ್ಯ ಪ್ರದೇಶಗಳಲ್ಲಿ ಇನ್ನೂ ಅಡಗಿರುವ ಉಗ್ರರನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಭದ್ರತಾ ಪಡೆಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಈ ಹಿಂದೆ ನಡೆದ ಹಲವು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಅನೇಕ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಅವರ ಚಟುವಟಿಕೆಗಳು ಗಣನೀಯವಾಗಿ ದುರ್ಬಲಗೊಂಡಿವೆ ಎಂದು ವರದಿಗಳು ತಿಳಿಸಿವೆ.
ಕೆಲ ದಿನಗಳ ಹಿಂದೆ ಮತ್ತೊಬ್ಬ ಎಸ್ಪಿಒ ಹತ್ಯೆ
ಕಿಶ್ತ್ವಾರದಲ್ಲಿ ಮತ್ತೊಬ್ಬ ವಿಶೇಷ ಪೊಲೀಸ್ ಅಧಿಕಾರಿಯ ಹತ್ಯೆ ನಡೆದ ಕೆಲವೇ ವಾರಗಳ ಅಂತರದಲ್ಲಿ ಈ ಘಟನೆ ನಡೆದಿದೆ. ಅಕ್ಟೋಬರ್ 16ರಂದು ಕಿಶ್ತ್ವಾರ್ನ ವಾನಿಪೋರಾ ತ್ರಿಗಾಮ್ ಪ್ರದೇಶದಲ್ಲಿ 55 ವರ್ಷದ ಎಸ್ಪಿಒ ಬಶೀರ್ ಅಹ್ಮದ್ ಅವರ ಮೃತದೇಹ ಅವರ ನಿವಾಸದ ಸಮೀಪ ಪತ್ತೆಯಾಗಿತ್ತು.
ಪೆಡಿಲ್ ಪೊಲೀಸ್ ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಶೀರ್ ಅಹ್ಮದ್, ಕರ್ತವ್ಯ ಮುಗಿಸಿ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದರು. ಈ ವೇಳೆ ಅವರು ಇಲಾಖೆಯಿಂದ ನೀಡಲಾಗಿದ್ದ ಸ್ವಯಂ ಚಾಲಿತ ಸೆಲ್ಫ್ ಲೋಡಿಂಗ್ ರೈಫಲ್ (SLR) ಮತ್ತು ಮ್ಯಾಗಜಿನ್ನ್ನೂ ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು.
ಈ ಪ್ರಕರಣದ ಕುರಿತು ಪೊಲೀಸರು ನಡೆಸಿದ ತನಿಖೆಯಲ್ಲಿ, ಭೂ ವಿವಾದಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿಕರೇ ಅವರನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದೀಗ ಮತ್ತಿಬ್ಬರು ಎಸ್ಪಿಒಗಳು ಉಗ್ರರ ದಾಳಿಯಲ್ಲಿ ಹತ್ಯೆಯಾಗಿರುವ ಘಟನೆ ಕಿಶ್ತ್ವಾರ್ ಜಿಲ್ಲೆಯ ಭದ್ರತಾ ಪರಿಸ್ಥಿತಿಯ ಬಗ್ಗೆ ಮತ್ತೆ ಆತಂಕ ಮೂಡಿಸಿದೆ.



ನಿಮ್ಮ ಕಾಮೆಂಟ್ ಬರೆಯಿರಿ